ಕಾರ್ಕಳ; ಕೆದಿಂಜೆ ಬಳಿ ಅಪಘಾತ ನಡೆಸಿ ಪಾದಚಾರಿಯೋರ್ವರ ಸಾವಿಗೆ ಕಾರಣವಾದ ಲಾರಿ ಹಾಗೂ ಚಾಲಕನನ್ನು ಕಾರ್ಕಳ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮೇ 25ರಂದು ರಾತ್ರಿ ಒಡಿಶಾ ಮೂಲದ ಲಕ್ಷಣ್ ಮುರ್ಮು, ಘನಶ್ಯಾಮ್ ಮುರ್ಮು ಮತ್ತು ಕರಣ್ ಮುರ್ಮು ಎಂಬವರು ಕೆದಿಂಜೆಯಲ್ಲಿ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಕಾರ್ಕಳ ಕಡೆಗೆ ವೇಗವಾಗಿ ಸಾಗುತ್ತಿದ್ದ ವಾಹನ ಘನಶ್ಯಾಮ್ ಮತ್ತು ಕರಣ್‌ಗೆ ಢಿಕ್ಕಿ ಹೊಡೆದಿದೆ.
ಘನಶ್ಯಾಮ್ ಮತ್ತು ಕರಣ್‌ಗೆ ಗಂಭೀರ ಸ್ವರೂಪದ ಗಾಯವಾಗಿ ಪ್ರಜ್ಞೆ ಕಳೆದುಕೊಂಡಿದ್ದರು. ಗಾಯಗೊಂಡವರ ಪೈಕಿ ಘನಶ್ಯಾಮ್ ಅವರನ್ನು ಉಡುಪಿ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದಾÕಗ ದಾರಿ ಮಧ್ಯೆ ಮೃತಪಟ್ಟ ಘಟನೆ ನಡೆದಿತ್ತು. ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿತ್ತು. ಅಪಘಾತವೆಸಗಿದಾತ ವಾಹನದೊಂದಿಗೆ ಚಾಲಕ ಪರಾರಿಯಾಗಿದ್ದ. ಢಿಕ್ಕಿ ಹೊಡೆದು ಪಲಾಯನಗೈದ ವಾಹನದ ಪತ್ತೆಗಾಗಿ ಕಾರ್ಕಳ ವೃತ್ತ ನಿರೀಕ್ಷಕ ನಾಗರಾಜ್ ಟಿ.ಡಿ. ಮತ್ತವರ ತಂಡ ಎಲ್ಲ ತನಿಖೆ ಕೈಗೊಂಡಿದ್ದರು. ಸಿಸಿಟಿವಿ ದೃಶ್ಯಾವಳಿ ಪರಿಶೀಲನೆ, ಸಾರ್ವಜನಿಕರ ಮಾಹಿತಿ ಪಡೆದು ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
ಕುಂದಾಪುರದ ಬಿ.ಸಿ. ರೋಡ್ ನಿವಾಸಿ ಲಾರಿ ಮಾಲಕ ಮತ್ತು ಚಾಲಕಾಗಿದ್ದ ಸುರೇಶ್ ಶೆಟ್ಟಿ ಅಪಘಾತವೆಸಗಿ ಬಳಿಕ ಸುಳಿವು ಸಿಗದಂತೆ ನೋಡಿಕೊಂಡಿದ್ದ. ಅಪಘಾತ ಸಂಭವಿಸಿದ ಕೂಡಲೇ ಚಾಲಕ ಸುರೇಶ್ ಲಾರಿಯನ್ನು ಅಡ್ಡದಾರಿಯಲ್ಲಿ ನಿಲ್ಲಿಸಿ ಯಾರಿಗೂ ತನ್ನ ಮೇಲೆ ಸುಳಿವು ಅನುಮಾನ ಸಿಗದಂತೆ ನೋಡಿಕೊಂಡಿದ್ದ. ಬಳಿಕ ಕುಂದಾಪುರದ ಗ್ಯಾರೇಜ್ ಒಂದರಲ್ಲಿ ಲಾರಿಯನ್ನು ಸರ್ವಿಸ್‌ಗೆ ಇಟ್ಟಿದ್ದ. ಈ ಮೂಲಕ ತನ್ನ ಮೇಲೆ ಪೊಲೀಸರಿಗೆ ಅನುಮಾನ ಬರದಂತೆ ಎಚ್ಚರಿಕೆ ವಹಿಸಿದ್ದ ಎನ್ನಲಾಗಿದೆ. ಪೊಲೀಸರು ಆತನನ್ನು ಪತ್ತೆ ಹಚ್ಚಿ ನ್ಯಾಯಂಗ ಬಂಧನಕ್ಕೆ ಒಪ್ಪಿಸಿದ್ದಾರೆ.