Advertisement

ರಸಗೊಬ್ಬರ ಬಳಕೆಯಲ್ಲಿ ಜಿಲ್ಲೆಗೆ ಕೊನೆ ಸ್ಥಾನ

06:03 PM Feb 18, 2021 | Nagendra Trasi |

ವಿಜಯಪುರ: ಭಾರತದಲ್ಲಿ ಸುಮಾರು ಅರ್ಧ ಶತಮಾನದ ಹಿಂದೆಯೇ ರಸಗೊಬ್ಬರ ಪರಿಚಯವಾಗಿದ್ದು, ರಸಗೊಬ್ಬರ ಬಳಕೆಯಲ್ಲಿ ಬಸವನಾಡು ವಿಜಯಪುರ ಅತ್ಯಂತ ಹಿಂದುಳಿದಿದ್ದು ರಾಜ್ಯದಲ್ಲೇ ರಾಸಾಯನಿಕ ಬಳಕೆಯಲ್ಲಿ ಕೊನೆ ಸ್ಥಾನದಲ್ಲಿದೆ. ರಾಜ್ಯದಲ್ಲಿ ಇದೀಗ ಪ್ರತಿ ಹೆಕ್ಟೇರ್‌ಗೆ 100 ಕೆಜಿ ರಸಗೊಬ್ಬರ ಬಳಕೆ ಮಾಡಲಾಗುತ್ತಿದೆ. ಆದರೆ ವಿಜಯಪುರ ಜಿಲ್ಲೆಯಲ್ಲಿ ಮಾತ್ರ ಹೆಕ್ಟೇರ್‌ಗೆ ಕೇವಲ 45 ಕೆಜಿ ಪ್ರಮಾಣದಲ್ಲಿ ಮಾತ್ರ ರಸಗೊಬ್ಬರ ಬಳಕೆ ಆಗುತ್ತಿದೆ. ಇದರೊಂದಿಗೆ ಜಿಲ್ಲೆಯ ರೈತರು ವಿಜಯಪುರ ಸಾವಯವ ಕೃಷಿ ತವರು ಎನ್ನುವ ತನ್ನ ಕೀರ್ತಿಯನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

Advertisement

ವಿಜಯಪುರ ಜಿಲ್ಲೆಯಲ್ಲಿ 9 ಲಕ್ಷ ಹೆಕ್ಟೇರ್‌ ಕೃಷಿ ಬಿತ್ತನೆ ಪ್ರದೇಶವಿದ್ದರೂ ರಾಜ್ಯದ ಇತರೆ ಜಿಲ್ಲೆಗೆ ಹೋಲಿಸಿದಲ್ಲಿ ಅತ್ಯಂತ ಕಡಿಮೆ ಪ್ರಮಾಣದಲ್ಲಿ ರಸಗೊಬ್ಬರ ಬಳಕೆ ಮಾಡಲಾಗುತ್ತದೆ. ಮುಂಗಾರು ಹಂಗಾಮಿನಲ್ಲಿ 72,399 ಮೆಟ್ರಿಕ್‌ ಟನ್‌ ರಸಗೊಬ್ಬರ ಬೇಡಿಕೆ ಇದ್ದರೂ ಬೇಡಿಕೆಗೆ ಮೀರಿ 97,980 ಮೆಟ್ರಿಕ್‌ ಟನ್‌ ರಸಗೊಬ್ಬರ ಪೂರೈಕೆಯಾಗಿದೆ. ಹಿಂಗಾರು ಹಂಗಾಮಿನಲ್ಲಿ 75,045 ಮೆಟ್ರಿಕ್‌ ಟನ್‌ ಬೇಡಿಕೆ ಇದ್ದರೂ ಪೂರೈಕೆ ಆಗಿದ್ದು 44,091 ಮೆಟ್ರಿಕ್‌ ಟನ್‌ ರಸಗೊಬ್ಬರ ಮಾತ್ರ. ಕಳೆದ ವರ್ಷದ ಈ ಅಂಕಿಸಂಖ್ಯೆಯನ್ನೇ ಅವಲೋಕಿಸಿದರೂ ಜಿಲ್ಲೆಯಲ್ಲಿ ವಾರ್ಷಿಕ ಬೇಡಿಕೆಯ 1,47,444 ಮೆಟ್ರಿಕ್‌ ಟನ್‌ ರಸಗೊಬ್ಬರಕ್ಕೆ ಬೇಡಿಕೆ ಸಲ್ಲಿಸಿದರೂ ಪೂರೈಕೆ ಆಗಿದ್ದು ಮಾತ್ರ ಕೇವಲ 1,42,071 ಮೆಟ್ರಿಕ್‌ ಟನ್‌ ರಸಗೊಬ್ಬರ ಮಾತ್ರ.

ಇಲ್ಲಿ ಬೇಡಿಕೆಗಿಂತ ಕಡಿಮೆ ರಸಗೊಬ್ಬರ ಪೂರೈಕೆ ಆಗಿದೆ ಎಂಬುದು ರಸಗೊಬ್ಬರ ಬಳಕೆಯಲ್ಲಿ ಜಿಲ್ಲೆಯ ರೈತರು ಆಸಕ್ತಿ ತೋರುತ್ತಿಲ್ಲ. ಹೀಗಾಗಿ ಪೂರೈಕೆಯಾದ
ಗೊಬ್ಬರ ಬಳಕೆ ಇಲ್ಲದೇ ವ್ಯಾಪಾರಿಗಳು ಮುಂಗಡ ಬಂಡವಾಳ ಹೂಡಿ ಅನಗತ್ಯ ದಾಸ್ತಾನು ಮಾಡಲು ಆಸಕ್ತಿ ತೋರದಿರುವುದು ಪ್ರಮುಖ ಕಾರಣ.
ಕಳೆದ ಒಂದು ದಶಕದ ಹಿಂದೆ ರಸಗೊಬ್ಬರ ಬಳಕೆಯ ಈ ಪ್ರಮಾಣ ಇಷ್ಟೂ ಇರಲಿಲ್ಲ. ಈಚೆಗೆ ಹೈಬ್ರಿಡ್‌ ಬೀಜ ಉತ್ಪಾನದನೆ ಕಂಪನಿಗಳು, ರಸಗೊಬ್ಬರ
ಮಾರಾಟಗಾರರು ರೈತರನ್ನು ರಸಗೊಬ್ಬರ ಬಳಕೆ ಹಾಗೂ ರಸಾಯನಿಕ ಕ್ರಿಮಿನಾಶಕ ಬಳಕೆಗೆ ಹೆಚ್ಚು ಪ್ರೋತ್ಸಾಹಿಸಿದ ಪರಿಣಾಮ ಈಚೆಗೆ ರಸಗೊಬ್ಬರ
ಬಳಕೆ ಕೊಂಚ ಹೆಚ್ಚಿದೆ ಅಷ್ಟೇ.

ಜಿಲ್ಲೆಯಲ್ಲಿ ಪ್ರಮುಖವಾಗಿ ಬೆಳೆಯುವ ಮಾಲದಂಡಿ ಜೋಳದ ಪ್ರದೇಶವನ್ನು ತೊಗರಿ ಆವರಿಸಿದ್ದರಿಂದ ರಸಗೊಬ್ಬರ ಬಳಕೆ ಪ್ರಮಾಣ ಹೆಚ್ಚಾಗಿದೆ. ಇದಲ್ಲದೇ ರೋಗ ಹಾಗೂ ಕೀಟ್‌ ಬಾಧೆ ನಿಗ್ರಹಕ್ಕಾಗಿ ವಿವಿಧ ಕಂಪನಿಗಳು ಜಿಲ್ಲೆಯಲ್ಲಿ ರಸಾಯನಿಕ ಬಳಕೆಗೆ ಹೆಚ್ಚು ಜಾಗೃತಿಗೆ ಮುಂದಾಗಿದೆ, ಇಷ್ಟಿದ್ದರೂ ಜಿಲ್ಲೆಯ ರೈತರು
ಸಾಂಪ್ರದಾಯಿಕ ಸಾವಯವ ಪದ್ಧತಿಯಲ್ಲೇ ಕೃಷಿಗೆ ಮೊರೆ ಹೋಗಿರುವುದು ಇದು ಸಾಬೀತು ಪಡಿಸುತ್ತದೆ.

ಇದಲ್ಲದೇ ಜಿಲ್ಲೆ ಸಂಪೂರ್ಣ ಮಳೆ ಆಶ್ರಿತ ಜಿಲ್ಲೆಯಾಗಿದ್ದು, ಇಂಥ ಪರಿಸರದಲ್ಲಿ ಅಧಿಕ ಪ್ರಮಾಣದಲ್ಲಿ ಸಿರಿಧಾನ್ಯಗಳನ್ನೇ ಹೆಚ್ಚಾಗಿ ಬೆಳೆಯಲಾಗುತ್ತದೆ. ಕಳೆದ ಕೆಲ ವರ್ಷಗಳಿಂದ ನೀರಾವರಿ ಪ್ರದೇಶ ಅದರಲ್ಲೂ ಕೆರೆಗೆ ನೀರು ತುಂಬುವ ಯೋಜನೆಯಿಂದ ಜಿಲ್ಲೆಯಲ್ಲಿ ಜಮೀನಿಗೆ ನಿರೀಕ್ಷೆ ಮೀರಿ ಲಭ್ಯವಾಗುತ್ತಿದೆ. ನೀರಿನ ಲಭ್ಯತೆಯಿಂದಾಗಿ ಕಬ್ಬು ಬೆಳೆಯುವ ಪ್ರಮಾಣವೂ ಹೆಚ್ಚಿದೆ. ಕಬ್ಬು ಬೆಳೆಯುವ ರೈತರು ಹೆಚ್ಚು ಇಳುವರಿ ಪಡೆಯುವ ದುರಾಸೆ ಪರಿಚಯಿಸುವ ಕಂಪನಿಗಳು ಹಾಗೂ ಮಾರಾಟಗಾರರ ಪ್ರಚೋದನೆಯಿಂದಾಗಿ ಕಡ್ಡಾಯವಾಗಿ, ಅನಗತ್ಯವಾಗಿ ಅವೈಜ್ಞಾನಿಕವಾಗಿ ರಸಗೊಬ್ಬರ ಬಳಕೆಯನ್ನು ರೂಢಿಸಿ ಕೊಂಡಿದ್ದಾರೆ. ಇಂಥ ಪರಿಸ್ಥಿತಿ ಹೊರತಾಗಿ ಜಿಲ್ಲೆಯಲ್ಲಿ ರೈತರು ಕೃಷಿಯಲ್ಲಿ ಇನ್ನೂ ರಸಗೊಬ್ಬರ, ಕ್ರಿಮಿನಾಶಕ ಸೇರಿದಂತೆ ರಸಾಯನಿಕ ಬಳಕೆಗೆ ಪೂರ್ಣಪ್ರಮಾಣದಲ್ಲಿ
ಒಗ್ಗಿಕೊಂಡಿಲ್ಲ.

Advertisement

ಇನ್ನು ಜಿಲ್ಲೆಯಲ್ಲಿ ಕಳೆದ ಎರಡು ವರ್ಷಳಲ್ಲಿ ರಸಗೊಬ್ಬರ ಹಾಗೂ ಕ್ರಿಮಿನಾಶಕ ವ್ಯಾಪಾರಿಗಳ ಸಂಖ್ಯೆ ಹೆಚ್ಚುತ್ತಿದ್ದು, ಲೈಸೆನ್ಸ್‌ ಪಡೆದ ಸುಮಾರು 500 ವ್ಯಾಪಾರಿಗಳಿದ್ದರೂ ಸಕ್ರೀಯವಾಗಿ ವ್ಯಾಪಾರದಲ್ಲಿ ತೊಡಗಿರುವವ ಸಂಖ್ಯೆ 400 ಮಾತ್ರ. ಲೈಸೆನ್ಸ್‌ ಪಡೆದವರಲ್ಲಿ ಬಹುತೇಕರು ರೈತರು ಹೆಚ್ಚಿನ ಪ್ರಮಾಣದಲ್ಲಿ ರಸಗೊಬ್ಬರ ಬಳಕೆ ಮಾಡುವಂತೆ ಮನವೊಲಿಸಿ, ವ್ಯಾಪಾರ ಮಾಡುವಲ್ಲಿ ವಿಫಲವಾಗಿರವುದೇ ಇದಕ್ಕೆ ಸಾಕ್ಷಿ.

ಇನ್ನು ಸಕ್ರೀಯವಾಗಿರುವ ರಸಗೊಬ್ಬರ-ಕ್ರಿಮಿನಾಶಕ ವ್ಯಾಪಾರಿಗಳಲ್ಲಿ ಶೇ. 50 ವ್ಯಾಪಾರಿಗಳ ವಹಿವಾಟು ನಿರೀಕ್ಷಿತ ಪ್ರಮಾಣದಲ್ಲಿ ಇಲ್ಲ ಎಂದು ವ್ಯಾಪಾರಿಗಳೇ ಹೇಳುತ್ತಾರೆ.ಅಷ್ಟರ ಮಟ್ಟಿಗೆ ಅರ್ಧ ಶತಮಾನವಾದರೂ ವಿಜಯಪುರ ಜಿಲ್ಲೆಯಲ್ಲಿ ರೈತರು ಪಾರಂಪರಿಕ ಕೃಷಿ ವಿಧಾನವಾದ ಸಾವಯವ ಕೃಷಿ ಹೊರತಾಗಿ ಚಿಂತನೆ ನಡೆಸಿಲ್ಲ ಎಂಬುದಕ್ಕೆ ಸಾಕ್ಷಿ ನೀಡುತ್ತಿದೆ. ಇದಲ್ಲದೇ ರಸಗೊಬ್ಬರ ಬಳಕೆ ಮಾಡುವ ರೈತರಿಗೆ ಅದರಲ್ಲೂ ಹೊಸ ತಲೆಮಾರಿನ ರೈತರಿಗೆ ಸಾವಯವ ಕೃಷಿಯಲ್ಲಿ ಸಿರಿಯನ್ನು ಮನವರಿಕೆ ಮಾಡಿಕೊಟ್ಟಲ್ಲಿ ವಿಜಯಪುರ ಜಿಲ್ಲೆ ಸಂಪೂರ್ಣ ಸಾವಯವ ಕೃಷಿ ಜಿಲ್ಲೆ ಎಂಬ ಕೀರ್ತಿ ಸಂಪಾದಿಸಲಿದೆ. ಈ ಸಾಧನೆ ಮಾಡಲು ವಿಜಯಪುರ ಜಿಲ್ಲೆಗೆ ಸಾವಯವ ಕೃಷಿ ವಿಶ್ವವಿದ್ಯಾಲಯ ಸ್ಥಾಪನೆಯ ಅಗತ್ಯವಿದೆ.

ರಾಜ್ಯದಲ್ಲಿ ಬಹುತೇಕ ಜಿಲ್ಲೆಗಳಲ್ಲಿ ನೀರಾವರಿ ಮಾತ್ರವಲ್ಲದೇ ಮಳೆ ಆಶ್ರಿತ ಪ್ರದೇಶದಲ್ಲೂ ಈಚೆಗೆ ರಸಗೊಬ್ಬರ ಹಾಗೂ ರೋಗ-ಹಾಗೂ ಕೀಟ ಹತೋಟಿಗೆ ರಸಾಯನಿಕ-ಕ್ರಿಮಿನಾಶಕ ಬಳಕೆ ಆರಂಭಗೊಂಡಿದೆ. ಸಾವಯವ ಕೃಷಿಗೆ ಇರುವ ಮಹತ್ವ, ಬೆಳೆದ ಬೆಳೆಗೆ ಸೂಕ್ತ-ನಿರೀಕ್ಷಿತ ಬೆಲೆ ಕೊಡುವ ಮಾರುಕಟ್ಟೆ ಸೃಷ್ಟಿಯಾಗಬೇಕು. ವಿಜಯಪುರ ಜಿಲ್ಲೆಯಲ್ಲಿ ಸಾವಯವ ಕೃಷಿ ವಿಶ್ವವಿದ್ಯಾಲಯ ಸ್ಥಾಪಿಸಿದಲ್ಲಿ ಇಲ್ಲಿನ ಉತ್ಕೃಷ್ಟ-ರಫ್ತು ಗುಣಮಟ್ಟದ ಸಾವಯವ ಕೃಷಿ ಉತ್ಪನ್ನಗಳಿಗೆ ವಿದೇಶಿ ಮಾರುಕಟ್ಟೆ ದೊರೆಯಬೇಕು. ಆಗ ಯುವ ರೈತರು ಸಾವಯವ ಕೃಷಿಯಿಂದ ವಿಮುಖರಾಗಲು ಬಯಸುವುದಿಲ್ಲ.
ರಾಜಶೇಖರ ನಿಂಬರ್ಗಿ
ಪ್ರಗತಿಪರ ಸಾವಯವ ಕೃಷಿ ರೈತ,
ಕೃಷಿ ಪಂಡಿತ ಪ್ರಶಸ್ತಿ ವಿಜೇತ

*ಜಿ.ಎಸ್.ಕಮತರ

Advertisement

Udayavani is now on Telegram. Click here to join our channel and stay updated with the latest news.

Next