Advertisement

ಕಾರ್ಪೊರೇಟರ್‌ಗಳ ಕನಸು

12:50 PM Apr 23, 2018 | |

ಬೆಂಗಳೂರು: ರಾಜಧಾನಿ ಬೆಂಗಳೂರಿನಿಂದ ಈ ಬಾರಿಯ ವಿಧಾನಸಬೆ ಚುನಾವಣಾ “ಅಖಾಡ’ಕ್ಕಿಳಿಯಲು ಸಾಕಷ್ಟು ಪುರಪಿತೃಗಳು ಪ್ರಯತ್ನಿಸಿದರೂ ಮೂವರು ಹಾಲಿ ಸದಸ್ಯರಿಗಷ್ಟೇ ಅವಕಾಶ ದೊರೆತಿದ್ದು, ಕಾಂಗ್ರೆಸ್‌ನಿಂದ ಹಾಲಿ ಮೇಯರ್‌ ಹಾಗೂ ಮಾಜಿ ಮೇಯರ್‌ ಸ್ಪರ್ಧೆಗಿಳಿದಿರುವುದು ವಿಶೇಷ. 

Advertisement

ಉಳಿದಂತೆ ಚುನಾವಣೆಗೆ ಇಬ್ಬರು ಮಾಜಿ ಉಪಮೇಯರ್‌ಗಳು ಸ್ಪರ್ಧಿಸಿದ್ದರೆ, ನಾಲ್ಕು ಮಂದಿ ಮಾಜಿ ಕಾರ್ಪೋರೇಟರ್‌ಗಳು ಕಣದಲ್ಲಿದ್ದಾರೆ. ಪಾಲಿಕೆಯಿಂದ ವಿಧಾನಸಭೆ ಪ್ರವೇಶ ಕನಸು ಕಂಡಿದ್ದು ಎಂಟು ಮಂದಿ ಹಾಲಿ ಹಾಗೂ ಮಾಜಿ ಪಾಲಿಕೆ ಸದಸ್ಯರು ನಿರಾಸೆಗೊಂಡಿದ್ದಾರೆ.

ಸಿ.ವಿ.ರಾಮನ್‌ನಗರ ಕ್ಷೇತ್ರದಿಂದ ಮೇಯರ್‌ ಆರ್‌.ಸಂಪತ್‌ರಾಜ್‌ ಹಾಗೂ ರಾಜಾಜಿನಗರ ಕ್ಷೇತ್ರದಲ್ಲಿ ಮಾಜಿ ಮೇಯರ್‌ ಜಿ.ಪದ್ಮಾವತಿ ಅವರು ಕಾಂಗ್ರೆಸ್‌ ಹುರಿಯಾಳುಗಳಾಗಿ ಕಣಕ್ಕಿಳಿದಿದ್ದಾರೆ. ಜೆಡಿಎಸ್‌ ಕಾರ್ಪೋರೇಟರ್‌ ದೇವದಾಸ್‌ ಅವರು ಬಿಟಿಎಂ ಲೇಔಟ್‌ ಕ್ಷೇತ್ರದಿಂದ ಗೃಹ ಸಚಿವ ರಾಮಲಿಂಗಾರೆಡ್ಡಿ ವಿರುದ್ಧ ಜೆಡಿಎಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ.

ಬಿಜೆಪಿಯಿಂದ ಇಬ್ಬರು ಮಾಜಿ ಉಪಮೇಯರ್‌ಗಳು ಈ ಬಾರಿ ಅದೃಷ್ಟ ಪರೀಕ್ಷೆಗಿಳಿದಿದ್ದು, ಶಾಂತಿನಗರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಮಾಜಿ ಉಪಮೇಯರ್‌ ಕೆ.ವಾಸುದೇವ ಮೂರ್ತಿ ಸ್ಪರ್ಧಿಸಿದ್ದಾರೆ. ಚಾಮರಾಜಪೇಟೆ ಕ್ಷೇತ್ರದಿಂದ ಬಿಜೆಪಿಯ ಮಾಜಿ ಉಪಮೇಯರ್‌ ಎಂ.ಲಕ್ಷ್ಮೀ ನಾರಾಯಣ್‌ ಉಮೇದುವಾರಿಕೆ ಸಲ್ಲಿಸಿದ್ದಾರೆ.

ಮಾಜಿ ಕಾರ್ಪೋರೇಟರ್‌ ಎಚ್‌.ರವೀಂದ್ರ ಅವರು ಎರಡನೇ ಬಾರಿ ವಿಜಯನಗರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿದ್ದು, ವಸತಿ ಸಚಿವ ಕಾಂಗ್ರೆಸ್‌ನ ಎಂ.ಕೃಷ್ಣಪ್ಪ ವಿರುದ್ಧ ಸ್ಪರ್ಧಿಸಿದ್ದಾರೆ. ಮಾಜಿ ಕಾರ್ಪೋರೇಟರ್‌ ಶ್ರೀಧರ್‌ರೆಡ್ಡಿ ಅವರು ಶಾಂತಿನಗರ ಕ್ಷೇತ್ರದಿಂದ ಜೆಡಿಎಸ್‌ ಅಭ್ಯರ್ಥಿಯಾಗಿ ಸ್ಪರ್ಧೆಗಿಳಿಸಿದ್ದಾರೆ.

Advertisement

ಟಿಕೆಟ್‌ ಕೈತಪ್ಪಿದ್ದರಿಂದ ಬಿಜೆಪಿಗೆ ಗುಡ್‌ಬೈ ಹೇಳಿರುವ ಮಾಜಿ ಕಾರ್ಪೋರೇಟರ್‌ ಜಿ.ಎಚ್‌.ರಾಮಚಂದ್ರ ಜೆಡಿಎಸ್‌ ಅಭ್ಯರ್ಥಿಯಾಗಿ ರಾಜರಾಜೇಶ್ವರಿನಗರದಿಂದ ಸ್ಪರ್ಧೆಗಿಳಿದಿದ್ದಾರೆ. ಸದ್ಯ ಕಾಂಗ್ರೆಸ್‌ನಿಂದ ಸ್ಪರ್ಧಿಸಿರುವ ಶಾಸಕ ಮುನಿರತ್ನ ಅವರು ಈ ಹಿಂದೆ ಕಾರ್ಪೋರೇಟರ್‌ ಆಗಿದ್ದರು ಎಂಬುದು ವಿಶೇಷ. ದಾಸರಹಳ್ಳಿ ಕ್ಷೇತ್ರದ ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಯಾಗಿದ್ದ ಕೆ.ಎಲ್‌.ತಿಮ್ಮನಂಜಯ್ಯ ಅವರಿಗೆ ಟಿಕೆಟ್‌ ಸಿಗದ ಕಾರಣ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ.

ಹಲವರಿಗೆ ನಿರಾಸೆ: ಐದು ಬಾರಿ ಕಾರ್ಪೋರೇಟರ್‌ ಆಗಿ ದಾಖಲೆ ನಿರ್ಮಿಸಿರುವ ಕಟ್ಟೆ ಸತ್ಯನಾರಾಯಣ ಅವರು ಬಸವನಗುಡಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಲು ಬಯಸಿದ್ದರೂ ಅವಕಾಶ ಸಿಕ್ಕಿಲ್ಲ. ಇದೇ ಕ್ಷೇತ್ರದಿಂದ ಕಾಂಗ್ರೆಸ್‌ ಟಿಕೆಟ್‌ ಬಯಸಿದ್ದ ಪಾಲಿಕೆ ಆಡಳಿತ ಪಕ್ಷದ ನಾಯಕ ಎಂ.ಶಿವರಾಜು ಅವರಿಗೂ ಅವಕಾಶ ಸಿಕ್ಕಿಲ್ಲ. ಗೋವಿಂದರಾಜನಗರ ಕ್ಷೇತ್ರದಿಂದ ಬಿಜೆಪಿ ಟಿಕೆಟ್‌ ಆಕಾಂಕ್ಷಿಯಾಗಿದ್ದ ಪಾಲಿಕೆ ಸದಸ್ಯ ಕೆ.ಉಮೇಶ್‌ ಶೆಟ್ಟಿಯವರಿಗೂ ನಿರಾಸೆಯಾಗಿದೆ. 

ಮಾಜಿ ಕಾರ್ಪೋರೇಟರ್‌ ಬಿ.ವಿ.ಗಣೇಶ್‌ಗೆ ಚಾಮರಾಜಪೇಟೆ ಕ್ಷೇತ್ರದ ಬಿಜೆಪಿ ಟಿಕೆಟ್‌ ಕೈತಪ್ಪಿದೆ. ಚಿಕ್ಕಪೇಟೆ ಕ್ಷೇತ್ರದಿಂದ ಮಾಜಿ ಕಾರ್ಪೋರೇಟರ್‌ ಎನ್‌.ಆರ್‌.ರಮೇಶ್‌ ಹಾಗೂ ಮಹಾಲಕ್ಷ್ಮೀ ಲೇಔಟ್‌ನಿಂದ ಮಾಜಿ ಉಪಮೇಯರ್‌ ಎಸ್‌.ಹರೀಶ್‌ ಬಿಜೆಪಿಯಿಂದ ಸ್ಪರ್ಧಿಸಲು ಬಯಸಿದ್ದರೂ ಬಿಜೆಪಿಯಿಂದ ಟಿಕೆಟ್‌ ಸಿಗದ ಕಾರಣ ಅಸಮಾಧಾನಗೊಂಡಿದ್ದಾರೆ.

ಮಹಾಲಕ್ಷ್ಮೀ ಲೇಔಟ್‌ನಿಂದ ಬಿಜೆಪಿ ಅಭ್ಯರ್ಥಿಯಾಗಲು ಬಯಸಿದ್ದ ಎಂ.ನಾಗರಾಜ್‌ ಅವರಿಗೂ ನಿರಾಸೆಯಾಗಿದೆ. ರಾಜರಾಜೇಶ್ವರಿನಗರದಿಂದ ಸ್ಪರ್ಧಿಸಲು ಇಚ್ಛಿಸಿದ್ದ ಜೆಡಿಎಸ್‌ನ ಮಾಜಿ ಕಾರ್ಪೋರೇಟರ್‌ ಆರ್‌.ಪ್ರಕಾಶ್‌ ಅವರಿಗೂ ಟಿಕೆಟ್‌ ಸಿಕ್ಕಿಲ್ಲ. ಪಾಲಿಕೆಯಲ್ಲಿ ಪ್ರತಿಪಕ್ಷ ನಾಯಕ ಪದ್ಮನಾಭರೆಡ್ಡಿ ಅವರು ಸರ್ವಜ್ಞನಗರದಿಂದ ಬಿಜೆಪಿ ಟಿಕೆಟ್‌ ಆಕಾಂಕ್ಷಿಯಾಗಿದ್ದರಾದರೂ ಕೊನೇ ಗಳಿಗೆಯಲ್ಲಿ ಹಿಂದೆ ಸರಿದರು.

* ಎಂ.ಕೀರ್ತಿಪ್ರಸಾದ್‌ 

Advertisement

Udayavani is now on Telegram. Click here to join our channel and stay updated with the latest news.

Next