Advertisement

ನಿವೇಶನ ಕನಸು ಶೀಘ್ರ ನನಸು

01:01 PM Oct 15, 2019 | Team Udayavani |

ಹಾವೇರಿ: ಜಿಲ್ಲೆಯ ಎರಡು ದಶಕಗಳ ಬೇಡಿಕೆ ಹಾಗೂ ಕರ್ನಾಟಕ ಗೃಹ ಮಂಡಳಿಯಿಂದ ಜಿಲ್ಲಾ ಕೇಂದ್ರ ಹಾವೇರಿಯಲ್ಲಿ ಅಭಿವೃದ್ಧಿಪಡಿಸುತ್ತಿರುವ ಮೊದಲ ಬಡಾವಣೆ

Advertisement

ಅಭಿವೃದ್ಧಿ ಕಾರ್ಯ ಭರದಿಂದ ಸಾಗಿದ್ದು, 2-3 ತಿಂಗಳಲ್ಲಿ ಸಾರ್ವಜನಿಕರಿಗೆ ನಿವೇಶನ ಹಂಚಿಕೆ ಸಾಧ್ಯತೆ ಇದೆ. ದೇವಗಿರಿಯ ಜಿಲ್ಲಾಡಳಿತ ಭವನ ಎದುರಿಗಿನ 99.27 ಎಕರೆ ವಿಶಾಲ ಪ್ರದೇಶದಲ್ಲಿ ಕರ್ನಾಟಕ ಗೃಹ ಮಂಡಳಿ ಬಡಾವಣೆ ಅಭಿವೃದ್ಧಿಪಡಿಸುತ್ತಿದೆ. ಸುಸಜ್ಜಿತ ರಸ್ತೆಗಳು, ಒಳಚರಂಡಿ, ಕಾಲುವೆ, ಉದ್ಯಾನವನ, ಕುಡಿಯುವ ನೀರಿನ ಪೈಪ್‌ಲೈನ್‌ ಹೀಗೆ ಎಲ್ಲ ಮೂಲ ಸೌಕರ್ಯಗಳೊಂದಿಗೆ ಬಡಾವಣೆಯನ್ನು ಸುಸಜ್ಜಿತಗೊಳಿಸುವ ಕಾರ್ಯ ವೇಗ ಪಡೆದುಕೊಂಡಿದೆ. ನೂರಾರು ಕಾರ್ಮಿಕರು, ಹತ್ತಾರು ಜೆಸಿಬಿಗಳು ನಿರಂತವಾಗಿ ಕೆಲಸ ಮುಂದುವರಿಸಿವೆ.

ಕರ್ನಾಟಕ ಗೃಹ ಮಂಡಳಿಯು ಆರ್ಥಿಕವಾಗಿ ಹಿಂದುಳಿದ ವರ್ಗ, ಕಡಿಮೆ ಆದಾಯ ವರ್ಗ(ಎಲ್‌ ಐಜಿ), ಮಧ್ಯಮ ಆದಾಯ ವರ್ಗ (ಎಂಐಜಿ), ಹೆಚ್ಚು ಆದಾಯ ವರ್ಗ (ಎಚ್‌ಐಜಿ) ಹಾಗೂ ಅತಿಹೆಚ್ಚು ಆದಾಯ ವರ್ಗ (ಎಲ್‌ಐಜಿ-2) ಹೀಗೆ ಐದು ಶ್ರೇಣಿಯಲ್ಲಿ ಕ್ರಮವಾಗಿ 20×30, 30×40, 30×50, 40×60 ಅಳತೆಯ ನಿವೇಶನ ನೀಡಲು ಯೋಜನೆ ರೂಪಿಸಿಕೊಂಡಿದೆ.

ಬಡಾವಣೆ ನಿರ್ಮಿಸುತ್ತಿರುವ ಒಟ್ಟು 99.27 ಎಕರೆ ಪ್ರದೇಶದಲ್ಲಿ 1500 ನಿವೇಶನಗಳು ನಿರ್ಮಾಣ ಮಾಡಲಾಗುತ್ತಿದೆ. ಸಾರ್ವಜನಿಕರಿಂದ ನಿವೇಶನ ಬಯಸಿ 1200 ಅರ್ಜಿಗಳು ಬಂದಿದ್ದು ಒಟ್ಟು 28 ಕೋಟಿ ರೂ.ಗಳಲ್ಲಿ ಬಡಾವಣೆ ಅಭಿವೃದ್ಧಿಪಡಿಸಲಾಗುತ್ತಿದೆ. ಬಡಾವಣೆ ನಿರ್ಮಾಣಕ್ಕಾಗಿ 2002ರಲ್ಲಿಯೇ ಸಾರ್ವಜನಿಕರಿಂದ ಅರ್ಜಿ ಕರೆದು ನೋಂದಣಿ ಶುಲ್ಕ ಸ್ವೀಕರಿಸಲಾಗಿತ್ತು. ಬಳಿಕ 2017ರಲ್ಲಿ ಪುನಃ ಹಳೆ ಹಾಗೂ ಹೊಸ ಬೇಡಿಕೆಯ ಅರ್ಜಿ ಕರೆದು ನೋಂದಣಿ ಹಾಗೂ ಆರಂಭಿಕ ಶುಲ್ಕ ಸ್ವೀಕರಿಸಲಾಗಿದ್ದು ಈಗ ಪ್ರಸಕ್ತ ವರ್ಷ ಏಪ್ರಿಲ್‌ನಲ್ಲಿ ಅಭಿವೃದ್ಧಿ ಕಾರ್ಯ ಆರಂಭಿಸಲಾಗಿದೆ.

ಚದರ ಅಡಿಗೆ 400ರೂ.ವರೆಗೂ ದರ ನಿಗದಿಪಡಿಸಲಾಗಿದ್ದು ಆರ್ಥಿಕವಾಗಿ ಹಿಂದುಳಿದವರಿಗೆ ಶೇ. 5ರಷ್ಟು ಮೀಸಲಿಡಲಾಗುತ್ತಿದೆ. ಮೊದಲು ಅರ್ಜಿ ಸಲ್ಲಿಸಿದವರಿಗೆ ನಿವೇಶನ ಹಂಚಿಕೆ ಮಾಡಿ ಉಳಿದ ನಿವೇಶನಗಳಿಗೆ ಪುನಃ ಅರ್ಜಿ ಕರೆಯಲು ಕರ್ನಾಟಕ ಗೃಹ ಮಂಡಳಿ ಯೋಜನೆ ಹಾಕಿಕೊಂಡಿದೆ. ಸರ್ಕಾರದಿಂದ ಬಡಾವಣೆ ಅಭಿವೃದ್ಧಿಗೆ ಅನುಮೋದನೆ ದೊರೆತ 18 ತಿಂಗಳಲ್ಲಿ ಬಡಾವಣೆ ಅಭಿವೃದ್ಧಿಪಡಿಸಬೇಕಿದೆ. ಬಡಾವಣೆ ಅಭಿವೃದ್ಧಿಗೆ 10 ತಿಂಗಳ ಹಿಂದೆಯಷ್ಟೇ ಅನುಮೋದನೆ ದೊರಕಿದೆ. ಈಗ ನಡೆಯುತ್ತಿರುವ ಕಾಮಗಾರಿ ವೇಗ ಗಮನಿಸಿದರೆ ನಿಗದಿತ ಅವಧಿಯೊಳಗೆ ಬಡಾವಣೆ ಅಭಿವೃದ್ಧಿ ಕಾರ್ಯ ಪೂರ್ಣಗೊಳ್ಳುವ ನಿರೀಕ್ಷೆ ಹೊಂದಲಾಗಿದೆ. ಜತೆಗೆ ನಿವೇಶನ ಹೊಂದುವ ಸಾರ್ವಜನಿಕರ ಕನಸು ಶೀಘ್ರ ಸಾಕಾರಗೊಳ್ಳಲಿದೆ.

Advertisement

 

-ಎಚ್‌.ಕೆ. ನಟರಾಜ

Advertisement

Udayavani is now on Telegram. Click here to join our channel and stay updated with the latest news.

Next