ಶಿರಾ: ತಾಲೂಕಿನಲ್ಲಿ 2018-19ನೇ ಸಾಲಿನ ಬರದ ಭೀಕರತೆಗೆ ಬಿತ್ತಿದ ಮುಂಗಾರು ಹಂಗಾಮಿನ ಕೃಷಿ ಬೆಳೆಗಳಲ್ಲಿ ಶೇ.98.7ರಷ್ಟು ಬೆಳೆ ಹಾನಿಯಿಂದ ತೀವ್ರ ಇಳಿಮುಖವಾಗಿರುವ ಕೃಷಿ ಇಳುವರಿ, ಮೇವಿನ ಕೊರತೆ ನೀಗಿಸಲು ತಾಲೂಕಿನಲ್ಲಿ 5 ಕಡೆ ಮೇವು ಬ್ಯಾಂಕ್ ತೆರೆದಿದ್ದಾರೆ. ಆದರೂ ಸಹ ಮೇವಿನ ಕೊರತೆ ನೀಗಿಲ್ಲ. ತಾಲೂಕಿನಲ್ಲಿ 1000ದಿಂದ 1200 ಅಡಿ ಕೊಳವೆ ಬಾವಿ ಕೊರೆಸಿದ್ದರೂ ಹನಿ ನೀರು ಸಿಗುತ್ತಿಲ್ಲ. ಹಲವು ಕಡೆ ಕೊಳವೆ ಬಾವಿ ವಿಫಲವಾಗಿದ್ದರಿಂದ ಕುಡಿಯುವ ನೀರನ್ನು ಟ್ಯಾಂಕರ್ ಮೂಲಕ ತಾಲೂಕು ಆಡಳಿತ ಕಲ್ಪಿಸುತ್ತಿದೆ.
ಶೇ.98.7ರಷ್ಟು ಬೆಳೆ ಹಾನಿ: ಶಿರಾ ತಾಲೂಕಿನ ಒಟ್ಟು ಭೌಗೋಳಿಕ ವಿಸ್ತೀರ್ಣ 1,55,277 ಹೆಕ್ಟೇರ್‌ಗಳಿದ್ದು, ಅದರಲ್ಲಿ 1,02,163 ಹೆಕ್ಟೇರ್ ಪ್ರದೇಶ ಮಾತ್ರ ಸಾಗುವಳಿಗೆ ಯೋಗ್ಯವಾಗಿದೆ. ರಾಗಿ, ತೊಗರಿ, ಶೇಂಗಾ, ಹತ್ತಿ, ತೆಂಗು, ಅಡಿಕೆ ಮತ್ತು ದಾಳಿಂಬೆ ತಾಲೂಕಿನ ಪ್ರಮುಖ ಬೆಳೆಗಳಾಗಿರುತ್ತವೆ. ತಾಲೂಕಿ ನಲ್ಲಿರುವ 110 ಸಣ್ಣ ಮತ್ತು 60 ಮಧ್ಯಮ ಕೆರೆಗಳು ಬರದಿಂದ ಒಣಗಿವೆ. ತಾಲೂಕಿನಲ್ಲಿ ವಾಡಿಕೆ ಮಳೆ 520 ಎಂ.ಎಂ ಇದ್ದು, 449 ಎಂ.ಎಂ ಮಳೆಯಾಗಿದ್ದರೂ ಸಹ ಸಮರ್ಪಕವಾಗಿ ಮಳೆ ನೀರು ಹಂಚಿಕೆಯಾಗದ ಕಾರಣ ಶೇ.98.7ರಷ್ಟು ಬೆಳೆ ಹಾನಿಯಾಗಿರುತ್ತದೆ.
ಬರದಿಂದ ತಾಲೂಕಿನಲ್ಲಿ 5850 ಹೆಕ್ಟೇರ್ ತೆಂಗು, 3730 ಹೆಕ್ಟೇರ್ ಅಡಿಕೆ ಹಾಗೂ 1895 ಹೆಕ್ಟೇರ್ ದಾಳಿಂಬೆ ನಾಶವಾಗಿದೆ. ಕಂದಾಯ ಮತ್ತು ಕೃಷಿ ಇಲಾಖೆ ಜಂಟಿ ಸಮೀಕ್ಷೆ ವರದಿ ಪ್ರಕಾರ ಬರಗಾಲದ ತೀವ್ರತೆಗೆ 14.55 ಕೋಟಿ ಕೃಷಿ ಬೆಳೆ ನಷ್ಟವಾಗಿದೆ. ತೋಟಗಾರಿಕೆ ಬೆಳೆಗಳಲ್ಲಿಯೂ 20.75 ಕೋಟಿ ನಷ್ಟವಾಗಿದೆ.
ಬೆಳೆ ಉಳಿಸಿಕೊಳ್ಳಲು ಲಕ್ಷಾಂತರ ರೂ. ಖರ್ಚು: ಶಿರಾ ತಾಲೂಕಿನ ಕಳ್ಳಂಬೆಳ್ಳ, ಚಿಕ್ಕನಹಳ್ಳಿ ಹಾಗೂ ಸುತ್ತ ಮುತ್ತಲ ಹಳ್ಳಿಗಳಲ್ಲಿ ಹೆಚ್ಚಾಗಿ ರೈತರು ಅಡಿಕೆ ಬೆಳೆ ಯನ್ನು ಅವಲಂಭಿಸಿರುವುದರಿಂದ ಫಸಲಿಗೆ ಬಂದಿ ರುವ ಅಡಿಕೆ ಬೆಳೆಯನ್ನು ಉಳಿಸಿಕೊಳ್ಳಲು ಲಕ್ಷಾಂತರ ರೂ.ಗಳನ್ನು ಖರ್ಚು ಮಾಡಿ, 1000 ದಿಂದ 1200 ಅಡಿ ಕೊಳವೆ ಬಾವಿಯನ್ನು ಕೊರೆಸಿದರೂ ಹನಿ ನೀರು ಕೂಡ ಸಿಕ್ಕಿರುವುದಿಲ್ಲ. ಆದ್ದರಿಂದ ಬೆಳೆಯನ್ನು ಉಳಿಸಕೊಳ್ಳಲು ಸಾವಿರಾರು ರೂ. ಖರ್ಚು ಮಾಡಿ, ಟ್ಯಾಂಕರ್ ಮೂಲಕ ಬೆಳೆಗಳಿಗೆ ನೀರು ಹಾಯಿಸಿ ಕೊಳ್ಳುತ್ತಿದ್ದರೂ ಸಹ ಕಳ್ಳಂಬೆಳ್ಳ ಹೋಬಳಿ ಒಂದರಲ್ಲೇ 1500 ಹೆಕ್ಟೇರ್ ತೆಂಗು, 1350 ಹೆಕ್ಟೇರ್ ಅಡಿಕೆ ಬೆಳೆ ನಾಶವಾಗಿದೆ.
ಕೊಳವೆ ಬಾವಿಗಳಲ್ಲಿ ನೀರಿನ ಮಟ್ಟ ಕುಸಿತ: ಶಿರಾ ನಗರದ ಅಂತರ್ಜಲ ವೃದ್ಧಿ ಮಾಡುವ ಜಾಜಮ್ಮನ ಕಟ್ಟೆ ಬರಿದಾದ ಕಾರಣ ಸುತ್ತಮುತ್ತಲೂ ಇರುವ ಬಾಲಾಜಿ ನಗರ, ವಿದ್ಯಾನಗರ, ಸಪ್ತಗಿರಿ ಬಡಾವಣೆ, ವಾಜಿದ್ ಲೇಔಟ್ ಮುಂತಾದ ಬಡಾವಣೆಗಳಿಗೆ ಸೇರಿದ ಕೊಳವೆ ಬಾವಿಗಳಲ್ಲಿ ನೀರಿನ ಮಟ್ಟ ಕುಗ್ಗಿದೆ. ಇದರಿಂದ ಸಾರ್ವಜನಿಕರಲ್ಲಿ ಆತಂಕ ಮನೆ ಮಾಡಿದೆ. ಜಾಜಮ್ಮನ ಕಟ್ಟೆಗೆ ಮಳೆ ನೀರು ಹರಿಯುವ ರಾಜ ಕಾಲುವೆ ಹಾಗೂ ಸಣ್ಣ ಪುಟ್ಟ ಕಾಲುವೆಗಳು ಒತ್ತುವರಿ ಯಾದ ಕಾರಣ ನೀರಿನ ಒಳ ಹರಿವು ಕಡಿಮೆಯಾಗಿ ಬತ್ತಿ ಹೋಗುತ್ತಿದೆ. ಈ ಕೂಡಲೇ ನಗರಸಭೆ ಎಚ್ಚೆತ್ತು ಕೊಂಡು ಜಾಜಮ್ಮನ ಕಟ್ಟೆಯಲ್ಲಿರುವ ಹೂಳನ್ನು ತೆರವುಗೊಳಿಸಿ, ನೀರಿನ ಒಳ ಹರಿವಿಗೆ ದಾರಿ ಮಾಡಿ ಕೊಡದಿದ್ದರೆ, ನಗರದಲ್ಲಿ ಅಂತರ್ಜಲ ಮತ್ತಷ್ಟು ಕುಸಿದು ಕುಡಿಯುವ ನೀರಿಗೂ ಸಹ ತೊಂದರೆ ಯಾಗುವುದರಲ್ಲಿ ಯಾವುದೇ ಸಂದೇಹವಿಲ್ಲ.
ನಗರಸಭೆ ವಿರುದ್ಧ ಆಕ್ರೋಶ: ಶಿರಾ ಕಲ್ಲುಕೋಟೆ ಕೆರೆಯ ಏರಿ ಮೇಲೆ ಕುಡಿಯುವ ನೀರಿಗಾಗಿ ನಗರ ಸಭೆ 8 ತಿಂಗಳ ಹಿಂದೆ ಕೊಳವೆ ಬಾವಿ ಕೊರೆಸಿ, ಅದಕ್ಕೆ ಮೋಟಾರ್ ಪಂಪ್ ಅಳವಡಿಸಿ ಯಾವುದೇ ನೀರಿನ ಸಂಪರ್ಕ ಕಲ್ಪಿಸದೇ ಹಾಗೆಯೇ ಬಿಟ್ಟಿದ್ದಾರೆ. ಕುಡಿ ಯುವ ನೀರಿಗೆ ವ್ಯವಸ್ಥೆ ಕಲ್ಪಿಸದೇ ಕೇವಲ ಕೊಳವೆ ಬಾವಿ ಕೊರೆಸಿ, ಅದಕ್ಕೆ ಹೊಸ ಮೋಟಾರ್ ಪಂಪ್ ಅಳ ವಡಿಸಿ ಬಿಲ್ ಮಾಡಿಕೊಳ್ಳುವದರಲ್ಲಿ ಇರುವ ಆಸಕ್ತಿ ಸಾರ್ವಜನಿಕರಿಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿಲ್ಲ ಎಂದು ನಗರಸಭೆ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.