ಉಡುಪಿ: ಕಡಿಯಾಳಿಯಿಂದ ಪರ್ಕಳದವರೆಗೆ ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿ ನಡೆಯುತ್ತಿದ್ದು ಪರ್ಕಳದಿಂದ ಮಣಿಪಾಲದವರೆಗೆ ಧೂಳಿನ ಸಮಸ್ಯೆ ಇದಿರಾಗಿದೆ. ವಿಶೇಷವಾಗಿ ಮಣಿಪಾಲ ಬಸ್ ನಿಲ್ದಾಣ ಪರಿಸರದಲ್ಲಿ ಧೂಳಿನ ಸಮಸ್ಯೆ ವಿಪರೀತವಾಗಿದೆ.
ಮೊದಲೇ ಮಣಿಪಾಲಕ್ಕೆ ಆಗಮಿಸುವವರಲ್ಲಿ ಬಹುತೇಕರು ರೋಗಿಗಳು. ಧೂಳಿನ ಸಮಸ್ಯೆಯಿಂದ ರೋಗಿಗಳ ರೋಗ ಮತ್ತಷ್ಟು ಉಲ್ಬಣವಾಗುವ ಸಾಧ್ಯತೆ ಇದೆ. ವಾಹನ ಸವಾರರು ಈ ಬಗ್ಗೆ ದೂರಿಕೊಳ್ಳುತ್ತಿದ್ದಾರೆ.
ರಸ್ತೆ ಅಗಲಗೊಳ್ಳುವ ಕಾಮಗಾರಿಯಲ್ಲಿ ರಸ್ತೆ ಅಗೆತ, ಈಗಾಗಲೇ ಇರುವ ಹೊಂಡಗುಂಡಿಗಳು, ಹೊಸ ಕಾಂಕ್ರಿಟ್ ಕಾಮಗಾರಿ ಈ ಮೂರೂ ತರಹದ ಕಾಮಗಾರಿ ಪ್ರಕ್ರಿಯೆ ಧೂಳಿನ ಸಮಸ್ಯೆಗೆ ಕಾರಣಗಳಾಗಿವೆ. ಧೂಳು ಏಳದಂತೆ ಆಗಾಗ್ಗೆ ನೀರು ಸಿಂಪಡಿಸುವುದೇ ಇದಕ್ಕಿರುವ ಪರಿಹಾರವಾಗಿದೆ. ಬೆಳಗ್ಗೆ ಬೇಗ ಆಯಾ ಅಂಗಡಿ ಮಾಲಕರು ನೀರು ಸಿಂಪಡಿಸುತ್ತಾರೆ. ಆದರೆ ಅದು ಸಾಕಾಗುತ್ತಿಲ್ಲ. ಧೂಳಿನ ಸಮಸ್ಯೆ ತಾತ್ಕಾಲಿಕವಾದರೂ ಪ್ರಸ್ತುತ ವಾಹನ ಚಾಲಕರು, ಪಾದಚಾರಿಗಳು ಅನುಭವಿಸುವುದು ಕಷ್ಟಸಾಧ್ಯವಾಗಿದೆ. ವಿಶೇಷವಾಗಿ ದ್ವಿಚಕ್ರ ವಾಹನ ಸವಾರರಿಗೆ ಕೆಲವೊಮ್ಮೆ ದಾರಿ ಕಾಣದಷ್ಟು ಕಷ್ಟವಾಗುತ್ತಿದೆ. ಇದರಿಂದಾಗಿ ಬಹುತೇಕರು ಮುಖಕ್ಕೆ ಅಂಗವಸ್ತ್ರವನ್ನು ಕಟ್ಟಿಕೊಂಡು ತೆರಳುತ್ತಿದ್ದಾರೆ. ರಾ.ಹೆ. ಅಧಿಕಾರಿಗಳು ಗುತ್ತಿಗೆದಾರರಿಗೆ ಸ್ಪಷ್ಟ ನಿರ್ದೇಶನವನ್ನು ಕೊಡಬೇಕಾಗಿದೆ. ಗುತ್ತಿಗೆ ನಿರ್ವಹಿಸುವವರು ದಿನದಲ್ಲಿ ಮೂರು ಬಾರಿಯಾದರೂ ನೀರು ಸಿಂಪಡಿಸುವುದು ಅಗತ್ಯವಾಗಿದೆ ಎಂಬ ಅಭಿಪ್ರಾಯ ವಾಹನ ಚಾಲಕರದು.
ಪರ್ಕಳದಿಂದ ಕಡಿಯಾಳಿವರೆಗೆ 10 ಕಿ.ಮೀ. ಹೆದ್ದಾರಿಯನ್ನು 98.46 ಕೋ.ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ. ‘ನೀರು ಸಿಂಪಡನೆ ನಡೆಯುತ್ತಿದೆ. ಸಮಸ್ಯೆ ಮುಖ್ಯವಾಗಿ ರಸ್ತೆ ಬದಿಯ ಅಂಗಡಿಯವರಿಗೆ ಆಗುತ್ತಿದೆ. ಸಮಸ್ಯೆಯನ್ನು ಕಡಿಮೆ ಮಾಡಲು ಪ್ರಯತ್ನಿ ಸುತ್ತೇವೆ’ ಎಂದು ರಾ.ಹೆ. ಎಂಜಿನಿಯರ್ ಮಂಜುನಾಥ ನಾಯಕ್ ತಿಳಿಸಿದ್ದಾರೆ.