ಗುತ್ತಿಗಾರು: “ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ’ ಕಾರ್ಯಕ್ರಮದ ಅಂಗವಾಗಿ ದ.ಕ. ಜಿಲ್ಲಾ ಧಿಕಾರಿ ಎಂ.ಆರ್. ರವಿ ಕುಮಾರ್ ಸುಳ್ಯದ ನಾಲ್ಕೂರು ಗ್ರಾಮದಲ್ಲಿ ವಾಸ್ತವ್ಯ ಹೂಡಿದ್ದು, ಹಲವು ಅರ್ಜಿಗಳು ವಿಲೇವಾರಿಗೊಂಡವು.
ಹಾಲೆಮಜಲು ವೆಂಕಟೇಶ್ವರ ಸಭಾಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾ- ತಾಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಪಾಲ್ಗೊಂಡು ಅಹವಾಲು ಸ್ವೀಕರಿಸಿ ದರು. 150ಕ್ಕೂ ಹೆಚ್ಚು ಅರ್ಜಿಗಳಿಗೆ ಜಿಲ್ಲಾಧಿಕಾರಿ ಪರಿಹಾರ ನೀಡಿದರು.
ಗ್ರಾಮದಲ್ಲಿ ಶ್ಮಶಾನ ಒತ್ತುವರಿಗೆ ಸಂಬಂಧಿಸಿ ಸಲ್ಲಿಸಲಾಗಿದ್ದ ದೂರು ಅರ್ಜಿಯನ್ನು ಪರಿಶೀಲಿಸಿ ಜಾಗದ ಒತ್ತುವರಿಯನ್ನು ತತ್‌ಕ್ಷಣ ತೆರವು ಗೊಳಿಸಲು ಕಂದಾಯ ಇಲಾಖೆ ಹಾಗೂ ಸ್ಥಳೀಯ ಗುತ್ತಿಗಾರು ಗ್ರಾ.ಪಂ.ಗೆ ಸೂಚಿಸಲಾಯಿತು.
ಪಂಜಿಪಳ್ಳ, ಎರ್ದಡ್ಕ ಭಾಗದಲ್ಲಿ ಕಾಡು ಪ್ರಾಣಿ ಹಾವಳಿ ಹೆಚ್ಚಾಗಿರುವ ಬಗ್ಗೆ ಗ್ರಾಮಸ್ಥರು ದೂರಿದರು. ಜಿಲ್ಲಾಧಿಕಾರಿಗಳು, ಕಾಡು ಪ್ರಾಣಿಗಳ ಹಾವಳಿ ತಡೆಗೆ ಅರಣ್ಯ ಇಲಾಖೆಯ ಜತೆಗೆ ನಾಗರಿಕರೂ ಸಹಕರಿಸಬೇಕು. ಆದಾಗ್ಯೂ ಕಾಡಂಚಿನಲ್ಲಿ ಹಾವಳಿ ಹೆಚ್ಚಾದಲ್ಲಿ ಅರಣ್ಯ ಇಲಾಖೆ ಮೂಲಕ ಕಂದಕಗಳ ನಿರ್ಮಾಣ ಮಾಡಿ ಹಾನಿ ಯಾಗದಂತೆ ಕ್ರಮ ಕೈಗೊಳ್ಳಲು ಅರಣ್ಯ ಇಲಾಖೆಗೆ ಸೂಚಿಸಿದರು.
15ಕ್ಕೂ ಹೆಚ್ಚು ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಲಾಯಿತು. ಎಡಿಸಿ ಕೃಷ್ಣಮೂರ್ತಿ, ಪುತ್ತೂರು ಉಪವಿಭಾಗದ ಸಹಾಯಕ ಆಯುಕ್ತ ಗಿರೀಶ್ ನಂದನ್, ಕೆಆರ್‌ಡಿಎಲ್‌ನ ನಿರಂಜನ್, ಗುತ್ತಿಗಾರು ಗ್ರಾ.ಪಂ ಅಧ್ಯಕ್ಷೆ ರೇವತಿ, ಉಪಾಧ್ಯಕ್ಷೆ ಪ್ರಮೀಳಾ, ತಹಶೀಲ್ದಾರ್ ಜಿ. ಮಂಜುನಾಥ್, ತಾ.ಪಂ. ಇಒ ಭವಾನಿಶಂಕರ್ ಭಾಗವಹಿಸಿದ್ದರು.