Advertisement
ಇದು ಹೇಗಾಯ್ತು?1971ರಲ್ಲಿ ದರ್ವಾಜ ಗ್ರಾಮದ ಸಮೀಪದ ಕಾರಕಂ ಜಿಲ್ಲೆಯಲ್ಲಿ ಸೋವಿಯತ್ ಭೂವಿಜ್ಞಾನಿಗಳು ನೈಸರ್ಗಿಕ ಅನಿಲದಿಂದ ತುಂಬಿದ್ದ ಗುಹೆಯನ್ನು ಕೊರೆಯಲು ಆರಂಭಿಸಿದರು. ಹೀಗೆ ಕೊರೆಯುತ್ತಿರುವ ಸಂದರ್ಭದಲ್ಲಿ ಅವರು ಬಳಸುತ್ತಿದ್ದ ಉಪಕರಣಗಳು ಒಂದು ದೊಡ್ಡ ಹೊಂಡಕ್ಕೆ ಬಂದು ಬಿತ್ತು. ಇಲ್ಲಿ ಯಾರಿಗೂ ಗಾಯವಾಗಿರಲಿಲ್ಲ. ಆದರೆ ಆ ಹೊಂಡದಿಂದ ಅನಿಲ ಹೊರಬರಲು ಶುರುವಾಗಿತ್ತು. ಅದು ವಿಷಕಾರಿ ಅನಿಲವಾಗಿರಬಹುದು ಎಂಬ ಭೀತಿ ವಿಜ್ಞಾನಿಗಳಲ್ಲಿ ಮನೆ ಮಾಡಿತ್ತು. ಸಾಮಾನ್ಯವಾಗಿ ಈ ರೀತಿಯ ಪರಿಸ್ಥಿತಿ ಎದುರಾದಾಗ, ಪರಿಹಾರವಾಗಿ ಅಂಥ ಗುಂಡಿಗೆ ಬೆಂಕಿ ಹಾಕಿಬಿಡುತ್ತಾರೆ. ಇಲ್ಲೂ ವಿಜ್ಞಾನಿಗಳು ಮಾಡಿದ್ದು ಅದನ್ನೇ. ಕೆಲ ದಿನಗಳಲ್ಲೇ ಬೆಂಕಿ ನಂದಿ ವಿಷಕಾರಿ ಅನಿಲ ಹೊರಬರುವುದು ನಿಲ್ಲುತ್ತದೆ ಎಂದುಕೊಂಡರೆ ಇಲ್ಲಾಗಿದ್ದೇ ಬೇರೆ. ಭೂವಿಜ್ಞಾನಿಗಳು ಎಷ್ಟೇ ಹರಸಾಹಸಪಟ್ಟರೂ ಬೆಂಕಿ ನಂದಲೇ ಇಲ್ಲ. ಅವರ ನಿರೀಕ್ಷೆ ಸುಳ್ಳಾಗಿತ್ತು. ವಾರಗಳು, ತಿಂಗಳುಗಳು, ವರುಷಗಳು ಕಳೆದರೂ ಅದು ಇಂದಿನವರೆಗೂ ಉರಿಯುತ್ತಲೇ ಇದೆ.
ಈ ಅಗ್ನಿಕುಳಿ ಇನ್ನೂ ಎಷ್ಟು ಕಾಲ ಉರಿಯಲಿದೆ, ಮುಂದೆ ಯಾವತ್ತಾದರೂ ಈ ಅಗ್ನಿಯ ಹೊಂಡವು ಮುಚ್ಚಿಹೋಗುವುದೇ? ಇಲ್ಲಿ ಹೊರಬರುತ್ತಿರುವ ಅನಿಲವನ್ನು ಸಂಪನ್ಮೂಲವಾಗಿ ಬಳಸಬಹುದೇ? ಇವ್ಯಾವ ಪ್ರಶ್ನೆಗಳಿಗೂ ಉತ್ತರ ಯಾರಿಗೂ ತಿಳಿದಿಲ್ಲ. ಆದರೆ ಈ ಪ್ರದೇಶ ಮಾತ್ರ ಅಂದಿನಿಂದಲೂ ಪ್ರವಾಸಿ ತಾಣವಾಗಿ ಮಾರ್ಪಟ್ಟಿದೆ. ಜಗತ್ತಿನಾದ್ಯಂತ ಪ್ರವಾಸಿಗರು ಇಲ್ಲಿ ಭೇಟಿ ಕೊಟ್ಟು ನರಕದ ಬಾಗಿಲಿನ ದರ್ಶನ ಪಡೆಯುತ್ತಾರೆ. ಟರ್ಕ್‌ಮೆನಿಸ್ತಾನದ ಸರ್ಕಾರ ಮುನ್ನೆಚ್ಚರಿಕಾ ಕ್ರಮವಾಗಿ 2004ರಲ್ಲಿಯೇ ಕಾರಕಂ ಸುತ್ತಮುತ್ತಲಿನ ನಿವಾಸಿಗಳನ್ನು ಸ್ಥಳಾಂತರಿಸಿತ್ತು. ನೀವು ಹಗಲಿನಲ್ಲಿ ಈ ಅಗ್ನಿಕುಳಿ ಮೈದಾನದ ರೀತಿಯಲ್ಲಿ ಗೋಚರಿಸುತ್ತದೆ. ಆದರೆ ಅದರ ಸಮೀಪಕ್ಕೆ ಬಂದಂತೆ ಸಾವಿರಾರು ಅಗ್ನಿಯ ಜ್ವಾಲೆಗಳು ಕುಳಿಯಲ್ಲಿ ಉರಿಯುತ್ತಿರುವುದನ್ನು ಕಾಣಬಹುದು. ಈ ಅನಿಲ ಹೊಂಡದಿಂದ ಹೊರ ಬರುವಾಗ ಭೂಮಿ ಉಬ್ಬುತ್ತದೆ. ಭೂಮಿಯನ್ನು ಸೀಳಿಕೊಂಡು ಅನಿಲ ಹೊರಹೊಮ್ಮುತ್ತದೆ. ಈ ಅಗ್ನಿಕುಳಿಯನ್ನು ನೋಡಲು ಸಂಜೆ ಸಮಯವೇ ಪ್ರಶಸ್ತ.
Related Articles
ಈ ಗುಂಡಿಗೆ “ನರಕದ ಬಾಗಿಲು’ ಎಂಬ ಹೆಸರು ಬರಲು ಕಾರಣ ಪುರಾಣ. ಚೀನೀ, ಗ್ರೀಕ್- ರೋಮನ್ ಪುರಾಣಗಳಲ್ಲಿ ಬರುವ ನರಕದ ವರ್ಣನೆಗೂ ಈ ಗುಂಡಿಯಲ್ಲಿ ಕಾಣಬರುವ ದೃಶ್ಯಕ್ಕೂ ಸಾಮ್ಯತೆ ಇರುವುದರಿಂದಲೇ ಆ ಹೆಸರು ಬಂದಿದೆ.
Advertisement
– ಸೌಮ್ಯಶ್ರೀ