ಹುಬ್ಬಳ್ಳಿ: ಜನರಿಗೆ ಸಮರ್ಪಕ ಆರೋಗ್ಯ ಸೇವೆ ಒದಗಿಸುವ ನಿಟ್ಟಿನಲ್ಲಿ ವೈದ್ಯರ ಸಂಖ್ಯೆ ಹೆಚ್ಚಿಸಲು ಜಿಲ್ಲೆಗೊಂದು ವೈದ್ಯಕೀಯ ಕಾಲೇಜು ಆರಂಭಿಸುವುದು ಅಗತ್ಯವಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ಹೇಳಿದರು.
ಕಿಮ್ಸ್ ಗೋಲ್ಡನ್ ಜುಬಿಲಿ ಸಭಾಂಗಣದಲ್ಲಿ ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಹುಬ್ಬಳ್ಳಿ ವತಿಯಿಂದ ನಡೆದ ವಿಶ್ವ ರೆಡ್‌ಕ್ರಾಸ್ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ವಿಶ್ವ ಆರೋಗ್ಯ ಸಂಸ್ಥೆಯನ್ವಯ ಪ್ರತಿ 1000 ಜನರಿಗೆ ಒಬ್ಬರು ವೈದ್ಯರಿರಬೇಕು. ಆದರೆ ಪ್ರಸ್ತುತ ಭಾರತದಲ್ಲಿ 136 ಕೋಟಿ ಜನಸಂಖ್ಯೆಯಿದ್ದು, ಕೇವಲ 8 ಲಕ್ಷ ವೈದ್ಯರಿದ್ದಾರೆ. ಇನ್ನೂ 5 ಲಕ್ಷ ವೈದ್ಯರ ಅವಶ್ಯಕತೆಯಿದೆ. ಆದ್ದರಿಂದ ರಾಜ್ಯ ಹಾಗೂ ಕೇಂದ್ರ ಸರಕಾರಗಳು ಪ್ರತಿ ಜಿಲ್ಲೆಗೊಂದರಂತೆ ವೈದ್ಯಕೀಯ ಕಾಲೇಜು ಆರಂಭಿಸಬೇಕು ಎಂದರು.
ಹಾವೇರಿಯಲ್ಲಿ ವೈದ್ಯಕೀಯ ಕಾಲೇಜು ಆರಂಭಿಸಬೇಕೆಂದು ಹಲವು ವರ್ಷಗಳಿಂದ ಆಗ್ರಹಿಸುತ್ತಿದ್ದರೂ ಸರಕಾರಗಳು ನಿರ್ಲಕ್ಷಸಿವೆ. ಪ್ರಭಾವಿ ರಾಜಕೀಯ ಮುಖಂಡರಿದ್ದರಿಂದ ಗದಗ ಹಾಗೂ ಕೊಪ್ಪಳದಲ್ಲಿ ವೈದ್ಯಕೀಯ ಕಾಲೇಜುಗಳನ್ನು ನೀಡಲಾಗಿದೆ ಎಂದು ತಿಳಿಸಿದರು.
ಡಾ| ಜಿ.ಆರ್.ತಮಗೊಂಡ ರೆಡ್‌ಕ್ರಾಸ್ ಸಂಸ್ಥೆ ಕುರಿತು ಉಪನ್ಯಾಸ ನೀಡಿದರು. ಡಾ| ಪಿ.ವಿ. ದತ್ತಿ ಹಾಗೂ ಡಾ| ಅಬ್ದುಲ್ ಕರೀಮ್ ಅವರಿಗೆ ಹೆನ್ರಿ ಡ್ಯೂನಾಂಟ್ ಉತ್ತಮ ಸೇವಾ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕಿಮ್ಸ್ ನಿರ್ದೇಶಕ ಡಾ| ರಾಮಲಿಂಗಪ್ಪ, ಡಾ| ಕೆ.ಎಚ್. ಜಿತೂರಿ, ಡಾ| ಪ್ರಭು ಬಿರಾದಾರ, ಡಾ| ವಿ.ಬಿ. ನಿಟಾಲಿ, ಡಾ| ಟಿ.ಜಿ. ಪಾಟೀಲ, ಡಾ| ಕೆ.ಎಫ್. ಕಮ್ಮಾರ, ಸುರೇಶ ಹೊರಕೇರಿ ಇದ್ದರು.