ಕಲಘಟಗಿ: ಮೇಘರಾಜನ ಆಗಮನ ಸ್ವಲ್ಪ ತಡವಾಗಿದ್ದರೂ ತಾಲೂಕಿನಾದ್ಯಂತ ಬಿತ್ತನೆ ಕಾರ್ಯ ಬಿರುಸಿನಿಂದ ಸಾಗುತ್ತಿದೆ. ಕಳೆದ ವಾರ ಸುರಿದ ಮಳೆಯಿಂದ ರೈತರ ಮೊಗದಲ್ಲಿ ಮಂದಹಾಸ ಮೂಡಿದ್ದು, ತಾಲೂಕಿನಾದ್ಯಂತ ಶೇ. 80 ಬಿತ್ತನೆ ಪೂರ್ಣಗೊಂಡಿದೆ. ಬಿತ್ತನೆ ಬೀಜಗಳು ಮೊಳಕೆ ಒಡೆದು ಗೊಬ್ಬರ ಹಾಕಲು ರೈತರು ಮುಂದಾಗಿದ್ದಾರೆ.
ಜೂನ್ ಅಂತ್ಯಕ್ಕೆ ವಾಡಿಕೆಗಿಂತ ಕಡಿಮೆ ಮಳೆಯಾಗಿದ್ದರಿಂದ ಭತ್ತದ ಬೆಳೆಗೆ ನೀರು ಸಾಕಾಗುತ್ತಿಲ್ಲ. ಹೀಗಾಗಿ ತಾಲೂಕಿನಾದ್ಯಂತ ಭತ್ತದ ಬಿತ್ತನೆ ಪ್ರಮಾಣ ಕಡಿಮೆಯಾಗಿದ್ದು, ಗೋವಿನಜೋಳ ಹಾಗೂ ಸೋಯಾಬೀನ್ ಬೆಳೆಗಳ ಬಿತ್ತಿಗೆ ಪ್ರಮಾಣ ಹೆಚ್ಚಿನದಾಗಿ ಕಂಡುಬರುತ್ತಿದೆ. ತಾಲೂಕಿನಲ್ಲಿ ಕೃಷಿ ಇಲಾಖೆ ಹೊಂದಿರುವ ಗುರಿಯ ಶೇ. 80 ವಾಣಿಜ್ಯ ಬೆಳೆಗಳ ಬಿತ್ತನೆ ಕಾರ್ಯ ಭರದಿಂದ ಸಾಗಿದೆ.
ಭತ್ತಕ್ಕೆ ಸಾಲದ ಮಳೆ: ವಾಣಿಜ್ಯ ಬೆಳೆಗಳಿಗೆ ಬೇಕಾದಷ್ಟು ಮಳೆ ಸದ್ಯಕ್ಕೆ ಆಗುತ್ತಿದೆ. ಆದರೆ, ಭತ್ತವನ್ನು ಬೆಳೆದ ರೈತರು ಮಳೆ ಪ್ರಮಾಣ ಸಾಕಾಗುತ್ತಿಲ್ಲ ಎಂದು ಅಳಲನ್ನು ಹೊರಹಾಕುತ್ತಿದ್ದಾರೆ.
ನಮ್ಮ ಭೂಮಿ ಸುತ್ತಮುತ್ತ ಗುಡ್ಡಗಳ ಪ್ರದೇಶ ಆವರಿಸಿಕೊಂಡಿದ್ದು, ತಗ್ಗು ಪ್ರದೇಶದಲ್ಲಿ ಜಮೀನುಗಳು ಇವೆ. ಒಂದು ವೇಳೆ ಗೋವಿನಜೋಳ ಬಿತ್ತನೆ ಮಾಡಿದರೆ ಮಳೆ ಪ್ರಮಾಣ ಹೆಚ್ಚಾದರೆ ಗುಡ್ಡಗಾಡು ಪ್ರದೇಶದಿಂದ ನೀರು ಹರಿದು ಬಂದು ಬೆಳೆ ನಾಶವಾಗುತ್ತದೆ. ಆದರೆ ಈಗ ನಾವು ಭತ್ತವನ್ನು ಬೆಳೆದಿರುವುದರಿಂದ ಎಷ್ಟು ಮಳೆಯಾದರೂ ಸಾಕಾಗುವುದಿಲ್ಲ ಎನ್ನುತ್ತಾರೆ ತುಮರಿಕೊಪ್ಪದ ರೈತ ಬಸವರಾಜ ಎಚ್.
ಭತ್ತದ ಬೆಳೆಯಿಂದ ಲಾಭ ಕಡಿಮೆಯಿದೆ. ಭತ್ತದ ಫಸಲು ಬರಲು ಸುಮಾರು 6 ತಿಂಗಳಾಗುವುದರಿಂದ ಹಿಂಗಾರು ಬೆಳೆಗೆ ದಿನಗಳು ಸಾಕಾಗುವುದಿಲ್ಲ. ಗೋವಿನಜೋಳವು 3ರಿಂದ 4 ತಿಂಗಳಲ್ಲಿ ಬೆಳೆ ಬರಲಿದೆ. ಜೊತೆಗೆ ಹಿಂಗಾರು ಬೆಳೆಗಳಿಗೂ ಸಹಾಯಕವಾಗುತ್ತದೆ ಎನ್ನುತ್ತಾರೆ ತಬಕದಹೊನ್ನಳ್ಳಿ ರೈತ ಮಹದೇವಪ್ಪ ತಡಸ.