ಬೆಂಗಳೂರು: ಮಹಾರಾಜ ಟ್ರೋಫಿ ಟಿ20 ಲೀಗ್‌ನಲ್ಲಿ ಶಿವಮೊಗ್ಗ ಲಯನ್ಸ್ ಮೊದಲ ಬಾರಿಗೆ ಸೋಲಿನ ರುಚಿ ಕಂಡಿದೆ. ಶುಕ್ರವಾರದ ಆರಂಭಿಕ ಪಂದ್ಯದಲ್ಲಿ ಮೈಸೂರು ವಾರಿಯರ್ 12 ರನ್ನುಗಳ ರೋಚಕ ಜಯ ದಾಖಲಿಸಿ ಲಯನ್ಸ್‌ಗೆ ಆಘಾತವಿಕ್ಕಿತು.
ಮೊದಲು ಬ್ಯಾಟಿಂಗ್ ನಡೆಸಿದ ಮೈಸೂರು 9 ವಿಕೆಟಿಗೆ 190 ರನ್ನುಗಳ ಬೃಹತ್ ಮೊತ್ತ ಪೇರಿಸಿದರೆ, ಶಿವಮೊಗ್ಗ 9 ವಿಕೆಟಿಗೆ 178 ರನ್ ಗಳಿಸಿ ಶರಣಾಯಿತು. ಇದು 4 ಪಂದ್ಯಗಳಲ್ಲಿ ಶ್ರೇಯಸ್ ಗೋಪಾಲ್ ಪಡೆಗೆ ಎದುರಾದ ಮೊದಲ ಸೋಲು. ಕರುಣ್ ನಾಯರ್ ನಾಯಕತ್ವದ ಮೈಸೂರು 4 ಪಂದ್ಯಗಳಲ್ಲಿ 2ನೇ ಜಯ ಸಾಧಿಸಿತು.
ಕಪ್ತಾನನ ಆಟವಾಡಿದ ಕರುಣ್ ನಾಯರ್ ಸರ್ವಾಧಿಕ 60 ರನ್, ಆರಂಭಕಾರ ಕಾರ್ತಿಕ್ ಸಿ.ಎ. 48 ರನ್ ಹೊಡೆದು ಮೈಸೂರು ವಾರಿಯರ್ನ ದೊಡ್ಡ ಮೊತ್ತಕ್ಕೆ ಕಾರಣರಾದರು. ಕೊನೆಯಲ್ಲಿ ಮನೋಜ್ ಭಾಂಡಗೆ ಸಿಡಿದು ನಿಂತರು. 12 ಎಸೆತಗಳಿಂದ 29 ರನ್ ಬಾರಿಸಿದರು (3 ಬೌಂಡರಿ, 2 ಸಿಕ್ಸರ್). ಶಿವಮೊಗ್ಗ ಸರದಿಯಲ್ಲಿ ಯಾರಿಂದಲೂ ದೊಡ್ಡ ಮೊತ್ತ ದಾಖಲಾಗಲಿಲ್ಲ. 31 ರನ್ ಮಾಡಿದ ರೋಹನ್ ಕದಂ ಅವರದೇ ಹೆಚ್ಚಿನ ಗಳಿಕೆ.
ಬೆಂಗಳೂರನ್ನು ಮಗುಚಿದ ಮಂಗಳೂರು
ದಿನದ 2ನೇ ಪಂದ್ಯದಲ್ಲಿ ಮಂಗಳೂರು ಡ್ರ್ಯಾಗನ್ಸ್ 23 ರನ್ನುಗಳಿಂದ ಬೆಂಗಳೂರು ಬ್ಲಾಸ್ಟರ್ ತಂಡವನ್ನು ಮಗುಚಿತು. ಆರಂಭಕಾರ ಸಿದ್ಧಾರ್ಥ್ ಅವರ ಅಜೇಯ ಶತಕ ಸಾಹಸದಿಂದ ಮಂಗಳೂರು 3 ವಿಕೆಟಿಗೆ 194 ರನ್ ರಾಶಿ ಹಾಕಿತು. ಸಿದ್ಧಾರ್ಥ್ 64 ಎಸೆತಗಳಿಂದ ಅಜೇಯ 100 ರನ್ ಬಾರಿಸಿದರು (9 ಬೌಂಡರಿ, 4 ಸಿಕ್ಸರ್). ಬಿ.ಯು. ಶಿವಕುಮಾರ್ 40, ಅನಿರುದ್ಧ್ ಜೋಶಿ ಔಟಾಗದೆ 31 ರನ್ ಮಾಡಿದರು.
ಬೆಂಗಳೂರು ತಂಡ ಆರಂಭಿಕ ಕುಸಿತಕ್ಕೆ ಸಿಲುಕಿತು. ಬಳಿಕ ಡಿ. ನಿಶ್ಚಲ್ (61), ಶುಭಾಂಗ್ ಹೆಗ್ಡೆ (45) ಮತ್ತು ಸೂರಜ್ ಅಹುಜಾ (32) ಹೋರಾಟ ನಡೆಸಿದರೂ ಫಲಪ್ರದವಾಗಲಿಲ್ಲ. ಬೆಂಗಳೂರು 8 ವಿಕೆಟಿಗೆ 171 ರನ್ ಮಾಡಿ ಸತತ 4ನೇ ಸೋಲನುಭವಿಸಿತು. ಆದಿತ್ಯ ಗೋಯಲ್ 3, ಸಂಕಲ್ಪ್ ಶೆಟ್ಟಣ್ಣನವರ್ 2 ವಿಕೆಟ್ ಕೆಡವಿದರು. ಇದು ಮಂಗಳೂರು ತಂಡಕ್ಕೆ 4 ಪಂದ್ಯಗಳಲ್ಲಿ ಒಲಿದ 2ನೇ ಜಯ.