Advertisement

ಸಂಭ್ರಮ ಮೂಡಿಸಲಿಲ್ಲ ಬೊಂಬೆ ವ್ಯಾಪಾರ

09:13 AM Sep 27, 2017 | Team Udayavani |

ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ದಸರಾದ ಸಾಂಪ್ರದಾಯಿಕ ಸಂಭ್ರಮವನ್ನು ಕಣ್ತುಂಬಿಕೊಳ್ಳಲು ದೇಶ-ವಿದೇಶಗಳ ಲಕ್ಷಾಂತರ ಪ್ರವಾಸಿಗರು ಖುಷಿ  ಯಿಂದಿದ್ದಾರೆ. ಇವರಂತೆಯೇ ಸಾಂದರ್ಭಿಕ ಲಾಭದ ಆಸೆಗಾಗಿ ಬಂದಿರುವ ವ್ಯಾಪಾರಿಗಳ ಮುಖದಲ್ಲಿ ಮಾತ್ರ
ದಸರೆ ಸಂಭ್ರಮವಿಲ್ಲ.

Advertisement

ಬೀದಿಬದಿ ವ್ಯಾಪಾರಿಗಳಲ್ಲಿ ಸ್ಥಳೀಯರಿಗಿಂತ ವಲಸೆ ಬಂದವರೇ ಹೆಚ್ಚು. ಅದರಂತೆ ಮಹಾರಾಷ್ಟ್ರ, ರಾಜಸ್ಥಾನ, ಬೆಂಗಳೂರು ಸೇರಿ ಇನ್ನಿತರ ಕಡೆಗಳಿಂದ ಅಲೆಮಾರಿ ಮಾರಾಟಗಾರರು ದಸರಾ ಸಂದರ್ಭದಲ್ಲಿ ಬಣ್ಣಬಣ್ಣದ ಆಟಿಕೆಗಳು, ಬೊಂಬೆಗಳ ಮಾರಾಟಕ್ಕೆ ಆಗಮಿಸಿದ್ದಾರೆ. ದಸರೆ ಆರಂಭಕ್ಕೂ ಮುನ್ನವೇ ಬಂದಿರುವ ವಲಸೆ ವ್ಯಾಪಾರಿಗಳು ನಗರದ ಅರಮನೆ, ಮೃಗಾಲಯ,
ಚಾಮುಂಡಿಬೆಟ್ಟ ಸೇರಿದಂತೆ ಪ್ರವಾಸಿತಾಣಗಳು ಹಾಗೂ ಇನ್ನಿತರ ರಸ್ತೆಗಳಲ್ಲಿ ದಿನನಿತ್ಯ ವ್ಯಾಪಾರ ನಡೆಸುತ್ತಿದ್ದಾರೆ.

ಮೊಬೈಲ್‌ ಆಟಗಳ ಹೊಡೆತ: ಈ ವರ್ಷ ಗಾಳಿ ತುಂಬಿದ ಆಟಿಕೆಗಳ ವ್ಯಾಪಾರದಲ್ಲಿ ತೊಡಗಿರುವ ವ್ಯಾಪಾರಿಗಳ ಮೇಲೆ ಈ ದಸರಾ ಉತ್ಸವ ದೊಡ್ಡ ಹೊಡೆತ ನೀಡಿದೆ. ಎಲ್ಲೆಡೆ ಆಕರ್ಷಕ ಬಣ್ಣದ ಬೊಂಬೆಗಳ ಅಂಗಡಿಗಳನ್ನು ಹಾಕಲಾಗಿದೆ. ಆದರೆ ಕೇಳುವವರೇ ಇಲ್ಲ. ಮಾರಾಟ ಗಾರರೇ ಹೇಳುವಂತೆ ಕಳೆದ ಬಾರಿಗೆ ಹೋಲಿಸಿದರೆ ಈ ವರ್ಷದ ವ್ಯಾಪಾರ ಶೇ.50 ಕಡಿಮೆಯಾಗಿದೆ. ಇತ್ತೀಚಿಗೆ
ಮಕ್ಕಳು ಆಟಿಕೆಗ ಳಿಗಿಂತ ಹೆಚ್ಚಾಗಿ ಮೊಬೈಲ್‌ನಲ್ಲಿ ತೊಡಗಿರುವುದರ ಜತೆಗೆ ಮಳೆಯೂ ವ್ಯಾಪಾರ ಕಡಿಮೆಯಾಗಲು ಕಾರಣವಾಗಿದೆ.

ಪೊಲೀಸರು ಓಡಿಸುತ್ತಾರೆ: “ಬೀದಿಬದಿ ವ್ಯಾಪಾರದ ಜೊತೆಗೆ ಪ್ರಮುಖ ಸ್ಥಳಗಳಾದ ಮೃಗಾಲಯ, ದಸರಾ ಫ‌ಲಪುಷ್ಪ ಪ್ರದರ್ಶನ ಇನ್ನಿತರ ಕಡೆಗಳಲ್ಲಿ ಪ್ರವೇಶ ನೀಡ ದಿರುವುದು ವ್ಯಾಪಾರ ಕಡಿಮೆಯಾ ಗಲು ಮತ್ತೂಂದು ಕಾರಣ’ ಎನ್ನುತ್ತಾರೆ ಬೆಂಗಳೂರಿನ ವ್ಯಾಪಾರಿ ದಿಲೀಪ್‌ ಕುಮಾರ್‌. “ನಗರದ ಅನೇಕ ಕಡೆ ನಿತ್ಯವೂ ವ್ಯಾಪಾರ ನಡೆಸುತ್ತೇವೆ. ಅರಮನೆ ಮತ್ತು ಮೃಗಾಲಯಕ್ಕೆ ಹೆಚ್ಚಿನ
ಪ್ರವಾಸಿಗರು ಮಕ್ಕಳೊಂದಿಗೆ ಬರುವುದರಿಂದ ಇಲ್ಲಿ ಹೆಚ್ಚು ಹೊತ್ತಿನವರೆಗೆ ವ್ಯಾಪಾರ ನಡೆಸಿದರೆ ಒಂದಿಷ್ಟು ವ್ಯಾಪಾರವಾಗಲಿದೆ. ಆದರೆ ಇಲ್ಲಿ ನಿಂತು ಹೆಚ್ಚು ಹೊತ್ತಿನವರೆಗೆ ವ್ಯಾಪಾರ ನಡೆಸಲು ಪೊಲೀಸರು ಅನುಮತಿಸುವುದಿಲ್ಲ. ನಾವು ಟಿಕೆಟ್‌ ಖರೀದಿಸಿ ಒಳ
ಹೋಗಿ ವ್ಯಾಪಾರ ಮಾಡಲು ಸಹ ಅವಕಾಶ ನೀಡುವುದಿಲ್ಲ. ಇದರಿಂದಾಗಿ ಪ್ರತಿದಿನ ಅಂದುಕೊಂಡಷ್ಟು ವ್ಯಾಪಾರ ಆಗುತ್ತಿಲ್ಲ’ ಎಂದು
ಪುಣೆಯಿಂದ ಬಂದಿರುವ ಆಟಿಕೆ ಮಾರಾಟಗಾರ ಲಾಚು ಅಸಮಾಧಾನ ಹೊರ ಹಾಕುತ್ತಾರೆ.

ನಿತ್ಯ 200 ರೂ. ಬೇಕು: ಈ ದಸರೆಯಲ್ಲಿ ಗಾಳಿ ತುಂಬಿದ ನಾನಾ ವಿನ್ಯಾಸದ ಬೊಂಬೆಗಳು, ಮುಖವಾಡಗಳು ಕಣ್ಮನ ಸೆಳೆಯುತ್ತಿವೆ. ಆದರೆ ಪ್ರತಿ ದಿನವೂ ಗಾಳಿ ತುಂಬಿದ ಆಟಿಕೆಗಳು, ಮುಖವಾಡ ಗಳನ್ನು ತಯಾರಿಸಲು ಮಾರಾಟಗಾರರು ಕನಿಷ್ಠ 200 ರೂ. ಅಗತ್ಯವಿದೆ. ಮಾರಾಟಗಾರರ ಜತೆಗೆ ಅವರ ಕುಟುಂಬ ಸದಸ್ಯರು ನಗರಕ್ಕಾಗಮಿಸಿದ್ದು, ಈ ವರ್ಷ 120 ಕ್ಕೂ ಹೆಚ್ಚು ಆಟಿಕೆ ಮಾರಾಟಗಾರರು ಅವರ ಕುಟುಂಬ ದೊಂದಿಗೆ ನಗರದಲ್ಲಿದ್ದಾರೆ. ಆದರೆ ಪ್ರಸ್ತುತ ದಸರೆಯಲ್ಲಿ ಹೇಳಿಕೊಳ್ಳುವಷ್ಟು ವ್ಯಾಪಾರ ಆಗದಿರುವುದು ಕುಟುಂಬದ ದಿನನಿತ್ಯದ ಖರ್ಚುವೆಚ್ಚವನ್ನು ನಿರ್ವಹಣೆ ಮಾಡಲು ಸಾಧ್ಯವಾಗುತ್ತಿಲ್ಲ.

Advertisement

3ರಿಂದ 10 ವರ್ಷದ ಮಕ್ಕಳಿಗೆ ಬಣ್ಣ ಬಣ್ಣದ ಬೊಂಬೆಗಳೆಂದರೆ ಇಷ್ಟ. ಆದರೆ ಇಂದಿನ ಮಕ್ಕಳು ಆಟಿಕೆಗಳಿಗಿಂತ ಮೊಬೈಲ್‌ನಲ್ಲಿ ಗೇಮ್‌ಗಳನ್ನು ಆಡಲು ಇಷ್ಟಪಡುತ್ತವಯೇ ಹೊರತು ಆಟಿಕೆಗಳನ್ನಲ್ಲ. 9 ದಿನದ ದಸರೆಯಲ್ಲಿ  ಸ್ವಲ್ಪ ಹಣ ಗಳಿಸಬಹುದೆಂಬ ನಿರೀಕ್ಷೆ ಇತ್ತು. ಕಳೆದ ವರ್ಷ ನಿತ್ಯ ಕನಿಷ್ಠ 1,000 ರೂ.ಗಳ ವ್ಯಾಪಾರವಾಗಿತ್ತು. ಆದರೆ ಈ ವರ್ಷ ದಿನಕ್ಕೆ 400ರಿಂದ 500 ರೂ. ವ್ಯಾಪಾರವಾದರೆ ಹೆಚ್ಚು.
●ಅಭಿಷೇಕ್‌, ಬೊಂಬೆ ಮಾರಾಟಗಾರ, ಮುಂಬೈ

ಏರ್‌ ಶೋ ಖಚಿತ; ದಿನಾಂಕ ನಿಗದಿ ಬಾಕಿ
ಮೈಸೂರು: ನಾಡಹಬ್ಬ ದಸರೆ ಸಂಭ್ರಮದಲ್ಲಿರುವ ಮೈಸೂರಿನ ಜನತೆ ಹಾಗೂ ಪ್ರವಾಸಿಗರಿಗೆ ಈ ಬಾರಿಯ ದಸರೆಯಲ್ಲಿ ಏರ್‌ ಶೋ ನೋಡುವ ಸಂಭ್ರಮವೂ ಸೇರಿಕೊಂಡಿದೆ. ಈ ಬಗ್ಗೆ ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಗಳವಾರ ತಮ್ಮ ಟ್ವಿಟರ್‌ನಲ್ಲಿ ಪ್ರಕಟಿಸಿದ್ದಾರೆ. ಏರ್‌ಶೋ ಕಾರ್ಯ ಕ್ರಮ ನಾಲ್ಕೈದು ವರ್ಷಗಳಿಂದ ಸ್ಥಗಿತಗೊಂಡಿತ್ತು. ಆದರೆ ಈ ಬಾರಿ ಏರ್‌ ಶೋ ನಡೆಸಲೇಬೇ
ಕೆಂದು ಹಠತೊಟ್ಟಿದ್ದ ದಸರಾ ಸಮಿತಿಯ ಪ್ರಯತ್ನಕ್ಕೆ ರಕ್ಷಣಾ ಇಲಾಖೆಯಿಂದ ಸಮ್ಮತಿ ನೀಡಿದೆ. ಸೆ.29ರಂದು ಬೆಳಗ್ಗೆ 11ಕ್ಕೆ 
ಉದ್ಘಾಟನೆಗೊಳ್ಳಲಿದೆ ಎಂಬುದನ್ನು ಸಿಎಂ ಸಿದ್ದರಾಮಯ್ಯ ತಮ್ಮ ಟ್ವಿಟರ್‌ ಖಾತೆಯಲ್ಲಿ ತಿಳಿಸಿದ್ದಾರೆ.

ವಾಯುಪಡೆ ಅಧಿಕಾರಿಗಳ ಪರಿಶೀಲನೆ: ಈ ಬಗ್ಗೆ ಮಾಹಿತಿ ನೀಡಿರುವ ಜಿಲ್ಲಾಧಿಕಾರಿ ಡಿ. ರಂದೀಪ್‌, ಭಾರತೀಯ ವಾಯುಪಡೆ ಅಧಿಕಾರಿ ಗಳ ತಂಡ ಬುಧವಾರ (ಸೆ.27) ನಗರಕ್ಕಾಗಮಿಸಿ ಪರಿಶೀಲನೆ ನಡೆಸಲಿದೆ.

ಮಾವುತರು, ಕಾವಾಡಿಗರಿಗೆ ಉಪಾಹಾರ ವ್ಯವಸ್ಥೆ 
ಬೆಂಗಳೂರು: ಸಚಿವರಾಗಿದ್ದಾಗ ಮೈಸೂರು ದಸರಾ ಸಂದರ್ಭದಲ್ಲಿ ಮೆರವಣಿಗೆಯಲ್ಲಿ ಪಾಲ್ಗೊಳ್ಳುವ ಆನೆಗಳ ಮಾವುತರು ಮತ್ತು ಕಾವಾಡಿಗರಿಗೆ ಉಪಾಹಾರ ನೀಡುವ ಸಂಪ್ರದಾಯ ಆರಂಭಿಸಿದ್ದ ಸಂಸದೆ ಶೋಭಾ ಕರಂದ್ಲಾಜೆ ಅವರು ಈ ಬಾರಿಯೂ ಅದನ್ನು ಮುಂದುವರಿಸಿದ್ದಾರೆ. ಸೆ. 29ರಂದು ಬೆಳಗ್ಗೆ 8.30ಕ್ಕೆ ಎಲ್ಲಾ ಮಾವುತರು ಮತ್ತು ಕಾವಾಡಿಗರು ಹಾಗೂ ಅವರ ಕುಟುಂಬದವರಿಗೆ ಉಪಾಹಾರ ಕೂಟ ಏರ್ಪಡಿಸಿದ್ದಾರೆ.

ಸಿ.ದಿನೇಶ್‌

Advertisement

Udayavani is now on Telegram. Click here to join our channel and stay updated with the latest news.

Next