Advertisement

ಮತ್ತೇರಿಸಿದ “ಮತ್ತು’ತಂದಿತ್ತು ಆಪತ್ತು…

07:32 PM Dec 16, 2019 | Lakshmi GovindaRaj |

“ಹಿಂದಿನ ಹಾಳೆಯಲ್ಲಿ ಒಂದು “ಮತ್ತು’ ಪದವನ್ನು ಬಿಟ್ಟಿದ್ದೇನೆ. ಅದನ್ನು ಸೇರಿಸಿಕೊಂಡರೆ ನನ್ನದು ಒಂದು “ಮತ್ತು’ ಹೆಚ್ಚಾಗುತ್ತದೆ. ಆಗ ಈ ಆಟದಲ್ಲಿ ನಾನೇ ಗೆದ್ದಂತೆ’ ಎಂದು ಗೆಳೆಯನಿಗೆ ತಿಳಿಸಿದೆ. ತಕ್ಷಣ ಅವನೂ ಒಂದು ತಂತ್ರ ಹೂಡಿದ ಅನಿಸುತ್ತದೆ. “ನಾನೂ ಒಂದು “ಮತ್ತು’ ಪದವನ್ನು ಬಿಟ್ಟಿದ್ದೇನೆ’ ಎಂದು ವಾದ ಮಾಡಲು ಶುರು ಮಾಡಿದ.

Advertisement

ನಾನು ಪ್ರೌಢಶಾಲೆಯಲ್ಲಿ ಓದುತ್ತಿದ್ದ ದಿನಗಳು. ನಾಲ್ಕಾರು ಗೆಳೆಯರು ಕೊನೆಯ ಬೆಂಚಿನಲ್ಲಿ ಕುಳಿತುಕೊಳ್ಳುತ್ತಿದ್ದೆವು. ಆಗ ನಮ್ಮ ನಡುವೆ ಆಟ, ತುಂಟಾಟ ನಡೆಯುತ್ತಿತ್ತು. ಆದ್ದರಿಂದ, ತರಗತಿ ನಡೆಯುವಾಗ ಆಗಾಗ ಕೊನೆಯ ಬೆಂಚಿನಲ್ಲಿ ಕುಳಿತವರಿಗೆ ಬೈಗುಳದ ಪೂಜೆಯೂ ಆಗುತ್ತಿತ್ತು. ಪಾಠ ಮಾಡುವಾಗ ಗುಸು, ಗುಸು ಶಬ್ದ ಬರುತ್ತಿದ್ದರೆ ಯಾರು ತಾನೆ ಸಹಿಸಿಕೊಳ್ಳುತ್ತಾರೆ ಹೇಳಿ? ಎಷ್ಟೋ ಬಾರಿ ನಮ್ಮನ್ನು ನಿಲ್ಲಿಸಿ, ಬೈದು, ತುಸು ಹೊತ್ತು ಒಂಟಿ ಕಾಲಿನಲ್ಲಿ ನಿಲ್ಲಿಸಿದ್ದೂ ಇದೆ.

ಇಷ್ಟೆಲ್ಲಾ ಶಿಕ್ಷೆ ಅನುಭವಿಸಿದರೂ ನಮಗೇನೂ ಬುದ್ಧಿ ಬರುತ್ತಿರಲಿಲ್ಲ. ಹೀಗಾಗಿ, ಸ್ವಲ್ಪ ಸಮಯದಲ್ಲೆ ಮತ್ತದೇ ತಪ್ಪು ಮಾಡುತ್ತಿದ್ದೆವು. ಇದನ್ನು ಕಂಡು, ಬೇರೆ ದಾರಿ ಇಲ್ಲದೆ ಶಿಕ್ಷಕರು, ಮುಂದಿನ ಬೆಂಚಿನಲ್ಲಿ ಕುಳ್ಳರಿಸುತ್ತಿದ್ದರು. ಆಗಲೂ ಏನು ನಾವು ಎಲ್ಲವನ್ನೂ ಮರೆತು ಸುಮ್ಮನಾಗುತ್ತಿದ್ದೆವು ಅಂದುಕೊಳ್ಳಬೇಡಿ. ಹೇಗೂ, ಒಂದೆರಡು ದಿನಗಳ ನಂತರ ನಮ್ಮ ಜಾಗಕ್ಕೆ ವಾಪಸ್ಸಾಗುತ್ತಿದ್ದೆವು. ಆಗ ಮತ್ತದೇ ಗುಸುಗುಸು ಆರಂಭವಾಗಿಬಿಡೋದು.

ಒಮ್ಮೆ ಹೀಗಾಯ್ತು. ವಿಜ್ಞಾನದ ಶಿಕ್ಷಕರು ಪಾಠ ಮಾಡುತ್ತಿದ್ದರು. ನಾನು ಮತ್ತು ನನ್ನ ಪಕ್ಕದಲ್ಲಿದ್ದ ಗೆಳೆಯ ಕನ್ನಡ ಪುಸ್ತಕ ತೆರೆದು ಆಟ ಆಡುತ್ತ ಕುಳಿತಿದ್ದೆವು. ಅವನ ಕಡೆ ಇದ್ದ ಪುಸ್ತಕದ ಹಾಳೆಯಲ್ಲಿ ಎಷ್ಟು “ಮತ್ತು’ ಪದಗಳು ಇವೆ ಎಂದು ಹುಡುಕಿ, ಎಣಿಸಿ ಲೆಕ್ಕ ಹಾಕಿದರೆ, ನನ್ನ ಹಾಳೆಯಲ್ಲಿರುವ “ಮತ್ತು’ ಗಳನ್ನು ನಾನು ಲೆಕ್ಕ ಹಾಕಿ ಒಂದು ಹಾಳೆಯಲ್ಲಿ ಬರೆದುಕೊಳ್ಳುತ್ತಿದ್ದೆ. ಹೀಗೆ, ಸುಮಾರು ಹತ್ತತ್ತು ಹಾಳೆಗಳಲ್ಲಿನ “ಮತ್ತು’ ಗಳನ್ನು ಹುಡುಕಿ ಲೆಕ್ಕ ಹಾಕುತ್ತಿದ್ದೆವು.

ಕೊನೆಯಲ್ಲಿ ಹೆಚ್ಚು “ಮತ್ತು’ ಗಳು ಇದ್ದವರು ಗೆದ್ದಂತೆ ಎನ್ನುವುದು ನಮ್ಮ ಮಾತುಕತೆಯ ಅಂಶವಾಗಿತ್ತು. ಒಂಥರಾ ಕ್ರಿಕೆಟ್‌ ಆಟದಂತೆಯೇ. ಎದುರಾಳಿ ತಂಡ ಹೊಡೆದ ಸ್ಕೋರಿಗೆ ಒಂದು ರನ್‌ ಹೆಚ್ಚುವರಿಯಾಗಿ ಸೇರಿಸಿದಂತೆ. ಆವತ್ತಿನ ಆಟದಲ್ಲಿ ನನಗೆ ಹಾಗೂ ನನ್ನ ಗೆಳೆಯನಿಗೆ ಸಿಕ್ಕಿದ “ಮತ್ತು’ಗಳು ಸರಿಸಮಾನವಾಗಿದ್ದವು. ಗೆಲುವಿಗೆ ಒಬ್ಬರಿಗೆ ಒಂದು “ಮತ್ತು’ ಹೆಚ್ಚಿಗೆ ಬೇಕಿತ್ತು.

Advertisement

ಆ ಸಂದರ್ಭದಲ್ಲಿ ಆಟ ಡ್ರಾ ಆದಂತೆಯೇ. ಆಗ ನೆನಪಾಯಿತು. ತಕ್ಷಣ ನಾನು, “ಹಿಂದಿನ ಹಾಳೆಯಲ್ಲಿ ಒಂದು “ಮತ್ತು’ ಪದವನ್ನು ಬಿಟ್ಟಿದ್ದೇನೆ. ಅದನ್ನು ಸೇರಿಸಿಕೊಂಡರೆ ನನ್ನದು ಒಂದು “ಮತ್ತು’ ಹೆಚ್ಚಾಗುತ್ತದೆ. ಆಗ ಈ ಆಟದಲ್ಲಿ ನಾನೇ ಗೆದ್ದಂತೆ’ ಎಂದು ಗೆಳೆಯನಿಗೆ ತಿಳಿಸಿದೆ. ತಕ್ಷಣ ಅವನೂ ಒಂದು ತಂತ್ರ ಹೂಡಿದ ಅನಿಸುತ್ತದೆ. “ನಾನೂ ಒಂದು “ಮತ್ತು’ ಪದವನ್ನು ಬಿಟ್ಟಿದ್ದೇನೆ’ ಎಂದು ವಾದ ಮಾಡಲು ಶುರು ಮಾಡಿದ.

ಇಬ್ಬರೂ ಮಾತಿನ ಸಮರದಲ್ಲಿ ಮಗ್ನರಾಗಿದ್ದೆವು. ಎದುರಿಗೆ ಮೇಷ್ಟ್ರು ಪಾಠ ಮಾಡುತ್ತಿರುವ ಅರಿವೂ ಕೂಡ ನಮಗಿರಲಿಲ್ಲ. ಹೀಗಾಗಿ, ನಮ್ಮ ಗುಸು ಗುಸು ಶಬ್ದ ಹೆಚ್ಚಾಯಿತು. ಇದನ್ನು ಗಮನಿಸಿದ ಶಿಕ್ಷಕರು ನಮಗೆ ತಿಳಿಯದಂತೆ ಹತ್ತಿರ ಬಂದರು. ನಮ್ಮ ಮುಂದಿದ್ದ ಕನ್ನಡ ಪುಸ್ತಕವನ್ನು ಮೆಲ್ಲಗೆ ತೆಗೆದುಕೊಂಡರು. ಆಗ ನಾವು ಶಾಲೆಯಲ್ಲಿ ಇದ್ದೇವೆ, ನಮ್ಮ ಎದುರಿಗೆ ಮೇಷ್ಟ್ರು ಇದ್ದಾರೆ. ಅವರು ಎಲ್ಲವನ್ನೂ ಗಮನಿಸುತ್ತಿದ್ದಾರೆ ಅನ್ನೋ ಅರಿವು ಬಂತು.

ಮೇಷ್ಟ್ರು ಕೋಪೋದ್ರಿಕ್ತರಾಗಿ ನಮ್ಮಿಬ್ಬರನ್ನೂ ತರಗತಿಯಿಂದ ಹೊರ ಹಾಕಿದರು. ನಮಗೆ ಎಲ್ಲರೆದರೂ ಅವಮಾನವಾಯಿತು. ಇದಾಗಿ, ಒಂದು ಗಂಟೆಯ ಬಳಿಕ ಮತ್ತೆ ತರಗತಿ ಒಳಗೆ ಹೋದೆವು. ಅಷ್ಟರಲ್ಲಿ ನಮ್ಮ ತಪ್ಪಿನ ಅರಿವಾಗಿತ್ತು. ಮತ್ತೆ ಈ ರೀತಿಯ ತಪ್ಪು ಮರುಕಳಿಸಬಾರದು ಅಂತ ತೀರ್ಮಾನಿಸಿದೆವು. ಆವತ್ತೇ ನಮ್ಮ “ಮತ್ತು’ ಹುಡುಕುವ ಆಟವು ಕೊನೆಯಾಯಿತು. ಮತ್ತೆಂದೂ ಮರುಕಳಿಸಲಿಲ್ಲ. ಶಾಲೆ, ಕೊನೆ ಬೆಂಚು ಅಂದಾಗೆಲ್ಲ ಮತ್ತೇರಿಸಿದ “ಮತ್ತು’ ಆಟ ನೆನಪಿಗೆ ಬರುತ್ತದೆ.

* ಸಣ್ಣಮಾರಪ್ಪ, ಚಂಗಾವರ

Advertisement

Udayavani is now on Telegram. Click here to join our channel and stay updated with the latest news.

Next