Advertisement

ತುಮರಿ ಸೇತುವೆಯ ಕನಸು ಕರಗುವ ಆತಂಕ

04:44 PM Nov 17, 2018 | |

ಸಾಗರ: ಪ್ರತಿ ಬಾರಿಯ ಚುನಾವಣೆಗಳಲ್ಲಿ ನೀಡುವ ಭರವಸೆಗಳಲ್ಲಿ ಅಗ್ರಸ್ಥಾನ ಪಡೆಯುವ, ಅಧಿಕೃತವಾಗಿ ಬಿಜೆಪಿ ಸರ್ಕಾರದಿಂದ ಎರಡೆರಡು ಬಾರಿ ಶಂಕುಸ್ಥಾಪನೆಗೊಂಡ ಅಂಬಾರಗೊಡ್ಲು ಕಳಸವಳ್ಳಿಯ ಸೇತುವೆಯ ಕನಸು ಶರಾವತಿ ಹಿನ್ನೀರಿನಲ್ಲಿ ಕರಗಿ
ಹೋಗುವ ಆತಂಕ ವ್ಯಕ್ತವಾಗಿದೆ. ಕೇಂದ್ರದ ಹೆದ್ದಾರಿ ಸಚಿವಾಲಯದ ಹಿರಿಯ ಅಧಿಕಾರಿಗಳು ಯೋಜನೆಗೆ ತೊಡಗಿಸುವ ಬಂಡವಾಳದ ಲೆಕ್ಕದಲ್ಲಿ ಸೇತುವೆ ನಿರ್ಮಾಣ ಜನೋಪಯೋಗಿ ಅಲ್ಲ ಎಂಬ ನಿರ್ಣಯಕ್ಕೆ ಬಂದಿದ್ದಾರೆ ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ.

Advertisement

1964ರಲ್ಲಿ ನಾಡಿನ ಅಗತ್ಯದ ವಿದ್ಯುತ್‌ ಉತ್ಪಾದನೆಗಾಗಿ ನಿರ್ಮಾಣವಾದ ಲಿಂಗನಮಕ್ಕಿ ಜಲಾಶಯದ ಕಾರಣ ಶರಾವತಿ ಹಿನ್ನೀರಿನ ಮಾನವ ನಿರ್ಮಿತ ದ್ವೀಪದಲ್ಲಿ ಸಿಲುಕಿದ ಕರೂರು ತುಮರಿ ಭಾಗದ ಸಾವಿರಾರು ಜನರ ಅನುಕೂಲಕ್ಕಾಗಿ ಕೇಂದ್ರದ ಹೆದ್ದಾರಿ ಹಾಗೂ
ರಸ್ತೆ ಸಾರಿಗೆ ಸಚಿವ ನಿತಿನ್‌ ಗಡ್ಕರಿ ಫೆ. 19ರಂದು ಕಳಸವಳ್ಳಿ ತಟದಲ್ಲಿ 2.16 ಕಿಮೀ ಉದ್ದದ ಸೇತುವೆಗೆ ಶಂಕುಸ್ಥಾಪನೆ ನೆರವೇರಿಸಿದ್ದರು. ತರಾತುರಿಯಲ್ಲಿ ಕೇಂದ್ರದ ಬಿಜೆಪಿ ಸರ್ಕಾರ ಶಂಕುಸ್ಥಾಪನೆಗೆ ಮುಂದಾಗಿದ್ದ ಬಗ್ಗೆ “ಉದಯವಾಣಿ’ ಮಾರ್ಚ್‌ 22ರಂದು ವರದಿ ಪ್ರಕಟಿಸಿತ್ತು.

ಉತ್ತರ ಸಿಕ್ಕದ ಪ್ರಶ್ನೆಗಳು: ತುಮರಿ ಸೇತುವೆ ನಿರ್ಮಾಣ ಸಂಬಂಧ ಕರ್ನಾಟಕ ಪವರ್‌ ಕಾರ್ಪೊರೇಷನ್‌ನವರ ಅನುಮತಿ ಹಾಗೂ ವನ್ಯ ಜೀವಿ ಇಲಾಖೆಯ ನಿರಪೇಕ್ಷಣಾ ಪತ್ರ ಪಡೆದ ನಂತರವೇ ಹೆದ್ದಾರಿ ಸಚಿವಾಲಯ ಅನುಮತಿ ನೀಡುತ್ತದೆ ಎಂಬುದನ್ನು ಇತ್ತೀಚೆಗೆ ಖುದ್ದು ಹೆದ್ದಾರಿ ಇಲಾಖೆ ಅರಣ್ಯ ಇಲಾಖೆಗೆ ಬರೆದ ಪತ್ರದಲ್ಲಿ ಹೇಳಲಾಗಿದೆ. ಇದೇ ಅ. 17ರಂದು ರಾಷ್ಟ್ರೀಯ ಹೆದ್ದಾರಿ ಉಪ ವಿಭಾಗದ ಶಿವಮೊಗ್ಗದ ಸಹಾಯಕ ಕಾರ್ಯಪಾಲಕ ಇಂಜಿನಿಯರ್‌ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಬರೆದ ಪತ್ರದಲ್ಲಿ, ಸೇತುವೆ ನಿರ್ಮಾಣ ಕಾಮಗಾರಿಗೆ ಕರಡು ಯೋಜನಾ ವರದಿ ತಯಾರಿಸಿ ಭೂ ಸಾರಿಗೆ ಮಂತ್ರಾಲಯಕ್ಕೆ ಸಲ್ಲಿಸಲಾಗಿದ್ದು ಸದರಿ ಯೋಜನೆ ಮಂಜೂರಾತಿ ಹಂತದಲ್ಲಿದೆ ಎಂದು ಉಲ್ಲೇಖೀಸಿದೆ. 

ಜೊತೆಗೆ ಸದರಿ ಸೇತುವೆ ಶರಾವತಿ ಅಭಯಾರಣ್ಯ ವನ್ಯಜೀವಿ ಪರಿಸರಕ್ಕೆ ಧಕ್ಕೆ, ಹಾನಿ ಉಂಟುಮಾಡುವುದಿಲ್ಲ. ಈ ಪ್ರದೇಶ ಅರಣ್ಯೇತರ ಪ್ರದೇಶ ಆಗಿರುವುದರಿಂದ ಸದರಿ ಸೇತುವೆಗೆ ನಿರಪೇಕ್ಷಣಾ ಪತ್ರ ನೀಡಬೇಕೆಂದು ವಿನಂತಿಸಿದೆ. ಈ ಪತ್ರ 606 ಕೋಟಿ ರೂ. ವೆಚ್ಚದಲ್ಲಿ ಸೇತುವೆ ನಿರ್ಮಾಣಕ್ಕೆ ಡಿಪಿಆರ್‌ ಆಗಿದೆ, 24 ತಿಂಗಳಲ್ಲಿ ಸೇತುವೆ ಸಿದ್ಧವಾಗಿ ನಿಲ್ಲುತ್ತದೆ ಎಂಬ ಹೆದ್ದಾರಿ ಸಚಿವ
ಗಡ್ಕರಿ ಅವರ ಹೇಳಿಕೆಯನ್ನೂ ಹುಸಿಗೊಳಿಸಿದೆ.

ಸೇತುವೆ ಬಗ್ಗೆ ಆಸಕ್ತವಲ್ಲದ ಭೂಸಾರಿಗೆ ಸಚಿವಾಲಯ ಯೋಜನೆಯ ಸಾಧ್ಯತೆಯನ್ನು ಮುಂದೂಡುವ ತಂತ್ರಗಳನ್ನೇ ಕೈಗೆತ್ತಿಕೊಂಡಿದೆ ಎಂಬ ಅನುಮಾನವೂ ವ್ಯಕ್ತವಾಗಿದೆ. ಎರಡೆರಡು ಬಾರಿ ಯೋಜನೆಯ ವೆಚ್ಚವನ್ನು ಕಡಿಮೆ ಮಾಡುವಂತೆ
ಸೂಚಿಸಿದ್ದರಿಂದ ಸುಮಾರು 9 ತಿಂಗಳು ವ್ಯರ್ಥವಾಗಿದೆ. ಈಗ ಯೋಜನೆಯ ಮೊತ್ತವನ್ನು 456.67 ಕೋಟಿ ರೂ. ಗೆ ಇಳಿಸಿದ ನಂತರ ಕೆಪಿಸಿ, ವೈಲ್ಡ್‌ ಲೈಫ್‌ಗಳ ಎನ್‌ಒಸಿ ಪಡೆಯಬೇಕು ಎಂಬ ಸೂಚನೆ ನೀಡಿ ವಿಳಂಬ ನೀತಿ ಅನುಸರಿಸಲಾಗುತ್ತಿದೆ ಎಂದು ತರ್ಕಿಸಲಾಗುತ್ತಿದೆ.

Advertisement

ಬಿಜೆಪಿ ಕುರಿತು ಆಕ್ರೋಶ: ಶರಾವತಿ ಹಿನ್ನೀರ ಜನಕ್ಕೆ 2009ರ ಬಜೆಟ್‌ನಲ್ಲಿ ಸೇತುವೆಯನ್ನು ಘೋಷಿಸಿದ್ದ ಅವತ್ತಿನ ಬಿಜೆಪಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಸಾಗರಕ್ಕೆ ಬಂದು ಶಂಕುಸ್ಥಾಪನೆ ನಡೆಸಿದ್ದರು. ರಾಜ್ಯ ಸರ್ಕಾರದಿಂದ ಸೇತುವೆ ಆಗದಿದ್ದಾಗ
ಕೇಂದ್ರ ಕೈಹಿಡಿದರೆ ಸೇತುವೆ ಖಚಿತ ಎಂಬ ಭಾವ ಈ ಭಾಗದ ಜನರಲ್ಲಿತ್ತು. ಗಡ್ಕರಿಯವರ ಉದ್ಘಾಟನಾ ಕಾರ್ಯಕ್ರಮ ಅಂತಹ ಭರವಸೆ ತಂದಿತ್ತು. ನಂತರದ ವಿದ್ಯಮಾನಗಳಿಂದ ದ್ವೀಪದ ಜನರಲ್ಲಿ ಅಸಹನೆ ಮೂಡಲಾರಂಭಿಸಿತ್ತು.

ರಾಷ್ಟ್ರೀಯ ಹೆದ್ದಾರಿ 17 ಮತ್ತು 206ರ ನಡುವೆ ಸಂಪರ್ಕ ಒದಗಿಸುವ ಸಾಗರ ನಗರದಿಂದ ಆವಿನಹಳ್ಳಿ, ಹೊಳೆಬಾಗಿಲು, ಕಳಸವಳ್ಳಿ, ಸಿಗಂದೂರು, ಮರಕುಟಿಗದವರೆಗಿನ ಸುಮಾರು 89 ಕಿಮೀ ಸಂಪರ್ಕ ಹೆದ್ದಾರಿಯ ಭಾಗವಾಗಿ ತುಮರಿ ಸೇತುವೆ  ನಿರ್ಮಾಣವಾಗುತ್ತದೆ. ಇದರಿಂದಾಗಿ ಸುಮಾರು 25 ಕಿ.ಮೀ.ನಷ್ಟು ದೂರದಲ್ಲಿ ಮಿಗತೆಯಾಗುತ್ತದೆ. ಇದು ಶಿವಮೊಗ್ಗ, ಸಾಗರ ಮತ್ತು ಭಟ್ಕಳ, ಬೈಂದೂರು, ಕೊಲ್ಲೂರುಗಳ ಅಂತರವನ್ನು ಕುಗ್ಗಿಸುತ್ತದೆ. ಮುಂದೆ ಘಟ್ಟದ ಮೇಲೆ ಕೆಳಗಿನ ಓಡಾಟಕ್ಕೆ ಇದೇ ಪ್ರಮುಖ  ಮಾರ್ಗವಾಗುತ್ತದೆ ಎಂಬ ಪ್ರತಿಪಾದನೆಯೂ ಸೇತುವೆ ಕುರಿತ ಜನರ ನಿರೀಕ್ಷೆಗಳಿಗೆ ಕಾರಣವಾಗಿತ್ತು. ಹೆದ್ದಾರಿ ಇಲಾಖೆಯ ಮೂಲಗಳ ಪ್ರಕಾರ, ಈವರೆಗೆ ಸಾಗರ ಮರಕುಟಿಗ ರಾಜ್ಯ ಹೆದ್ದಾರಿ ಕೂಡ ಹಸ್ತಾಂತರವಾಗಿಲ್ಲ.

ಮತ್ತೆ ಮತ್ತೆ ಸುಳ್ಳು!
ಶಿವಮೊಗ್ಗ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಸಾಗರದ ಶಾಸಕ ಎಚ್‌. ಹಾಲಪ್ಪ, ಬಿಎಸ್‌ವೈ, ಬಿ.ಎಸ್‌. ರಾಘವೇಂದ್ರ ಸೇರಿದಂತೆ ಬಿಜೆಪಿ ಪ್ರಮುಖರು, ಕರ್ನಾಟಕ ವಿದ್ಯುತ್ಛಕ್ತಿ ನಿಗಮ ಸೇತುವೆಗೆ ಅನುಮತಿ ನೀಡಿದ್ದಾರೆ. ಸದ್ಯದಲ್ಲಿಯೇ ಯೋಜನೆಯ
ಟೆಂಡರ್‌ ಪ್ರಕ್ರಿಯೆ ನಡೆಯಲಿದೆ ಎಂದು ತಿಳಿಸಿದ್ದರು. ಆದರೆ ಗುರುವಾರ ಕೆಪಿಸಿ ಹಿರಿಯ ಅಧಿಕಾರಿಗಳು ಎನ್‌ಒಸಿ ನೀಡುವಲ್ಲಿ ವಿಫಲರಾಗಿದ್ದಾರೆ ಎಂದು ಬೆಂಗಳೂರಿನ ಶಕ್ತಿ ಕೇಂದ್ರದಲ್ಲಿ ಹಾಲಪ್ಪ ಏಕಾಂಗಿ ಪ್ರತಿಭಟನೆ ನಡೆಸಿದ ಸುದ್ದಿ ತಿಳಿದ ತುಮರಿ ಭಾಗದ ಜನರಿಗೆ ನಿಜ ಸುಳ್ಳುಗಳ ಬಗ್ಗೆ ತೀವ್ರ ಗೊಂದಲಗಳಾಗಿವೆ ಎನ್ನಲಾಗುತ್ತಿದೆ. ಸೇತುವೆ ನಿರ್ಮಾಣದ ಸಾಮಗ್ರಿಗಳು ಸ್ಥಳಕ್ಕೆ ಬಂದು ಬೀಳುವವರೆಗೆ ನಾವು ಯಾರನ್ನೂ ನಂಬುವ ಸ್ಥಿತಿಯಲ್ಲಿಲ್ಲ ಎಂದು ಅಲ್ಲಿನ ಬಹುತೇಕರು ಸ್ಪಷ್ಟಪಡಿಸುತ್ತಿದ್ದಾರೆ. 

ಮಾಧ್ಯಮಕ್ಕೆ ದಾಖಲೆ ನಿರ್ಬಂಧ?
 ಪತ್ರಿಕೆಗೆ ಸಿಕ್ಕ ಮಾಹಿತಿ ಪ್ರಕಾರ, ಶಿವಮೊಗ್ಗ ಬಿಜೆಪಿಯ ಪ್ರಮುಖರಿಗೂ ತುಮರಿ ಸೇತುವೆ ನಿರ್ಮಾಣ ಸಾಧ್ಯತೆ ಕುಂದುತ್ತಿರುವುದು ಅನುಭವಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಯಾವುದೇ ಮಾಧ್ಯಮದವರಿಗೆ ಯಾವುದೇ ಮಾಹಿತಿ ನೀಡದಂತೆ ಹೆದ್ದಾರಿ ಇಲಾಖೆಯ ಅಧಿಕಾರಿಗಳಿಗೆ ಅವರು ಮೌಖೀಕ ಸೂಚನೆ ನೀಡಿದ್ದಾರೆ. ಇದೇ ವೇಳೆ, ಸೇತುವೆ ನಿರ್ಮಾಣಕ್ಕೆ ನಾವು ಸಿದ್ದರಿದ್ದೇವೆ. ಆದರೆ ರಾಜ್ಯ ಸರ್ಕಾರದಿಂದ ಸಹಕಾರ ಸಿಗುತ್ತಿಲ್ಲ ಎಂಬ ಭಾವನೆ ಜನರಲ್ಲಿ ಮೂಡಿಸುವ ತಂತ್ರಗಾರಿಕೆಯನ್ನು ನಡೆಸಿದ್ದಾರೆ ಎನ್ನಲಾಗುತ್ತಿದೆ. ಸಾಗರದಲ್ಲಿ ನಡೆದ ಎಂಪಿ ಅಭಿನಂದನಾ ಸಭೆ, ಹಾಲಪ್ಪ ಅವರ ಪ್ರತಿಭಟನೆ ಮೊದಲಾದ ಘಟನೆಗಳು ಈ ವಾದವನ್ನೇ ನಂಬುವಂತೆ ಮಾಡುತ್ತಿದೆ.

 ಮಾ.ವೆಂ.ಸ.ಪ್ರಸಾದ್‌

Advertisement

Udayavani is now on Telegram. Click here to join our channel and stay updated with the latest news.

Next