Advertisement

ಮೇಘಮಾರ್ಗದಲ್ಲಿ ಪಾರಿವಾಳಗಳ ದಿಗ್ವಿಜಯ

02:50 AM Apr 06, 2019 | Sriram |

ಬೆಂಗಳೂರು: ಹಿಂದೊಂದು ಕಾಲದಲ್ಲಿ ರಾಜ, ಮಹಾರಾಜರಿಗೆ ಮೇಘ ಸಂದೇಶ ತಲುಪುತಿತ್ತು. ಗಗನಗಾಮಿಯಾಗಿ ಹಾರಿ ಬರುವ ಪಾರಿವಾಳಗಳು, ಗುಪ್ತಚರರಂತೆ ಸಂದೇಶ ಹೊತ್ತು ತರುತ್ತಿದ್ದವು. ಅವೆಲ್ಲ ಪೌರಾಣಿಕ ಕಥೆಗಳು ಮಾತ್ರವಲ್ಲ, ಅವುಗಳಲ್ಲಿ ಸತ್ಯವೂ ಇದೆ ಎನ್ನುವುದಕ್ಕೆ ಆಧುನಿಕ ಕಾಲದಲ್ಲಿ ನಡೆಯುತ್ತಿರುವ ಪಾರಿವಾಳ ಸ್ಪರ್ಧೆಗಳು ಜೀವಂತ ನಿದರ್ಶನ. ಸಾವಿರಾರು ಕಿ.ಮೀ. ದೂರದಿಂದ ಹೊರಡುವ ಪಾರಿವಾಳಗಳು, ತಮ್ಮ ನೆಲೆಗೆ ಮತ್ತೆ ನಿಖರವಾಗಿ ಬಂದು ತಲುಪುವ ಈ ರೋಚಕ ಸ್ಪರ್ಧೆಗಳು ಈಗ ಬೆಂಗಳೂರಿನಲ್ಲೂ ಜನಪ್ರಿಯ. ಇತ್ತೀಚೆಗೆ ದಕ್ಷಿಣ ಭಾರತ ಮಟ್ಟದಲ್ಲಿ ನಡೆದ ಮೊದಲ ಕೂಟದಲ್ಲಿ ಮಹಾನಗರಿಯ ಪಾರಿವಾಳಗಳು ಗೆದ್ದು ಚಾಂಪಿಯನ್‌ ಪಟ್ಟ ಅಲಂಕರಿಸಿವೆ.

Advertisement

ಮಹಾರಾಜ ಕಪ್‌ ಗೆದ್ದ ಮುಖಿ : ಇತ್ತೀಚೆಗೆ ದಕ್ಷಿಣ ಭಾರತ ಮಟ್ಟದಲ್ಲಿ ಪಾರಿವಾಳ ಸ್ಪರ್ಧೆ ಆರಂಭಿಸಲಾಗಿತ್ತು. ಪಾರಿವಾಳಗಳಿಗೆ ನಾಗ್ಪುರದಿಂದ ಬೆಂಗಳೂರಿಗೆ ಒಟ್ಟಾರೆ 880 ಕಿ.ಮೀ. ಕ್ರಮಿಸುವ ಸವಾಲು ಇತ್ತು. ಆಂಧ್ರಪ್ರದೇಶ, ತಮಿಳುನಾಡು, ಕರ್ನಾಟಕ ಸೇರಿದಂತೆ ಒಟ್ಟಾರೆ 180 ಪಾರಿವಾಳಗಳು ಕೂಟದಲ್ಲಿ ಪಾಲ್ಗೊಂಡಿದ್ದವು. ರಾಜ್ಯದ ಕೆಜಿಎಫ್, ಕೋಲಾರ, ತುಮಕೂರು, ಆನೆಕಲ್ಲು ಭಾಗದಿಂದ ಒಟ್ಟಾರೆ 70 ಪಾರಿವಾಳಗಳು ಭಾಗವಹಿಸಿದ್ದವು. ಇದರಲ್ಲಿ ಬೆಂಗಳೂರಿನ ದೇವನಹಳ್ಳಿಯ ರವಿ ಎನ್ನುವವರ ಪಾರಿವಾಳಗಳು (ಪಾರಿವಾಳಗಳ ಹೆಸರು ಮುಖಿ ) 19 ಗಂಟೆಯಲ್ಲಿ ಗುರಿ ಸೇರಿ ಮೊದಲ ಸ್ಥಾನ ಪಡೆದುಕೊಂಡಿವೆ. ಮಾಲಿಕ ವಿ.ರವಿಗೆ ಮಹಾರಾಜ ಕಪ್‌ ಹಾಗೂ ಪ್ರಮಾಣಪತ್ರಗಳನ್ನು ಗೆದ್ದುಕೊಟ್ಟಿವೆ. 2016ರಲ್ಲಿ ರವಿಯವರ ಮುಖೀ ಪಾರಿವಾಳಗಳು 1000 ಕಿ.ಮೀ ಗುರಿಯನ್ನು 16 ಗಂಟೆಯಲ್ಲಿ ಪೂರೈಸಿ ಭಾರತೀಯ ದಾಖಲೆ ನಿರ್ಮಿಸಿದ್ದವು.

ರಾಯಲ್‌ ಎನ್‌ಫೀಲ್ಡ್‌ ಗೆದ್ದ ಬಿ ಸೇಫ್: ಕೆಆರ್‌ಪಿಎಫ್ (ಕರ್ನಾಟಕ ರೇಸಿಂಗ್‌ ಪಿಜನ್‌ ಫೆಡರೇಷನ್‌) ವತಿಯಿಂದ 4ನೇ ರಾಜ್ಯ ಮಟ್ಟದ ಕೂಟವನ್ನು ಆಯೋಜಿಸಲಾಗಿತ್ತು. ಮಹಾರಾಷ್ಟ್ರದ ಬಿತುಲ್‌ನಿಂದ ಬೆಂಗಳೂರಿಗೆ ಒಟ್ಟು 1000 ಕಿ.ಮೀ. ಕ್ರಮಿಸುವ ಗುರಿಯನ್ನು ಪಾರಿವಾಳಗಳಿಗೆ ನೀಡಲಾಗಿತ್ತು. ಇದರಲ್ಲಿ ಬೆಂಗಳೂರಿನ ಶ್ರೀನಿವಾಸನ್‌ಗೆ ಸೇರಿದ ಬಿ ಸೇಫ್ಪಾರಿವಾಳಗಳು ಒಟ್ಟು 21 ಗಂಟೆಯಲ್ಲಿ ಬೆಂಗಳೂರು ಸೇರಿ ಮೊದಲ ಸ್ಥಾನ ಪಡೆದುಕೊಂಡವು. ಮಾಲಿಕ ಶ್ರೀನಿವಾಸನ್‌ಗೆ ಕೂಟದ ಪ್ರಶಸ್ತಿ ರಾಯಲ್‌ ಎನ್‌ಫೀಲ್ಡ್‌ ಬುಲೆಟ್‌ ಬೈಕನ್ನು ಗೆದ್ದುಕೊಟ್ಟವು. ಇನ್ನು 700 ಕಿ.ಮೀ. ವಿಭಾಗದಲ್ಲಿ, ಒಂದೇ ದಿನ ಬೆಂಗಳೂರಿನ ಎಸ್‌.ಎಂ.ರವಿ ಎನ್ನುವವರಿಗೆ ಸೇರಿದ ಪಾರಿವಾಳ; ಗುರಿ ಸೇರಿ ಮೊದಲ ಸ್ಥಾನ ಪಡೆದುಕೊಂಡಿತ್ತು.

ಸ್ಪರ್ಧೆ ನಡೆಯುವುದು ಹೇಗೆ?
ಸಾವಿರಾರು ಕಿ.ಮೀ. ದೂರದ ಗುರಿಯನ್ನು, ಪಾರಿವಾಳಗಳು ನಿಖರವಾಗಿ ಕ್ರಮಿಸುವುದು ಈ ರೇಸ್‌ನ ವಿಶೇಷ. ಹೊಮರ್‌ಎನ್ನುವ ವಿಶಿಷ್ಟ ಜಾತಿಯ ಪಾರಿವಾಳಗಳನ್ನು ಇಲ್ಲಿ ಬಳಸುತ್ತಾರೆ. ಎಷ್ಟೇ ದೂರದಲ್ಲಿ ಬಿಟ್ಟು ಬಂದರೂ ಆ ಪಾರಿವಾಳಗಳು ಮತ್ತೆ ತನ್ನ ಮಾಲಿಕನ ಮನೆಯನ್ನು ಹುಡುಕಿಕೊಂಡು ಬರುವ ಸಾಮರ್ಥ್ಯ ಹೊಂದಿರುತ್ತವೆ. ಮಾಲಿಕ ಪ್ರತಿ ನಿತ್ಯ ಅವುಗಳಿಗೆ ಗುಣಮಟ್ಟದ ತರಬೇತಿ ನೀಡುತ್ತಾರೆ. ಸ್ವಲ್ಪಸ್ವಲ್ಪವೇ ಗುರಿಯನ್ನು ನೀಡಿ ಅಣಿಗೊಳಿಸುತ್ತಾರೆ. ಆ ಬಳಿಕ ದೊಡ್ಡ ಮಟ್ಟದ ಕೂಟಗಳಿಗಾಗಿ ತೆಗೆದುಕೊಂಡು ಹೋಗುತ್ತಾರೆ. ಅಲ್ಲಿಗೆ ಇತರೆ ರಾಜ್ಯದ ಪಾರಿವಾಳಗಳು ಕೂಡ ಬಂದಿರುತ್ತವೆ. ಬಂದಿರುವ ಎಲ್ಲ ಪಾರಿವಾಳಗಳಿಗೂ ಒಂದೇ ಗುರಿ ನೀಡಲಾಗಿರುತ್ತದೆ. ಎಲ್ಲ ತಂಡಗಳ ಪಾರಿವಾಳಗಳ ಬಾಕ್ಸ್‌ಗೂ ಒಂದೊಂದು ಹೆಸರನ್ನು ಕೂಡ ನೀಡಲಾಗುತ್ತದೆ. ಕಡೆಗೆ ಏಕಕಾಲದಲ್ಲಿ ಗೂಡಿನ ಬಾಗಿಲನ್ನು ತೆರೆದು ಬಿಡಲಾಗುತ್ತದೆ. ಅಲ್ಲಿಂದ ರೇಸ್‌ ಆರಂಭವಾಗುತ್ತದೆ.

ಆ್ಯಪ್‌ ಆಧಾರಿತ ಫ‌ಲಿತಾಂಶ
ಕೂಟದ ಆರಂಭಕ್ಕೂ ಮೊದಲು ಇದಕ್ಕಾಗಿಯೇ ರೂಪಿಸಿರುವ ಮೊಬೈಲ್‌ ಆ್ಯಪ್‌ ಮೂಲಕ ಎಲ್ಲ ಪಾರಿವಾಳಗಳ ಗುಂಪಿನ ಫೋಟೋ ತೆಗೆಯಲಾಗುತ್ತದೆ. ಪ್ರತಿ ಪಾರಿವಾಳದ ಕಾಲಿಗೆ ರಬ್ಬರ್‌ ಆಧಾರಿತ ಚಿಪ್‌ ಅಳವಡಿಸಿರಲಾಗುತ್ತದೆ. ಈ ಚಿಪ್‌ನಲ್ಲಿ ಫೋಟೋ ತೆಗೆದ ಸಮಯ ದಾಖಲಾಗಿರುತ್ತದೆ. ಗುರಿ ಸೇರಿದಾಗ ಪಾರಿವಾಳದ ಕಾಲಿನ ಫೊಟೋವನ್ನು ಮತ್ತೂಮ್ಮೆ ಆ್ಯಪ್‌ ಸಹಾಯದಿಂದ ತೆಗೆಯಲಾಗುತ್ತದೆ. ಆಗ ಪಾರಿವಾಳ ಮನೆಗೆ ತಲುಪಿದ ಸಮಯ ದಾಖಲಾಗುತ್ತದೆ. ಇದರ ಸಹಾಯದಿಂದಲೇ ವಿಜೇತ ಪಾರಿವಾಳಗಳನ್ನು ಸಂಘಟಕರು ನಿರ್ಧರಿಸುತ್ತಾರೆ.

Advertisement

ಪಾರಿವಾಳಕ್ಕೆ ರಾಜ ಮರ್ಯಾದೆ
ಪಾರಿವಾಳಗಳು ವರ್ಷವಿಡೀ ಮಾಲಿಕನಿಂದ ರಾಜ ಮರ್ಯಾದೆಯನ್ನೇ ಪಡೆಯುತ್ತವೆ. ಓರ್ವ ಕ್ರೀಡಾಪಟುವನ್ನು ತರಬೇತುದಾರ ಸಿದ್ಧಪಡಿಸುವ ರೀತಿಯಲ್ಲೇ ಪಾರಿವಾಳಗಳಿಗೆ ಮುತುವರ್ಜಿಯಿಂದ ತರಬೇತಿ ನೀಡಲಾಗುತ್ತದೆ. ಅದಕ್ಕೆ ಪ್ರತಿ ದಿನ ಜೋಳ, ಗೋಧಿ, ಮುಸುಕಿನ ಜೋಳ, ಕಡ್ಲೆಕಾಯಿ ಬೀಜವನ್ನು ಮಿಶ್ರ ಮಾಡಿ ಕೊಡಲಾಗುತ್ತದೆ. 100ರಿಂದ 500 ಕಿ.ಮೀ. ಹಾರುವ ಪಾರಿವಾಳಕ್ಕೆ ಹೆಚ್ಚು ಗ್ಲೂಕೋಸ್‌ ಅಂಶ ನೀಡಲಾಗುತ್ತದೆ. 500ರಿಂದ 1000 ಕಿ.ಮೀ. ಹಾರುವ ಸಾಮರ್ಥ್ಯವುಳ್ಳ ಪಾರಿವಾಳಕ್ಕೆ ಹೆಚ್ಚು ಪ್ರೋಟಿನ್‌ಯುಕ್ತ ಆಹಾರ ಕೊಡಲಾಗುತ್ತದೆ.

ಸವಾಲುಗಳನ್ನು ಎದುರಿಸಿ ಗೆಲ್ಲುವ ಮೇಘದೂತರು
ಸಾವಿರ ಕಿ.ಮೀ. ಕ್ರಮಿಸುವ ಪಾರಿವಾಳಗಳಿಗೆ ದಾರಿಯುದ್ಧಕ್ಕೂ ಹಲವಾರು ಸವಾಲುಗಳಿರುತ್ತದೆ. ಈ ಬಗ್ಗೆ ಉದಯವಾಣಿ ಜತೆ ಮುಖೀ ಪಾರಿವಾಳದ ಮಾಲಿಕ ರವಿ ಹೇಳಿದ್ದು ಹೀಗೆ, ದಕ್ಷಿಣ ವಲಯ ಕೂಟದಲ್ಲಿ ಭಾಗವಹಿಸಿದ್ದ ನನ್ನ ಮೂವತ್ತು ಪಾರಿವಾಳಗಳು ಮನೆಗೆ ಸೇರಿವೆ. ಆರಂಭದಲ್ಲಿ 10 ಪಾರಿವಾಳಗಳು ಬೇಗ ಮನೆ ಸೇರಿದ್ದ‌ವು. ಉಳಿದಂತೆ ಹೆಚ್ಚು ಬಿಸಿಲು ಇದ್ದುದರಿಂದ ಕೆಲವು ಪಾರಿವಾಳಗಳು ತಡವಾಗಿ ಮನೆಗೆ ಬಂದಿವೆ. ಬದುಕಿದ್ದರೆ 10 ವರ್ಷವಾದರೂ ಪಾರಿವಾಳ ತನ್ನ ಮನೆಗೆ ಬಂದು ಸೇರುತ್ತವೆ.ಇನ್ನು ಒಟ್ಟಾರೆ ರೇಸ್‌ ಹಾದಿಯನ್ನು ನೋಡುವುದಾದರೆ ಪಾರಿವಾಳಗಳಿಗೆ ಭಾರೀ ಸವಾಲು ಇರುತ್ತದೆ. ಹದ್ದುಗಳು ದಾಳಿಯ ಭಯವಾದರೆ ಬಿಸಿಲಿನ ಝಳದ ಸಮಸ್ಯೆ ಮತ್ತೂಂದು ಕಡೆ. ಅಲ್ಲದೆ ಇತ್ತೀಚೆಗೆ ಮೊಬೈಲ್‌ ಟವರ್‌ ಸಿಗ್ನಲ್ಸ್‌ ನಿಂದ ಹಕ್ಕಿಗಳಿಗೆ ಅಪಾಯವಾಗುತ್ತಿದೆ. ಜತೆಗೆ ಕೆಲವರು ಹಣಕ್ಕಾಗಿ ಪಾರಿವಾಳಗಳನ್ನು ಬಲೆ ಹಾಕಿ ಹಿಡಿಯುತ್ತಾರೆ. ಇನ್ನೂ ಕೆಲವು ಹದ್ದುಗಳ ದಾಳಿಗೆ ಬಲಿಯಾಗುತ್ತವೆ. ಇದೆಲ್ಲವನ್ನು ಮೀರಿ ಪಾರಿವಾಳ ತನ್ನ ಗುರಿ ಸೇರುತ್ತದೆ ಎಂದರು.

ಈ ಕ್ರೀಡೆ ಜೂಜು ಅಲ್ಲ
ಪಾರಿವಾಳಗಳಲ್ಲಿ 2 ವಿಧ. ಮೊದಲನೆಯದು ಹೈ ಫ್ಲೈಯರ್‌ ಮತ್ತೂಂದು ಲಾಂಗ್‌ ಡಿಸ್ಟೆನ್ಸ್‌. ಹೈ ಫ್ಲೈಯರ್‌ ಮನೆಯ ಮೇಲೆಯೇ ಗಂಟೆ ಗಟ್ಟಲೇ ಹಾರುತ್ತದೆ. ಇದನ್ನು ಕೆಲವು ಕಡೆ ಜೂಜಿನಲ್ಲಿ ಬಳಸುತ್ತಾರೆ. ಆದರೆ ನಮ್ಮ ಹೊಮರ್‌ ಲಾಂಗ್‌ ಡಿಸ್ಟೆನ್ಸ್‌ ಹಾರುತ್ತದೆ. 500 ಕಿ.ಮೀ. 700 ಕಿ.ಮೀ. 1000 ಕಿ.ಮೀ.ವರೆಗೆ ಹಾರುವ ಸಾಮರ್ಥ್ಯವಿದೆ. ಈ ಕ್ರೀಡೆಯನ್ನು ಅನೇಕರು ತಪ್ಪಾಗಿ ಕಲ್ಪಿಸಿದ್ದಾರೆ. ಇಲ್ಲಿ ಜೂಜಿಲ್ಲ. ಗೆದ್ದವರಿಗೆ ಟ್ರೋಫಿ, ಸರ್ಟಿಫಿಕೆಟ್‌ ಮಾತ್ರ ನೀಡಿ ಗೌರವಿಸಲಾಗುತ್ತದೆ.
-ವೈ.ಸುರೇಶ್‌, ಅಧ್ಯಕ್ಷ, ಕರ್ನಾಟಕ ರೇಸಿಂಗ್‌ ಪಿಜನ್‌ ಫೆಡರೇಷನ್‌

Advertisement

Udayavani is now on Telegram. Click here to join our channel and stay updated with the latest news.

Next