Advertisement

ರೈತರ ಸಮಸ್ಯೆಗಳ ಪರಿಹಾರಕ್ಕೆ ಜಿಲ್ಲಾಡಳಿತ ಸಿದ್ಧ

09:37 PM Nov 27, 2019 | Lakshmi GovindaRaj |

ಹಾಸನ: ಸಾಮಾಜಿಕ ಭದ್ರತಾ ಯೋಜನೆಗಳ ಮಾಸಾಶನ, ಉದ್ಯೋಗ ಖಾತರಿ ಯೋಜನೆ ಕೂಲಿಹಣ, ಬೆಳೆಪರಿಹಾರ ಮತ್ತಿತರ ಸರ್ಕಾರದ ಸೌಲಭ್ಯಗಳಲ್ಲಿ ಫ‌ಲಾನುಭವಿಗಳಿಗೆ ಮಂಜೂರಾದ ಹಣವನ್ನು ಯಾವುದೇ ಬ್ಯಾಂಕ್‌ ಸಾಲಕ್ಕೆ ಕಟಾವು ಮಾಡಿಕೊಳ್ಳಬಾರದು ಎಂದು ಜಿಲ್ಲಾಧಿಕಾರಿ ಆರ್‌.ಗಿರೀಶ್‌ ಅವರು ಬ್ಯಾಂಕುಗಳಿಗೆ ಸೂಚನೆ ನೀಡಿದರು.

Advertisement

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ರೈತ ಪ್ರತಿನಿಧಿಗಳ ಅಹವಾಲು ಆಲಿಸಿ ಮಾತನಾಡಿದ ಜಿಲ್ಲಾಧಿಕಾರಿಯವರು, ಬ್ಯಾಂಕ್‌ ಸಾಲಕ್ಕಾಗಿ ರೈತರನ್ನು ಅಲೆಸಬಾರದು. ಎಲ್ಲ ಬ್ಯಾಂಕ್‌ಗಳಲ್ಲಿ ಸಾಲ ಅರ್ಜಿ ಮತ್ತಿತರ ನಮೂನೆಗಳನ್ನು ಕಡ್ಡಾಯವಾಗಿ ಕನ್ನಡದಲ್ಲಿ ಮುದ್ರಿಸಿ ನೀಡಬೇಕು ಈ ಬಗ್ಗೆ ಲೀಡ್‌ ಬ್ಯಾಂಕ್‌ ವ್ಯವಸ್ಥಾಪಕರು ಎಲ್ಲಾ ಬ್ಯಾಂಕಗಳಿಗೆ ಸ್ಪಷ್ಟ ಸೂಚನೆ ನೀಡಬೇಕು ಎಂದು ಜಿಲ್ಲಾಧಿಕಾರಿ ನಿರ್ದೇಶನ ನೀಡಿದರು.

ಮಾಸಾಶನ ಹಣ ಖಾತೆಗೆ ಜಮಾ: ಗ್ರಾಮೀಣ ಪ್ರದೇಶದಲ್ಲಿ ತಡೆಹಿಡಿದಿರುವ ವಿವಿಧ ಸಾಮಾಜಿಕ ಭದ್ರತಾ ಯೋಜನೆಗಳ ಫ‌ಲಾನುಭವಿಗಳಿಂದ ಬ್ಯಾಂಕ್‌ ಖಾತೆಗಳ ವಿವರ ಪಡೆದು ಹಣವನ್ನು ನೇರವಾಗಿ ಅವರ ಬ್ಯಾಂಕ್‌ ಖಾತೆಗಳಿಗೆ ವರ್ಗಾವಣೆ ಮಾಡಲು ಕ್ರಮ ಕೈಗೊಳ್ಳಬೇಕು ಎಂದರು.

ಪೋಡಿ ಮುಕ್ತ ಗ್ರಾಮ ಅನುಷ್ಠಾನ ವಿಳಂಬ: ಪೋಡಿ ಮುಕ್ತ ಗ್ರಾಮಯೋಜನೆ ಅನುಷ್ಠಾನ ವಿಳಂಬವಾಗಿದೆ. ಅದೇ ರೀತಿ ದುರಸ್ತಿ ಪ್ರಕ್ರಿಯೆಯಲ್ಲಿ ಲೋಪಗಳಾಗುತ್ತಿದ್ದು, ಅದನ್ನು ಸರಿಪಡಿಸುವಂತೆ ರೈತ ಮುಖಂಡರು ಮನವಿ ಮಾಡಿದರು. ಈ ಬಗ್ಗೆ ಪರಿಶೀಲಿಸಿ ನ್ಯಾಯಸಮ್ಮತ ತ್ವರಿತ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿಯವರು ಭೂದಾಖಲೆಗಳ ಉಪ ನಿರ್ದೇಶಕರಿಗೆ ಸೂಚನೆ ನೀಡಿದರು.

ರೈತರಿಗೆ ಪರಿಹಾರ ವಿತರಿಸಿ: ಬೆಳೆ ವಿಮೆ ಪರಿಹಾರವನ್ನು ತ್ವರಿತವಾಗಿ ವಿತರಿಸಬೇಕು. ಕಾಡಾನೆ ಹಾವಳಿ ಪೀಡಿತ ಪ್ರದೇಶದಲ್ಲಿ ವನ್ಯ ಜೀವಿಗಳಿಂದ ಉಂಟಾದ ಬೆಳೆಗಳಿಗೆ ನ್ಯಾಯ ಸಮ್ಮತವಾಗಿ ಪರಿಹಾರ ವಿತರಣೆ, ಕಾಫಿ ಬೆಳೆಹಾನಿ ಪರಿಹಾರ ಮೊತ್ತ ಹೆಚ್ಚಳ ಪ್ರಸ್ತಾವನೆ ಸಲ್ಲಿಸಬೇಕು ಎಂದು ಕೃಷಿ, ತೋಟಗಾರಿಕೆ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

Advertisement

ಆನೆ ಹಾವಳಿ ತಡೆಗೆ ರೈಲ್ವೆ ಕಂಬಿ ತಡೆಗೋಡೆ: ಜಿಲ್ಲೆಯಲ್ಲಿ ಆನೆಕಾರಿಡಾರ್‌ ಯೋಜನೆ ಅನುಷ್ಠಾನ ಕಷ್ಟ. ಆದರೆ ಆನೆ ಉಪಟಳ ನಿಯಂತ್ರಣಕ್ಕೆ ರೈಲ್ವೆ ಕಂಬಿಗಳಿಂದ ತಡೆಗೋಡೆ ನಿರ್ಮಾಣಕ್ಕೆ ಯೋಜನೆ ಜಾರಿಗೊಳಿಸಲಾಗುತ್ತಿದ್ದು, ಈ ವರ್ಷ ಕಾಮಗಾರಿ ಭಾಗಶಃ ಅನುಷ್ಠಾನವಾಗಲಿದೆ ಎಂದರು.

ಎತ್ತಿನ ಹೊಳೆ ಯೋಜನೆಯಡಿ ಜಮೀನು ಕಳೆದುಕೊಳ್ಳುವವ ರೈತರ ಸಭೆ ನಡೆಸಿ, ಅಭಿಪ್ರಾಯ ಸಂಗ್ರಸಿ ಭೂಮಿ ಹಾಗೂ ಬೆಳೆಗಳಿಗೆ ಪರಿಹಾರ ಒದಗಿಸಲಾಗುವುದು. ಹೇಮಾವತಿ ಜಲಾಶಯ ಯೋಜನೆ- ಪುನರ್ವಸತಿಯಲ್ಲಿ ಕಡ್ಡಾಯವಾಗಿ ಸ್ಥಳ ಪರಿಶೀಲಿಸಿ ನಂತರವೇ ಸತ್ಯಸಂಗತಿ ಅರಿತು ಹೊಸ ಮಂಜೂರಾತಿ ಪತ್ರಗಳನ್ನು ನೀಡಲಾಗುವುದು. ಈ ಹಿಂದೆ ಮಾಡಿರುವ ಮಂಜೂರಾತಿಗಳಲ್ಲಿ ಇರುವ ಲೋಪಗಳನ್ನು ಸರಿಪಡಿಸಲು ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಸಭೆಯಲ್ಲಿ ತಂಬಾಕು ಬೆಳೆಗಾರರ ಸಮಸ್ಯೆ, ಕೆರೆ, ಸ್ಮಶಾನ ಒತ್ತುವರಿ ತೆರವು ಪ್ರಕ್ರಿಯೆ, ಬ್ಯಾಂಕ್‌ಗಳಲ್ಲಿ ಕೇವಲ ಬಡ್ಡಿ ಕಟ್ಟಿಸಿಕೊಂಡು ಸಾಲ ನವೀಕರಿಸುವುದು. ತೆಂಗು ಬೆಳೆಗೆ ಪರಿಹಾರ, ಪಹಣಿಯಲ್ಲಿ ಬೆಳೆ ಕಾಲಂ ನಮೂದಿಸುವುದು. ಬೆಂಬಲ ಬೆಲೆಯೊಂದಿಗೆ ರಾಗಿ, ಭತ್ತ ಖರೀದಿ ಕೇಂದ್ರಗಳನ್ನು ಶೀಘ್ರ ಪ್ರಾರಂಭಿಸಬೇಕು, ಎಪಿಎಂಸಿಗಳಲ್ಲಿ ಭತ್ತ, ರಾಗಿ ದಾಸ್ತಾನು ಹಾಗೂ ಮುಂಗಡ ಹಣ ಪಡೆಯಲು ಅವಕಾಶ ಕಲ್ಪಿಸಬೇಕು ಎಂದು ರೈತ ಮುಂಖಡರು ಮನವಿ ಮಾಡಿದರು.

ಜಿಲ್ಲೆಯಲ್ಲಿ ವೈದ್ಯರ ಕೊರತೆಯಿದ್ದು ನೇಮಕಾತಿ ಪ್ರಕ್ರಿಯೆ ನಿರಂತರವಾಗಿ ನಡೆಸಲಾಗುತ್ತಿದೆ. ಡಯಾಲಿಸಿಸ್‌ ಕೇಂದ್ರಗಳನ್ನು ತಾಲೂಕು ಆಸ್ಪತ್ರೆಗಳಲ್ಲೂ ತರೆಯಲಾಗುತ್ತಿದೆ ಹಾಸನದ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಬಿಪಿಎಲ್‌ ಕಾರ್ಡ್‌ದಾರರಿಂದ ಹಣ ಪಡೆಯುತ್ತಿರುವ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ಅಗತ್ಯ ನಿರ್ದೇಶನಗಳನ್ನು ನೀಡಲಾಗುವುದು ಎಂದು ಜಿಲ್ಲಾಧಿಕಾರಿಯವರು ಭರವಸೆ ನೀಡಿದರು. ಜಿಲ್ಲೆಯ ರೈತರ ಸಮಸ್ಯೆಗಳ ಪರಿಹಾರಕ್ಕೆ ಜಿಲ್ಲಾಡಳಿತವು ಬದ್ಧವಾಗಿದೆ ಎಂದೂ ಅವರು ತಿಳಿಸಿದರು.

ಜಂಟಿ ಕೃ ನಿರ್ದೇಶಕ‌ ಮಧುಸೂದನ್‌, ತೋಟಗಾರಿಕಾ ಇಲಾಖೆಯ ಉಪನಿರ್ದೇಶಕ ಮಂಜುನಾಥ್‌, ಆಹಾರ ಇಲಾಖೆ ಉಪ ನಿರ್ದೇಶಕಿ ಸವಿತಾ, ಎಪಿಎಂಸಿ. ಕಾರ್ಯದರ್ಶಿ ಶ್ರೀಹರಿ, ಭೂ ದಾಖಲೆಗಳ ಇಲಾಖೆಯ ಉಪ ನಿರ್ದೇಶಕ‌ ಶ್ರೀನಿವಾಸ್‌, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಹರೀಶ್‌, ತಾಲೂಕು ವೈದ್ಯಾಧಿಕಾರಿ ವಿಜಯ್‌, ಲೀಡ್‌ ಬ್ಯಾಂಕ್‌ ವ್ಯವಸ್ಥಾಪಕರು, ರಾಜ್ಯ ರೈತ ಸಂಘದ ಉಪಾಧ್ಯಕ್ಷ ಡಿ.ಆರ್‌. ದುಗ್ಗಪ್ಪಗೌಡ ಹಾಗೂ ಜಿಲ್ಲೆಯ ರೈತ ಮುಖಂಡರಾದ ಯೋಗೇಶ್‌, ಸ್ವಾಮಿಗೌಡ, ಕೊಟ್ಟೂರು ಶ್ರೀನಿವಾಸ್‌, ಕಣಗಾಲ್‌ ಮೂರ್ತಿ ಮತ್ತಿತರು ಸಭೆಯಲ್ಲಿ ಪಾಲ್ಗೊಂಡಿದ್ದರು.

ಬಯೋಮೆಟ್ರಿಕ್‌ ಸಮಸ್ಯೆ ನಿವಾರಣೆ: ಬಯೋಮೆಟ್ರಿಕ್‌ನಲ್ಲಿ ಕೆಲವು ವಯೋವೃದ್ಧರ ಬೆರಳಚ್ಚು ಹೊಂದಾಣೆಕೆಯಾಗದೇ ಪಡಿತರ ನೀಡದಿರುವುದರ ಬಗ್ಗೆ ರೈತ ಪ್ರತಿನಿಧಿಗಳು ಜಿಲ್ಲಾಧಿಕಾರಿಯವರ ಗಮನ ಸೆಳೆದಾಗ, ಪಡಿತರ ಕಾರ್ಡ್‌ಗಳನ್ನು ಪರಿಶೀಲಿಸಿ ಎಲ್ಲಾ ಅರ್ಹ ಪಡಿತರ ಕಾರ್ಡುದಾರರಿಗೆ ಆಹಾರ ಧಾನ್ಯ ವಿತರಿಸಲು ಅಂಗಡಿ ಮಾಲಿಕರಿಗೆ ಸುತ್ತೋಲೆ ಹೊರಡಿಸುವಂತೆ ಅಹಾರ ಇಲಾಖೆ ಉಪ ನಿರ್ದೇಶಕರಿಗೆ ಜಿಲ್ಲಾಧಿಕಾರಿ ಗಿರೀಶ್‌ ಸೂಚಿಸಿದರು.

ಡಯಾಲಿಸಿಸ್‌ ಕೇಂದ್ರಕ್ಕೆ ಒತ್ತಾಯ: ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಡಯಾಲಿಸ್‌ ಕೇಂದ್ರ ತರೆಯಬೇಕು, ಅವುಗಳಿಗೆ ವೈದ್ಯಾಧಿಕಾರಿಗಳನ್ನು ನಿಯೋಜಿಸಬೇಕು, ಜಿಲ್ಲಾ ಆಸ್ಪತ್ರೆಯಲ್ಲಿ ಆರೋಗ್ಯ ಕರ್ನಾಟಕ ಆಯುಷಮಾನ್‌ ಭಾರತ್‌ ಯೋಜನೆ ಅನುಷ್ಠಾನದ ವೇಳೆ ಬಿಪಿಎಲ್‌ ಕಾರ್ಡುದಾರರಿಂದ ಹಣ ಪಡೆಯುತ್ತಿರುವುದು ನಿಲ್ಲಿಸಬೇಕು. ಡಯಾಲಿಸಿಸ್‌ ಯಂತ್ರಗಳ ಪ್ರಮಾಣ ಹೆಚ್ಚಿಸಬೇಕು ಎಂದು ರೈತ ಪ್ರತಿನಿಧಿಗಳು ಒತ್ತಾಯಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next