ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿರುವ ಕೇಂದ್ರ ಬಜೆಟ್ ಪ್ರಧಾನಿ ನರೇಂದ್ರ ಮೋದಿ ಘೋಷಣೆಯ “ಆತ್ಮನಿರ್ಭರ್ ಭಾರತ್”ನ ಕೇಂದ್ರೀಕೃತವಾಗಿದೆ. ಆತ್ಮನಿರ್ಭರ್ ಭಾರತ (ಸ್ವಾವಲಂಬಿ ಭಾರತ)ವನ್ನು ದೃಷ್ಟಿಯಲ್ಲಿಟ್ಟುಕೊಂಡು ವಿಕಸಿತ ಭಾರತಕ್ಕೆ ಪಣತೊಡಲಾಗಿದೆ.
ದೇಶದಲ್ಲಿ ಸುಮಾರು 80 ಲಕ್ಷ ಜನರು ನಿರೋದ್ಯೋಗಿ ಯುವಕರು ಇದ್ದಾರೆ. ಅದನ್ನು ಮನಗಂಡಿರುವ ಸರ್ಕಾರ ನಿರುದ್ಯೋಗವನ್ನು ಹೋಗಲಾಡಿಸುವ ಪ್ರಯತ್ನಕ್ಕೆ ಕೈ ಹಾಕಿದೆ. 500 ಫಾರ್ಚೂನ್ ಕಂಪನಿಗಳಿಗೆ ಸಿಎಸ್‌ಆರ್ ಫಂಡಿನಲ್ಲಿ ಯುವಕರಿಗೆ ಕೌಶಲ್ಯ ಅಭಿವೃದ್ದಿ ತರಬೇತಿ ನೀಡುವುದಕ್ಕೆ ಆದ್ಯತೆ ನೀಡಿದೆ. ಕೃಷಿ ವಲಯದ ಜತೆಗೆ ವಿಜ್ಞಾನ ತಂತ್ರಜ್ಞಾನ, ಮಾಹಿತಿ ತಂತ್ರಜ್ಞಾನ ಹಾಗೂ ಸ್ಟಾರ್ಟ್‌ಅಪ್‌ಗ್ೂ ಮನ್ನಣೆ ನೀಡಲಾಗಿದೆ.
ಜತೆಗೆ ಸಣ್ಣ ಕೈಗಾರಿಕ ವಲಯವನ್ನೂ ಕೂಡ ಉದ್ಯೋಗದ ವಲಯ ಎಂದು ಪರಿಗಣಿಸಲಾಗಿದೆ. ಆ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಸಣ್ಣ ಮತ್ತು ಅತಿ ಸಣ್ಣ ಕೈಗಾರಿಕೆಗಳಲ್ಲಿ ಹೆಚ್ಚಿನ ಉದ್ಯೋಗವನ್ನು ನಿರೀಕ್ಷೆ ಮಾಡಿರುವುದು ಗೊತ್ತಾಗುತ್ತದೆ. ಮುದ್ರಾ ಸಾಲವನ್ನು 10 ಲಕ್ಷದಿಂದ 20 ಲಕ್ಷದ ವರೆಗೂ ಹೆಚ್ಚಳ ಮಾಡಲಾಗಿದೆ. ಸರ್ಕಾರ ದೇಶದ ಉತ್ಪಾದನಾ ವಲಯವನ್ನು ಮರೆತಿಲ್ಲ. ಅದಕ್ಕೊಂದು ದಿಶೆ ತೋರಿಸುವ ಕೆಲಸ ಕೂಡ ಆಗಿದೆ.
ಕೃಷಿವಲಯಕ್ಕೂ ಹೆಚ್ಚಿನ ಮನ್ನಣೆ ನೀಡಲಾಗಿದ್ದು ಎಣ್ಣೆ ಬೀಜಗಳಕ್ಷೇತ್ರಕ್ಕೆ ಆದ್ಯತೆ ನೀಡಿರುವುದು ತಿಳಿಯುತ್ತದೆ. ಎಣ್ಣೆಯಲ್ಲಿ ಸ್ವಾವಲಂಭಿ ಭಾರತ ನಿರ್ಮಾಣ ಮಾಡುವ ಕನಸು ಕಂಡಿದೆ. ಆ ಹಿನ್ನೆಲೆಯಲ್ಲಿ ಎಣ್ಣೆ ಬೀಜಗಳ ವಲಯದ ಸಂಶೋಧನೆಗೆ ಕಾಳಜಿ ತೋರಿದ್ದು ಈ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ನೀಡಲಾಗಿದೆ.
-ರಾಮಚಂದ್ರ ಲಹೋಟಿ, ಅಧ್ಯಕ್ಷ ಎಫ್ಕೆಸಿಸಿಐ