Advertisement

ದೇಗುಲಗಳ ಪಾವಿತ್ರ್ಯ ರಕ್ಷಣೆ ಭಕ್ತರ ಕರ್ತವ್ಯ: ಡಾ|ಹೆಗ್ಗಡೆ

02:12 AM Oct 04, 2021 | Team Udayavani |

ಬೆಳ್ತಂಗಡಿ: ಧರ್ಮಕ್ಕೆ ಶಿಸ್ತಿನ ಆವರಣ ಬೇಕು. ಶಿಸ್ತು ಪ್ರಧಾನವಾದ ಹಿಂದೂ ಧರ್ಮದಲ್ಲಿ ಬದ್ಧತೆ, ಸಂಯಮ ಮತ್ತು ಸ್ವಚ್ಛತೆಗೆ ಆದ್ಯತೆ ಇದೆ. ಎಲ್ಲ ಪವಿತ್ರ ತೀರ್ಥಕ್ಷೇತ್ರಗಳಲ್ಲಿ ಶ್ರದ್ಧಾ-ಭಕ್ತಿಯೊಂದಿಗೆ ಭಕ್ತರು ಸಂಯಮದಿಂದ ಹಾಗೂ ಶಿಸ್ತಿನಿಂದ ವರ್ತಿಸಿ ಪಾವಿತ್ರ್ಯ ಕಾಪಾಡಬೇಕು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.

Advertisement

ಧರ್ಮಸ್ಥಳದಲ್ಲಿ ರವಿವಾರ ನಡೆದ ಶಬರಿಮಲೆ ಅಯ್ಯಪ್ಪ ಸೇವಾ ಸಮಾಜದ ರಾಜ್ಯ ಕಾರ್ಯಕಾರಿ ಸಮಿತಿ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ನಂಬಿಕೆ ಮತ್ತು ಸಂಪ್ರದಾಯದ ಹೆಸರಿನಲ್ಲಿ ಅಂಧಾನುಕರಣೆ ಸಲ್ಲದು. ಧರ್ಮಸ್ಥಳದ ನೇತ್ರಾವತಿ ನದಿಯಲ್ಲಿ ಭಕ್ತರು ಸ್ನಾನ ಮಾಡಿ ಬಟ್ಟೆ, ಸಾಬೂನು, ಪ್ಲಾಸ್ಟಿಕ್‌ ಮೊದಲಾದ ತ್ಯಾಜ್ಯಗಳನ್ನು ಅಲ್ಲಿಯೇ ತ್ಯಜಿಸಿ ಕಲುಷಿತ ಮಾಡುತ್ತಿರುವ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಅವರು ಸ್ವಚ್ಛತೆ ಕಾಪಾಡಬೇಕು ಎಂದು ಸಂದೇಶ ನೀಡಿದರು.

ಶಾಸಕ ಹರೀಶ್‌ ಪೂಂಜ ಶುಭಾಶಂಸನೆಗೈದು, ಡಾ| ಹೆಗ್ಗಡೆ ಅವರು ಶಬರಿಮಲೆ ಅಯ್ಯಪ್ಪ ಸೇವಾ ಸಮಾಜದ ರಾಷ್ಟ್ರೀಯ ಸಮಿತಿಯ ಮಹಾಪೋಷಕರಾಗಿರುವುದಕ್ಕೆ ಅಭಿ ನಂದಿಸಿದರು.

ಇದನ್ನೂ ಓದಿ:ರಾಷ್ಟ್ರಪತಿಗಳ ವಾಸ್ತವ್ಯಕ್ಕೆ ಸರ್ಕೀಟ್ ಹೌಸ್ ಸಜ್ಜು

Advertisement

ರಾಷ್ಟ್ರೀಯ ಸಮಿತಿ ಅಧ್ಯಕ್ಷ ಟಿ.ಬಿ. ಶೇಖರ್‌ ಪ್ರಸ್ತಾವನೆಗೈದು, ರಾಜ್ಯದ 23 ಜಿಲ್ಲೆಗಳಲ್ಲಿ ಶಬರಿಮಲೆ ಅಯ್ಯಪ್ಪ ಸೇವಾ ಸಮಾಜದ ಸಮಿತಿಗಳು ಕಾರ್ಯನಿರ್ವಹಿಸುತ್ತಿವೆ. ಸಮಿತಿಯ ವತಿಯಿಂದ ಶಬರಿಮಲೆಯಲ್ಲಿ ಅನ್ನದಾನ, ಪ್ಲಾಸ್ಟಿಕ್‌ ನಿರ್ಮೂಲನೆ, ಪಾವಿತ್ರ್ಯ ರಕ್ಷಣೆ, ಮಹಿಳೆಯರಿಗೆ ದೇವರ ದರ್ಶನಕ್ಕೆ ಅವಕಾಶ ಮೊದಲಾದ ಕಾರ್ಯ ಮಾಡಲಾಗಿದೆ ಎಂದರು.

ಸಂಯೋಜಕರಾದ ಪಿ.ಎಸ್‌. ಪ್ರಕಾಶ್‌, ವಿ. ಕೃಷ್ಣಪ್ಪ, ಕೋಶಾಧಿಕಾರಿ ವಿನೋದ್‌ ಮತ್ತು ಸಂಘಟನ ಕಾರ್ಯದರ್ಶಿ ತಮಿಳುನಾಡಿನ ದೊರೈ ಶಂಕರ್‌ ಜಿ. ಉಪಸ್ಥಿತರಿದ್ದರು.

ದ.ಕ. ಜಿಲ್ಲಾ ಘಟಕದ ಕೋಶಾಧಿಕಾರಿ ಮಂಗಳೂರಿನ ಆನಂದ ಶೆಟ್ಟಿಸ್ವಾಗತಿಸಿದರು. ಉಡುಪಿ ಜಿಲ್ಲಾ ಘಟಕದ ಅಧ್ಯಕ್ಷ ರಾಧಾಕೃಷ್ಣ ಮೆಂಡನ್‌ ವಂದಿಸಿದರು. ರಾಜ್ಯ ಪ್ರಧಾನ ಕಾರ್ಯದರ್ಶಿ ಕೃಷ್ಣಯ್ಯ ಕಾರ್ಯಕ್ರಮ ನಿರ್ವಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next