ಚಿಕ್ಕಬಳ್ಳಾಪುರ: ಮಹಾಮಾರಿ ಕೋವಿಡ್ ನಂತರ ಮನೆಯಿಂದಲೇ ವೈದ್ಯರೊಂದಿಗೆ ಸಂಪರ್ಕ ಸಾಧಿಸಿ ವೈದ್ಯಕೀಯ ಸೌಲಭ್ಯ ಪಡೆಯುವ ದಿಕ್ಕಿನಲ್ಲಿ ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅನುಷ್ಠಾನಕ್ಕೆ ತಂದ ಇ-ಸಂಜೀವಿನಿ ಕಾರ್ಯಕ್ರಮದಲ್ಲಿ ಕಳೆದ ಡಿಸೆಂಬರ್ ತಿಂಗಳಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯು ಟೆಲಿ ಮೆಡಿಸಿನ್ ಪ್ರಗತಿಯಲ್ಲಿ ಇಡೀ ರಾಜ್ಯಕ್ಕೆ ಮೊದಲ ಸ್ಥಾನ ಪಡೆದು ಗಮನ ಸೆಳೆದಿದೆ.
ಹೌದು, ಟೆಲಿ ಮೆಡಿಸಿನ್ ಕಾರ್ಯಕ್ರಮದಡಿ ಬರೋಬ್ಬರಿ 25,985 ಮಂಮಾಡಿ ನುರಿತ ಜಿಲ್ಲೆಯ ನುರಿತ ವೈದ್ಯಕೀಯ ತಜ್ಞರಿಂದ ಆರೋಗ್ಯ ಸೇವೆ ಪಡೆದುಕೊಂಡಿದ್ದು ಜಿಲ್ಲೆಯು ಇ-ಸಂಜೀವಿನಿ ಅನುಷ್ಟಾನದಲ್ಲಿ ಶೇ.77.97 ರಷ್ಟು ಪ್ರಗತಿ ಸಾಧಿಸಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದೆ. ಇತ್ತೀಚಿನ ದಿನಗಳಲ್ಲಿ ರಾಜ್ಯದಲ್ಲಿ ಟೆಲಿ ಮೆಡಿಸಿನ್ ಕಾರ್ಯಕ್ರಮ ಹೆಚ್ಚು ಜನಪ್ರಿಯವಾಗಿದ್ದು ಮನೆ ಬಾಗಿ ಲಲ್ಲಿ ಹೊರ ರೋಗಿಗಳೂ ಅನವಶ್ಯಕವಾಗಿ ಆಸ್ಪತ್ರೆಗಳಿಗೆ ಸುತ್ತಾಡದೇ, ವೈದ್ಯಕೀಯ ಸೇವೆ ಅಥವಾ ಮಾರ್ಗ ದರ್ಶನ ಪಡೆಯುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಇ-ಸಂಜೀವಿನ ಯೋಜನೆಯನ್ನು ರೂಪಿ ಸಿದ್ದು, ಹೆಚ್ಚು ಮಂದಿ ಅದರ ಲಾಭ ಪಡೆಯುತ್ತಿರುವುದು ಕಂಡು ಬಂದಿದೆ.
ಇದೀಗ ಜಿಲ್ಲೆಯು ಕಳೆದ ಡಿಸೆಂಬರ್ ತಿಂಗಳಲ್ಲಿ ರಾಜ್ಯದ 32 ಜಿಲ್ಲೆಗಳ ಪೈಕಿ ಟೆಲಿ ಮೆಡಿಸಿನ್ ಯೋಜನೆಯನ್ನು ಹೆಚ್ಚು ಬಳಸಿಕೊಂಡಿದೆ. ಇ-ಸಂಜೀವಿನಿ ಯೋಜನೆಯಡಿ ಜಿಲ್ಲೆಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ 215 ಹೆಲ್ತ್ ವರ್ಕರ್‌ಗಳನ್ನು ಇದಕ್ಕಾಗಿ ನಿಯೋಜಿಸಿದ್ದು , 128 ಲಾಗಿನ್‌ಗಳನ್ನು ಸೃಷ್ಠಿಸಲಾಗಿದೆ. ದಿನಕ್ಕೆ 1075 ಗುರಿ ನೀಡಲಾಗಿದೆ. ತಿಂಗಳಿಗೆ 33,325 ಗುರಿ ನೀಡಲಾಗಿದೆ. ಆದರೆ ಕಳೆದ ಡಿಸೆಂಬರ್ ತಿಂಗಳಲ್ಲಿ ಜಿಲ್ಲೆಯು ಟೆಲಿ ಮೆಡಿಸಿನ್ ಕಾರ್ಯಕ್ರಮದಡಿ 25,985 ಮಂದಿ ಕರೆ ಮಾಡಿ ವೈದ್ಯಕೀಯ ನೆರವು ಪಡೆದುಕೊಂಡಿದ್ದಾರೆ. ಆ ಮೂಲಕ ಜಿಲ್ಲೆಯು ಶೇ.77.97 ರಷ್ಟು ಪ್ರಗತಿ ಸಾಧಿಸಿದೆ.
ತುಮಕೂರು ಜಿಲ್ಲೆಗೆ ಕೊನೆ ಸ್ಥಾನ: ಕಳೆದ ಡಿಸೆಂಬರ್ ತಿಂಗಳಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯು ಮೊದಲ ಸ್ಥಾನದಲ್ಲಿದ್ದು,ನಂತರದಲ್ಲಿ ಬಳ್ಳಾರಿ ಶೇ.69.13 ರಷ್ಟು ಪ್ರಗತಿ ಸಾಧಿಸಿ ಎರಡನೇ ಸ್ಥಾನದಲ್ಲಿದೆ. ಮಂಡ್ಯ ಶೇ.67.47 ರಷ್ಟು ಪ್ರಗತಿ ಸಾಧಿಸಿ ಮೂರನೇ ಸ್ಥಾನದಲ್ಲಿದೆ. ತುಮಕೂರು ಜಿಲ್ಲೆಯು ಟೆಲಿ ಮೆಡಿಸಿನ್ ಕಾರ್ಯಕ್ರಮದಲ್ಲಿ ಶೇ.7.45 ರಷ್ಟು ಪ್ರಗತಿ ಸಾಧಿಸಿ ಕೊನೆ ಸ್ಥಾನದಲ್ಲಿದೆ. ನಂತರ ಉತ್ತರ ಕನ್ನಡ ಶೇ.9.86 ರಷ್ಟು ಪ್ರಗತಿ ಸಾಧಿಸಿ ಎರಡನೇ ಸ್ಥಾನದಲ್ಲಿದೆ. ಜಿಲ್ಲೆಯಲ್ಲಿ ಕಳೆದ ಡಿಸೆಂಬರ್ ತಿಂಗಳಲ್ಲಿ ಮನೆಯಿಂದಲೇ 25,985 ಮಂದಿ ಕರೆ ಮಾಡಿ ಇ-ಸಂಜೀವಿನಿ ಕಾರ್ಯಕ್ರಮದಡಿ ರೂಪಿಸಿರುವ ಟೆಲಿ ಮೆಡಿಸಿನ್ ಸೇವೆಯನ್ನು ಬಳಸಿಕೊಂಡಿದ್ದು, ಶೇ.77.97 ರಷ್ಟು ಉತ್ತಮ ಪ್ರಗತಿ ಸಾಧಿಸಿ ಜಿಲ್ಲೆಯು ಇಡೀ ರಾಜ್ಯದಲ್ಲಿ ಮೊದಲ ಸ್ಥಾನ ಪಡೆದುಕೊಂಡಿದೆ.
-ಡಾ.ಎಸ್.ಎಸ್.ಮಹೇಶ್ ಕುಮಾರ್, ಜಿಲ್ಲಾ ಆರೋಗ್ಯಾಧಿಕಾರಿ.
– ಕಾಗತಿ ನಾಗರಾಜಪ್ಪ