Advertisement
ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ (ಕಾಸಿಯಾ) ನಗರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ “ಶ್ರೇಷ್ಠತೆ ಮತ್ತು ನಾವೀನ್ಯತೆ ಕೇಂದ್ರ’ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ರೈತರ ಸಾಲ ಮನ್ನಾ ಮಾಡಿದರೆ ಕಮೀಷನ್ ಸಿಗುವುದಿಲ್ಲ ಎನ್ನುತ್ತಾರೆ. ನನ್ನ ನಿರ್ಧಾರದಿಂದ ಪಲಾಯನ ಮಾಡುವುದಿಲ್ಲ.
Related Articles
Advertisement
ಅಧಿಕಾರಿಗಳು ಹೇಗೆ ಕೆಲಸ ಮಾಡುತ್ತಾರೆ ಎಂದು ಗಮನಿಸುತ್ತೇನೆ. ನನ್ನದೇ ಮೂಲಗಳಿಂದ ಮಾಹಿತಿ ಪಡೆಯುತ್ತೇನೆ. ಒಳ್ಳೆಯ ಅಧಿಕಾರಿಗಳನ್ನು 3- 4 ತಿಂಗಳಿಗೊಮ್ಮೆ ವರ್ಗಾವಣೆ ಮಾಡಿದರೆ ಅವರು ಸರ್ಕಾರದಲ್ಲಿ ಹೇಗೆ ನಂಬಿಕೆಯಿಟ್ಟು ಕೆಲಸ ಮಾಡುತ್ತಾರೆ. ದ್ವೇಷ, ಜಾತಿ ಹೆಸರಿನಲ್ಲಿ ಆಡಳಿತ ನಡೆಸದೆ ಉತ್ತಮ ಆಡಳಿತ ನೀಡುತ್ತೇನೆ. ಜನಸ್ನೇಹಿ ಸರ್ಕಾರವಾಗಿ ಕೆಲಸ ಮಾಡುತ್ತೇನೆ ಎಂದು ಹೇಳಿದರು.
ಸಣ್ಣ ರೈತರು ಹಾಗೂ ಸಣ್ಣ ಕೈಗಾರಿಕೋದ್ಯಮಿಗಳ ಪರಿಸ್ಥಿತಿ ಒಂದೇ ಇದೆ. ಸಣ್ಣ ಕೈಗಾರಿಕೆಗಳ ಸಂಘವು 28 ಬೇಡಿಕೆಯಿಟ್ಟಿದ್ದು, ಇದರಲ್ಲಿ ಕೆಲವನ್ನು ಬಜೆಟ್‌ನಲ್ಲಿ ಅಳವಡಿಸಿಕೊಳ್ಳಲು ತೊಂದರೆ ಇಲ್ಲ. ಒಂದೆರಡು ತಿಂಗಳಿಗೊಮ್ಮೆ ಸಭೆ ಸೇರಿ ಚರ್ಚಿಸೋಣ. ಉದ್ಯಮಕ್ಕೆ ಪೂರಕವಾದ ಕಾರ್ಯಕ್ರಮಗಳನ್ನು ಹಂತ ಹಂತವಾಗಿ ಕಾರ್ಯಗತಗೊಳಿಸೋಣ. ತಮ್ಮನ್ನು ನಿರ್ಲಕ್ಷಿಸಲಾಗುತ್ತಿದೆ ಎಂಬ ಭಾವನೆ ಬೇಡ ಎಂದು ಸಣ್ಣ ಕೈಗಾರಿಕೋದ್ಯಮಿಗಳಿಗೆ ಹೇಳಿದರು.
ಲಕ್ಷಾಂತರ ಕುಟುಂಬಗಳಿಗೆ ಉದ್ಯೋಗ ನೀಡುವ ಸಣ್ಣ ಕೈಗಾರಿಕಾ ವಲಯಕ್ಕೆ ಸರ್ಕಾರ ಆದ್ಯತೆ ನೀಡಲಿದೆ. ಬೆಂಗಳೂರಿನಲ್ಲಿ ಕೇಂದ್ರೀಕೃತವಾಗಿರುವ ಉದ್ಯಮಗಳನ್ನು 2ನೇ ಹಂತದ ನಗರಗಳಿಗೆ ಸ್ಥಳಾಂತರಿಸಿ, ಅದಕ್ಕೆ ಅಗತ್ಯ ನೆರವು ನೀಡುವ ಬಗ್ಗೆಯೂ ಚಿಂತನೆ ಇದೆ ಎಂದು ತಿಳಿಸಿದರು.
ಸಣ್ಣ ಕೈಗಾರಿಕಾ ಸಚಿವ ಎಸ್.ಆರ್.ಶ್ರೀನಿವಾಸ್, ಸಣ್ಣ ಕೈಗಾರಿಕೆಗಳನ್ನು ಸಂರಕ್ಷಿಸಿ ಉತ್ತೇಜಿಸುವ ಸಲುವಾಗಿ ಹೆಚ್ಚಿನ ಅನುದಾನ ನೀಡುವಂತೆ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದ್ದೇನೆ. ಕೈಗಾರಿಕೋದ್ಯಮಿಗಳ ಸಮಸ್ಯೆಗಳನ್ನು ಬಗೆಹರಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ ಎಂದು ಹೇಳಿದರು.
ಕಾಸಿಯಾ ಅಧ್ಯಕ್ಷ ಹನುಮಂತೇಗೌಡ, ಪ್ರತಿ ಜಿಲ್ಲೆ, ತಾಲ್ಲೂಕುಗಳಲ್ಲಿ ಕೈಗಾರಿಕೆಗಳಿಗೆ ನಿವೇಶನ ಹಂಚಿಕೆ ಮಾಡುವ ಅಧಿಕಾರವನ್ನು ಕೆಎಸ್‌ಎಸ್‌ಐಡಿಸಿಗೆ ನೀಡಬೇಕು. ಕೆಲ ಕೈಗಾರಿಕಾ ಪ್ರದೇಶದಲ್ಲಿ ಕೊಳವೆ ಬಾವಿ ಕೊರೆಸಲು ಕೂಡ ಅವಕಾಶವಿಲ್ಲದಂತಾಗಿದೆ.
ಸಣ್ಣ ಕೈಗಾರಿಕೆದಾರರ ಎಲ್ಲ ಸಮಸ್ಯೆಗಳನ್ನು ಬಗೆಹರಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು. ಇದೇ ಸಂದರ್ಭದಲ್ಲಿ ಕೈಗಾರಿಕೋದ್ಯಮಿಗಳು ಹೊಸಕೋಟೆ, ಯಲಹಂಕ ಸೇರಿದಂತೆ ಇತರೆ ಕೈಗಾರಿಕಾ ಪ್ರದೇಶದಲ್ಲಿ ಕುಡಿಯುವ ನೀರು, ರಸ್ತೆ, ಶೌಚಾಲಯ ವ್ಯವಸ್ಥೆಯಿಲ್ಲ ಎಂದು ಅಳಲು ತೋಡಿಕೊಂಡರು.
ಶಾಸಕ ಕೆ.ಗೋಪಾಲಯ್ಯ, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಠಾರಿಯಾ, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಆಯುಕ್ತ ದರ್ಪಣ್ ಜೈನ್, ಕೆಐಎಡಿಬಿ ಸಿಇಒ ಎನ್.ಜಯರಾಂ, ಕೆಎಸ್‌ಎಸ್‌ಐಡಿಸಿ ವ್ಯವಸ್ಥಾಪಕ ನಿರ್ದೇಶಕ ವಿ.ಪಿ.ಇಕ್ಕೇರಿ ಇತರರು ಉಪಸ್ಥಿತರಿದ್ದರು.
ವಸೂಲಿ ಮಾಡಿ ಹಣ ನೀಡಬೇಕಿಲ್ಲ!: ಠಾಣೆಗಳಲ್ಲಿ ವಸೂಲಿ ಮಾಡಿ ನನಗಾಗಲಿ, ಗೃಹ ಸಚಿವರಾದ ಉಪ ಮುಖ್ಯಮಂತ್ರಿಗಳಿಗಾಗಲಿ ಹಣ ನೀಡಬೇಕಿಲ್ಲ. ಪೊಲೀಸ್ ಠಾಣೆಯು ದೇವಸ್ಥಾನಕ್ಕಿಂತ ಪವಿತ್ರವಾದ ಸ್ಥಳ. ಸ್ಕಿಲ್‌ಗೇಮ್, ನೈಟ್‌ಕ್ಲಬ್‌ನಂತಹ ಕಾನೂನುಬಾಹಿರ ಚಟುವಟಿಕೆಗಳಿಗೆ ಅಕ್ರಮವಾಗಿ ಅವಕಾಶ ನೀಡಬೇಡಿ ಎಂದು ಹೇಳಿದ್ದೇನೆ.
ಇವರು ವಸೂಲಿ ಮಾಡದಂತೆ ನಾನು ಗೇಟ್ ಕಾಯಬೇಕೆ. ಇಂತಹ ಚಟುವಟಿಕೆಯಲ್ಲಿ ತೊಡಗದಂತೆ ಸೂಚಿಸಿದ್ದೇನೆ. ಹಂತ ಹಂತವಾಗಿ ಎಲ್ಲವನ್ನು ಸರಿಪಡಿಸಲು ಪ್ರಯತ್ನಿಸುತ್ತೇನೆ. ಪಲಾಯನ ಮಾಡುವುದಿಲ್ಲ ಎಂದು ಸಿಎಂ ತಿಳಿಸಿದರು.
ಕತೆ ಹೇಳುವವರಿಗೆ ನನ್ನ ಕಷ್ಟ ಗೊತ್ತಿಲ್ಲ: ಸರ್ಕಾರದ ನಾನಾ ಇಲಾಖೆಗಳಲ್ಲಿ ಹೊರಗುತ್ತಿಗೆಯಡಿ ಸಾಕಷ್ಟು ಕಾರ್ಮಿಕ, ಸಿಬ್ಬಂದಿಯನ್ನು ನೇಮಿಸಿಕೊಳ್ಳಲಾಗಿದೆ. ಅವರೆಲ್ಲಾ ಕಾಯಂಗೊಳಿಸುವಂತೆ ಒತ್ತಾಯಿಸುತ್ತಿದ್ದಾರೆ. ಇನ್ನೊಂದೆಡೆ 6ನೇ ವೇತನ ಆಯೋಗದ ಶಿಫಾರಸಿನಂತೆ ಸರ್ಕಾರಿ ನೌಕರರ ವೇತನ ಶೇ.30ರಷ್ಟು ಹೆಚ್ಚಳವಾಗಿದ್ದು, ಇದರಿಂದ 17,000 ಕೋಟಿ ರೂ. ಹೊರೆಯಾಗಿದೆ.
ಹೀಗಿರುವಾಗ ಅಧಿಕಾರಕ್ಕೆ ಬಂದ 24 ಗಂಟೆಯಲ್ಲಿ ರೈತರ ಸಾಲ ಮನ್ನಾ ಭರವಸೆ ಈಡೇರಿಸಿಲ್ಲ ಎಂದು ಹೇಳುತ್ತಾರೆ. ಕತೆ ಹೇಳುವವರಿಗೆ ನನ್ನ ಕಷ್ಟ ಗೊತ್ತಿಲ್ಲ. ಸ್ವತಂತ್ರ ಸರ್ಕಾರ ರಚನೆಯಾಗಿದ್ದರೆ ಯಾರನ್ನು ಕೇಳುವ ಅಗತ್ಯವಿರಲಿಲ್ಲ. ಏನು ಬೇಕಾದರೂ ಮಾಡಬಹುದಿತ್ತು. ಅಧಿಕಾರಿಗಳಿಗೂ ಕಷ್ಟವಿದೆ ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದರು.
ಆರ್ಥಿಕ ಹೊಣೆಗಾರಿಕೆ ಕಾಯ್ದೆ ಮಿತಿಯೊಳಗೆ ಉಳಿತಾಯ ಬಜೆಟ್ ಮಂಡಿಸಬೇಕಿದೆ. ಈಗಾಗಲೇ ಸಾಲ ಪ್ರಮಾಣ ಗರಿಷ್ಠ ಮಿತಿ ತಲುಪಿದ್ದು, ಹೊಸ ಸಾಲ ಮಾಡಲು ಅವಕಾಶವೇ ಇಲ್ಲದಂತಾಗಿದೆ. ಆರ್ಥಿಕ ಪರಿಸ್ಥಿತಿಗೆ ಅನುಗುಣವಾಗಿ ಖಜಾನೆ ಹಣವನ್ನು ಹೇಗೆ ವಿಂಗಡಿಸಬೇಕೆಂಬ ಸವಾಲಿದೆ. ಇದರ ನಡುವೆ ರೈತರ ಸಾಲ ಮನ್ನಾ ಮಾಡಬೇಕಿದೆ ಎಂದು ಸರ್ಕಾರದ ಆರ್ಥಿಕ ಸ್ಥಿತಿಗತಿಯನ್ನು ವಿವರಿಸಿದರು.
ಮೈಸೂರು ಪೇಟ ಅರಸರ ಕಾಲದಿಂದ ಬಂದಿರುವ ಸಂಸ್ಕೃತಿ. ಆದರೆ ನಾನು ಎಲ್ಲಿಯೂ ಮೈಸೂರು ಪೇಟ ಹಾಕಿಸಿಕೊಳ್ಳುವುದಿಲ್ಲ. ಈ ಹಿಂದೆ 20 ತಿಂಗಳ ಕಾಲ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ್ದೇನೆ. ಈಗಲೂ ಮುಖ್ಯಮಂತ್ರಿಯಾಗಿದ್ದೇನೆ. ನನ್ನ ಚಿಂತನೆಯನ್ನು ಎಷ್ಟರ ಮಟ್ಟಿಗೆ ಜಾರಿಗೊಳಿಸಿ ಅದರಲ್ಲಿ ಯಶಸ್ವಿಯಾಗಿದ್ದೇನೆ ಎಂದು ನನಗೆ ತೃಪ್ತಿಯಾದ ದಿನ ಮೈಸೂರು ಪೇಟ ಹಾಕಿಸಿಕೊಳ್ಳುತ್ತೇನೆ. -ಎಚ್.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ