Advertisement

ದ್ವಿತೀಯ ಸಂಪರ್ಕ ತಡೆಯುವಲ್ಲಿ ಜಿಲ್ಲಾಡಳಿತ ಯಶಸ್ವಿ

08:28 AM May 17, 2020 | Sriram |

ಮಂಗಳೂರು: ದುಬಾೖಯಿಂದ ಬಂದ ಪ್ರಯಾಣಿಕ ರನ್ನು ವಿಮಾನ ನಿಲ್ದಾಣದಲ್ಲಿ ಜಿಲ್ಲಾಡಳಿತ ಸಂಪೂರ್ಣ ಆರೋಗ್ಯ ಸುರಕ್ಷಾ ಕ್ರಮಗಳೊಂದಿಗೆ ಬರಮಾಡಿಕೊಂಡ ಕಾರಣ ಹಾಗೂ ಸಾರ್ವಜನಿಕರು, ಪ್ರಯಾಣಿಕರ ಕುಟುಂಬಸ್ಥರಿಗೆ ವಿಮಾನ ನಿಲ್ದಾಣಕ್ಕೆ ಬರಲು ಅವಕಾಶ ನೀಡದ ಹಿನ್ನೆಲೆಯಲ್ಲಿ ಕೊರೊನಾ ದ್ವಿತೀಯ ಸಂಪರ್ಕ ಹರಡುವುದನ್ನು ತಪ್ಪಿಸಿದಂತಾಗಿದೆ.

Advertisement

ದೇಶದ ಕೆಲವು ವಿಮಾನ ನಿಲ್ದಾಣಗಳಲ್ಲಿ ಆಗಮಿಸಿದವರನ್ನು ಕುಟುಂಬಸ್ಥರು ಭೇಟಿ ಮಾಡಲು ಅವಕಾಶ ನೀಡಲಾಗಿತ್ತು. ಆದರೆ ಮಂಗಳೂರಿನಲ್ಲಿ ಅಂತಹ ಅವಕಾಶವನ್ನೇ ನೀಡಲಿಲ್ಲ. ಕ್ವಾರಂಟೈನ್‌ ಕೇಂದ್ರಗಳಿಗೂ ಯಾರಿಗೂ ಪ್ರವೇಶವಿಲ್ಲ.

ವಿಮಾನ ನಿಲ್ದಾಣಗಳಲ್ಲಿದ್ದ ಹೆಚ್ಚುವರಿ ಸಿಬಂದಿ, ಪೊಲೀಸರು, ಭದ್ರತಾ ಪಡೆಯವರನ್ನು ಕೂಡ ದೂರ ಇರಿಸಲಾಗಿತ್ತು. ಮಾಧ್ಯಮದವರಿಗೂ ಪ್ರವೇಶ ನೀಡಿರಲಿಲ್ಲ. ವಾರ್ತಾ ಇಲಾಖೆಯ ಒಬ್ಬ ಛಾಯಾಚಿತ್ರಗ್ರಾಹಕ ಪಿಪಿಇ ಕಿಟ್‌ ಧರಿಸಿ ದೂರದಲ್ಲಿ ನಿಂತು ಚಿತ್ರೀಕರಣ ನಡೆಸಿದ್ದರು. ಕನಿಷ್ಠ ಪ್ರಮಾಣದಲ್ಲಿ ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದ ಕಾರಣ ಕೊರೊನಾ ವ್ಯಾಪಿಸುವಿಕೆಯನ್ನು ತಡೆದಂತಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ವಿಮಾನ ನಿಲ್ದಾಣದಲ್ಲಿ ಜಿಲ್ಲಾಡಳಿತ, ಆರೋಗ್ಯ ಇಲಾಖೆಯ ಅಧಿಕಾರಿಗಳು ಸಾಮಾಜಿಕ ಅಂತರ ಕಾಯ್ದುಕೊಂಡು, ಆರೋಗ್ಯ ಸುರಕ್ಷಾ ಕವಚ ಧರಿಸಿ ಎಚ್ಚರಿಕೆಯಿಂದ ಕಾರ್ಯನಿರ್ವಹಿಸಿದ್ದೇವೆ. ಆದ್ದರಿಂದ ಅಲ್ಲಿ ಕಾರ್ಯನಿರ್ವಹಿಸಿದ ಯಾರು ಕೂಡ ಕ್ವಾರಂಟೈನ್‌ ಆಗಬೇಕಾದ ಅಗತ್ಯವಿಲ್ಲ.
ಡಾ| ರಾಮಚಂದ್ರ ಬಾಯರಿ,
ದ.ಕ. ಜಿಲ್ಲಾ ಆರೋಗ್ಯಾಧಿಕಾರಿ

ದುಬಾೖಯಲ್ಲಿ ಪರೀಕ್ಷೆ ಮಾಹಿತಿ ಇಲ್ಲ
ಮಂಗಳೂರು: ದುಬಾೖ ವಿಮಾನದಲ್ಲಿ 179 ಮಂದಿ ಪ್ರಯಾಣಿಕರು ಬಂದಿದ್ದು, ಅವರು ಯಾವೆಲ್ಲ ಪ್ರದೇಶಗಳಿಂದ ಬಂದಿದ್ದಾರೆ ಹಾಗೂ ಅಲ್ಲಿ ಕೋವಿಡ್‌ ಪರೀಕ್ಷೆಗೆ ಒಳಪಡಿಸಿದ್ದಾರೆಯೇ ಎಂಬ ಮಾಹಿತಿ ಇಲ್ಲ ಎಂದು ದ.ಕ. ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್‌ ತಿಳಿಸಿದ್ದಾರೆ.

Advertisement

ಇಲ್ಲಿಗೆ ಆಗಮಿಸಿದ ಬಳಿಕ ಅವರೆಲ್ಲರ ಗಂಟಲ ದ್ರವ ಪರೀಕ್ಷೆಗೊಳಪಡಿಸಲಾಗಿದೆ. ಬಂದವರಲ್ಲಿ ಬಹುತೇಕರು ವೈದ್ಯಕೀಯ ಅಗತ್ಯಗಳಿದ್ದವರು, ಗರ್ಭಿಣಿಯರು ಸೇರಿದ್ದಾರೆ. ಆದರೆ ಈಗ ಸೋಂಕು ದೃಢಪಟ್ಟವರಲ್ಲಿ ಗರ್ಭಿಣಿಯರು ಇಲ್ಲ ಎಂದು ಸ್ಪಷ್ಟಪಡಿಸಿದರು.

ಗರ್ಭಿಣಿಯರು ಮನೆಗೆ
ಪಾಸಿಟಿವ್‌ ಕಂಡುಬಂದವರ ಪಕ್ಕದ ಆಸನ ದಲ್ಲಿ ಕುಳಿತುಕೊಂಡವರ ಮೇಲೆ ವಿಶೇಷ ನಿಗಾ ವಹಿಸಲಾಗುವುದು. ಮುಂದಿನ 12 ದಿನಗಳ ಅನಂತರ ಮತ್ತೂಮ್ಮೆ ಎಲ್ಲರಿಗೂ ಕೊರೊನಾ ಪರೀಕ್ಷೆ ಮಾಡಲಾಗುವುದು. ಗರ್ಭಿಣಿಯರಲ್ಲಿ ಸೋಂಕು ಇಲ್ಲದಿರುವ ಕಾರಣಕ್ಕೆ ರಾಜ್ಯ ಸರಕಾರದ ನಿರ್ದೇಶನದಂತೆ ಅವರನ್ನು ಮನೆಯಲ್ಲೇ ನಿಗಾದಲ್ಲಿಡುವ ಕುರಿತು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ವಿವರಿಸಿದರು. ಕೋವಿಡ್‌ 19 ನೋಡಲ್‌ ಅಧಿಕಾರಿ ಗಾಯತ್ರಿ ನಾಯಕ್‌, ಜಿಲ್ಲಾ ಆರೋಗ್ಯಾಧಿಕಾರಿ ಡಾ| ರಾಮಚಂದ್ರ ಬಾಯರಿ ಅವರು ಪತ್ರಿಕಾ ಗೋಷ್ಠಿಯಲ್ಲಿದ್ದರು.

ಒಂದೇ ಕುಟುಂಬದ 3 ಸದಸ್ಯರಿಗೆ ಸೋಂಕು!
ಸೋಂಕು ಪೀಡಿತ 15 ಮಂದಿಯಲ್ಲಿ ಒಂದೇ ಕುಟುಂಬದ ಮೂವರು ಇದ್ದಾರೆ. 45ರ ಹರೆಯದ ಪತಿ, 33ರ ಹರೆಯದ ಪತ್ನಿ ಹಾಗೂ 6 ವರ್ಷದ ಬಾಲಕಿಗೂ ಸೋಂಕು ತಗಲಿದೆ. ಇದಲ್ಲದೆ ಇಂದು ದೃಢಗೊಂಡ ಸೋಂಕಿತರಲ್ಲಿ 5 ಮಂದಿ 60 ವರ್ಷ ಮೇಲ್ಪಟ್ಟವರಾಗಿದ್ದಾರೆ.

ಕಣ್ಗಾವಲು
ದುಬಾೖಯಿಂದ ಆಗಮಿಸಿರುವ ಕನ್ನಡಿಗರು ನಗರದ ವಿವಿಧ ಹೊಟೇಲ್‌ ಸೇರಿದಂತೆ 10 ಕ್ವಾರಂಟೈನ್‌ ಕೇಂದ್ರಗ ಳಲ್ಲಿದ್ದು, ಅವರು ಕ್ವಾರಂಟೈನ್‌ ನಿಯಮ ಪಾಲಿಸುವಂತೆ ಕ್ರಮ ಕೈಗೊಳ್ಳಲಾಗಿದೆ. ಪ್ರತಿ ಕ್ವಾರಂಟೈನ್‌ ಕೇಂದ್ರಕ್ಕೆ ಒಬ್ಬ ನೋಡಲ್‌ ಅಧಿಕಾರಿ ಹಾಗೂ ಕೇಂದ್ರದ ಸಿಬಂದಿಗೆ ತರಬೇತಿ ನೀಡಿ ಮುಂಜಾಗ್ರತಾ ಕ್ರಮಗಳನ್ನು ಪಾಲಿಸಲು ಸೂಚಿಸಲಾಗಿದೆ. ಸಿಸಿಟಿವಿ ಕಣ್ಗಾವಲು ಕೂಡ ಇದೆ ಎಂದು ಜಿಲ್ಲಾಧಿಕಾರಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next