Advertisement

ಆ ಬೆಂಕಿಯಲ್ಲಿ ಕನಸೂ ಕರಕಲಾದವು!

12:31 PM Jan 09, 2018 | Team Udayavani |

ಬೆಂಗಳೂರು: ಅವರೆಲ್ಲಾ ಉದ್ಯೋಗ ಅರಸಿ, ಭವ್ಯ ಭವಿಷ್ಯದ ಕನಸಿನೊಂದಿಗೆ ಬೆಂಗಳೂರಿಗೆ ಬಂದಿದ್ದ ಉತ್ಸಾಹಿಗಳು. ಐದಕ್ಕೆ ಐದೂ ಜನ ಬಡ ಕುಟುಂಬದಿಂದಲೇ ಬಂದವರು. ಒಳ್ಳೆಯ ಉದ್ಯೋಗಕ್ಕೆ ಸೇರಬೇಕು. ಕೈತುಂಬಾ ಸಂಪಳ ಪಡೆಯಬೇಕು. ಹಣವನ್ನು ಮನೆಯವರಿಗೆ ಕಳಿಸಿ, ಅವರನ್ನೂ ಚೆನ್ನಾಗಿ ನೋಡಿಕೊಳ್ಳಬೇಕೆಂಬ ಕನಸು ಕಂಡಿದ್ದರು. ಆದರೆ ಅವರೆಲ್ಲರ ಕನಸು ಬೆಂಕಿಯಲ್ಲಿ ಸುಟ್ಟು ಕರಕಲಾಗಿವೆ.

Advertisement

ಕಲಾಸಿಪಾಳ್ಯದ ಕೈಲಾಶ್‌ ಬಾರ್‌ ಮತ್ತು ರೆಸ್ಟೋರೆಂಟ್‌ನಲ್ಲಿ ಶಾರ್ಟ್‌ ಸರ್ಕಿಟ್‌ನಿಂದ ಉಂಟಾದ ಬೆಂಕಿ ಅವಘದಲ್ಲಿ ಪ್ರಾಣ ಕಳೆದುಕೊಂಡ ಐವರು ಕಾರ್ಮಿಕರ ಜೀವನ ದುರಂತ ಅಂತ್ಯ ಕಂಡಿದ್ದು, ಘಟನಾ ಸ್ಥಳಕ್ಕೆ ಬಂದಿದ್ದ ಮೃತರ ಸಂಬಂಧಿಕರ ರೋಧನ ಮುಗಿಲು ಮುಟ್ಟಿತ್ತು.

ಸ್ವಾಭಿಮಾನಿ ಮಂಜು: “ದುರಂತದಲ್ಲಿ ಮೃತಪಟ್ಟ ಮಂಜುನಾಥ್‌ನದ್ದು ಇನ್ನೊಂದು ಕಥೆ. ಮಂಜುನಾಥ್‌ ಕುಟುಂಬಕ್ಕೆ ಹಾಸನದ ಹೀರೇಸಾವೆಯ ಹೊನ್ನಶೆಟ್ಟಿಹಳ್ಳಿಯಲ್ಲಿ ಒಂದು ಎಕರೆ ಜಮೀನಿದೆ. ಆದರೆ, ಮಳೆ ಇಲ್ಲದೆ ಬೆಳೆ ತೆಗೆಯಲು ಸಾಧ್ಯವಾಗದೆ ಪತ್ನಿ ಹಾಗೂ ಮಕ್ಕಳ ಜೊತೆ ಆತ ಹತ್ತು ವರ್ಷಗಳ ಹಿಂದೆ ಬೆಂಗಳೂರಿಗೆ ಬಂದಿದ್ದ. ದ್ವಿತೀಯ ಪಿಯುಸಿ ಓದುತ್ತಿರುವ ಮಗಳು ವಿದ್ಯಾ ಹಾಗೂ ಎಂಟನೇ ತರಗತಿ ಓದುತ್ತಿರುವ ಮಗ ಧನುಷ್‌ನನ್ನು ಚೆನ್ನಾಗಿ ಓದಿಸಬೇಕು ಎಂಬುದು ಮಂಜು ಅವರ ಕನಸಾಗಿತ್ತು.

ಮಾರುಕಟ್ಟೆಯಲ್ಲಿ ಸಣ್ಣ-ಪುಟ್ಟ ಕೆಲಸ ಮಾಡಿಕೊಂಡು ಕುಟುಂಬ ನಿರ್ವಹಿಸುತ್ತಿದ್ದ ಮಂಜುನಾಥ್‌ 2 ತಿಂಗಳ ಹಿಂದಷ್ಟೇ ಬಾರ್‌ನಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದ. ಚನ್ನಾಗಿ ಬದುಕಬೇಕು. ಯಾರ ಬಳಿಯೂ ಕೈಚಾಚಬಾರದು ಎಂಬ ಸ್ವಾಭಿಮಾನಿಯಾಗಿದ್ದ ಮಂಜು ಇಂದು ನಮ್ಮೊಂದಿಗಿಲ್ಲ,’ ಎಂದು ಮಂಜುನಾಥ್‌ ಸಹೋದರ ದೇವರಾಜ್‌ ಕಣ್ಣೀರಾದರು.

ಮಗಳ ಅದ್ಧೂರಿ ಜನ್ಮದಿನ ಆಚರಿಸಲೇ ಇಲ್ಲ: “ಮಹೇಶನ ಪತ್ನಿ ದೂರವಾದಾಗಿನಿಂದ ಆತ ತನ್ನ ಕಿರಿಯ ಸಹೋದರ ಗಣೇಶನ ಮಗಳನ್ನು ಪ್ರಾಣದಂತೆ ಹಚ್ಚಿಕೊಂಡಿದ್ದ. ಜ.16ರಂದು ಆಕೆಯ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸುತ್ತೇನೆ ಎಂದು ಸ್ನೇಹಿತರಲ್ಲಿ ಹೇಳಿಕೊಂಡಿದ್ದ. ಊರಲ್ಲಿ ಅದಕ್ಕೆ ಬೇಕಾದ ಎಲ್ಲ ವ್ಯವಸ್ಥೆ ಮಾಡಿಸಿದ್ದ.

Advertisement

ಬೆಂಗಳೂರಿನಲ್ಲಿರುವ ಸಂಬಂಧಿಕರು ಹಾಗೂ ಸ್ನೇಹಿತರನ್ನು ಆಹ್ವಾನಿಸಲು ಮೂರು ದಿನಗಳ ಕೆಳಗೆ ನಗರಕ್ಕೆ ಬಂದಿದ್ದ. ಭಾನುವಾರ ರಾತ್ರಿ ನನಗೆ ಕರೆ ಮಾಡಿ ಹುಟ್ಟುಹಬ್ಬದ ಸಿದ್ಧತೆಗಳ ಬಗ್ಗೆ ಚರ್ಚಿಸಿದ್ದ. ಆದರೆ, ಈಗ ಅವನೇ ಇಲ್ಲ’ ಎಂದಾಗ ಹಾಸನದ ಮಹೇಶ್‌ನ ಸ್ನೇಹಿತ ಪ್ರವೀಣ್‌ ಕುಮಾರ್‌ ಕಣ್ಣಾಳಿಗಳಲ್ಲಿ ನೀರು ತುಂಬಿಬಂತು.

“ಒಬ್ಬಂಟಿಯಾಗಿದ್ದ ಮಹೇಶ್‌ಗೆ ಈ ವರ್ಷ ಮತ್ತೂಂದು ಮದುವೆ ಮಾಡಲು ನಿರ್ಧರಿಸಿದ್ದೆವು. ಆದರೆ, ನನಗೆ ಮತ್ತೂಂದು ಮದುವೆ ಬೇಡ. ತಮ್ಮನ ಮಗಳೇ ನನ್ನ ಮಗಳು. ಆಕೆಯನ್ನೇ ಚೆನ್ನಾಗಿ ನೋಡಿಕೊಳ್ಳುತ್ತೇನೆ ಎಂದು ಹೇಳಿದ್ದ. ಕೊನೆಗೆ ಎಲ್ಲರೂ ಸೇರಿ ಆತನನ್ನು ಮದುವೆಗೆ ಒಪ್ಪಿಸಿದ್ದೆವು. ಹೆಣ್ಣು ನೋಡುವ ಕೆಲಸವನ್ನೂ ಆರಂಭಿಸಿದ್ದೆವು,’ ಎಂದರು ಪ್ರವೀಣ್‌.

ಸಂಬಳ ತಗೊಂಡು ಬರಿನಿ ಅಂದಿದ್ದ: ಮಂಡ್ಯ ಮೂಲದ ಕೀರ್ತಿ, ಚಿಕ್ಕ ವಯಸ್ಸಿನಲ್ಲೇ ತಂದೆಯನ್ನು ಕಳೆದುಕೊಂಡಿದ್ದ. ತಾಯಿ ಚಿಂತಮ್ಮ ಮಂಡ್ಯದಲ್ಲಿ ಸಂಬಂಧಿಕರ ಮನೆಯಲ್ಲಿದ್ದಾರೆ. ಕೀರ್ತಿ ತನ್ನ ಸಹೋದರ ಕಿರಣ್‌ ಜತೆ ಬೆಂಗಳೂರಿಗೆ ಬಂದಿದ್ದ.

ಸಹೋದರನೊಂದಿಗೆ ಉಡುಪಿ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದ ಕೀರ್ತಿ, ಒಂದೂವರೆ ತಿಂಗಳ ಹಿಂದಷ್ಟೇ ಕೆಲಸ ತೊರೆದು ಕಲಾಸಿಪಾಳ್ಯದ ಕೈಲಾಶ್‌ ಬಾರ್‌ನಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದ. “ಮೊದಲ ತಿಂಗಳ ಸಂಬಳ ತೆಗೆದುಕೊಂಡು ಬರುತ್ತೇನೆ. ಊರಿಗೆ ಹೋಗೋಣ ಎಂದಿದ್ದ. ಆದರೆ, ಬಂದಿದ್ದು ಮಾತ್ರ ಶವವಾಗಿ,’ ಎಂದು ಗದ^ದಿರತನಾದದ್ದು ಕೀರ್ತಿಯ ಸಂಬಂಧಿ ಅರುಣ್‌.

ಮನೆಗೆ ಆಧಾರವಾಗಿದ್ದ ರಂಗಸ್ವಾಮಿ: ತುಮಕೂರು ಮೂಲದ ರಂಗಸ್ವಾಮಿ ಮತ್ತು ಆತನ ಸಹೋದರ ಹುಚ್ಚೇಗೌಡ ಹೊಟ್ಟೆಪಾಡಿಗಾಗಿ ಬೆಂಗಳೂರಿಗೆ ಬಂದಿದ್ದರು. ರಂಗಸ್ವಾಮಿ ಕೈಲಾಶ್‌ ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌ನಲ್ಲಿ ಕೆಲಸಕ್ಕೆ ಸೇರಿದರೆ, ಸಹೋದರ ಹುಚ್ಚೇಗೌಡ ಆನಂದರಾವ್‌ ವೃತ್ತದ ಹೋಟೆಲ್‌ ಒಂದರಲ್ಲಿ ಕೆಲಸ ಮಾಡುತ್ತಿದ್ದ.

ಇಡೀ ಕುಟುಂಬವನ್ನು ಈ ಇಬ್ಬರೇ ನೋಡಿಕೊಳ್ಳುತ್ತಿದ್ದರು. ಅದರಲ್ಲೂ ಸ್ವಲ್ಪ ಹೆಚ್ಚು ಸಂಪಾದನೆ ಮಾಡುತ್ತಿದ್ದ ರಂಗಸ್ವಾಮಿ, ಕುಟುಂಬಕ್ಕೆ ಆಧಾರಸ್ತಂಭವಾಗಿದ್ದ. ಈಗ ಅವನೇ ಇಲ್ಲ. ಅವನಿಲ್ಲದ ಮನೆಗೆ ನಾ ಹೇಗೆ ಹೋಗಲಿ,’ ಎನ್ನುತ್ತಾ ರಂಗಸ್ವಾಮಿ ಅವರ ತಾಯಿ ತಿಮ್ಮವ್ವ ಕಣ್ಣೀರುಗರೆದರು.

ಮತ್ತೆ ಕೆಲಸಕ್ಕೆ ಸೇರಿ ಪ್ರಾಣ ತೆತ್ತ: ತುಮಕೂರಿನ ಪ್ರಸಾದ್‌ ಕಳೆದ ಮೂರು ವರ್ಷಗಳಿಂದ ಬಾರ್‌ನಲ್ಲಿ ಕೆಲಸ ಮಾಡುತ್ತಿದ್ದರು. ಹೊಸ ವರ್ಷದಲ್ಲಿ ಕೆಲಸ ಬಿಟ್ಟು ಬೇರೆ ಕಡೆ ಹೋಗಲು ನಿರ್ಧರಿಸಿದ್ದರು. ಅದರಂತೆ ಕೆಲಸವನ್ನೂ ಬಿಟ್ಟಿದ್ದರು. ಆದರೆ, ಎಲ್ಲೂ ಕೆಲಸ ಸಿಕ್ಕಿರಲಿಲ್ಲ.

ಭಾನುವಾರ ಸಂಜೆ ಬಾರ್‌ನ ಮ್ಯಾನೆಜರ್‌ ಬಳಿ ಹಿಂದಿನ ತಿಂಗಳ ಸಂಬಳ ಕೇಳಲು ಬಂದಿದ್ದ ಪ್ರಸಾದ್‌, ಬೇರೆ ಎಲ್ಲಿಯೂ ಕೆಲಸ ಸಿಗದ ಕಾರಣ ಮತ್ತೆ ತನ್ನನ್ನು ಕೆಲಸಕ್ಕೆ ಸೇರಿಸಿಕೊಳ್ಳುವಂತೆ ಮನವಿ ಮಾಡಿಕೊಂಡಿದ್ದರು. ಇದಕ್ಕೆ ಮ್ಯಾನೇಜರ್‌ ಒಪ್ಪಿದ್ದರಿಂದ ರಾತ್ರಿ ಅಲ್ಲೇ ಉಳಿದುಕೊಂಡಿದ್ದರು. ಆದರೆ, ಮತ್ತೆ ಕೆಲಸಕ್ಕೆ ಸೇರಿದ್ದೇ ಅವರ ಪ್ರಾಣಕ್ಕೆ ಮುಳುವಾಯಿತು.

ತಪಾಸಣೆಗೆ ಸೂಚನೆ: ಘಟನೆ ಹಿನ್ನೆಲೆಯಲ್ಲಿ ನಗರದಲ್ಲಿರುವ ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌ಗಳಲ್ಲಿ ಸುರಕ್ಷತಾ ಕ್ರಮಗಳ ಬಗ್ಗೆ ತಪಾಸಣೆ ನಡೆಸುವಂತೆ ನಗರ ಅಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್‌ ಪೊಲೀಸ್‌, ಬಿಬಿಎಂಪಿ, ಅಬಕಾರಿ ಹಾಗೂ ಅಗ್ನಿಶಾಮಕದಳ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ನಗರದಲ್ಲಿ ಬಹುತೇಕ ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌ಗಳು “ಹಂದಿಗೂಡು’ಗಳಂತಿದ್ದು, ಯಾವುದೇ ಸುರಕ್ಷತೆ ನಿಯಮ ಅಳವಡಿಸಿಕೊಂಡಿಲ್ಲ.

ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌ ಇರುವ ಕಟ್ಟಡಗಳು ನಿಯಮಾನುಸಾರ ಯಾವುದೇ ಅನುಮತಿ ಸಹ ಪಡೆದಿಲ್ಲ ಎಂಬ ಮಾಹಿತಿಯಿದ್ದು  ಈ ಬಗ್ಗೆ ತಪಾಸಣೆ ನಡೆಸಿ ಎಂದು ನಿರ್ದೇಶನ ನೀಡಿದ್ದಾರೆ. ಬಿಬಿಎಂಪಿ, ಅಬಕಾರಿ, ಪೊಲೀಸ್‌ ಹಾಗೂ ಅಗ್ನಿಶಾಮಕದಳ ಅಧಿಕಾರಿಗಳ ತಂಡ ರಚಿಸಿ  ಈ ಕುರಿತು ಪರಿಶೀಲನೆ ನಡೆಸುವಂತೆ ಸೂಚಿಸಿದ್ದಾರೆ ಎಂದು ಹೇಳಲಾಗಿದೆ.

6.5 ಲಕ್ಷ ರೂ. ಪರಿಹಾರ: ಸ್ಥಳಕ್ಕೆ ಭೇಟಿ ನೀಡಿದ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್‌, ಮೃತ ಐವರಿಗೆ ತಲಾ 5 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ. ಹಾಗೇ ಬೆಂಗಳೂರು ಬಾರ್‌ ಅಸೋಸಿಯೇಷನ್‌ನ ಅಧ್ಯಕ್ಷ ಹೊನ್ನಗಿರಿಗೌಡ ವಿಕ್ಟೋರಿಯಾ ಆಸ್ಪತ್ರೆಗೆ ಭೇಟಿ ನೀಡಿ ತಲಾ ಒಂದೂವರೆ ಲಕ್ಷ ರೂ. ಪರಿಹಾರ ಘೋಷಿಸಿದರು.

ಘಟನೆ ಸಂಬಂಧ ಎರಡು ದಿನಗಳಲ್ಲಿ ತನಿಖೆ ನಡೆಸಿ ವರದಿ ನೀಡುವಂತೆ ಸೂಚಿಸಿದ್ದೇನೆ. ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳುತ್ತೇವೆ. ಯಾವುದೇ ಇಲಾಖೆಯ ಲೋಪದೋಷಗಳು ಕಂಡು ಬಂದರೆ ಕ್ರಮ ಕೈಗೊಳ್ಳಲಾಗುವುದು. ಸದ್ಯ ಬಾರ್‌ ಮಾಲೀಕರ ವಿರುದ್ಧ ಪ್ರಕರಣ ದಾಖಲಾಗಿದೆ.
-ರಾಮಲಿಂಗಾರೆಡ್ಡಿ, ಗೃಹ ಸಚಿವ

ಘಟನೆ ಸಂಬಂಧ ಪೊಲೀಸ್‌ ಇಲಾಖೆ ಮತ್ತು ಅಗ್ನಿಶಾಮಕ ಇಲಾಖೆ ತನಿಖೆ ನಡೆಸುತ್ತಿವೆ. ಇದೇ ತಿಂಗಳಿಂದ ಪಾಲಿಕೆ ಎಲ್ಲ ಅಂಗಡಿಗಳ ತಪಾಸಣೆ ನಡೆಸುತ್ತಿದೆ. ಪ್ರತಿ ಕಟ್ಟಡವೂ ಅಗ್ನಿ ನಂದಕಗಳನ್ನು ಹೊಂದಬೇಕು. ಇಲ್ಲವಾದಲ್ಲಿ ಅಂತಹ ಕಟ್ಟಡ ಮಾಲೀಕರ ವಿರುದ್ಧ ಕ್ರಮಕೈಗೊಳ್ಳುತ್ತೇವೆ.
-ಸಂಪತ್‌ರಾಜ್‌, ಮೇಯರ್‌

ಘಟನೆ ಸಂಬಂಧ ಎಫ್ಎಸ್‌ಎಲ್‌, ಎಲೆಕ್ಟ್ರಿಕಲ್ಸ್‌ ಹಾಗೂ ಅಗ್ನಿ ಅವಘಡ ತಂಡಗಳಿದಂದ ಪರೀಕ್ಷೆ ನಡೆಯಲಿದೆ. ಈ ತಂಡದ ವರದಿ ಬಂದ ಬಳಿಕ ಕ್ರಮ ಕೈಗೊಳ್ಳುತ್ತೇವೆ. ಸದ್ಯ ಘಟನೆಗೆ ಸಂಬಂಧಿಸಿದಂತೆ ಬಾರ್‌ ನಿರ್ವಹಣೆ ಹೊಣೆ ಹೊತ್ತಿದ್ದ ಪ್ರಕಾಶ್‌ ಮತ್ತು ಸೋಮಶೇಖರ್‌ರನ್ನು ಬಂಧಿಸಲಾಗಿದೆ.
-ಅನುಚೇತ್‌, ಡಿಸಿಪಿ

ಶಾರ್ಟ್‌ಸರ್ಕಿಟ್‌ನಿಂದ ಘಟನೆ ನಡೆದಿದ್ದು, ಐವರು ಸಜೀವ ದಹನವಾಗಿದ್ದಾರೆ. ಘಟನೆ ಸಂಬಂಧ ಕಲಾಸಿಪಾಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜತೆಗೆ ಹೆಚ್ಚಿನ ತನಿಖೆ ನಡೆಸುವಂತೆ ಡಿಸಿಪಿ ಅನುಚೇತ್‌ಗೆ ಆದೇಶಿಸಲಾಗಿದೆ.
-ಟಿ.ಸುನಿಲ್‌ ಕುಮಾರ್‌, ನಗರ ಪೊಲೀಸ್‌ ಆಯುಕ್ತ

ಅಗ್ನಿ ಅವಘಡಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ. ವಿಧಿ ವಿಜ್ಞಾನ ಪರೀಕ್ಷಾ ಕೇಂದ್ರದ ವರದಿ ಬಂದ ಬಳಿಕ ಎಲ್ಲವೂ ತಿಳಿಯಲಿದೆ. ಮೇಲ್ನೋಟಕ್ಕೆ ಬಾರ್‌ ಮತ್ತು ರೆಸ್ಟೋರೆಂಟ್‌ನಲ್ಲಿ ಯಾವುದೇ ಸುರಕ್ಷತಾ ಕ್ರಮಗಳು ಇಲ್ಲದಿರುವುದು ದೃಢವಾಗಿದೆ. ಸದ್ಯ ಸ್ಥಳೀಯ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
-ಎಂ.ಎನ್‌.ರೆಡ್ಡಿ, ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ ಮುಖ್ಯಸ್ಥ

ಭಾನುವಾರ ರಾತ್ರಿ 1 ಗಂಟೆಗೆ ಎಂದಿನಂತೆ ಬಾರ್‌ ಬಾಗಿಲು ಮುಚ್ಚಿ ಚಾಮರಾಜಪೇಟೆಯಲ್ಲಿರುವ ಮನೆಗೆ ತೆರಳಿದ್ದೆ. ಮುಂಜಾನೆ 2.30ರಲ್ಲಿ ಪಕ್ಕದ ಬಿಲ್ಡಿಂಗ್‌ನವರು ಕರೆ ಮಾಡಿ ಬೆಂಕಿ ಬಿದ್ದ ವಿಚಾರ ತಿಳಿಸಿದರು. 2.50ಕ್ಕೆ ನಾನು ಸ್ಥಳಕ್ಕೆ ಬಂದೆ. 3.20ಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಬಾರ್‌ನ ಶೆಟರ್‌ ತೆರಯಲು ಯತ್ನಿಸುತ್ತಿದ್ದರು.
-ರಾಮಚಂದ್ರ, ಬಾರ್‌ ಕ್ಯಾಶಿಯರ್‌

ಟೈಮ್‌ ಲೈನ್‌
-1.00(ತಡರಾತ್ರಿ)-ಕೈಲಾಸ್‌ ಬಾರ್‌ ವಹಿವಾಟು ಮುಕ್ತಾಯ
-2.00- ಶಾರ್ಟ್‌ಸರ್ಕಿಟ್‌ನಿಂದ ಬೆಂಕಿ ಅವಘಡ
-2.30- ಸ್ಥಳೀಯ ಸೆಲ್ವಕುಮಾರ್‌ ಎಂಬುವರಿಂದ ಕ್ಯಾಶಿಯರ್‌ ರಾಮಚಂದ್ರಕ್ಕೆ ಮಾಹಿತಿ
-2.50-ಕ್ಯಾಶಿಯರ್‌ ರಾಮಚಂದ್ರ ಸ್ಥಳಕ್ಕೆ ಆಗಮನ
-3.00-ಕಲಾಸಿಪಾಳ್ಯ ಪೊಲೀಸರು ಭೇಟಿ
-3.20-ಅಗ್ನಿಶಾಮಕ ಸಿಬ್ಬಂದಿಯಿಂದ ಕಾರ್ಯಾಚರಣೆ ಆರಂಭ
-4.30-ಐದು ಮೃತ ದೇಹಗಳನ್ನು ಹೊರ ತೆಗೆದ ಅಗ್ನಿಶಾಮಕ ಸಿಬ್ಬಂದಿ
-10.00-ಸಚಿವ ರಾಮಲಿಂಗಾರೆಡ್ಡಿ, ಜಾರ್ಜ್‌, ಮೇಯರ್‌ ಹಾಗೂ ಹಿರಿಯ ಅಧಿಕಾರಿಗಳು ಭೇಟಿ
-6.00(ಸಂಜೆ)-ಐದು ಮೃತ ದೇಹಗಳ ಮರಣೋತ್ತರ ಪರೀಕ್ಷೆ ಮುಕ್ತಾಯ
-8.00-ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌ ಮಾಲೀಕರು ಹಾಗೂ ಉಸ್ತುವಾರಿಗಳು ಸೇರಿ ನಾಲ್ವರ ವಿರುದ್ಧ ಎಫ್ಐಆರ್‌

* ಮೋಹನ್‌ ಭದ್ರಾವತಿ

Advertisement

Udayavani is now on Telegram. Click here to join our channel and stay updated with the latest news.

Next