Advertisement

“ಸ್ವಚ್ಛ ಗ್ರಾಮ’ದ ಕನಸು ಬೆಟ್ಟಹಲಸೂರಲ್ಲಿ ನನಸು

11:56 AM Dec 08, 2018 | |

ಬೆಂಗಳೂರು: ಮೊದಲೆಲ್ಲಾ ಆ ಗ್ರಾಮಗಳ ಜನರಿಗೆ ಕಸ ನಿರ್ವಹಣೆ ಬಗ್ಗೆ ಅಷ್ಟೊಂದು ಅರಿವಿರಲಿಲ್ಲ. ಮನೆ ಅಂಗಳ ಸೇರಿ ರಸ್ತೆ ಇಕ್ಕೆಲಗಳಲ್ಲಿ ರಾಶಿ ರಾಶಿ ಕಸ ಬೀಳುತ್ತಿತ್ತು. ಕೆಲವೆಡೆ ಗ್ರಾಮಸ್ಥರು ಪ್ಲಾಸ್ಟಿಕ್‌ಮತ್ತಿತರ ಘನ ತಾಜ್ಯಕ್ಕೆ ಬೆಂಕಿ ಹಚ್ಚಿ ಪರಿಸರ ಮಾಲಿನ್ಯಕ್ಕೆ ಕಾರಣವಾಗುತ್ತಿದ್ದರು.

Advertisement

ಆದರೆ, ಅವರೆಲ್ಲರೂ ಈಗ ಇಡೀ ಗ್ರಾಮ ಪಂಚಾಯಿತಿಯನ್ನೇ ಕಸ ಮುಕ್ತವಾಗಿಸುವ ಪಣ ತೊಟ್ಟಿದ್ದಾರೆ. ಕಸದ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿರುವ ಬೆಂಗಳೂರು ನಗರ ಜಿಲ್ಲೆ ಉತ್ತರ ತಾಲೂಕಿನ ಬೆಟ್ಟಹಲಸೂರು ಗ್ರಾ.ಪಂ ಆಡಳಿತ, ತನ್ನ ವ್ಯಾಪ್ತಿಯ 9 ಗ್ರಾಮಗಳ ಪೈಕಿ ನಾಲ್ಕು ಗ್ರಾಮಗಳನ್ನು ಸ್ಪಚ್ಛ ಗ್ರಾಮಗಳಾಗಿ ಪರಿವರ್ತಿಸುವಲ್ಲಿ ಸಫ‌ಲವಾಗಿದೆ.

ಸ್ವಚ್ಛ ಮಿಷನ್‌ (ಗ್ರಾಮೀಣ) ಯೋಜನೆಯಡಿ “ಇಕೋಗ್ರಾಮ್‌ ಹಸಿರು ದಳ’ದ ಆಶ್ರಯದೊಂದಿಗೆ “ಸ್ವಚ್ಛ ಗ್ರಾಮ’ ಶೀರ್ಷಿಕೆಯಡಿ ನೂತನ ಕಾರ್ಯಕ್ರಮ ರೂಪಿಸಿದ್ದು, ಹಸಿ ಮತ್ತು ಒಣ ಕಸವನ್ನು ಸಮರ್ಪಕ ರೀತಿಯಲ್ಲಿ ವಿಂಗಡಿಸಿದ ಗ್ರಾಮಸ್ಥರಿಗೆ “ಬಹುಮಾನ’ ನೀಡುವ ಮತ್ತು “ಸನ್ಮಾನಿಸುವ’ ಹೊಸ ಪದ್ಧತಿ ಜಾರಿಗೆ ತಂದಿದೆ. ಇದಕ್ಕೆ ಜನರಿಂದಲೂ ಸ್ಪಂದನೆ ವ್ಯಕ್ತವಾಗಿದೆ.

ನಾಲ್ಕು ಸ್ವಚ್ಛ ಗ್ರಾಮಗಳು: ಬೆಟ್ಟಹಲಸೂರು ಗ್ರಾ.ಪಂ ವ್ಯಾಪ್ತಿಯ ತರಹುಣಸೆ, ಟಿ.ಅಗ್ರಹಾರ, ನಾರಾಯಣಪುರ ಮತ್ತು ತಿಮ್ಮ ಸಂದ್ರ ಗ್ರಾಮಗಳಲ್ಲಿ ಸ್ವಚ್ಛ ಗ್ರಾಮ ಯೋಜನೆಯನ್ನು ಪ್ರಯೋಗಿಕವಾಗಿ ಜಾರಿಗೆ ತರಲಾಗಿದೆ. ಕೆಲ ದಿನಗಳ ಹಿಂದಷ್ಟೇ ತಿಮ್ಮಸಂದ್ರವನ್ನು ಸ್ವಚ್ಛ ಗ್ರಾಮವಾಗಿಸಿದ ಕೀರ್ತಿ ಬೆಟ್ಟಹಲಸೂರು ಗ್ರಾ.ಪಂ ಮುಡಿಗೇರಿದೆ. ಇದೇ ಹುಮಸ್ಸಿನಲ್ಲಿ ಸುಗ್ಗಟ್ಟ, ಗಡೇನಹಳ್ಳಿ, ಕುದುರೆಗೆರೆ, ನೆಲ್ಲುಕುಂಟೆ ಮತ್ತು ಬೆಟ್ಟಹಲಸೂರು ಗ್ರಾಮಗಳನ್ನು ಸ್ಪಚ್ಛ ಗ್ರಾಮಗಳನ್ನಾಗಿ ಮಾಡುವ ಪಣತೊಡಲಾಗಿದೆ ಎಂದು ಪಂಚಾಯಿತಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಒಂದು ಚೀಲ ಅಕ್ಕಿ ಬಹುಮಾನ: ಬೆಟ್ಟಹಲಸೂರು ಗ್ರಾ.ಪಂ ಮತ್ತು ಹಸಿರು ದಳದ ಕಾರ್ಯಕರ್ತರು ಕಸ ವಿಗಂಡನೆ ಬಗ್ಗೆ ಗ್ರಾಮಸ್ಥರಿಗೆ ಮೊದಲು ಸರಿಯಾದ ತಿಳಿವಳಿಕೆ ನೀಡಿದ್ದರು. ಹಸಿ ಕಸ, ಒಣ ಕಸ ಹಾಗೂ ಇಲೆಕ್ಟ್ರಾನಿಕ್‌ ಉತ್ಪನ್ನಗಳನ್ನು ವಿಗಂಡನೆ ಮಾಡುವ ಬಗ್ಗೆ ಪೂರಕ ಮಾಹಿತಿ ನೀಡಿದ್ದರು. ಬಳಿಕ ಒಂದು ತಿಂಗಳ ಗಡುವಿನಲ್ಲಿ ಸಮರ್ಪಕವಾಗಿ ಕಸ ವಿಗಂಡನೆ ಮಾಡಿದ ಕುಟುಂಬಳಿಗೆ ಪ್ರಶಸ್ತಿ ಮತ್ತು ಬಹುಮಾನ ನೀಡುವುದಾಗಿ ಘೋಷಣೆ ಮಾಡಲಾಗಿತ್ತು. 

Advertisement

ತಿಮ್ಮಸಂದ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ, ಉತ್ತಮವಾಗಿ ಕಸ ವಿಂಗಡಿಸಿದ 8 ಕುಟುಂಬಗಳಿಗೆ ತಲಾ ಒಂದು ಚೀಲ ಅಕ್ಕಿ ಮತ್ತು 17 ಜನರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಹೀಗಾಗಿ, ಪ್ರಶಸ್ತಿ ವಂಚಿತರು ಮುಂದಿನ ದಿನಗಳಲ್ಲಿ ಪ್ರಶಸ್ತಿ ಮತ್ತು ಬಹುಮಾನ ಪಡೆದೇ ತೀರುವುದಾಗಿ ಹೇಳುತ್ತಿದ್ದಾರೆ.

ಪದ್ಧತಿ ಮುಂದವರಿಕೆ: ಸ್ವಚ್ಛ ಭಾರತ ಮಿಷನ್‌ ಅಡಿ ಹಸಿರು ದಳದೊಂದಿಗೆ ರೂಪಿಸಿರುವ ಕಾರ್ಯಕ್ರಮಕ್ಕೆ ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗಿದ್ದು, ಮುಂದೆ ಮತ್ತಷ್ಟು ಯಶಸ್ಸು ಪಡೆಯುವ ಭರವಸೆಯನ್ನು ಗ್ರಾ.ಪಂ ಪಿಡಿಒ ಆರ್‌.ನರಸಿಂಹ ವ್ಯಕ್ತಪಡಿಸಿದರು. 

“ಉದಯವಾಣಿ’ ಜತೆ ಮಾತನಾಡಿದ ಅವರು, ಮೊದಲು ಜನರಿಗೆ ಸ್ವಚ್ಛತೆ ಬಗ್ಗೆ ಅಷ್ಟೊಂದು ತಿಳಿವಳಿಕೆ ಇರಲಿಲ್ಲ. ಆದರೆ, ಅವರೇ ಈಗ  ಸ್ವಚ್ಛತೆಯ ಬಗ್ಗೆ ಮಾತನಾಡುತ್ತಿದ್ದಾರೆ. ಪ್ರಶಸ್ತಿ ಮತ್ತು ಬಹುಮಾನ ನೀಡುವ ಪದ್ಧತಿ ಹೀಗೇ ಮುಂದುವರಿಯಲಿದೆ ಎಂದರು.

ñರಹುಣುಸೆ ಮತ್ತು ತಿಮ್ಮಸಂದ್ರ ಗ್ರಾಮಗಳಿಗೆ ಶುಕ್ರವಾರ ಭೇಟಿ ನೀಡಿದ ಬೆಂಗಳೂರು ನಗರ ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಂ.ಎಸ್‌.ಅರ್ಚನಾ, ಗ್ರಾ.ಪಂ ಕಾರ್ಯ ವೈಖರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಇದೇ ವೇಳೆ ಕೆಲವು ಮನೆಗಳಿಗೆ ಭೇಟಿ ನೀಡಿ ಹಸಿ ಕಸ ಮತ್ತು ಒಣ ಕಸ ಸಂಗ್ರಹ ಮತ್ತು ವಿಂಗಡಣೆ ಬಗ್ಗೆ ಮಾಹಿತಿ ಪಡೆದುಕೊಂಡರು. 

ಗ್ರಾ.ಪಂ ಕಾರ್ಯವೈಖರಿಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಒಂದು ವರ್ಷದೊಳಗೆ ಇಡೀ ಗ್ರಾಮ ಪಂಚಾಯಿತಿಯನ್ನು ಕಸ ಮುಕ್ತ ಪಂಚಾಯಿತಿಯನ್ನಾಗಿ ಮಾಡಲಾಗುವುದು.
-ರಜನಿ ಪ್ರಕಾಶ್‌, ಬೆಟ್ಟಹಲಸೂರು ಗ್ರಾ.ಪಂ ಅಧ್ಯಕ್ಷೆ

ಉತ್ತಮವಾಗಿ ಕಸ ವಿಗಂಡನೆ ಮಾಡಿದ ಕುಟುಂಬಳಿಗೆ ಪ್ರಶಸ್ತಿ ಮತ್ತು ಬಹುಮಾನ ನೀಡುವ ಪದ್ಧತಿ ಜಾರಿಗೆ ತಂದಿರುವ ಬೆಟ್ಟಹಲಸೂರು ಗ್ರಾ.ಪಂ, ಈ ವಿಚಾರದಲ್ಲಿ ಮಾದರಿ ಪಂಚಾಯಿತಿ ಎನಿಸಿಕೊಂಡಿದೆ.
-ಎಂ.ಎಸ್‌.ಅರ್ಚನಾ, ಬೆಂಗಳೂರು ನಗರ ಜಿ.ಪಂ ಸಿಇಒ

* ದೇವೇಶ ಸೂರಗುಪ್ಪ

Advertisement

Udayavani is now on Telegram. Click here to join our channel and stay updated with the latest news.

Next