Advertisement

ಮರೀಚಿಕೆಯಾಗಿ ಉಳಿಯಿತೇ ಮೊಗ್ರ ಸೇತುವೆಯ ಕನಸು

10:20 PM Apr 24, 2019 | Team Udayavani |

ಗುತ್ತಿಗಾರು: ಇಲ್ಲಿನ ಮೊಗ್ರ ಏರಣಗುಡ್ಡೆಯ ಹೊಳೆಗೆ ಬಹು ವರ್ಷ ಗಳಿಂದ ಬೇಡಿಕೆಯಾಗಿದ್ದ ಮೊಗ್ರ ಸೇತುವೆ ನಿರ್ಮಾಣ ಕಾಮಗಾರಿ ಮರೀಚಿಕೆಯಾ ಗಿಯೇ ಉಳಿದಿದೆ. ಈ ಮಳೆಗಾಲದಲ್ಲಿಯೂ ಸ್ಥಳೀಯರು ಅಡಿಕೆ ಮರದ ಕಾಲುಸಂಕದ ಲ್ಲಿಯೇ ಹೊಳೆ ದಾಟಬೇಕಾದ ಪರಿಸ್ಥಿರಿ ಇದೆ.

Advertisement

ಗುತ್ತಿಗಾರು ಗ್ರಾಮದ ಮೊಗ್ರದಲ್ಲಿ ಏರಣಗುಡ್ಡೆ ಹಾಗೂ ಮೊಗ್ರಶಾಲೆ, ಅಂಗನವಾಡಿ, ಆರೋಗ್ಯ ಉಪಕೇಂದ್ರಗಳ ನಡುವೆ ಸಂಪರ್ಕ ಕಲ್ಪಿಸುವ ರಸ್ತೆಯ ಮಧ್ಯೆ ಮೊಗ್ರ ಹೊಳೆ ಹರಿಯುತ್ತಿದ್ದು ಈ ಹೊಳೆಗೆ ಸೇತುವೆ ರಚನೆ ಮಾಡುವಂತೆ ಈ ಭಾಗದ ಜನ ಹಲವು ವರ್ಷಗಳಿಂದ ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು. ಆದರೆ ಇದುವರೆಗೆ ಈ ಹೊಳೆಗೆ ಸೇತುವೆ ನಿರ್ಮಿಸಲು ಯಾವೊಂದು ಅನುದಾನ ಲಭಿಸಿಲ್ಲ.

ಅಡಿಕೆ ಮರದ ಸೇತುವೆ
ಮಳೆಗಾಲದಲ್ಲಿ ತುಂಬಿ ಹರಿಯುವ ಮೊಗ್ರ ಹೊಳೆಯನ್ನು ದಾಟಲು ಗ್ರಾ.ಪಂ. ವತಿಯಿಂದ ತಾತ್ಕಾಲಿಕ ಅಡಿಕೆ ಮರದ ಕಾಲುಸಂಕ ನಿರ್ಮಿಸಲಾಗಿದೆ. ಇದೇ ಕಾಲುಸಂಕದಲ್ಲಿ ಹೊಳೆಯಾಚೆ ಇರುವ ಶಾಲಾ ಮಕ್ಕಳು, ಅಂಗನವಾಡಿ ಪುಟಾಣಿಗಳು ಹಾಗೂ ನಾಗರಿಕರು ಜೀವ ಕೈಯಲ್ಲಿ ಹಿಡಿದು ಸಾಗಬೇಕು. ಸ್ವಲ್ಪ ಆಯತಪ್ಪಿದರೂ ನೀರು ಪಾಲಾಗುವ ಭೀತಿ ಇಲ್ಲಿನ ನಾಗರಿಕರದ್ದು.

ಬೇಡಿಕೆ ಸಲ್ಲಿಕೆ
ಮೊಗ್ರದಲ್ಲಿ ಸೇತುವೆ ನಿರ್ಮಾಣ ಮಾಡಲು ಹಲವು ಬಾರಿ ವಿವಿಧ ಇಲಾಖೆಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ಇಲ್ಲಿನ ಜನತೆ ಮನವಿ ಸಲ್ಲಿಸಿದ್ದರು. ಸುಳ್ಯ ಶಾಸಕರು, ದ.ಕ. ಸಂಸದರಿಗೂ ಇಲ್ಲಿನ ಪರಿಸ್ಥಿತಿಯ ಬಗ್ಗೆ ಮಾಧ್ಯಮಗಳು ವಿವರಿಸಿದ್ದರೂ, ಇದುವರೆಗೆ ಯಾವೊಂದು ಪ್ರಯೋಜನವೂ ಆಗಿಲ್ಲ. ಇಲ್ಲಿನ ಏರಣಗುಡ್ಡೆ-ಮೊಗ್ರ ಪರಿಸರದಲ್ಲಿ ಹಲವು ಪ.ಜಾತಿ ಕುಟುಂಬಗಳಿದ್ದು, ಅವರೆಲ್ಲ ಈ ಹೊಳೆಯನ್ನು ಬಳಸಿಯೇ ಬೇರೆ ಊರುಗಳಿಗೆ ಸಾಗಬೇಕು. ಅತ್ಯಂತ ಆವಶ್ಯಕ ಮತ್ತು ಅನಿವಾರ್ಯವೆನಿಸಿರುವ ಈ ಸೇತುವೆಯ ನಿರ್ಮಾಣದ ಕನಸು ನನಸಾಗುವುದೆಂದು?

ಸುತ್ತುಬಳಸಿ ಪಯಣ
ಮೊಗ್ರ ಹಿ.ಪ್ರಾ. ಶಾಲೆ, ಆರೋಗ್ಯ ಉಪಕೇಂದ್ರ ಹಾಗೂ ಅಂಗನವಾಡಿಗೆ ಹತ್ತಿರದ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಬರುವ ಮೊಗ್ರ ಹೊಳೆಗೆ ಸೇತುವೆ ರಚನೆ ಮಾಡಿದರೆ ಅತ್ಯಂತ ಹತ್ತಿರದ ಸಂಪರ್ಕ ಕೊಂಡಿಯಾಗುತ್ತದೆ. ಇಲ್ಲವಾದಲ್ಲಿ ಮಕ್ಕಳು ಸುತ್ತುಬಳಸಿ ಶಾಲೆಯನ್ನು ತಲುಪಬೇಕು. ಆದ್ದರಿಂದ ಇಲ್ಲಿನ ಶಾಲೆಗೆ ಮಕ್ಕಳನ್ನು ಕಳುಹಿಸಲು ಹಿಂಜರಿಯುತ್ತಿದ್ದು, ಸ್ಥಳೀಯ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಕ್ಷೀಣಿಸಿದೆ.

Advertisement

1 ಕೋಟಿ ರೂ. ಅನುದಾನಕ್ಕೆ ಪ್ರಸ್ತಾವನೆ
ಮೊಗ್ರದಲ್ಲಿ ಸೇತುವೆ ನಿರ್ಮಾಣಕ್ಕಾಗಿ 1 ಕೋಟಿ ರೂ.ಗಳ ಪ್ರಸ್ತಾವನೆಯನ್ನು ಶಾಸಕ ಎಸ್‌. ಅಂಗಾರ ಅವರ ಸೂಚನೆಯಂತೆ ಕಳುಹಿಸಲಾಗಿದ್ದು, ಇನ್ನಷ್ಟೇ ಅನುದಾನ ಮಂಜೂರಾಗಬೇಕಿದೆ. ನಬಾರ್ಡ್‌ ಮೂಲಕ ಅನುದಾನ ಮಂಜೂರಾದಲ್ಲಿ ಸುಸಜ್ಜಿತ ಸೇತುವೆ ಇಲ್ಲಿ ನಿರ್ಮಾಣವಾಗಲಿದೆ.

ಅನುದಾನದ ನಿರೀಕ್ಷೆ
ಮೊಗ್ರದಲ್ಲಿ ಸೇತುವೆ ರಚನೆಗೆ ಪ್ರಸ್ತಾವನೆಯನ್ನು ಶಾಸಕರ ಮೂಲಕ ಕಳುಹಿಸಲಾಗಿದೆ. ಅನುದಾನ ಬರುವ ನಿರೀಕ್ಷೆಯಿದ್ದು, ಶೀಘ್ರವೇ ಗ್ರಾಮಸ್ಥರ ಬೇಡಿಕೆ ಈಡೇರಲಿದ್ದು, ಸೇತುವೆ ನಿರ್ಮಾಣ ಆಗಲಿದೆ.
– ಜಯಪ್ರಕಾಶ್‌ ಮೊಗ್ರ, ಸದಸ್ಯರು, ಗುತ್ತಿಗಾರು ಗ್ರಾ.ಪಂ.

ಶಾಲೆಯೂ ಮುಚ್ಚುವ ಭೀತಿ
ಜನಪ್ರತಿನಿಧಿಗಳು ಸೇತುವೆ ನಿರ್ಮಾಣದ ಭರವಸೆ ನೀಡುತ್ತಾರೆ ಅಷ್ಟೆ. ಸೇತುವೆ ರಚನೆ ಕಡತಗಳು ಪಾಳು ಬಿದ್ದಿವೆ. ಹೊಳೆಯಿಂದಾಗಿ ಮಕ್ಕಳನ್ನು ಪೋಷಕರು ಶಾಲೆಗೆ ಕಳುಹಿಸಲು ಭಯಪಡುತ್ತಿದ್ದು, ಶಾಲೆ ಮುಚ್ಚುವ ಭೀತಿಯಲ್ಲಿದೆ.
– ಬಿಟ್ಟಿ ಬಿ. ನೆಡುನಿಲಂ, ಸ್ಥಳೀಯರು

ಕೃಷ್ಣಪ್ರಸಾದ್‌ ಕೋಲ್ಚಾರ್‌

Advertisement

Udayavani is now on Telegram. Click here to join our channel and stay updated with the latest news.

Next