ಶಾಲೆಗೆ ಹೋಗುವ ನಾಣಿ ಎಂಬ ಬಾಲಕ ಅಲ್ಲಿ ಶಿಕ್ಷಕರಿಂದ ಕೆಲವು ಮಾತು ಕೇಳಿಸಿಕೊಳ್ಳಬೇಕಾಗುತ್ತದೆ. ಹಾಗಂತ ಮನೆಗೆ ಬಂದರೆ ಅಲ್ಲೂ ಅದೇ ಕತೆ. ಶಾಲೆಗೆ ಹೋಗಲು ಒತ್ತಾಯ, ಹಠ, ಪೀಡನೆ. ಆದರೆ ಬಾಲಕನಿಗೆ ಇದೆಲ್ಲ ಬೇಕಾಗಿಲ್ಲ. ಓದೋದು, ಬರೆಯೋದು, ಪರೀಕ್ಷೆ ಎಲ್ಲ ರಗಳೆ ಎಂಬ ಚಿಂತನೆ ಮೊಳಕೆಯೊಡೆದಿರುತ್ತದೆ. ಇದಕ್ಕೆ ಸರಿಯಾಗಿ ಆತನ ವಯಸ್ಸಾದ ತಾತ ಮನೆಯಲ್ಲಿ ಕಥೆ ಹೇಳುವಾಗ ಸ್ವರ್ಗದ ಕುರಿತು ಸಾಕಷ್ಟು ಕುತೂಹಲಕರ ಮಾಹಿತಿಗಳನ್ನು ಹೇಳಿರುತ್ತಾನೆ. ಹಾಗೆ ಪ್ರತಿದಿನ ಸ್ವರ್ಗದ ಕುರಿತು ಕೇಳಿದ ನಾಣಿಗೆ ಸ್ವರ್ಗಕ್ಕೆ ಹೋಗಿ ಅಲ್ಲೇ ನೆಲೆಸಬೇಕೆಂಬ ಬಯಕೆ ಉತ್ಕಟವಾಗುತ್ತದೆ. ಆದರೆ ಸ್ವರ್ಗಕ್ಕೆ ಹೋಗುವ ದಾರಿ ಯಾವುದು. ಸಾಯುವುದೊಂದೇ ಪರಿಹಾರ. ಸಾಯುವುದು ಹೇಗೆಂಬ ಯೋಚನೆಯಲ್ಲಿದ್ದಾಗಲೇ ನಾಣಿಯ ಅಜ್ಜ ಸಾಯುತ್ತಾರೆ. ಹಾಗೆ ಸಾಯುವ ಮುನ್ನ ಅವರು ಅನ್ನಾಹಾರ ತ್ಯಜಿಸಿರುತ್ತಾರೆ. ನಾಣಿ ಕೂಡಾ ಇಂತದ್ದೇ ಉಪಾಯ ಕಂಡುಕೊಳ್ಳುತ್ತಾನೆ. ವೈದ್ಯರ ಉಪಶಮನದಿಂದ ಸರಿಯಾಗದೆ, ಮಂತ್ರವಾದಿಯ ಹಿಡಿತಕ್ಕೂ ರೋಗ ಸಿಗದೆ, ಮಾನಸಿಕ ವೈದ್ಯರಿಗೂ ಪರಿಹಾರ ದೊರೆಯದೆ ಕೊನೆಗೊಂದು ದಿನ ಸಾಯುತ್ತಾನೆ. ಸತ್ತು ಸ್ವರ್ಗಕ್ಕೆ ಹೋದರೆ ಅಲ್ಲಿ ಒಂದೆರಡು ದಿನ ಖುಷಿಯಾಗಿರುತ್ತದೆ. ಶಾಲೆ ಇಲ್ಲ, ಪಾಠ ಇಲ್ಲ, ಪರೀಕ್ಷೆ ಇಲ್ಲ. ಆದರೆ ಹೊಸತನ ಇಲ್ಲ. ನಿತ್ಯವೂ ಅದೇ ರಂಭೆ ಊರ್ವಶಿಯರ ನೃತ್ಯ. ಕುಡಿಯಲು ನೀರಲ್ಲ ಅಮೃತ. ದಣಿವಿಲ್ಲ. ಗಾಳಿ ಹಾಕಲು, ಸೇವೆಗೈಯಲು ಅಲ್ಲಲ್ಲಿ ಸೇವಕಿಯರು. ಹಗಲಿಲ್ಲ, ಇರುಳಿಲ್ಲ. ನಿದ್ದೆ ಮಾಡಲೂ ಇಲ್ಲ. ದಣಿವೂ ಇಲ್ಲ. ಆದರೆ ಹೊಸತನ ಎನ್ನುವುದೇ ಇಲ್ಲ. ಇದು ಸಾಲದು ನಿತ್ಯನೂತನವಾಗಿರುವ ಭೂಮಿಯೇ ವಾಸಿ ಎಂದು ನಾಣಿಗೆ ಅನಿಸುತ್ತದೆ. ಆತ ಕನಸಿನ ಲೋಕದಿಂದ ಮರಳಿ ಭೂಮಿಗೆ ಬರುತ್ತಾನೆ ಎನ್ನುವಲ್ಲಿಗೆ ನಾಣಿಯ ಸ್ವರ್ಗದ ಕನಸು ಮುಗಿಯುತ್ತದೆ. ಇದಿಷ್ಟು ಗಜಾನನ ಶರ್ಮ ಅವರು ಬರೆದ ನಾಣಿಯ ಸ್ವರ್ಗದ ಕನಸು ನಾಟಕದ ಕಥಾ ಸಾರಾಂಶ.
ತೆಕ್ಕಟ್ಟೆಯ ಹಯಗ್ರೀವ ಕಲ್ಯಾಣ ಮಂಟಪದಲ್ಲಿ ನಡೆದ ಒಂದು ತಿಂಗಳ ರಜಾರಂಗು ಬೇಸಗೆ ಶಿಬಿರದಲ್ಲಿ ನಾಗೇಶ್ ಕೆದೂರು ನಿರ್ದೇಶನದಲ್ಲಿ, ವೈಶಾಖ್ ಸುರತ್ಕಲ್ ಸಹನಿರ್ದೇಶನದಲ್ಲಿ ಈ ನಾಕಟವನ್ನು ಶಿಬಿರದ ಮಕ್ಕಳು ಅಚ್ಚುಕಟ್ಟಾಗಿ ನಿರ್ವಹಿಸಿದರು.
ಅದರಲ್ಲೂ ನಾಣಿಯ ಪಾತ್ರ ಮಾಡಿದ ಮನೀಷ್‌ನ ಅಭಿನಯ ಯಾವುದೇ ರಂಗಭೂಮಿ ಕಲಾವಿದನಿಗೆ ಸಡ್ಡು ಹೊಡೆಯುವಂತಿತ್ತು. ಇದಕ್ಕೆ ಪೂರಕವಾಗಿ ಅಜ್ಜನ ಪಾತ್ರದಲ್ಲಿ ಪ್ರಣಮ್ ಅಭಿನಯಿಸಿದರು. ಅಂತೆಯೇ ಒಂದು ಗಂಭೀರ ನಾಟಕದಲ್ಲಿ ಸೃಷ್ಟಿಯಾದ ಹಾಸ್ಯ ಸನ್ನಿವೇಶದಲ್ಲಿ ವೈದ್ಯೆಯಾಗಿ ದೃಶ್ಯಾ, ಮಾನಸಿಕ ವೈದ್ಯೆ ಡಾ| ಶರ್ಮಿಳಾ ಆಗಿ ಧರಣಿ, ರೋಗಿಯಾಗಿ ಆಯುಷ್ ಉತ್ತಮ ಅಭಿನಯ ನೀಡಿದರು. ಈ ದೃಶ್ಯ ಇಡೀ ನಾಟಕದಲ್ಲಿ ನಕ್ಕು ಹಗುರಾಗಿಸಿತು. ನಾಣಿಯ ಅಮ್ಮನಾಗಿ ನಿಷಾ ಅವರದ್ದು ಭಾವಪೂರ್ಣ ಪ್ರಬುದ್ಧ ಅಭಿನಯ. ಆರಂಭದ ದೃಶ್ಯದಲ್ಲಿ ಭಯ ಉತ್ಪಾತಕನಾಗಿ ಶಿವರಂಜನ್ ಶೆಟ್ಟಿ ಮಾತಿಲ್ಲದಿದ್ದರೂ ಅಭಿನಯದಲ್ಲಿಯೇ ಗಮನ ಸೆಳೆದರು.
ಸೂತ್ರಧಾರರಾಗಿ ಲಾವಣ್ಯ ಹಾಗೂ ದಿಶಾ ನಾಟಕದ ಕಥೆಯನ್ನು ಮುನ್ನಡೆಸಿ ವೀಕ್ಷಕರಿಗೆ ಸುಲಭ ಮಾಡಿಕೊಟ್ಟರು. ಸ್ವರ್ಗ ಸೇರುವ ಸಿದ್ಧತೆಯಲ್ಲಿ ಅನಾರೋಗ್ಯ ಪೀಡಿತನಾಗಿದ್ದ ನಾಣಿಗೆ ಚಿಕಿತ್ಸೆ ಕೊಡುವ ನರ್ಸ್‌ಗಳಾಗಿ ಅದಿತಿ, ಪರಿಣಿಕ, ಅಭಯ ಕುಮಾರ್ ಪಾತ್ರದಲ್ಲಿ ಪ್ರತೀಕ್, ರಂಭೆ, ಊರ್ವಶಿ ಅಪ್ಸರೆಯರಾಗಿ ದಿಶಾ , ಲಿಶಾ , ಕೃತಿ , ಸಿಂಚನ , ವೈಷ್ಣವಿ, ನಾಣಿಗೆ ಅಂಟಿದ ರೋಗ ಬಿಡಿಸುವ ಮಂತ್ರವಾದಿಗಳಾಗಿ ಯಶಸ್, ತನುಷ್, ಕ್ಷಿತಿಜ್, ಸಹವರ್ತಿ ಮಕ್ಕಳಾಗಿ ಈಶಾನ್, ತ್ರಿಷಾ ಪ್ರಾಚಿ, ವಿಹಾನ್, ಪರಿಣಿತ , ಶ್ರೀನಿಧಿ, ಸುಜೀವಶ್ರಿ, ಪ್ರತೀಕ್, ಶ್ರೀರಾಮ, ವೆಂಕಟೇಶ ,ಧೀರಜ್, ಮನೀಶ್, ನಿಶಾಂತ್, ಲಾಸ್ಯ, ಬ್ರಾಹ್ಮಿ , ನವಮಿ, ಶ್ರಾವ್ಯ, ಶ್ರೇಯ, ಲಕ್ಷ್ಮೀ , ಚಿರಾಗ್, ಸನ್ನಿಕಾ ಅಭಿನಯಿಸಿದ್ದರು.
ಶಿವಾನಂದ ಅವರ ಸಂಗೀತ, ರಕ್ಷಿತ್ ಹಾರಾಡಿ ಹಿನ್ನೆಲೆ ಸಂಗೀತದ ಧ್ವನಿಪ್ರೇಕ್ಷಕರನ್ನು ಹಿಡಿದಿಟ್ಟುಕೊಂಡಿತ್ತು. ಬೆಳಕಿನ ಸಂಯೋಜನೆಯನ್ನು ರಂಗನಿರ್ದೇಶಕ ವಿಘ್ನೇಶ್ ಹೊಳ್ಳ ತೆಕ್ಕಾರು ನಡೆಸಿದ್ದರು.
ಲಕ್ಷ್ಮೀ ಮಚ್ಚಿನ