ಪುರಾಣ ಪ್ರಸಿದ್ಧ ಶಕ್ತಿ ದೇವತೆ, ಹಾಸನದ ಹಾಸನಾಂಬೆಯ ದರ್ಶನ ಸಿಗುವುದು ವರ್ಷಕ್ಕೊಮ್ಮೆ ಮಾತ್ರ. ಅಶ್ವಯುಜ ಮಾಸದ ಪೌರ್ಣಮೀ ನಂತರ ಬರುವ ಮೊದಲ ಗುರುವಾರ ಹಾಸನಾಂಬ ದೇಗುಲದ ಬಾಗಿಲು ತೆರೆದರೆ, ಬಲಿಪಾಡ್ಯಮಿಯ ಅಂದರೆ, ದೀಪಾವಳಿ ಹಬ್ಬದ ಮರುದಿನ ಬಾಗಿಲು ಮುಚ್ಚುವುದು ಸಂಪ್ರದಾಯ. ವರ್ಷದಲ್ಲಿ 7 ದಿನಕ್ಕಿಂತ ಕಡಿಮೆ ಇಲ್ಲದಂತೆ, 14 ದಿನ ಮೀರದಂತೆ ಭಕ್ತರಿಗೆ ದರ್ಶನ ಭಾಗ್ಯ ಕರುಣಿಸುವುದು ಇಲ್ಲಿನ ವಿಶೇಷ.
ಹಾಸನಾಂಬೆ ದೇಗುಲವನ್ನು ಚೋಳ ಅರಸ ಅಧಿಪತಿ ಬುಕ್ಕನಾಯಕನ ವಂಶಸ್ಥರಾದ ಕೃಷ್ಣಪ್ಪ ನಾಯಕ ಮತ್ತು ಸಂಜೀವ ನಾಯಕ ನಿರ್ಮಿಸಿದರೆಂಬ ಐತಿಹ್ಯವಿದೆ. ಹುತ್ತದ ರೂಪದ ನಿರಾಕಾರಿ ಹಾಸನಾಂಬೆ ಮತ್ತು ಶ್ರೀ ಸಿದ್ದೇಶ್ವರ ದೇಗುಲದ ಸುತ್ತ ಕೋಟೆಯ ನಿರ್ಮಾಣವಿತ್ತು. ದೇಗುಲಕ್ಕೆ ಆಧುನಿಕತೆಯ ಸ್ಪರ್ಶ ಸಿಕ್ಕಿದ್ದು, ಗರ್ಭಗುಡಿಯ ಹೊರತಾಗಿ ಕೆಲವು ಮಾರ್ಪಾಡುಗಳಾಗಿವೆ. ರಾಜಗೋಪುರವೂ ಚೆಂದದ ಆಕರ್ಷಣೆ.
ಪೌರಾಣಿಕ ಕತೆಯೇನು?: ಹಾಸನಾಂಬೆ ಸಪ್ತ ಮಾತೃಕೆಯರ ಒಂದು ರೂಪ. ಸಪ್ತ ಮಾತೃಕೆಯರಾದ ಬ್ರಾಹ್ಮೀದೇವಿ, ಮಹೇಶ್ವರಿ, ಕೌಮಾರಿ, ವೈಷ್ಣವಿ, ವಾರಾಹಿ, ಇಂದ್ರಾಣಿ ಮತ್ತು ಚಾಮುಂಡಿ ವಾರಾಣಸಿಯಿಂದ ದಕ್ಷಿಣಕ್ಕೆ ವಿಹಾರಾರ್ಥವಾಗಿ ಬಂದರಂತೆ. ಆಗಿನ ಸಿಂಹಾಸನಪುರಿಗೆ (ಹಾಸನ) ಬಂದಾಗ, ಪ್ರಕೃತಿಯ ಸೌಂದರ್ಯಕ್ಕೆ ಮನಸೋತು ಇಲ್ಲಿಯೇ ನೆಲೆ ನಿಂತರೆಂಬುದು ಪುರಾಣದ ಹಿನ್ನೆಲೆ. ಸಪ್ತ ಮಾತೃಕೆಯರ ಪೈಕಿ ವೈಷ್ಣವಿ, ಮಹೇಶ್ವರಿ, ಕೌಮಾರಿ ಹುತ್ತದ ಮಾದರಿಯಲ್ಲಿ ನೆಲೆಸಿದ ಸ್ಥಳವೇ ಹಾಸನಾಂಬೆ ದೇಗುಲ. ಈ ನಂಬಿಕೆಗೆ ಪುಷ್ಟಿ ನೀಡುವಂತೆ ಹಾಸನಾಂಬೆಯ ಗರ್ಭಗುಡಿಯಲ್ಲಿ ಮೂರು ಹುತ್ತದ ರೂಪಗಳಿವೆ.
ವರ್ಷಕ್ಕೊಮ್ಮೆ ದರ್ಶನವೇಕೆ?: ಇದಕ್ಕೂ ಒಂದು ಕತೆಯಿದೆ. ಕಾಶಿಯಿಂದ ಸಪ್ತ ಮಾತೃಕೆಯರ ಜೊತೆ ಅವರ ಕಿರಿಯ ಸಹೋದರ ಸಿದ್ದೇಶ್ವರನೂ ಬಂದ. ಸಪ್ತ ಮಾತೃಕೆಯರು ಕಟ್ಟುನಿಟ್ಟಿನ ವ್ರತ ಆಚರಿಸುತ್ತಾ ಮಡಿಯಲ್ಲಿದ್ದರೆ, ಸಿದ್ದೇಶ್ವರ ಮಡಿಯನ್ನು ಆಚರಿಸದೆ ಮೈಲಿಗೆಯವರಿಂದಲೂ ನೈವೇದ್ಯ ಸ್ವೀಕರಿಸುತ್ತಿದ್ದ. ಇದರಿಂದ ಸಿಟ್ಟಿಗೆದ್ದ ಸಪ್ತ ಮಾತೃಕೆಯರು “ನಮ್ಮ- ನಿನ್ನ ಭೇಟಿ ವರ್ಷಕ್ಕೊಮ್ಮೆ ಮಾತ್ರ’ ಎಂದು ದೂರವಾದರಂತೆ.
ಈ ಕಾರಣಕ್ಕಾಗಿ ಇಲ್ಲಿ ವರ್ಷಕ್ಕೊಮ್ಮೆ ದರ್ಶನ. ಬಾಗಿಲು ಮುಚ್ಚುವ ದಿನ ಮಾತ್ರ ದೇಗುಲದ ಬಳಿ ಕೆಂಡೋತ್ಸವದ ವೇಳೆ, ಹಾಸನಾಂಬೆ ಮತ್ತು ಶ್ರೀ ಸಿದ್ದೇಶ್ವರನ ಉತ್ಸವ ಮೂರ್ತಿಗಳ ಮೂಲಕ ಭೇಟಿಯಾಗುವರು. ಬಾಗಿಲು ಮುಚ್ಚುವಾಗ ಗರ್ಭಗುಡಿಯಲ್ಲಿ ದೇವಿಗೆ ಮುಡಿಸಿದ ಹೂವು, ಇರಿಸಿದ ನೈವೇದ್ಯ ಮುಂದಿನ ವರ್ಷ ಬಾಗಿಲು ತೆರೆಯುವವರೆಗೂ ತಾಜಾವಾಗಿದ್ದು, ಹಚ್ಚಿದ ಹಣತೆಯೂ ಆರದೆ, ಉರಿಯುತ್ತಿರುತ್ತದೆ. ಇದು ಇಲ್ಲಿನ ವಿಶೇಷ.
ದರುಶನಕೆ ದಾರಿ…: ಹಾಸನಕ್ಕೆ ಬೆಂಗಳೂರಿನಿಂದ 180 ಕಿ.ಮೀ., ಮೈಸೂರಿನಿಂದ 120 ಕಿ.ಮೀ., ಮಂಗಳೂರಿನಿಂದ 160 ಕಿ.ಮೀ. ಶಿವಮೊಗ್ಗದಿಂದ 120 ಕಿ.ಮೀ. ಸಾಕಷ್ಟು ಬಸ್ಸುಗಳು, ರೈಲುಗಳ ಸಂಪರ್ಕವಿದೆ.
ಸೂಚನೆ: ಹಾಸನಾಂಬೆಯ ದರ್ಶನ ಅ.29ರವರೆಗೆ ಇರುತ್ತೆ. ಬಾಗಿಲು ಮುಚ್ಚುವುದು, ಅ.30ರ ಮಧ್ಯಾಹ್ನವೇ ಆದರೂ ಅಂದು ದರ್ಶನ ಇರುವುದಿಲ್ಲ.
* ಎನ್. ನಂಜುಂಡೇಗೌಡ