ಹೊಸದಿಲ್ಲಿ: ವಿಜಯ್ ಹಜಾರೆ ಟ್ರೋಫಿಗಾಗಿ ನಡೆಯುವ ರಾಷ್ಟ್ರೀಯ ಏಕದಿನ ಕೂಟದೊಂದಿಗೆ ಆರಂಭಿಸುವ ಮೂಲಕ 2018-19ರ ದೇಶೀಯ ಋತುವಿಗೆ ಚಾಲನೆ ನೀಡುವ ಮತ್ತು ರಣಜಿ ಪಂದ್ಯಾವಳಿಯಲ್ಲಿ ಹೆಚ್ಚುವರಿ ಪಂದ್ಯಗಳನ್ನು ನಡೆಸುವ ಬಗ್ಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಯ ತಾಂತ್ರಿಕ ಸಮಿತಿಯು ಬಿಸಿಸಿಐಗೆ ಶಿಫಾರಸು ಮಾಡಿದೆ.
ಕೋಲ್ಕತಾದಲ್ಲಿ ನಡೆದ ಎರಡೂವರೆ ಗಂಟೆಗಳ ಸಭೆಯ ಬಳಿಕ ರಣಜಿ ಟ್ರೋಫಿ ಪಂದ್ಯಾವಳಿಯಲ್ಲಿ ಸದ್ಯ ಬಳಸಲಾಗುತ್ತಿರುವ ಎಸ್‌ಜಿ ಟೆಸ್ಟ್ ಚೆಂಡಿಗೆ ಬದಲಾಗಿ ಕೂಕಬುರಾ ಚೆಂಡನ್ನು ಬಳಸಬೇಕೇ ಎಂಬ ಬಗ್ಗೆ ವಿಸ್ಕೃತವಾದ ಚರ್ಚೆಯಾಯಿತು.
ಈ ಸಂದರ್ಭ ರಣಜಿ ಟ್ರೋಫಿಯಲ್ಲಿ 16 ಸುತ್ತಿನ (ಪ್ರಿ-ಕ್ವಾರ್ಟರ್ ಫೈನಲ್) ಪಂದ್ಯಗಳನ್ನು ನಡೆಸುವ ಬಗ್ಗೆ ಸಲಹೆಯೊಂದನ್ನು ಮುಂದಿಡಲಾಯಿತು. ಮುಂಬಯಿಯ ಕೆಲವು ತರಬೇತುದಾರರು ಮತ್ತು ಕ್ರಿಕೆಟ್ ತಂಡದ ನಾಯಕರನ್ನು ಈ ಕುರಿತು ಕೇಳಿದಾಗ ಹೆಚ್ಚಿನ ನಾಯಕರು ಪ್ರಿ-ಕ್ವಾರ್ಟರ್ ಫೈನಲ್ ಪಂದ್ಯ ನಡೆಸುವುದನ್ನು ಬಯಸಿದ್ದಾರೆ ಎನ್ನಲಾಗಿದೆ. ಈಗಿನ ಪ್ರಕಾರ ನಾವು ಕ್ವಾರ್ಟರ್ ಫೈನಲ್‌ಗೆ ಅರ್ಹತೆ ಪಡೆದ ಎರಡು ತಂಡಗಳೊಂದಿಗೆ ನಾಲ್ಕು ಗುಂಪುಗಳನ್ನು ಹೊಂದಿದ್ದೇವೆ.
“ಪ್ರಿ-ಕ್ವಾರ್ಟರ್‌ನೊಂದಿಗೆ ನಾಕೌಟ್ ಕೂಡ ಆರಂಭಿಸಬೇಕೆಂದು ಹೆಚ್ಚಿನ ತಂಡದ ನಾಯಕರು ಭಾವಿಸಿದ್ದಾರೆ. ಹಾಗಾಗಿ ತಾಂತ್ರಿಕ ಸಮಿತಿಯು 16 ಸುತ್ತಿನ ಪಂದ್ಯವನ್ನು ಸೇರಿಸಲು ಬಯಸಿದೆ. ಅಂದರೆ ಒಟ್ಟು 16 ತಂಡಗಳಿಗೆ ಎಂಟು ಹೆಚ್ಚುವರಿ ಪಂದ್ಯಗಳಲ್ಲದೆ ಮತ್ತೂಂದು ಹೆಚ್ಚುವರಿ ಪಂದ್ಯ ಆಡಬೇಕಾಗುತ್ತದೆ’ ಎಂದು ಬಿಸಿಸಿಐ ತಾಂತ್ರಿಕ ಸಮಿತಿಯಲ್ಲಿರುವ ಸದಸ್ಯರೊಬ್ಬರು ತಿಳಿಸಿದ್ದಾರೆ.
“ಪಂದ್ಯಗಳ ದಿನಾಂಕಗಳು ಕೂಡ ನವೀಕರಿಸಲಾಗುತ್ತದೆ. ಅದರಂತೆ ವಿಜಯ್ ಹಜಾರೆ ಟ್ರೋಫಿ ಮೊದಲು ನಡೆದು ಅನಂತರ ರಣಜಿಯ ಲೀಗ್ ಹಂತದ ಪಂದ್ಯಗಳು ನಡೆಯಲಿವೆ. ಆ ಬಳಿಕ ಸಯ್ಯದ್ ಮುಷ್ತಾಕ್ ಆಲಿ ಟ್ರೋಫಿ ಪಂದ್ಯಾಟಗಳು ನಡೆಯಲಿವೆ. ಇದರಿಂದ ಐಪಿಎಲ್ ತಂಡಗಳಿಗೆ ಪ್ರತಿಭಾನ್ವಿತ ಆಟಗಾರರನ್ನು ಆರಿಸಲೂ ಸುಲಭವಾಗುತ್ತದೆ’ ಎಂದು ತಾಂತ್ರಿಕ ಸಮಿತಿ ಸದಸ್ಯರು ತಿಳಿಸಿದ್ದಾರೆ.