Advertisement

ಜಿಲ್ಲಾಧಿಕಾರಿ ಹೇಳಿದ್ರ್ರೂ ಕೆರೆ ಸ್ವಚ್ಛ ಮಾಡಿಲ್ಲ

04:12 PM May 10, 2019 | Team Udayavani |

ಮುಳಬಾಗಿಲು: ತಾಲೂಕಿನ ಎಲ್ಲಾ ಕೆರೆಗಳಲ್ಲಿನ ಗಿಡಗಂಟಿಗಳನ್ನು ಮಾ.30ರೊಳಗೆ ಕಟಾವು ಮಾಡಿಸಿ, ಸ್ವಚ್ಛಗೊಳಿಸಬೇಕು ಎಂದು ಜ.10ರಂದು ಡೀಸಿ ಜೆ.ಮಂಜುನಾಥ್‌ ಸಾಮಾಜಿಕ ಅರಣ್ಯ ಮತ್ತು ಗ್ರಾಪಂ ಅಧಿಕಾರಿಗಳಿಗೆ ಆದೇಶ ನೀಡಿದ್ದರೂ ಯಾವುದೇ ಕ್ರಮತೆಗೆದುಕೊಂಡಿಲ್ಲ.

Advertisement

ನಗರದ ಮಿನಿವಿಧಾನಸೌಧದಲ್ಲಿ ಜ.10ರಂದು ಜಿಲ್ಲಾಡಳಿತ, ತಾಲೂಕು ಆಡಳಿತ, ಅರಣ್ಯ ಪೊಲೀಸ್‌, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳ ಸಭೆಯನ್ನು ಸಂಸದ ಕೆ.ಎಚ್.ಮುನಿಯಪ್ಪ ಮತ್ತು ಶಾಸಕ ಎಚ್.ನಾಗೇಶ್‌ ಸಮ್ಮುಖದಲ್ಲಿ ಜಿಲ್ಲಾಧಿಕಾರಿ ಜೆ.ಮಂಜುನಾಥ್‌ ಸಾರ್ವಜನಿಕರ ಸಭೆ ನಡೆಸಿ ವಿವಿಧ ವಿಚಾರಗಳ ಕುರಿತು ಚರ್ಚಿಸಲಾಗಿತ್ತು. ಅಲ್ಲದೇ, ಶೀಘ್ರ ಕೆ.ಸಿ.ವ್ಯಾಲಿ ಮತ್ತು ಮುಂದಿನ ವರ್ಷದಲ್ಲಿ ಎತ್ತಿನಹೊಳೆ ನೀರು ತಾಲೂಕಿನ ಕೆರೆಗಳಿಗೆ ಬರುವುದರಿಂದ ನೀರು ಸಂರಕ್ಷಿಸಲು ಈಗಾಗಲೇ ಹಲವು ವರ್ಷಗಳಿಂದ ಎಲ್ಲಾ ಕೆರೆಗಳಲ್ಲಿ ಬೆಳೆದಿರುವ ಜಾಲಿ, ಇತರೆ ಮರ ಗಿಡಗಳನ್ನು ಗ್ರಾಪಂ ಮೂಲಕ ಮಾ.30ರೊಳಗೆ ಕಟಾವು ಮಾಡಿಸಿ ಕೆರೆ ಸ್ವಚ್ಛಗೊಳಿಸಲು ಸಾಮಾಜಿಕ ಅರಣ್ಯ ಇಲಾಖೆ ವಲಯಾರಣ್ಯಾಧಿಕಾರಿ ಹರೀಶ್‌ಗೆ ಕಟ್ಟಪ್ಪಣೆ ಮಾಡಿದ್ದರು. ಆದರೆ, ಜಿಲ್ಲಾಧಿಕಾರಿಗಳು ನಿಗದಿತ ದಿನಾಂಕ ಮುಗಿದು ತಿಂಗಳು ಕಳೆದಿದ್ದರೂ ಕೆರೆ ಸ್ವಚ್ಛ ಮಾಡಿಲ್ಲ.

ನೀರು ಹರಿಸುವ ಕೆರೆಗಳು: ಇತ್ತೀಚಿನ ದಿನಗಳಲ್ಲಿ ಕೆ.ಸಿ.ವ್ಯಾಲಿ ನೀರು ಕೋಲಾರ ಕೆರೆಗಳಿಗೆ ಹರಿಸಿರುವುದರಿಂದ ಅವುಗಳು ತುಂಬಿ ಕ್ರಮೇಣ ಪಾಲಾರ್‌ ನದಿಯ ಮೂಲಕ ಹೊಳಲಿ ಕೆರೆಗೆ ಹರಿದು, ಅಲ್ಲಿಂದ ಕ್ಲಸ್ಟರ್‌ 1ರ ಮೂಲಕ ಜಮ್ಮನಹಳ್ಳಿ ಕೆರೆ, ವರದಗಾನಹಳ್ಳಿ ಬಿದಿರು ಕೆರೆ, ವಿಜಲಾಪುರ ದೊಡ್ಡ ಕೆರೆ, ಗಂಜಿಗುಂಟೆ ದೊಡ್ಡ ಕೆರೆ, ಆವಣಿ ದೊಡ್ಡ ಕೆರೆ, ಊ.ಮಿಟ್ಟೂರು ದೊಡ್ಡ ಕೆರೆ, ಮರಕಲಘಟ್ಟ ದೊಡ್ಡ ಕೆರೆ, ಕ್ಲಸ್ಟರ್‌ 1ಎ ರಲ್ಲಿ ಕದರೀಪುರ ಎರಕುಲಗುಂಟ ಕೆರೆ ಮತ್ತು ವಿರೂಪಾಕ್ಷ ಗುಟ್ಟಹಳ್ಳಿ ಕೆರೆಗೆ ನೀರು ಹರಿಯಲಿದೆ.

31 ಕೆರೆ: ಅದೇ ರೀತಿ ಕ್ಲಸ್ಟರ್‌ 2ರ ಮೂಲಕ ಕೆಂಗುಂಟೆ ಕೆರೆ, ಸೋಮೇಶ್ವರಪಾಳ್ಯ ಕೆರೆ, ಇಂಡ್ಲು ಕೆರೆ, ಸೊನ್ನವಾಡಿ ದೊಡ್ಡಕೆರೆ, ಕವತನಹಳ್ಳಿ ದೊಡ್ಡ ಕೆರೆ, ಗುಮ್ಲಾಪುರ ಪಟೇಲ್ ಕೆರೆ, ಮೇಲಾಗಾಣಿ ದೊಡ್ಡ ಕೆರೆ, ಕನ್ನಸಂದ್ರ ದೊಡ್ಡ ಕೆರೆ, ತಾಯಲೂರು ಅಮಾನಿಕೆರೆ, ಮದ್ದೇರಿ ದೊಡ್ಡ ಕೆರೆ, ಕ್ಲಸ್ಟರ್‌ 3ರ ಮೂಲಕ ಕದರೀಪುರ ಗೋಪಣ್ಣ ಕೆರೆ, ಲಿಂಗಾಪುರ ದೊಡ್ಡ ಕೆರೆ, ದೊಡ್ಡಯ್ಯನ ಕೆರೆ, ಉಪ್ಪು ಕೆರೆ, ಸಿದ್ದಘಟ್ಟ ಹೊಸಕೆರೆ, ಮೇಡಿಗಪಲ್ಲಿ ಕೆರೆ, ಸಿದ್ದಘಟ್ಟ ವಡ್ಡು ಕೆರೆ, ಮಾರಂಡಹಳ್ಳಿ ಕೆರೆ, ಕಪ್ಪಲಮಡಗು ವಡ್ಡು ಕೆರೆ, ಮರಹೇರು ದೊಡ್ಡ ಕೆರೆ, ನಂಗಲಿ ದೊಡ್ಡ ಕೆರೆ, ಬ್ಯಾಟನೂರು ಮಲ್ಲಪ್ಪನಕೆರೆ ಸೇರಿ 31 ಕೆರೆಗಳಿಗೆ ನೀರು ಹರಿಯಲಿದೆ.

ಕೊಳಚೆ ನೀರು: ಈ ಕೆರೆಗಳು ಒಳಗೊಂಡಂತೆ ಮಂಚಿಗಾನಹಳ್ಳಿ, ಹೆಬ್ಬಣಿ, ಚಿನ್ನಹಳ್ಳಿ ದೊಡ್ಡ ಕೆರೆಯಲ್ಲಿ ಜಾಲಿ ಮತ್ತಿತರ ಗಿಡ ಮರಗಳು ಬೆಳೆದಿವೆ. ಅದರ ನಡುವೆ ನಗರದ ಶಾಮೀರ್‌ವೊಹಲ್ಲಾ, ಸೋಮೇಶ್ವರಪಾಳ್ಯ, ಹೊಸಪಾಳ್ಯ, ಗುಣಿಗುಂಟೆ ಪಾಳ್ಯ, ಬಜಾರುರಸ್ತೆ, ಕುರುಬರಪೇಟೆ, ಅಂಬೇಡ್ಕರ್‌ ನಗರ, ನೇತಾಜಿ ನಗರ, ಹೈದರಿ ನಗರ ಒಳಗೊಂಡಂತೆ ಬಹುತೇಕ ಪ್ರದೇಶದ ಮಲ ಮೂತ್ರಗಳ ಕೊಳಚೆ ನೀರು ಹರಿದು ಪ್ರತಿ ನಿತ್ಯ ಸೋಮೇಶ್ವರಪಾಳ್ಯ ಮತ್ತು ಇಂಡ್ಲುಕೆರೆಗೆ ಸೇರುತ್ತಿದೆ. ಇದೇ ರೀತಿ ಮುಂದುವರಿದರೆ ಕೆ.ಸಿ. ವ್ಯಾಲಿ ಯೋಜನೆಯ ನೀರು ಹರಿದಾಗ ಎಲ್ಲಾ ಕೆರೆಗಳಿಗೂ ಮುಳಬಾಗಿಲು ನಗರದ ಕೊಳಚೆ ನೀರು ಸೇರಿ ಇದೇ ಕೊಳಚೆ ನೀರನ್ನೇ ಗ್ರಾಮಾಂತರ ಜನರು ಉಪಯೋಗಿಸಬೇಕಾದ ಸನ್ನಿವೇಶ ಎದುರಾಗುತ್ತದೆ.

Advertisement

ಒಟ್ಟಿನಲ್ಲಿ ಮಾ.30ರ ಒಳಗಾಗಿ ತಾಲೂಕಿನ ಎಲ್ಲಾ ಕೆರೆಗಳಲ್ಲಿ ಬೆಳೆದಿರುವ ಗಿಡ ಮರಗಳನ್ನು ಗ್ರಾಪಂಗಳ ಸಹಕಾರ ಪಡೆದು ಕಟಾವು ಮಾಡಿಸಿ ಸ್ವಚ್ಛಗೊಳಿಸಬೇಕೆಂಬ ಜಿಲ್ಲಾಧಿಕಾರಿ ಜೆ.ಮಂಜುನಾಥ್‌ ಆದೇಶಕ್ಕೆ ಸಾಮಾಜಿಕ ಅರಣ್ಯ ಇಲಾಖೆ ಅಧಿಕಾರಿಗಳು ನಿಗದಿತ ದಿನಗಳ ಒಳಗಾಗಿ ಕಾರ್ಯ ಪೂರ್ಣಗೊಳಿಸದೇ ಇರುವುದು ಸಾರ್ವಜನಿಕರಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.

ತಾಲೂಕಿನ ಕೆರೆಗಳಿಗೆ ಕೆ.ಸಿ. ವ್ಯಾಲಿ ನೀರು ಹರಿಸುವ ಮೊದಲು ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧಿಕಾರಿಗಳು ಸೋಮೇಶ್ವರಪಾಳ್ಯ ಕರೆ ಮತ್ತು ಇಂಡ್ಲು ಕೆರೆಗೆ ಹರಿಯುತ್ತಿರುವ ಕೊಳಚೆ ನೀರನ್ನು ತಡೆಯಬೇಕು. ಸಾಮಾಜಿಕ ಅರಣ್ಯ ಇಲಾಖೆ ಅಧಿಕಾರಿಗಳು ಕೆರೆಗಳಲ್ಲಿ ಬೆಳೆದಿರುವ ಜಾಲಿ ಮತ್ತು ಇತರೆ ಗಿಡ ಮರಗಳನ್ನು ತೆರವು ಮಾಡಬೇಕು. ಇಲ್ಲದಿದ್ದಲ್ಲಿ ಗ್ರಾಮೀಣ ಜನರು ಕೊಳಚೆ ನೀರನ್ನು ಬಳಸಿಕೊಳ್ಳಬೇಕಾದ ಸನ್ನಿವೇಶ ಎದುರಾಗುವುದರಿಂದ ಕೂಡಲೇ ಅಧಿಕಾರಿಗಳು ಕ್ರಮಕೈಗೊಳ್ಳಬೇಕು. ಇಲ್ಲದಿದ್ದಲ್ಲಿ ರೈತ ಸಂಘದಿಂದ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು.
●ನಾರಾಯಣಗೌಡ, ರಾಜ್ಯ ಉಪಾಧ್ಯಕ್ಷ, ರೈತ ಸಂಘ

ತಾಲೂಕಿನ 150 ಕೆರೆಗಳಲ್ಲಿ ಮಾತ್ರ ಬೆಳೆದಿರುವ ಜಾಲಿ ಮತ್ತಿತರ ಗಿಡ ಮರ ತೆರವು ಮಾಡುವ ಕುರಿತು ಎರಡು ತಿಂಗಳ ಹಿಂದೆಯೇ ಸಾಮಾಜಿಕ ಅರಣ್ಯ ಇಲಾಖೆ ಡಿಎಫ್ಒಗೆ ವರದಿ ನೀಡಲಾಗಿದೆ. ಅವರಿಂದ ಸೂಚನೆ ಬಂದ ನಂತರ ಕ್ರಮ ಕೈಗೊಳ್ಳಲಾಗುವುದೆಂದು ಉತ್ತರ ನೀಡಿದರು.
●ಹರೀಶ್‌, ವಲಯಾರಣ್ಯಾಧಿಕಾರಿ, ಸಾಮಾಜಿಕ ಅರಣ್ಯ ಇಲಾಖೆ

ಎಂ.ನಾಗರಾಜಯ್ಯ

Advertisement

Udayavani is now on Telegram. Click here to join our channel and stay updated with the latest news.

Next