Advertisement

ತಾಳಿ ಲೆಕ್ಕ ಕೇಳಿದರೆ ದೇವಸ್ಥಾನದ ಬಾಗಿಲೇ ಬಂದ್‌

09:05 PM Feb 23, 2020 | Lakshmi GovindaRaj |

ನಂಜನಗೂಡು: ಸಮೀಪದ ತಗಡೂರಿನ ಕುರುಬರ ಸಮುದಾಯದಲ್ಲೊಂದು ವಿಚಿತ್ರ ಸಂಪ್ರದಾಯವಿದ್ದು, ಹೊಸದಾಗಿ ಮದುವೆಯಾದ ಹೆಣ್ಣುಮಗಳು ಪತಿ ಕಟ್ಟಿದ ತಾಳಿಯನ್ನು ವರ್ಷದೊಳಗಾಗಿ ದೇವಸ್ಥಾನದ ಹುಂಡಿಗೆ ಹಾಕಬೇಕು. ಹೀಗೆ ಇಲ್ಲಿವರೆಗೂ ಸಹಸ್ರಾರು ಹೆಣ್ಣು ಮಕ್ಕಳು ತಮ್ಮ ಪತಿ ಕಟ್ಟಿದ ತಾಳಿಯನ್ನು ಹೀಗೆ ಹುಂಡಿಯೊಳಗೆ ಹಾಕಿದ್ದಾರೆ.

Advertisement

ಆದರೆ ಈ ವರೆಗೂ ತಾಳಿಗಳ ಲೆಕ್ಕ ಕೇಳದ ಕುರುಬ ಸಮುದಾಯದವರು ಎಚ್ಚೆತ್ತುಕೊಂಡು, ಭಾನುವಾರ ದೇವಸ್ಥಾನದ ಅರ್ಚಕರನ್ನು ತಾಳಿಗಳ ಲೆಕ್ಕ ಕೇಳಿದ್ದಾರೆ. ಹೀಗೆ ತಾಳಿಗಳ ಲೆಕ್ಕ ಕೇಳಿದ ತಕ್ಷಣವೇ ಅರ್ಚಕರು, ದೇವಸ್ಥಾನ ಬೀಗ ಜಡಿದು ಬಾಗಿಲು ಬಂದ್‌ ಮಾಡಿಕೊಂಡಿದ್ದಾರೆ. ಇದರಿಂದ ರೊಚ್ಚಿಗೆದ್ದಿರುವ ಸಮುದಾಯದವರು, ಅರ್ಚಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಏನಿದು ಸಂಪ್ರದಾಯ?: ಗ್ರಾಮದಲ್ಲಿ ಸುಮಾರು ನೂರಾರು ವರ್ಷಗಳಿಂದ ಈ ಸಂಪ್ರದಾಯ ನಡೆದುಕೊಂಡು ಬಂದಿದೆ. ಅಲ್ಲಿಂದ ಇಲ್ಲಿವರೆಗೂ ಸುಮಾರು ಸಾವಿರಕ್ಕೂ ಹೆಚ್ಚು ಹೆಣ್ಣು ಮಕ್ಕಳು, ತಮ್ಮ ತಾಳಿಗಳನ್ನು ಹುಂಡಿಗೆ ಹಾಕಿದ್ದಾರೆ. ಭಾನುವಾ ಭಕ್ತರು ಹುಂಡಿಯಲ್ಲಿರುವ ತಾಳಿಗಳ ಲೆಕ್ಕ ಕೇಳಿರುವುದು ಗ್ರಾಮದಲ್ಲಿ ಭಕ್ತರು ಹಾಗೂ ಅರ್ಚಕರು ಗುಂಪಿನ ನಡುವೆ ವಿವಾದಕ್ಕೆ ಕಾರಣವಾಗಿದೆ.

ದೇವಸ್ಥಾನದ ಆಡಳಿತವನ್ನು ಟ್ರಸ್ಟ್‌ಗೆ ವಹಿಸಿ: ಧರೆಗೆ ದೊಡ್ಡವರು, ಮಂಟೇಸ್ವಾಮಿ, ಮಲ್ಲೇಶ್ವರ, ಹಿರಿತಂದಮ್ಮ, ದೊಡ್ಡಮಾರಮ್ಮ, ಮೂಗೂ ಮಾರಮ್ಮ , ಸೋಣಮಸಣಮ್ಮ, ಪಣಿಕೇರಿ ಮಸಣಿ ದೇವಾಲಯಗಳ ಅಭಿವೃದ್ಧಿಗೆ ಟ್ರಸ್ಟ್‌ ರಚಿಸಲಾಗಿದೆ. ಆದರೆ ಈವರೆಗೂ ದೇವಸ್ಥಾನಗಳ ಆಡಳಿತವನ್ನು ಟ್ರಸ್ಟ್‌ಗೆ ನೀಡಿಲ್ಲ. ಇಲ್ಲಿ ಎರಡು ಗುಂಪುಗಳಿದ್ದು, ಒಂದು ದೇವಸ್ಥಾನದ ಆಡಳಿತ ಟ್ರಸ್ಟ್‌ಗೆ ನೀಡಬೇಕು ಎಂದು ಬಯಸಿದರೆ, ಇನ್ನೊಂದು ಗುಂಪು ಇದನ್ನು ವಿರೋಧಿಸುತ್ತದೆ.

ಬಾಗಿಲು ತೆರೆಯದ್ದರಿಂದ ಭಕ್ತರ ಆಕ್ರೋಶ: ಶಿವರಾತ್ರಿ ಮಾರನೇ ದಿನವೇ ವಿವಾದ ಉಂಟಾಗಿದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದ ಭಕ್ತರಿಗೆ ದೇವಸ್ಥಾನದ ಬಾಗಿಲು ಮುಚ್ಚಿದ್ದರಿಂದ ನಿರಾಸೆಯುಂಟಾಗಿದೆ. ಕೆಲವರು ಬಾಗಿಲು ತೆರೆಸಲು ಯತ್ನಿಸಿದ್ದರಿಂದ, ಎರಡು ಗುಂಪುಗಳ ನಡುವೆ ವಾಗ್ವಾದ ನಡೆದಿದೆ.

Advertisement

ಇದರಿಂದಾಗಿ ಭಕ್ತರು ಆಕ್ರೋಶ ವಕ್ತಪಡಿಸಿದ್ದಾರೆ. ಭಾನುವಾರವೂ ಅದೇ ವಾತಾವಾರಣ ಮುಂದುವರಿದಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸರನ್ನು ನಿಯೋಜಿಸಿದ್ದರಿಂದ ಎರಡೂ ಗುಂಪುಗಳನ್ನು ಚದರಿಸಿದ್ದಾರೆ. ಬಳಿಕ ವಿಷಯ ತಿಳಿದ ಅಧಿಕಾರಿಗಳಾದ ಡಿವೈಎಸ್‌ಪಿ ಪ್ರಭಾಕರ ಶಿಂಧೆ, ತಹಶೀಲ್ದಾರ್‌ ಮಹೇಶ್‌ಕುಮಾರ್‌ ಸೇರಿ ಹೆಚ್ಚಿನ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದರು.

ಲೆಕ್ಕ ಕೊಡಲೇಬೇಕು-ಶಾಂತಲಾ: ಸಪ್ತ ದೇವಸ್ಥಾನಗಳು ಅರ್ಚಕರು ಹಾಗೂ ಅವರ ಗುಂಪಿಗೆ ಸೇರಿದ ಆಸ್ತಿಯಲ್ಲ. ಇದು ನಮ್ಮ ಸಮಾಜ ಹಾಗೂ ಸಾರ್ವಜನಿಕರ ಸ್ವತ್ತಾಗಿದ್ದು, ನಮ್ಮ ಸಮುದಾಯದ ಪರಂಪರೆಯಂತೆ ಎಲ್ಲ ಹೆಣ್ಣುಮಕ್ಕಳು ಮದುವೆಯಾದ ವರ್ಷದೊಳಗೆ ತಮ್ಮ ಪತಿ ಕಟ್ಟಿದ ಮೊದಲ ತಾಳಿಯನ್ನು ದೇವಸ್ಥಾನದ ಹುಂಡಿಗೆ ಹಾಕುತ್ತಾರೆ. ಬಳಿಕ ಬೇರೆ ತಾಳಿ ಧರಿಸುತ್ತೇವೆ.

2ನೇ ಬಾರಿಗೆ ತಾಳಿ ಮಾಡಿಸಿಕೊಳ್ಳಲು ಶಕ್ತಿಯಿಲ್ಲದವರು, ದೇವಸ್ಥಾನಕ್ಕೆ ಅರ್ಪಿಸಿದ ತಾಳಿಯ ನೆನಪಲ್ಲೆ ಇದ್ದಾರೆ. ನಾವು ಭಕ್ತಿಯಿಂದ ಅರ್ಪಿಸಿದ ತಾಳಿ ದೇವರಿಗೆ ಹೊರತು ಗುಡ್ಡಪ್ಪಂದಿರಿಗಲ್ಲ. ಸಮಾಜದವರು ಸಪ್ತ ದೇವಾಲಯಗಳಿಗೆ ಅರ್ಪಿಸಿದ ಬಂಗಾರ, ಬೆಳ್ಳಿ ಹಾಗೂ ನಗದಿಗೆ ಲೆಕ್ಕ ಒಪ್ಪಿಸಬೇಕು ಎಂದು ಗ್ರಾಮಸ್ಥೆ ಶಾಂತಲಾ ಆಗ್ರಹಿಸಿದ್ದಾರೆ.

ಸಪ್ತ ದೇವಸ್ಥಾನಗಳು ಸುಮಾರು 25,000 ಕುಟುಂಬಗಳಿಗೆ ಸೇರಿವೆ. ಹೀಗಾಗಿ ನಮ್ಮ ಸಮುದಾಯದ ಪ್ರಶ್ನಾತೀತ ನಾಯಕ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಶಾಸಕ ಡಾ ಯತೀಂದ್ರ ಸಿದ್ಧರಾಮಯ್ಯ ಮಧ್ಯೆ ಪ್ರವೇಶಿಸಿ ಸಪ್ತ ದೇವಾಲಯಗಳನ್ನು ಕುಟುಂಬದ ಹಿಡಿತದಿಂದ ತಪ್ಪಿಸಿ ಸಮುದಾಯದ ಆಡಳಿತಕ್ಕೆ ಒಪ್ಪಿಸಬೇಕು.
-ಕರಿ ಬಸವೇಗೌಡ, ಸಪ್ತ ದೇವಸ್ಥಾನಗಳ ಅಭಿವೃದ್ಧಿ ಟ್ರಸ್ಟ್‌ನ ಖಜಾಂಚಿ

Advertisement

Udayavani is now on Telegram. Click here to join our channel and stay updated with the latest news.

Next