Advertisement

ಏಕ ಧರ್ಮದ ಸಿದ್ಧಾಂತ ಮನೆಯಲ್ಲೇ ಕೇಳ್ಳೋದಿಲ್ಲ

11:10 AM Aug 26, 2018 | |

ಕಲಬುರಗಿ: ಕೆಲ ಸಂಸ್ಥೆಗಳು ತಮ್ಮ ತತ್ವಗಳನ್ನು ದೇಶದ ಜನತೆ ಮೇಲೆ ಹೇರಲು ಹೊರಟಿದ್ದು, ಅದನ್ನು ವಿರೋಧಿಸುವವರಿಗೆ ದೇಶದ್ರೋಹಿಗಳ ಪಟ್ಟ ಕಟ್ಟಲಾಗುತ್ತಿದೆ ಎಂದು ಸಮಾಜ ಕಲ್ಯಾಣ ಖಾತೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್‌ ಖರ್ಗೆ ಬಿಜೆಪಿ ಮತ್ತು ಆರ್‌ಎಸ್‌ಎಸ್‌ ವಿರುದ್ಧ ವಾಗ್ಧಾಳಿ ನಡೆಸುವ ಮೂಲಕ ಮನುಸ್ಮೃತಿಯನ್ನು ಖಂಡಿಸಿದರು.

Advertisement

ದೆಹಲಿಯ ಜಂತರ್‌ ಮಂತರ್‌ನಲ್ಲಿ ಸಂವಿಧಾನ ಸುಟ್ಟ ಆರೋಪಿಗಳನ್ನು ಬಂಧಿಸುವಂತೆ ಒತ್ತಾಯಿಸಿ ಸಂವಿಧಾನ ರಕ್ಷಣಾ ಸಮಿತಿ ಹಮ್ಮಿಕೊಂಡಿದ್ದ ಬೃಹತ್‌ ಸಮಾವೇಶದಲ್ಲಿ ಮಾತನಾಡಿದ ಅವರು, ಡಾ| ಬಿ.ಆರ್‌.ಅಂಬೇಡ್ಕರ್‌ ರಚಿಸಿರುವ ಸಂವಿಧಾನ ರಕ್ಷಿಸುವುದು ಎಲ್ಲ ಸಮಾಜಗಳ, ವರ್ಗಗಳ ಜವಾಬ್ದಾರಿ ಆಗಿದೆ. ಆದರೆ, ಕೆಲ ಸಂಸ್ಥೆಗಳು ಏಕ ಧರ್ಮದ ಸಿದ್ಧಾಂತವನ್ನು ಸ್ಥಾಪಿಸಿ ಅದರ ತತ್ವ ದೇಶದ ನಾಗರಿಕರ ಮೇಲೆ ಹೇರಲು ಮುಂದಾಗಿವೆ. ಇಂತಹ ತತ್ವವನ್ನು ಮೊದಲು ತಮ್ಮ ಮನೆಯಲ್ಲೇ ಅಳವಡಿಸಿಕೊಂಡು ನೋಡಲಿ. ಅವರ ಮನೆಯ ಹೆಣ್ಣು ಮಕ್ಕಳೇ ದಂಗೆ ಏಳುತ್ತಾರೆ ಎಂದರು. 

ಸಂವಿಧಾನ ಬದಲಾವಣೆ ಮತ್ತು ಬುದ್ಧಿಜೀವಿಗಳ ಕುರಿತು ಕೇಂದ್ರ ಸಚಿವ ಅನಂತಕುಮಾರ ಹೆಗಡೆ ನೀಡಿರುವ ಹೇಳಿಕೆಗೆ ತೀವ್ರ ಅಕ್ರೋಶ ವ್ಯಕ್ತಪಡಿಸಿದ ಅವರು, ಹೆಗಡೆ ಅವರಿಗೆ ಏಕಧರ್ಮದ ತತ್ವ ಮಾತ್ರ ಗೊತ್ತಿದೆ. ಅವರಿಗೆ ಜಾತ್ಯತೀತ ಮೌಲ್ಯಗಳು, ತತ್ವಗಳು ಗೊತ್ತಿಲ್ಲ ಎಂದು ಟೀಕಿಸಿದರು.

ದೇಶದಲ್ಲಿ ಗೌರಿ ಲಂಕೇಶ, ಡಾ| ಎಂ.ಎಂ. ಕಲಬುರ್ಗಿ, ದಾಬೋಲ್ಕರ್‌, ಪನಸಾರೆ ಅವರಂತ ವಿಜಾರವಾದಿಗಳ ಹತ್ಯೆ ನಡೆದಿವೆ. ಕೇಂದ್ರದಲ್ಲಿ ದಲಿತರು, ದುರ್ಬಲರು, ಅಲ್ಪಸಂಖ್ಯಾತರ ವಿರೋಧಿಗಳು ಅಧಿಕಾರದಲ್ಲಿದ್ದಾರೆ. ಗೋ ರಕ್ಷಣೆಯ ಹೆಸರಲ್ಲಿ ಮನುಷ್ಯರಿಗೆ ಬೆಲೆ ಇಲ್ಲದಂತಾಗಿದ್ದು, ಹಲ್ಲೆ, ದೌರ್ಜನ್ಯ ಮತ್ತು ಕೊಲೆ ಕೃತ್ಯಗಳನ್ನು ಎಸಗಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಡಾ| ಬಿ.ಆರ್‌.ಅಂಬೇಡ್ಕರ್‌ ಮರಿ ಮೊಮ್ಮಗ ರಾಜರತ್ನ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಸಂವಿಧಾನವನ್ನು ಬದಲಾವಣೆ ಮಾಡುವ ಷಡ್ಯಂತ್ರದಲ್ಲಿ ತೊಡಗಿದ್ದು, ಮನುಸ್ಮೃತಿಯನ್ನು ಸ್ಥಾಪಿಸಲು ಯತ್ನಿಸುತ್ತಿದೆ ಎಂದು ಆರೋಪಿಸಿದರು. ಪ್ರಧಾನಿ ನರೇಂದ್ರ ಮೋದಿ ಕಚೇರಿಯಿಂದ ಕೇವಲ 15 ಕಿ.ಮೀ. ದೂರದಲ್ಲಿರುವ ಜಂತರ್‌ ಮಂತರ್‌ನಲ್ಲಿ ಸಂವಿಧಾನ ಪ್ರತಿ ಸುಡಲಾಗಿದೆ. ಆದರೂ, ಪ್ರಧಾನಿ ಮೋದಿ ಮೌನ ವಹಿಸುವ ಮೂಲಕ ಸಂವಿಧಾನ ಸುಟ್ಟವರಿಗೆ ಬೆಂಬಲ ಕೊಟ್ಟಿದ್ದಾರೆ ಎಂದು ದೂರಿದರು.

Advertisement

ಮೋದಿ ಅವರನ್ನು ಬದಲಾಯಿಸಿ ಎಂದು ನಾನು ಹೇಳುವುದಿಲ್ಲ. ಯಾಕೆಂದರೆ, ಮೋದಿ ಜಾಗದಲ್ಲಿ ನಾಳೆ ಮತ್ತೂಬ್ಬರು ಬರ್ತಾರೆ. ಹೀಗಾಗಿ ಮೋದಿಯಂತಹ ಉತ್ಪನ್ನಗಳನ್ನು ಉತ್ಪಾದಿಸುವ ಆರ್‌ಎಸ್‌ಎಸ್‌ ಎನ್ನುವ ಫ್ಯಾಕ್ಟರಿಯನ್ನು ಬಂದ್‌ ಮಾಡಬೇಕಿದೆ ಎಂದರು.
 
ಮಾಜಿ ಶಾಸಕ ಬಿ.ಆರ್‌.ಪಾಟೀಲ, ಫಾದರ್‌ ಲೋಬೋ, ಗುರಮೀತ್‌ ಸಿಂಗ್‌, ಬಾಬಾ ಖಾನ್‌, ತಿಪ್ಪಣ್ಣಪ್ಪ ಕಮಕನೂರ, ದಸಂಸ ರಾಜ್ಯ ಸಂಚಾಲಕ ಡಿ.ಜಿ .ಸಾಗರ ಮಾತನಾಡಿದರು. ಶಾಸಕ ಎಂ.ವೈ. ಪಾಟೀಲ, ಸಂವಿಧಾನ ರಕ್ಷಣಾ ಸಮಿತಿ ಅಧ್ಯಕ್ಷ ವಿಠಲ ದೊಡ್ಮನಿ, ಕೆ.ನೀಲಾ, ಅಲ್ಲಮ ಪ್ರಭು ಪಾಟೀಲ, ರಾಜಕುಮಾರ ಕಪನೂರ, ಮಾರುತಿ ಮಾನ್ಪಡೆ ಹಾಗೂ ಮತ್ತಿತರರು ಇದ್ದರು. 

ಬಹಿರಂಗ ಸಮಾವೇಶಕ್ಕೂ ಮುನ್ನ ನಗರೇಶ್ವರ ಶಾಲೆಯಿಂದ ಜಗತ್‌ ವೃತ್ತದವರೆಗೂ ಬೃಹತ್‌ ರ್ಯಾಲಿ ನಡೆಸಲಾಯಿತು. ಜಿಲ್ಲೆಯ ಹಲವು ಭಾಗಗಳಿಂದ ಆಗಮಿಸಿದ್ದ ಸಾವಿರಾರು ಜನರು ರ್ಯಾಲಿಯಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next