ಮಂಡ್ಯ: ಜಿಲ್ಲಾ ಪಂಚಾಯಿತಿ ಅಧ್ಯಕ್ಷರ ಬದಲಾವಣೆಗೆ ಸಂಬಂಧಿಸಿದಂತೆ ಜಿಲ್ಲಾ ಪಂಚಾಯಿತಿಯಲ್ಲಿ ರಾಜಕೀಯ ಹೈಡ್ರಾಮಗಳು ಕಳೆದ ನಾಲ್ಕು ಸಾಮಾನ್ಯ ಸಭೆಗಳಲ್ಲಿ ನಡೆದಿವೆ. ಈಗ ಮತ್ತೂಂದು ಹೈಡ್ರಾಮಕ್ಕೆ ವೇದಿಕೆ ಸಜ್ಜುಗೊಂಡಿದೆ. ತಮ್ಮದೇ ಪಕ್ಷದಿಂದ ಅಧ್ಯಕ್ಷೆಯಾಗಿರುವ ನಾಗರತ್ನಸ್ವಾಮಿ ಅವರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲು ಜಾ.ದಳ ಪಕ್ಷದ ಸದಸ್ಯರು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ.
ಕಳೆದ ನಾಲ್ಕು ಸಭೆಗಳು ರಾಜೀನಾಮೆ ಪ್ರಹಸನದಿಂದ ಜಿಲ್ಲೆಯ ಯಾವುದೇ ಅಭಿವೃದ್ಧಿ ಚರ್ಚೆಗಳು ನಡೆಯದೇ ಅರ್ಧಕ್ಕೆ ಮೊಟಕುಗೊಂಡಿವೆ. ಈಗ ಜು.10ರಂದು ವಿವಿಧ ಸ್ಥಾಯಿ ಸಮಿತಿ ಸ್ಥಾನಗಳಿಗೆ ಅಧ್ಯಕ್ಷರ ನೇಮಕಕ್ಕೆ ಸಭೆ ಕರೆಯಲಾಗಿದೆ. ಇದರ ಜೊತೆಗೆ ಕೋವಿಡ್ 19 ಸಂಕಷ್ಟದ ಪರಿಸ್ಥಿತಿಯಲ್ಲಿ ಚುನಾವಣೆ ಅಗತ್ಯವಿದೆಯೇ ಎಂಬ ಪ್ರಶ್ನೆಗಳು ಎದ್ದಿವೆ.
ಸದಸ್ಯರು ಗೈರಾಗುವ ಸಾಧ್ಯತೆ: ಜಿಪಂ ಅಧ್ಯಕ್ಷೆ ನಾಗರತ್ನಸ್ವಾಮಿ ನೇತೃತ್ವದಲ್ಲಿ ನಡೆಯಲಿರುವ ಸಭೆಗೆ ಬಹುತೇಕ ಸದಸ್ಯರು ಗೈರಾಗುವ ಸಾಧ್ಯತೆ ಇದೆ. ಈಗಾಗಲೇ ಸಾಮಾನ್ಯ ಸಭೆಗಳಿಗೆ ಕೋರಂ ಅಭಾವ ಹಿನ್ನೆಲೆಯಲ್ಲಿ ಮುಂದೂಡಲಾಗುತ್ತಿದೆ. ಈಗ ಈ ಸಭೆಗೂ ಕೋರಂ ಅಭಾವ ಎದುರಾದರೂ ಅಚ್ಚರಿ ಇಲ್ಲ. ಪ್ರಸ್ತುತ ಹಾಲಿ ಇರುವ ಸ್ಥಾಯಿ ಸಮಿತಿ ಅಧ್ಯಕ್ಷರ ಕಾಲಾವಧಿ ಮುಗಿದಿದೆ. ಇದುವರೆಗೂ ಬಹುಮತವಿರುವ ಜಾ.ದಳ ಪಕ್ಷದ ಸದಸ್ಯರೇ ಸ್ಥಾಯಿ ಸಮಿತಿಗಳ ಅಧ್ಯಕ್ಷರಾಗಿದ್ದಾರೆ. ಅಧಿಕಾರದ ಚುಕ್ಕಾಣಿ ಹಿಡಿದಿರುವ ಜಾ.ದಳ ಪಕ್ಷದ ಸದಸ್ಯರು ಗೈರಾದರೆ ಚುನಾವಣೆ ನಡೆಯುವುದು ಬಹುತೇಕ ಅನುಮಾನವಾಗಿದ್ದು, ಸಭೆಗೆ ಶೇ.50ರಷ್ಟು ಕೋರಂ ಅಗತ್ಯವಿದೆ.
ಕೋವಿಡ್ 19 ಸಂಕಷ್ಟ: ಪ್ರಸ್ತುತ ಜಿಲ್ಲೆಯಲ್ಲಿ ಕೋವಿಡ್ 19 ತಾಂಡವವಾಡುತ್ತಿದೆ. ಪ್ರತಿದಿನ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದೆ. ಈ ಸಂದರ್ಭದಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷರ ನೇಮಕಕ್ಕೆ ಚುನಾವಣೆ ಪ್ರಕ್ರಿಯೆ ನಡೆಯುತ್ತಿರುವುದು ಸಮಂಜಸವೇ ಎಂಬ ಪ್ರಶ್ನೆಗಳು ಕಾಡುತ್ತಿವೆ. ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ.
ಇಂತಹ ಸಂದರ್ಭದಲ್ಲಿ ಚುನಾವಣೆ ನಡೆಸುವುದು ಸರಿಯಲ್ಲ ಎಂಬುದು ಹಲವು ಸದಸ್ಯರ ವಾದವಾಗಿದೆ. ಚುನಾವಣೆ ನಡೆಸುವುದರಿಂದ ಗುಂಪು ಸೇರುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಕೋವಿಡ್ 19 ಹರಡಬಹುದು ಎಂಬ ಭೀತಿ ಇದೆ. ಆದ್ದರಿಂದ ಚುನಾವಣೆ ಪ್ರಕ್ರಿಯೆಯನ್ನು ರದ್ದು ಅಥವಾ ಮುಂದೂಡಬೇಕು ಎಂಬುದು ಜಿಲ್ಲಾ ಪಂಚಾಯಿತಿ ಸದಸ್ಯರ ಆಗ್ರಹವಾಗಿದೆ.
ನಾಲ್ಕು ತಿಂಗಳ ಅವಧಿ ಬಾಕಿ: ಹಾಲಿ ಜಿಪಂ ಆಡಳಿತ ಮಂಡಳಿಯ ಆಡಳಿತಾವಧಿಯು ಇನ್ನು ಕೇವಲ ನಾಲ್ಕು ತಿಂಗಳು ಬಾಕಿ ಉಳಿದಿದೆ. ಈಗಾಗಲೇ ಅಧ್ಯಕ್ಷರ ರಾಜೀನಾಮೆಯ ಹೈಡ್ರಾಮಕ್ಕೆ ನಾಲ್ಕುಸಭೆಗಳುಮುಂದೂಡಿಕೆಯಾಗಿದ್ದು, ಈ ಸಭೆಗೂ ರಾಜೀನಾಮೆಯ ಗ್ರಹಣ ಹಿಡಿಯಲಿದೆಯೇ ಎಂದು ಕಾದು ನೋಡಬೇಕಿದೆ.
ಸ್ಥಾಯಿ ಸಮಿತಿಗಳಿಗೆ ಚುನಾವಣೆ: ಮೂರು ಸ್ಥಾಯಿ ಸಮಿತಿಗಳಿಗೆ ಚುನಾವಣೆ ನಡೆಯಲಿದೆ. ಜು.10ರ ಬೆಳಗ್ಗೆ 9ರಿಂದ 11ರವರೆಗೆ ನಾಮಪತ್ರ ಸಲ್ಲಿಕೆ, 11ಕ್ಕೆ ವಿಶೇಷ ಸಭೆ , 11.30ರಿಂದ 12ರವರೆಗೆ ನಾಮಪತ್ರ ಪರಿಶೀಲನೆ ಮಧ್ಯಾಹ್ನ 12ರಿಂದ 12.30ರವರೆಗೆ ಚುನಾವಣೆ, ಸಂಜೆ 4ರಿಂದ ಮತ ಎಣಿಕೆ ನಡೆಯಲಿದೆ.