Advertisement

ನಿರ್ವಹಣೆಯಿಲ್ಲದೆ ಪಾಳುಬಿದ್ದಿರುವ ಇ-ಶೌಚಾಲಯ!

02:30 PM Jul 13, 2023 | Team Udayavani |

ಬೆಂಗಳೂರು: ಸಿಲಿಕಾನ್‌ ಸಿಟಿ ಬೆಂಗಳೂರನ್ನು ಶೌಚಮುಕ್ತ ನಗರವನ್ನಾಗಿಸುವ ಉದ್ದೇಶದಿಂದ ನಿರ್ಮಿಸಲಾಗಿದ್ದ ಹೈಟೆಕ್‌ ಇ-ಶೌಚಾಲಯಗಳಿಗೆ ಸಮರ್ಪಕ ನಿರ್ವಹಣೆಯಿಲ್ಲದೇ, ದುರ್ವಾಸನೆ ಬೀರುತ್ತಿವೆ.

Advertisement

ಹೌದು! ನಗರದಲ್ಲಿ ಎಲ್ಲೆಂದರಲ್ಲೇ ಮೂತ್ರವಿಸರ್ಜನೆ ಮಾಡುವುದನ್ನು ತಪ್ಪಿಸುವ ಉದ್ದೇಶದಿಂದ ಮಹಾನಗರ ಪಾಲಿಕೆಯು ನಗರಾದ್ಯಂತ ಒಟ್ಟು 100 ಸ್ಥಳಗಳಲ್ಲಿ ಮೊದಲು 169, ನಂತರದ ದಿನಗಳಲ್ಲಿ 74, ಸರಿಸುಮಾರು 241 ಇ-ಶೌಚಾಲಯಗಳನ್ನು ನಿರ್ಮಿಸಿದೆ. ಈ ಪೈಕಿ ಹೆಚ್ಚಿನವು ಬಳಕೆ ಆಗುತ್ತಿಲ್ಲ. ಕೆಲವು ತಾಂತ್ರಿಕ ಸಮಸ್ಯೆಯಿಂದ ಕೆಟ್ಟು ನಿಂತಿದ್ದು, ಇನ್ನೂ ಕೆಲವು ಅಸಮರ್ಪಕ ನಿರ್ವಹಣೆಯಿಂದ ಹಾಳಾಗಿ ಹೋಗಿವೆ.

ಕೋಟ್ಯಂತರ ರೂ.ಗಳ ವೆಚ್ಚದಲ್ಲಿ ನಿರ್ಮಿಸಿರುವ ಈ ಯೋಜನೆಗೆ ನಿರ್ವಹಣೆ ಮತ್ತು ವಿದ್ಯುತ್‌ ಕೊರತೆಯಿಂದಾಗಿ ಸಾರ್ವಜನಿಕರ ಬಳಕೆಗೆ ಸಾಧ್ಯವಾಗುತ್ತಿಲ್ಲ. ಇ-ಶೌಚಾಲಯಗಳ ಸ್ವಚ್ಛತೆ ಸೇರಿದಂತೆ ಸಂಪೂರ್ಣ ನಿರ್ವಹಣೆಗಾಗಿ ಈ ಹಿಂದೆ ನೀಡಿದ್ದ ಟೆಂಡರ್‌ನ ಕಾಲಾವಧಿ ಮುಕ್ತಾಯಗೊಂಡು ಐದಾರು ತಿಂಗಳು ಕಳೆದಿದೆ. ಬಿಬಿಎಂಪಿ ಟೆಂಡರ್‌ ಕರೆದಿದ್ದರೂ ಯಾರೂ ಈ ಟೆಂಡರ್‌ ತೆಗೆದುಕೊಳ್ಳಲು ಮುಂದಾಗುತ್ತಿಲ್ಲ. ಇದರ ಪರಿಣಾಮವಾಗಿ ನಗರದಲ್ಲಿನ ನೂರಾರು ಇ-ಟಾಯ್ಲೆಟ್‌ ಗಳಿಗೆ ನಿರ್ವಹಣೆಯ ಕೊರತೆಯಿಂದ ಬಳಕೆಗೆ ಬಾರದ ಸ್ಥಿತಿಯನ್ನು ತಲುಪಿವೆ.

ಸದ್ಯ, ಕೇವಲ 74 ಇ-ಶೌಚಾಲಯಗಳ ನಿರ್ವಹಣೆ ಮಾತ್ರ ಚಾಲ್ತಿಯಲ್ಲಿವೆ. ಕೆಲ ಇ-ಟಾಯ್ಲೆಟ್‌ಗಳಿಗೆ ಲಾಕ್‌ ವ್ಯವಸ್ಥೆ ಇಲ್ಲದೇ ಮುರಿದು ಬಿದ್ದಿರುವ ಬಾಗಿಲುಗಳು, ಸರಿಯಾದ ನೀರು, ವಿದ್ಯುತ್‌ ಸಂಪರ್ಕವಿಲ್ಲ. ಇನ್ನೂ ಕೆಲವೆಡೆ ಬೀಗ ಹಾಕಲಾಗಿದ್ದು, ಸುಸ್ಥಿತಿಯಲ್ಲಿರುವ ಶೌಚಾಲಯಗಳು ಗಬ್ಬು ನಾರುತ್ತಿವೆ. ಸಾರ್ವಜನಿಕರು ಮೊದಲು ಎರಡು ರೂ.ಗಳ ನಾಣ್ಯಗಳನ್ನು ಬಳಸಿ ಇ-ಶೌಚಾಲಯಗಳನ್ನು ಬಳಸಬೇಕಿತ್ತು. ಈ ಕಾರಣದಿಂದಾಗಿ ಬಹುತೇಕರು ಇ-ಶೌಚಾಲಯಗಳ ಬಳಕೆಯೇ ಮಾಡಿಲ್ಲ. ಈ ಅಸಮರ್ಪಕ ಬಳಕೆಯೂ ಅವು ಹಾಳಾಗಲು ಒಂದು ಕಾರಣವಾಗಿದೆ. ಆದ್ದರಿಂದಾಗಿ ಕೋಟ್ಯಂತರ ರೂ. ವೆಚ್ಚದಲ್ಲಿ ನಿರ್ಮಿಸಿರುವ ಇ-ಶೌಚಾಲಯಗಳನ್ನು ಸಾರ್ವಜನಿಕರು ಸಮರ್ಪಕ ಬಳಕೆ ಮಾಡುವ ಉದ್ದೇಶದಿಂದಾಗಿ ಉಚಿತ ಬಳಕೆಗೆ ಅವಕಾಶ ಮಾಡಿಕೊಡಲಾಯಿತು ಎನ್ನುತ್ತಾರೆ ಬಿಬಿಎಂಪಿ ಅಧಿಕಾರಿಗಳು.

SHE ಶೌಚಾಲಯ : ಕೆಲವು ಪ್ರದೇಶಗಳಲ್ಲಿ ಮಹಿಳೆಯರಿಗೆ ಮತ್ತು ಪುರುಷರಿಗೆ ಒಂದೇ ಇ-ಶೌಚಾಲಯ ಇರುವ ಕಾರಣ, ಮುಜುಗರದಿಂದ ಮಹಿಳೆಯರು ಆ ಶೌಚಾಲಯದ ಬಳಕೆಯನ್ನೇ ಮಾಡುವುದಿಲ್ಲ. ಆದ್ದರಿಂದಾಗಿ ಬಿಬಿಎಂಪಿ ಮಹಿಳೆಯರ ಬಳಕೆಗೆ ಮಾತ್ರ ನೂತನ ಯೋಜನೆ “ಶಿ ಶೌಚಾಲಯ’ ನಿರ್ಮಿಸಲು ಮುಂದಾಗಿದೆ. ಬಿಬಿಎಂಪಿ ವ್ಯಾಪ್ತಿಯಡಿ 100 “ಶಿ’ ಶೌಚಾಲಯಗಳನ್ನು ನಿರ್ಮಿಸಲು ಪ್ರಸ್ತಾವನೆ ಇಡಲಾಗಿದೆ.

Advertisement

ಇ-ಶೌಚಾಲಯಗಳ ನಿರ್ವಹಣೆಗೆಂದು ಟೆಂಡರ್‌ ಕರೆಯಲಾಗಿದೆ. ಆದರೆ, ಯಾರೂ ಟೆಂಡರ್‌ನಲ್ಲಿ ಭಾಗವಹಿಸಲು ಮುಂದೆ ಬಂದಿಲ್ಲ. ಇದರಿಂದಾಗಿ ಇ-ಶೌಚಾಲಯಗಳ ನಿರ್ವಹಣೆ ಇಲ್ಲದಂತಾಗಿದೆ. ಆದ್ದರಿಂದ ಶೀಘ್ರದಲ್ಲೇ ಮರುಟೆಂಡರ್‌ ಕರೆಯಲಾಗುತ್ತದೆ. ● ಪ್ರವೀಣ್‌ ಲಿಂಗಯ್ಯ, ಬಿಬಿಎಂಪಿ ಮುಖ್ಯ ಎಂಜಿನಿಯರ್‌

ವಿ.ವಿ. ಪುರಂ ವೃತ್ತದ ಬಳಿಯಿರುವ ಇ-ಟಾಯ್ಲೆಟ್‌ ಅನ್ನು ಹೆಚ್ಚಾಗಿ ಪುರುಷರೇ ಬಳಸುವುದರಿಂದಾಗಿ, ಮಹಿಳೆಯರು ಅದನ್ನು ಉಪಯೋಗಿಸಲು ಹಿಂಜರಿಯುತ್ತಾರೆ. ಅಲ್ಲದೇ, ಅಲ್ಲಿ ಸರಿಯಾದ ನಿರ್ವಹಣೆಯೂ ಇಲ್ಲವಾಗಿದ್ದು, ಸಮೀಪಿಸುತ್ತಿದ್ದೆಂತೆ ಕೆಟ್ಟವಾಸನೆ ಬರುತ್ತದೆ. ● ಜ್ಯೋತಿ, ಸ್ಥಳೀಯರು

ಭಾರತಿ ಸಜ್ಜನ್‌

Advertisement

Udayavani is now on Telegram. Click here to join our channel and stay updated with the latest news.

Next