Advertisement

ವ್ಯಾಪಾರಿಗಳ ಮನವಿ ತಿರಸ್ಕರಿಸಿದ ಜಿಲ್ಲಾಧಿಕಾರಿ

12:22 PM Jul 19, 2019 | Suhan S |

ಕೋಲಾರ: ಜಿಲ್ಲೆಯ ಶ್ರೀನಿವಾಸಪುರ ಪುರಸಭೆಗೆ ಸೇರಿದ ಮುಸಾಫೀರ್‌ ಮಕಾನ್‌ ಜಾಗದಲ್ಲಿ ನಿರ್ಮಿಸಿರುವ ಅಂಗಡಿ ಮಳಿಗೆಗಳಿಗೆ ದುಬಾರಿ ಠೇವಣಿ ಮತ್ತು ಬಾಡಿಗೆ ನಿಗದಿ ವಾಪಸ್‌ಗೆ ಆಗ್ರಹಿಸಿ ವ್ಯಾಪಾರಿಗಳ ನಿಯೋಗ ಜಿಲ್ಲಾಧಿಕಾರಿ ಜೆ.ಮಂಜುನಾಥ್‌ರಿಗೆ ಮನವಿ ಸಲ್ಲಿಸಿತಾದರೂ ಡೀಸಿ ಮನವಿ ತಿರಸ್ಕರಿಸಿದರು.

Advertisement

ಗುರುವಾರ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ವ್ಯಾಪಾರಿಗಳು ಮಾತನಾಡಿ, ನಾವು ಕಳೆದ 38 ವರ್ಷಗಳಿಂದ ವ್ಯಾಪಾರ ವಹಿವಾಟು ಮಾಡಿಕೊಂಡು ಇದ್ದೆವು. ಪುರಸಭೆ, ನಿಗದಿಪಡಿಸಿದ್ದ ತೆರಿಗೆ, ಬಾಡಿಗೆ ಪಾವತಿಸುತ್ತಾ ಮುಂದುವರಿದಿದ್ದೆವು. ಆದರೆ, ಕಟ್ಟಡ ಶಿಥಿಲ ಗೊಂಡಿರುವ ನೆಪದಲ್ಲಿ ತೆರವು ಮಾಡಬೇಕಾಗಿದೆ ಎಂದರು.

ಆಗಲ್ಲ: ಇದೀಗ ಮಳಿಗೆಯನ್ನು ನಿಮಗೆ ನೀಡಲಾಗುವುದು ಎಂದು ಭರವಸೆ ನೀಡಿದ್ದು ಈಗ 9 ಸಾವಿರ ರೂ., ಬಾಡಿಗೆ, 4.5 ಲಕ್ಷ ರೂ., ಠೇವಣಿ ಪಾವತಿಸಲು 13 ಮಂದಿ ಅಂಗಡಿ ಮಾಲಿಕರಿಗೆ ನೋಟಿಸ್‌ ನೀಡಿದೆ. ಆದರೆ, ನಾವುಗಳು ನಿಗದಿ ಪಡಿಸಿರುವಷ್ಟು ಪಾವತಿ ಸಲು ಆಗುತ್ತಿಲ್ಲ. ನಿಗದಿ ಪಡಿಸಿರುವ ದರ ಇಳಿಕೆ ಮಾಡಬೇಕು. ಈ ಹಿಂದೆ ಇದ್ದ ಬಸ್‌ ನಿಲ್ಧಾಣ ಸ್ಥಳಾಂತರ ಮಾಡಿರುವುದರಿಂದ ಮೊದಲು ಆಗುತ್ತಿದ್ದ ವ್ಯಾಪಾರ ಈಗ ಆಗುವುದಿಲ್ಲ. ಹೀಗಾಗಿ ಬಾಡಿಗೆ ಮತ್ತು ಠೇವಣಿ ದರ ಕಡಿಮೆಗೊಳಿಸಿ ಎಂದು ಸಭೆಯಲ್ಲಿ ಪ್ರತಿಪಾದಿಸಿದರು.

ಮಾನವೀಯತೆ:ಜಿಲ್ಲಾಧಿಕಾರಿ ಮಂಜುನಾಥ್‌ ಮಾತನಾಡಿ, ಮುಸಾಫೀರ್‌ ಮಕಾನ್‌ ಜಾಗದಲ್ಲಿ ಒಟ್ಟು 46 ಮಳಿಗೆ ನಿರ್ಮಿಸಿದ್ದು ಈ ಪೈಕಿ 13 ಮಂದಿಗೆ ಇಲಾಖೆ ನಿಗದಿ ಪಡಿಸಿರುವಂತೆ ಪ್ರತಿ ಮಳಿಗೆಗೆ 8.5 ಲಕ್ಷ ರೂ., ಠೇವಣೆಯಲ್ಲಿ ಶೇ.50 ಮಾತ್ರ ಪಾವತಿಸಲು ಮಾನವೀಯತೆ ಮೇಲೆ ಮಾಡಿದೆ. 9 ಸಾವಿರ ರೂ. ಬಾಡಿಗೆ ಮಾತ್ರ ಎಲ್ಲರಿಗೂ ನಿಗದಿ ಪಡಿಸಿರುವಂತೆ ನೀಡಬೇಕೆಂದರು.

ಈ ವೇಳೆ ಪಲ್ಲರೆಡ್ಡಿ ಎಂಬುವರು ಮಾತನಾಡಿ, ನಾವು ಹಲವು ದಶಕಗಳ ಹಿಂದಿನಿಂದ ಮುಸಾಫೀರ್‌ ಮಳಿಗೆಯಲ್ಲಿ ವ್ಯಾಪಾರ ವಹಿವಾಟು ನಡೆಸುತ್ತಿದ್ದೇನೆ. 250 ರೂ., ಮುಂಗಡ ಠೇವಣೆ ನೀಡಿದ್ದು 180 ರೂ. ಬಾಡಿಗೆ ನೀಡುತ್ತಿದ್ದೆ. ದಿಢೀರ್‌ ಎಂದು ಠೇವಣೆ ಮತ್ತು ಬಾಡಿಗೆ ಏರಿಕೆ ಮಾಡಿರುವುದನ್ನು ನಮ್ಮಿಂದ ಪಾವತಿಸಲು ಸಾಧ್ಯವಿಲ್ಲ ಎಂದರು.

Advertisement

ಜಿಲ್ಲಾಧಿಕಾರಿ ಮಂಜುನಾಥ್‌ ಮಾತನಾಡಿ, ಇದನ್ನು ನಾವು ನಿಗದಿಪಡಿಸಿಲ್ಲ. ಉಪನೋಂದಣಿ ಕಚೇರಿಯಿಂದ ಆಯಾ ಪ್ರದೇಶದ ಭೂಮಿ ಮೌಲ್ಯದ ಪ್ರಕಾರ ವೈಜ್ಞಾನಿಕವಾಗಿ ದರ ನಿಗದಿ ಪಡಿಸಿದ್ದು, ಬದಲಾಯಿಸಲು ಸಾಧ್ಯವಿಲ್ಲ. ನೀವು ಸರ್ಕಾರದ ಹಂತದಲ್ಲಿ ದರ ನಿಗದಿಪಡಿಸಿಕೊಂಡು ಬಂದಲ್ಲಿ ನಾವು ಸರ್ಕಾರದ ಆದೇಶ ಪಾಲಿಸುತ್ತೇನೆ ಎಂದರು.

ಮುಂದೂಡಿ:ವ್ಯಾಪಾರಿಯೊಬ್ಬರು ಇದನ್ನು ನಮ್ಮ ಶಾಸಕರಾದ ಸ್ಪೀಕರ್‌ ರಮೇಶ್‌ ಕುಮಾರ್‌ ಅವರ ಗಮನಕ್ಕೆ ತಂದಿದ್ದೆ. ಈಗ, ಅವರು ಕಲಾಪದಲ್ಲಿ ಬಿಡು ವಿಲ್ಲದ ಸ್ಥಿತಿಯಲ್ಲಿದ್ದು ನಮಗೆ 1 ತಿಂಗಳ ಕಾಲ ಅವಕಾಶ ನೀಡಬೇಕು. ಹರಾಜು ಮುಂದೂಡಬೇಕೆಂದರು.

ಜಿಲ್ಲಾಧಿಕಾರಿಗಳು ಹರಾಜು ಪ್ರಕ್ರಿಯೆಗಳು ಮುಂದೂಡಲು ಸಾಧ್ಯವಿಲ್ಲ. ಸರ್ಕಾರ ನಿಗದಿ ಪಡಿಸಿದ ದರಗಳನ್ನು ನೀವು ಪಾವತಿಸಿ ನಂತರದಲ್ಲಿ ಸರ್ಕಾರದಿಂದ ನೀವು ಕಡಿಮೆ ಮಾಡಿಸಿಕೊಂಡು ಬಂದಿರುವ ಆದೇಶ ತಂದಲ್ಲಿ ಉಳಿದ ಹಣವನ್ನು ಮರು ಪಾವತಿಸಲಾಗುವುದು ಎಂದು ಸಲಹೆ ನೀಡಿದರು.

ಯೋಜನಾಧಿಕಾರಿ ರಾಮಸ್ವಾಮಿ, ಮಳಿಗೆಯನ್ನು ಕೇಂದ್ರದಿಂದ 2 ಕೋಟಿ ರೂ. ಹಾಗೂ ರಾಜ್ಯದಿಂದ 3 ಕೋಟಿ ರೂ. ಸೇರಿ ಒಟ್ಟು 5 ಕೋಟಿ ರೂ. ಸಾಲ ಪಡೆದು ನಿರ್ಮಿಸಲಾಗಿದೆ. ಸಾಲ ಮತ್ತು ಬಡ್ಡಿ ಸಮೇತ ಮರು ಪಾವತಿಸಬೇಕಾಗಿದೆ ಎಂದು ಹೇಳಿದರು. ಈಗ ನಿಗದಿಪಡಿಸಿರುವ ದಿನಾಂಕದಂತೆ ಹರಾಜು ಪ್ರಕ್ರಿಯೆ ನಡೆಸಲಾಗುವುದು.

ನಿಮಗೆ ಮಳಿಗೆ ಪಡೆಯಲು ಸಾಧ್ಯವಿಲ್ಲ ಎಂದರೆ ಮೊದಲೇ ತಿಳಿಸಿ ಎಂದು ಹೇಳಿದರು. ಸಭೆಯಲ್ಲಿ ಶ್ರೀನಿವಾಸಪುರ ಪುರಸಭೆ ಮುಖ್ಯಾ ಧಿಕಾರಿಗಳು, ಸಿಬ್ಬಂದಿ, ಮುಸಾಫೀರ್‌ ಮಕಾನ್‌ ವ್ಯಾಪಾರಿಗಳು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next