Advertisement

ನೀಲಗಿರಿ ನಾಶ ಮಾಡದಿದ್ದರೆ ಜಿಲ್ಲೆಗೆ ಉಳಿಗಾಲವಿಲ್ಲ

04:51 PM Sep 09, 2017 | Team Udayavani |

ಕೋಲಾರ: ಅರಣ್ಯ ಭವನದಲ್ಲಿ ನಡೆಯುತ್ತಿರುವ ನೀಲಗಿರಿ ಲಾಬಿಗೆ ಅಧಿಕಾರಿಗಳು ತಲೆ ಮಾರಿಕೊಂಡಿದ್ದಾರೆ. ವ್ಯವಸ್ಥೆ ಹೀಗೇ ಮುಂದುವರಿದರೆ ಜಿಲ್ಲೆಗೆ ಉಳಿಗಾಲವಿಲ್ಲ. ಇದು ಜಿಲ್ಲೆಯ ಜನರ ಜೀವನ್ಮರಣದ ಪ್ರಶ್ನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಆರ್‌.ರಮೇಶ್‌ಕುಮಾರ್‌ ಎಚ್ಚರಿಕೆ ನೀಡಿದರು. ನಗರದ ಜಿಪಂ ಸಭಾಂಗಣದಲ್ಲಿ ಶುಕ್ರವಾರ ನಡೆದ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. 

Advertisement

ನೀಲಗಿರಿ ರೈತನ ಶತ್ರು: ನೀಲಗಿರಿಯಿಂದ ಅಂತರ್ಜಲ ಬತ್ತಿ ಹೋಗುತ್ತಿದೆ. ನೀಲಗಿರಿ ರೈತನ ಶತ್ರು. ಅಕೇಷಿಯಾ ಹಾವಿನಂತೆ ಅವು ಇದ್ದರೆ ಯಾವ ಬೆಳೆಯೂ ಬರುವುದಿಲ್ಲ. ಅದು ನಮ್ಮ ಜಿಲ್ಲೆಗೆ ಶಾಪವಿದ್ದಂತೆ. ಆದ್ದರಿಂದ, ಈ ಬಗ್ಗೆ ರೈತರಿಗೆ ಅರಿವು ಮೂಡಿಸುವ ಮೂಲಕ ನೀಲಗಿರಿಯನ್ನು ಬೇರು ಸಮೇತ ಕಿತ್ತು ಹಾಕಬೇಕೆಂದು ಸೂಚಿಸಿದರು.

ನೀಲಗಿರಿ ಜಿಲ್ಲೆಗೆ ಮಾರಕ: ವ್ಯವಸಾಯ ಮಾಡಲು ಆಸಕ್ತಿ ಇಲ್ಲದವರು ಈ ಬೆಳೆಯಲ್ಲಿ ಲಾಭವನ್ನು ನಿರೀಕ್ಷಿಸುತ್ತಾರೆ. ಅದಕ್ಕೆ ನೀರು ಬೇಕಿಲ್ಲ, ಗೊಬ್ಬರ ಹಾಕುವಂತಿಲ್ಲ. ಯಾವ ಖರ್ಚೂ ಇಲ್ಲದ ಬೆಳೆ. ನಮ್ಮ ಜಿಲ್ಲೆಯಲ್ಲಿ ನೀಲಗಿರಿಯನ್ನು ಹಾಗೆಯೇ ಬಿಟ್ಟರೆ ಜನ ಸತ್ತು ಹೋಗುತ್ತಾರೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಗುಡುಗಿದರು.

ಅರಣ್ಯ ಅಧಿಕಾರಿ ಮಾತಿಗೆ ಆಕ್ರೋಶ: ಸಭೆಯಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿ ರಾಮಲಿಂಗೇಗೌಡ ಅವರು ನೀಲಗಿರಿ ಬೆಳೆ ಕುರಿತು ಮಾತನಾಡಿ, ಜಿಲ್ಲೆಯಲ್ಲಿ 30 ಸಾವಿರ ಹೆಕ್ಟೇರ್‌ನಷ್ಟು ನೀಲಗಿರಿ ಬೆಳೆ ಇದೆ. ಇದನ್ನು ವರ್ಷಕ್ಕೆ 10 ಸಾವಿರ ಹೆಕ್ಟೇರ್‌ನಂತೆ ಹಂತ ಹಂತವಾಗಿ ಮೂರು ವರ್ಷಗಳಲ್ಲಿ ಖಾಲಿ ಮಾಡಿಸಲಾಗುವುದು ಎಂದಾಗ ಸಚಿವರು ಈ ರೀತಿ ಆಕ್ರೋಶ ವ್ಯಕ್ತಪಡಿಸಿದರು.

ವಾರ್ಷಿಕ 2 ಕೋಟಿ ಸಸಿ ನೆಡಿ: ಜಿಲ್ಲೆಯಲ್ಲಿ ಈ ಬಾರಿ 15 ಲಕ್ಷ ವಿವಿಧ ಸಸಿಗಳನ್ನು ನೆಡಲಾಗಿದೆ. ಬೀಜದ ಉಂಡೆಗಳನ್ನೂ ಹಾಕಲಾಗಿದೆ.ಎಲ್ಲ ಕಡೆಗಳಲ್ಲಿ ಗಿಡಗಳು ಚೆನ್ನಾಗಿ ಬೆಳೆಯುತ್ತಿವೆ ಎಂದು ಅರಣ್ಯ ಅಧಿಕಾರಿ ವಿವರಣೆ ನೀಡಿದರು. ಆಗ ಸಚಿವರು ಮಾತನಾಡಿ, ಜಿಲ್ಲೆಯಲ್ಲಿ ಈಗ ಮಳೆ ಶುರುವಾಗಿದೆ. ಇಷ್ಟೋತ್ತಿಗೆ ಸಸಿ ನೆಡುವ ಕಾರ್ಯಕ್ರಮವನ್ನು ಅರಣ್ಯ ಇಲಾಖೆಯವರು ಮುಗಿಸಿಬಿಟ್ಟಿದ್ದೀರಿ. ಜಿಲ್ಲೆಯಲ್ಲಿ ಕನಿಷ್ಠ ವಾರ್ಷಿಕ 2 ಕೋಟಿ ಸಸಿಗಳನ್ನಾದರೂ ನೆಟ್ಟು ಕಾಪಾಡಿಕೊಂಡರೆ ನಮ್ಮ ಜಿಲ್ಲೆಯ ಚಿತ್ರಣವೇ ಬೇರೆಯಾಗುತ್ತದೆ.ಐದು ವರ್ಷಗಳಲ್ಲಿ ಸಾಕಷ್ಟು ಬದಲಾವಣೆ ತರಬಹುದು ಎಂದರು.

Advertisement

ನೀಲಗಿರಿ ನಾಶ ಮಾಡದಿದ್ದರೆ ಉಳಿಗಾಲವಿಲ್ಲ: ಮಾಲೂರು ತಾಲೂಕಿನಲ್ಲಿ ಸರ್ಕಾರಿ ಜಾಗದಲ್ಲಿ ನೀಲಗಿರಿಯನ್ನು ಬುಡ ಸಮೇತ ತೆಗೆದು ಹಾಕಿ ಖಾಲಿ ಜಾಗವನ್ನು ನೀಡಿದರೆ, ಐಟಿಸಿ ಕಂಪನಿಯವರು 2 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಮಾವು, ನೇರಳೆ, ಹೆಬ್ಬೇವು ಮುಂತಾದ ಸಸಿಗಳನ್ನು ನೆಟ್ಟು ಬೆಳೆಸಿಕೊಡುತ್ತಾರೆ ಎಂದು ಮಾಲೂರು ಶಾಸಕ ಮಂಜುನಾಥಗೌಡ ತಿಳಿಸಿದರು. ಜಿಲ್ಲೆಯಲ್ಲಿ ನೀಲಗಿರಿಯನ್ನು ಸಂಪೂರ್ಣವಾಗಿ ನಾಶ ಮಾಡುವ ಜವಾಬ್ದಾರಿ ಅರಣ್ಯ ಇಲಾಖೆ ಅಧಿಕಾರಿಗಳ ಮೇಲಿದೆ. ನೀಲಗಿರಿಯಿಂದ ಅಂತರ್ಜಲ ಕುಸಿಯುತ್ತಿದೆ. ಮಳೆಯೂ ಬರುತ್ತಿಲ್ಲ. ಇದನ್ನು ನಾಶ ಮಾಡದಿದ್ದರೆ ಜಿಲ್ಲೆಗೆ ಉಳಿಗಾಲವಿಲ್ಲ ಎಂದು ಕೆಜಿಎಫ್ ಶಾಸಕಿ ರಾಮಕ್ಕ ಹೇಳಿದರು.

ಮಾಲೂರು ತಾಲೂಕಿನಲ್ಲಿ ಅರಣ್ಯ ಇಲಾಖೆಯವರು ಸುಮಾರು 37 ಹೆಕ್ಟೇರ್‌ ಗೋಮಾಳ ಜಮೀನನ್ನು ತಮ್ಮ ವಶಕ್ಕೆ ಪಡೆದು ಲಕ್ಷಾಂತರ ರೂ ಖರ್ಚು ಮಾಡಿ ನೀಲಗಿರಿ, ಹೆಬ್ಬೇವು, ಶ್ರೀಗಂಧ ,ಮಾವು ಮುಂತಾದ ಗಿಡಗಳನ್ನು ಬೆಳೆಸಿದ್ದರು. ಹತ್ತಾರು ವರ್ಷಗಳ ಕಾಲ ಬೆಳೆದ ಈ ಮರಗಳನ್ನು ಯಾರೋ ಕಡಿದಿದ್ದಾರೆ. ಆದರೂ ಅರಣ್ಯ ಇಲಾಖೆ ಅಧಿಕಾರಿಗಳು ಮೂಕ ಪ್ರೇಕ್ಷಕರಂತೆ ಕಾಲ ದೂಡುತ್ತಿದ್ದಾರೆ. ಈ ಕಳುವಿನ ಬಗ್ಗೆ ಪೊಲೀಸರಿಗೆ ಇದುವರೆಗೂ ಏಕೆ ದೂರು ನೀಡಿಲ್ಲ ಎಂದು ಶಾಸಕರು ಆಕ್ಷೇಪ ವ್ಯಕ್ತಪಡಿಸಿದರು. 

ಸರ್ಕಾರಿ ಯೋಜನೆಗಳ ಪ್ರಚಾರ ಮಾಡಿ: ಸರ್ಕಾರ ಅನುಷ್ಠಾನಗೊಳಿಸಿದ ಯೋಜನೆಗಳ ಬಗ್ಗೆ ಆಯಾ ಇಲಾಖೆಗಳ ಅಧಿಕಾರಿಗಳು ಪ್ರಚಾರ ಮಾಡಬೇಕೆಂದು ಸೂಚನೆ ನೀಡಿದ ಜಿಲ್ಲಾ ಉಸ್ತುವಾರಿ ಸಚಿವರು, ಅಭಿವೃದ್ಧಿ ಕಾರ್ಯಕ್ರಮಗಳನ್ನು ಜಾರಿಗೊಳಿಸುವಾಗ ಅಡ್ಡಿ ಮಾಡುವ ವ್ಯಕ್ತಿಗಳು ಹೆಚ್ಚಾಗಿರುತ್ತಾರೆ. ಸಹಕಾರ ನೀಡುವವರ ಸಂಖ್ಯೆ ಕಡಿಮೆ. ಆದ್ದರಿಂದ, ಅಧಿಕಾರಿಗಳು ಜಾಗೃತರಾಗಿ ಕೆಲಸ ಮಾಡಬೇಕೆಂದರು.

ವಿವಿಧ ಇಲಾಖೆಗಳಡಿ ಜಾರಿಗೊಳಿಸಿದ ಯೋಜನೆಗಳನ್ನು ಹಾಗೂ ಅನುದಾನವನ್ನು ಜಿಲ್ಲೆಗಳಿಗೆ ಹಂಚಿಕೆ ಮಾಡಲಾಗುತ್ತದೆ. ಅದನ್ನು ನಮ್ಮ ಕ್ಷೇತ್ರಕ್ಕೆ, ಇನ್ನೊಂದು ಕ್ಷೇತ್ರಕ್ಕೆಂದು ವಾದಿಸಿಕೊಂಡಿದ್ದರೆ ಸಿಕ್ಕಿರುವ ಯೋಜನೆಗಳು ಸರ್ಕಾರಕ್ಕೆ ವಾಪಸ್ಸು ಹೋಗುತ್ತದೆ ಎಂದು ಎಚ್ಚರಿಸಿದರು. ಇದರಿಂದಾಗಿ ಜಾಗ ಎಲ್ಲಿ ಸಿಕ್ಕರೆ ಅಲ್ಲಿ ಯೋಜನೆ ಕಾರ್ಯಕತಗೊಳಿಸಲು ಮುಂದಾಗಬೇಕು. ಇದು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಜವಾಬ್ದಾರಿ ಎಂದು ಕಿವಿಮಾತು ಹೇಳಿದರು.

ರಾಜ್ಯದಲ್ಲಿ ಕೃಷಿ ಸಚಿವರಾಗಿ ಕೃಷ್ಣ ಬೈರೇಗೌಡರು ಅವರ ತಂದೆ ಬೈರೇಗೌಡರ ಹಾದಿಯಲ್ಲೇ ನಡೆಯುತ್ತಿದ್ದಾರೆ. ನಾವು ಸಹ ಅವರ ಜತೆಗೆ ಕೆಲಸ ಮಾಡಿದ ಅನುಭವವಿದೆ. ರೈತರ ಹಿತ ಕಾಯುವಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸುವ ಮೂಲಕ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಕೃಷಿ ಮೂಲಕ ರೈತರು ಹೇಗೆ ಆರ್ಥಿಕವಾಗಿ ಲಾಭ ಗಳಿಸಬಹುದೆಂಬ ಆಲೋಚನೆಯಲ್ಲಿ ಯೋಜನೆಗಳನ್ನು ಜಾರಿಗೊಳಿಸುತ್ತಿರುವುದು ಇತರರಿಗೆ ಮಾದರಿಯಾಗಿದೆ ಎಂದು ಸಚಿವರು ಹೇಳಿದರು.

ಸಭೆಯಲ್ಲಿ ಜಿಪಂ ಅಧ್ಯಕ್ಷೆ ಗೀತಾ, ಉಪಾಧ್ಯಕ್ಷೆ ಯಶೋಧಾ ಇದ್ದರು. ಜಿಪಂ ಸಿಇಒ ಬಿಬಿ ಕಾವೇರಿ ಅಧಿಕಾರಿಗಳಿಂದ ಮಾಹಿತಿ ಪಡೆದು ಸಭೆಗೆ ಒದಗಿಸುತ್ತಿದ್ದರು. ಜಿಲ್ಲಾ ಕೃಷಿಕ ಸಮಾಜದ ಡಿ.ಎಲ್‌.ನಾಗರಾಜ್‌ ಮಾತನಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next