Advertisement

ಮಾದಕ ವಸ್ತುಗಳೆಂದರೆ ಕಿಸೆಯಲ್ಲಿ ಹಾವಿದ್ದಂತೆ

05:04 PM Jul 08, 2018 | Team Udayavani |

ಹಾವೇರಿ: ಮಾದಕ ವಸ್ತುಗಳ ವ್ಯಸನ ಎಂದರೆ ಕಿಸೆಯಲ್ಲಿ ಹಾವಿಟ್ಟುಕೊಂಡಂತೆ. ಅದು ಯಾವಾಗಲಾದರೂ ನಮಗೆ ಕೆಟ್ಟದನ್ನು ಮಾಡುವ ಸಾಧ್ಯತೆ ಇದ್ದೇ ಇರುತ್ತದೆ. ಹೀಗಾಗಿ ಶಾಶ್ವತವಾಗಿ ವ್ಯಸನದಿಂದ ಹೊರಬಂದು ಜೀವನ ಪೂರ್ತಿ ಶಾಂತಚಿತ್ತರಾಗಿ, ಸಮಾಜಮುಖಿಯಾಗಿ ಬಾಳಬೇಕು ಎಂದು ಜಿಲ್ಲಾಧಿಕಾರಿ ಡಾ| ಎಂ.ವಿ. ವೆಂಕಟೇಶ್‌ ಹೇಳಿದರು. ಇಲ್ಲಿಯ ಜಿಲ್ಲಾ ಕಾರಾಗೃಹದಲ್ಲಿ ಶನಿವಾರ ಜಿಲ್ಲಾಡಳಿತ ಹಾಗೂ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಆಯೋಜಿಸಿದ್ದ ವಿಶ್ವ ಮಾದಕ ವಸ್ತು ವ್ಯಸನ ವಿರೋಧಿ ದಿನ ಹಾಗೂ ಪೂರ್ಣವಾಗಿ ವ್ಯಸನ ಬಿಡುವ ಕೈದಿಗಳ ಶಪಥಗೈಯುವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

Advertisement

ಬೆಳೆಯುವ ಪರಿಸರ, ಸಿಗುವ ಮಾರ್ಗದರ್ಶನ ಹಾಗೂ ಉತ್ತಮ ಶಿಕ್ಷಣದಿಂದ ನಮ್ಮ ವ್ಯಕ್ತಿತ್ವ ರೂಪಗೊಳ್ಳುತ್ತದೆ. ಆದರೆ, ಕೆಲವು ವ್ಯಕ್ತಿಗಳಿಗೆ ಸರಿಯಾದ ಮಾರ್ಗದರ್ಶನ ಇಲ್ಲದೇ ಚಿಕ್ಕ ವಯಸ್ಸಿನಲ್ಲೇ ದುಶ್ಚಟಗಳ ದಾಸರಾಗಿ ಕೋಪ, ಕ್ರೋಧ, ಸ್ವಾರ್ಥ ಮನೋಭಾವ ಬೆಳೆಸಿಕೊಂಡಿರುತ್ತಾರೆ. ಇವುಗಳ ಪರಿಣಾಮ ಸಾಂದರ್ಭಿಕ ಒತ್ತಡಕ್ಕೆ ಒಳಗಾಗಿ ತಮಗೆ ಅರಿವಿಲ್ಲದೇ ಅಪರಾಧ ಪ್ರಕರಣಗಳಲ್ಲಿಭಾಗಿಗಳಾಗಿ ಜೈಲು ವಾಸಿಗಳಾಗಿರುತ್ತಾರೆ. ಇಂತಹ ಸಾಂದರ್ಭಿಕ ಒತ್ತಡಕ್ಕೆ ಸಿಲುಕಿ ಕೈದಿಗಳಾಗಿರುವ ನೀವು ನಿಮ್ಮ ತಪ್ಪನ್ನು ಅರಿತುಕೊಂಡು ಪರಿವರ್ತನೆಗೆ ಮುಂದಾಗಿರುವುದು ಶ್ಲಾಘನೀಯ ಎಂದು ಹೇಳಿದರು.

ಹಾವೇರಿ ಕಾರಾಗೃಹ ಪರಿವರ್ತನೆಯ ತಾಣವಾಗಿದೆ. ಆಧ್ಯಾತ್ಮಿಕ ಕೇಂದ್ರವಾಗಿ, ಕಾಯಕವೇ ಕೈಲಾಸ ತತ್ವ ಪರಿಪಾಲನೆಯ ಕೇಂದ್ರವಾಗಿದೆ. ಅಧಿಕಾರಿಗಳು, ಸ್ವಯಂಸೇವಾ ಸಂಸ್ಥೆಗಳ ಸುಧಾರಣೆಯ ಕಾರ್ಯಕ್ಕೆ ಕೈದಿಗಳಾದ ನೀವು ಸ್ಪಂದಿಸುತ್ತಿರುವುದೇ ಇದಕ್ಕೆ ಕಾರಣವಾಗಿದೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಹೊಸಮಠದ ಬಸವಶಾಂತಲಿಂಗ ಸ್ವಾಮೀಜಿ, ಕಾರಾಗೃಹ ಆತ್ಮಾವಲೋಕನದ ತಾಣ. ಪರಿವರ್ತನೆಯ ತಾಣ, ವ್ಯಕ್ತಿತ್ವ ರೂಪಿಸಿಕೊಳ್ಳುವ ತಾಣ. ಭಗತ್‌ಸಿಂಗ್‌ ಸೇರಿದಂತೆ ಹಲವಾರು ಸ್ವಾತಂತ್ರ್ಯ ಹೋರಾಟಗಾರರು, ಚಿಂತಕರು ಜೈಲುವಾಸದ ಸಂದರ್ಭದಲ್ಲಿ ತಮ್ಮ ವ್ಯಕ್ತಿತ್ವ ವಿಕಸನಗೊಳಿಸಿಕೊಂಡು ಹಲವಾರು ಅತ್ಯುತ್ತಮ ಕೃತಿಗಳನ್ನು ಜೈಲಿನಲ್ಲಿ ಇದ್ದಾಗಲೇ ರಚಿಸಿರುವ ಸಾಕಷ್ಟು ಉದಾಹರಣೆಗಳು ನಮ್ಮ ಮುಂದಿವೆ. ಈ ಮಹಾತ್ಮರಂತೆ ತಾವು ಸಹ ನಿಮ್ಮ ವ್ಯಕ್ತಿತ್ವ ಪರಿವರ್ತನೆಯ ತಾಣವಾಗಿ ಈ ಜೈಲು ವಾಸದ ಅವಧಿ ಯನ್ನು ಸಾರ್ಥಕವಾಗಿ ಬಳಸಿಕೊಂಡು, ಆಧ್ಮಾತ್ಮಿಕ ಹಸಿವು ಬೆಳೆಸಿಕೊಂಡು ಸುಂದರ ಬದುಕು ರೂಪಿಸಿಕೊಳ್ಳಲು ಸಂಕಲ್ಪ ಮಾಡಬೇಕು ಎಂದರು.

ಕಾರ್ಯಕ್ರಮದಲ್ಲಿ ಈಶ್ವರೀಯ ವಿಶ್ವವಿದ್ಯಾಲಯದ ಲೀಲಾ, ಮನೋ ವೈದ್ಯ ಡಾ| ವಿಜಯಕುಮಾರ ಬಳಿಗಾರ ವಿಶೇಷ ಉಪನ್ಯಾಸ ನೀಡಿದರು. ಸಮಾರಂಭದಲ್ಲಿ ವೈದ್ಯೆ ಡಾ| ಪಿ.ಲೀಲಾ, ಹಿರಿಯ ನಾಗರಿಕ ಹಾಗೂ ವಿಕಲಚೇತನರ ಕಲ್ಯಾಣಾಧಿಕಾರಿ ಮಲ್ಲಿಕಾರ್ಜುನ ಮಠದ, ಜಿಲ್ಲಾ ವಾರ್ತಾಧಿಕಾರಿ ಡಾ| ಬಿ.ಆರ್‌. ರಂಗನಾಥ, ಪರಿವರ್ತನಾ ಮಹಿಳಾ ಸಂಘದ ಅಧ್ಯಕ್ಷೆ ಡಾ| ಉಮಾ ಬಳಿಗಾರ, ಇಡಾರಿ ಸಂಸ್ಥೆ ಅಧ್ಯಕ್ಷೆ ಪರಿಮಳ ಜೈನ್‌ ಹಾಗೂ ಇತರರಿದ್ದರು. ಜಿಲ್ಲಾ ಕಾರಾಗೃಹದ ಅಧೀಕ್ಷಕ ಟಿ.ಬಿ. ಭಜಂತ್ರಿ ಪ್ರಾಸ್ತಾವಿಕವಾಗಿ ಮಾತನಾಡಿದರು.

Advertisement

ಬಂಧಿಗಳ ಶಪಥ
ಕಾರಾಗೃಹದ 206 ಪುರುಷ ಹಾಗೂ 18 ಮಹಿಳಾ ಬಂಧಿಗಳು ಸೇರಿದಂತೆ ಒಟ್ಟು 224 ಬಂಧಿಗಳು ಸ್ವಯಂ ಪ್ರೇರಿತರಾಗಿ ಮಾದಕ ವಸ್ತು ಸೇವನೆ ಒಳಗೊಂಡಂತೆ ಎಲ್ಲ ರೀತಿ ದುಶ್ಚಟ ತ್ಯಜಿಸಿರುವುದಾಗಿ ಪ್ರತಿಜ್ಞೆ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next