ಆತ್ಮ ವಿಕಾಸಕ್ಕೆ ಉಪಯೋಗವಾಗುವ ಜ್ಞಾನ ಸಮ್ಯಕ್ ಜ್ಞಾನ. ವಸ್ತುಗಳನ್ನು, ಹೇಗಿದೆಯೋ ಹಾಗೆ ತಿಳಿಯುವುದೇ “ಸಮ್ಯಕ್‌ಜ್ಞಾನ’. ಸಂಸಾರದ ಜ್ಞಾನವು ಸಾಮಾನ್ಯ ಭೌತಿಕ ಏಳ್ಗೆಗೆ ಕಾರಣವಾದರೆ, ಪಾರಮಾರ್ಥಿಕ ಜ್ಞಾನ, ಕರ್ಮಗಳ ಬಿಡುಗಡೆಯ ಭೌತಿಕ ಏಳ್ಗೆಗೆ ಕಾರಣ. ಆತ್ಮವಿಕಾಸಕ್ಕೆ ಕಾರಣವಾಗುವ ಜ್ಞಾನದಿಂದ ಸ್ವ ಮತ್ತು ಪರದ ಬೇಧ ವಿಜ್ಞಾನ ಪ್ರಾಪ್ತಿ.
ಜಿನವಾಣಿ ವೀತರಾಗ ವಾಣಿ ದಿವ್ಯಧ್ವನಿ. ದುಃಖದಿಂದ ಪಾರಾಗಲು ಇರುವ ಉಪಾಯ, ದುಃಖವನ್ನು ಗೆಲ್ಲುವ ವಾಣಿ. ಪರಮ ಜಿನೇಂದ್ರ ವಾಣಿಯೇ ಸರಸ್ವತಿ. “ಬೇರದು ಪೆಣ್ಣರೂಪಮಂ ಧರಯಿಸಿ ನಿಂದುದಲ್ತದುವೆ ಭಾವಿಸಿ ಓದುವ ಕೇಳುವ ಪೂಜಿಪ ಆದರಿಸುವ ಭವ್ಯ ಕೋಟಿಗೆ ನಿರಂತರಂಸೌಖ್ಯಮನೀವುದಾನದರ್ಕೆರೆದಪೆ ನಾ ಸರಸ್ವತಿಯೆ ಮಾಳ್ಕೆಮಗಿಲ್ಲಿಯೆ ವಾಗ್ವಿಲಾಸಮಂ’ ಎಂದು ಆದಿಕವಿ ಪಂಪ ತಿಳಿಸಿದಂತೆ, ಓರ್ವ ವ್ಯಕ್ತಿ, ಸರ್ವಜ್ಞನಾಗಿ ತಾನು ಮಾತ್ರ ಜ್ಞಾನ ಪಡೆದು ಸಂತಸಪಡುವುದಲ್ಲ.
ಬದಲಾಗಿ, ಸರ್ವರ ಹಿತ ತನ್ನ ಹಿತ ಎರಡಕ್ಕೂ ಆ ಗುರು ಅಗತ್ಯ ಎಂದು ಮನಗಂಡು, ಸರ್ವೋದಯ ತೀರ್ಥದಲ್ಲಿ ಸಮ್ಯಕ್ ಜ್ಞಾನದ ಹಿತ ಮಿತವಾದ ಮಧುರ ಧ್ವನಿಯಿಂದ, ದಿವ್ಯ ಧ್ವನಿಯ ಮೂಲಕ ಪುರುಷಾರ್ಥವನ್ನು ಪಾಲಿಸುವ ಬಗೆಗಿನ ಅರಿವು ಸಿಗುತ್ತದೆ.ಅಧಿಕವಾದುದನ್ನು ಕಡಿಮೆ ಎಂದು ತಿಳಿಯುವುದು “ನ್ಯೂನ ಜ್ಞಾನ’ವೆಂದೂ; ನ್ಯೂನವಾದುದನ್ನು ಅಧಿಕ ಎಂದು ತಿಳಿಯುವುದಕ್ಕೆ ಅಧಿಕ ಜ್ಞಾನವೆಂದೂ; ಹಗ್ಗವನ್ನು ನೋಡಿ ಸರ್ಪವೆಂದು ತಿಳಿಯುವುದಕ್ಕೆ ವಿಪರೀತ ಜ್ಞಾನವೆಂದೂ;
ಇದು ಮರವೋ, ನಿಂತ ವ್ಯಕ್ತಿಯೋ ಎಂದು ಕತ್ತಲು ಮುಸುಕುತ್ತಿರುವ ಭೂಮಿಯಲ್ಲಿ ದೂರದಲ್ಲಿ ನಡೆದುಕೊಂಡು ಬರುತ್ತಿರುವ ಪಥಿಕನಲ್ಲಿ ಮೂಡುವ ಜ್ಞಾನ ” ಸಂಶಯ ಜ್ಞಾನ’ವೆಂದೂ ಹೇಳಲಾಗುತ್ತದೆ.ಇವು ನಾಲ್ಕು ಮಿಥ್ಯಾ ಜ್ಞಾನಗಳು. ಇವುಗಳಲ್ಲಿ ವಸ್ತು ಸ್ವರೂಪ ಇದ್ದದ್ದು ಇದ್ದಂತೆ ತಿಳಿವ ಜ್ಞಾನವೇ “ಸಮ್ಯಕ್ ಜ್ಞಾನ’. ಅಜ್ಞಾನವು ಭಯ, ದುಃಖ, ಬಂಧನಕ್ಕೆ ಕಾರಣ. ಸುಜ್ಞಾನವು ನಿರ್ಭಯ, ಸುಖ, ಶಾಂತಿ, ಆನಂದಕ್ಕೆ ಕಾರಣ.
* ಸ್ವಸ್ತಿ ಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ, ಜೈನಮಠ, ಮೂಡಬಿದ್ರಿ