ರಾಘವೇಂದ್ರ ರಾಜಕುಮಾರ್ ಮತ್ತೊಂದು ಚಿತ್ರ ಒಪ್ಪಿಕೊಂಡಿದ್ದಾರೆ. ಇತ್ತೀಚೆಗಷ್ಟೇ ಅವರ ಅಭಿನಯದ “ಅಮ್ಮನ ಮನೆ’ ತೆರೆಕಂಡಿತ್ತು. ಅದರ ಬೆನ್ನಲ್ಲೇ ಈಗ ಅವರು ನಟಿಸಿರುವ “ತ್ರಯಂಬಕಂ’ ಚಿತ್ರ ಕೂಡ ತೆರೆ ಕಾಣುತ್ತಿದೆ. ಅದಕ್ಕೂ ಮುಂಚೆಯೇ ಅವರೀಗ ಹೊಸ ಚಿತ್ರಕ್ಕೆ ಸಹಿ ಹಾಕಿದ್ದಾರೆ. ಅಂದಹಾಗೆ, ಆ ಚಿತ್ರಕ್ಕೆ “ಅಪ್ಪನ ಅಂಗಿ’ ಎಂದು ಹೆಸರಿಡಲಾಗಿದೆ.
“ಅಮ್ಮನ ಮನೆ’ ಚಿತ್ರ ನಿರ್ದೇಶಿಸಿದ್ದ ನಿಖಿಲ್ ಮಂಜು ಅವರೇ “ಅಪ್ಪನ ಅಂಗಿ’ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಸುನೀಲ್ ಈ ಚಿತ್ರದ ನಿರ್ಮಾಪಕರು. ಇದು ಇವರಿಗೆ ಮೊದಲ ಚಿತ್ರ. “ಅಮ್ಮನ ಮನೆ’ ಚಿತ್ರದಲ್ಲಿ ಅಮ್ಮ ಕಂಡಿದ್ದರು. ಈಗ “ಅಪ್ಪನ ಅಂಗಿ’ ಚಿತ್ರದಲ್ಲಿ ಅಪ್ಪನನ್ನು ಕಾಣಬಹುದು.
ಚಿತ್ರದ ಬಗ್ಗೆ ಮಾಹಿತಿ ಕೊಡುವ ನಿರ್ದೇಶಕ ನಿಖಿಲ್ ಮಂಜು, “ಈ ಚಿತ್ರಕ್ಕೆ ರಾಘವೇಂದ್ರ ರಾಜಕುಮಾರ್ ಅವರೇ ಕಥೆ ಕೊಟ್ಟಿದ್ದಾರೆ. ಅವರೊಂದು ಕಥೆಯ ಎಳೆ ಹೇಳಿದ್ದರು. ಅದನ್ನಿಟ್ಟುಕೊಂಡು ನಾನು ಮತ್ತು ನನ್ನ ಚಿತ್ರತಂಡ ಸಂಪೂರ್ಣ ಕಥೆ ಮಾಡಿ, ಚಿತ್ರಕಥೆ ಸಿದ್ಧಗೊಳಿಸಿ, ಈಗ ಚಿತ್ರೀಕರಣಕ್ಕೆ ಅಣಿಯಾಗಿದ್ದೇವೆ’ ಎಂದು ವಿವರ ಕೊಡುತ್ತಾರೆ.
ಹಾಗಾದರೆ, ಈ “ಅಪ್ಪನ ಅಂಗಿ’ ಚಿತ್ರದ ಹೈಲೈಟ್ ಏನು? ಈ ಪ್ರಶ್ನೆಗೆ ಉತ್ತರಿಸುವ ನಿಖಿಲ್ ಮಂಜು, ಡಾ.ರಾಜಕುಮಾರ್ ಅವರು ಅಷ್ಟೊಂದು ಎತ್ತರಕ್ಕೆ ಬೆಳೆಯಲು ಅವರ ತಂದೆಯ ಗುಣಗಳನ್ನು ಅಳವಡಿಸಿಕೊಂಡಿದ್ದು, ಜೊತೆಗೆ ಕೆಲಸದಲ್ಲಿ ಶ್ರದ್ಧೆ, ಭಕ್ತಿ ಇಟ್ಟುಕೊಂಡಿದ್ದರು. ಯಾವತ್ತಿದ್ದರೂ ಒಬ್ಬ ತಂದೆ ತನ್ನ ಮಗನಿಗೆ ಒಳ್ಳೆಯದನ್ನೇ ಹೇಳಿಕೊಡುತ್ತಾನೆ.
ಇಲ್ಲೂ ಅಂಥದ್ದೇ ಮೌಲ್ಯವಿರುವ ಅಂಶಗಳಿವೆ. ಪ್ರತಿಯೊಬ್ಬರ ನಿಜ ಜೀವನಕ್ಕೆ ಹತ್ತಿರವಾದಂತಹ ಚಿತ್ರ ಇದಾಗಲಿದೆ’ ಎಂಬುದು ನಿರ್ದೇಶಕ ನಿಖಿಲ್ ಮಂಜು ಮಾತು. ಚಿತ್ರದಲ್ಲಿ ರಾಘವೇಂದ್ರ ರಾಜಕುಮಾರ್ ಅವರು ತಂದೆಯ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಈ ಹಿಂದೆ “ಅಮ್ಮನ ಮನೆ’ ಚಿತ್ರದಲ್ಲಿ ಕೆಲಸ ಮಾಡಿದ್ದ ತಂತ್ರಜ್ಞರೇ ಇಲ್ಲೂ ಕೆಲಸ ಮಾಡುತ್ತಿದ್ದಾರೆ.
ನಿರ್ದೇಶನ ತಂಡಕ್ಕೆ ಬಡಿಗೇರ ದೇವೇಂದ್ರ ಸೇರಿಕೊಂಡಿದ್ದಾರೆ. ಉಳಿದಂತೆ ಸಮೀರ್ ಕುಲಕರ್ಣಿ ಸಂಗೀತವಿದ್ದು, ಯೂಥ್‌ಗೆ ಏನೆಲ್ಲಾ ಇರಬೇಕೋ ಅದೆಲ್ಲಾ ಅಂಶಗಳೂ ಇಲ್ಲಿರಲಿವೆ. ರಾಘವೇಂದ್ರ ರಾಜಕುಮಾರ್ ಅವರದು ಇಲ್ಲಿ ಮರೆಯದ ಪಾತ್ರವಿದೆ.
ಸಿನಿಮಾದುದ್ದಕ್ಕೂ ಎಮೋಷನಲ್ ಅಂಶಗಳ ಜೊತೆಗೆ ಒಂದಷ್ಟು ಸಂದೇಶವೂ ಇದೆ ಎನ್ನುತ್ತಾರೆ ಅವರು. ಬೆಂಗಳೂರು ಮತ್ತು ಕುಂದಾಪುರ ಸುತ್ತಮುತ್ತ ಸುಮಾರು 22 ದಿನಗಳ ಕಾಲ ಚಿತ್ರೀಕರಣ ನಡೆಯಲಿದೆ. ಏ.12 ರ ಶುಕ್ರವಾರ ಚಿತ್ರಕ್ಕೆ ಪೂಜೆ ನೆರವೇರಲಿದ್ದು, ಮೇ ಮೊದಲ ವಾರದಿಂದ ಚಿತ್ರೀಕರಣ ಶುರುವಾಗಲಿದೆ.