ಉಡುಪಿ: ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡದಲ್ಲಿ ಇಲ್ಲದ ಮರಳು ಸಮಸ್ಯೆ ಉಡುಪಿಯಲ್ಲಿ ಉದ್ಭವಿಸಿದ್ದು ಇದಕ್ಕೆ ಜಿಲ್ಲಾಡಳಿತವನ್ನೇ ಹೊಣೆಗಾರರನ್ನಾಗಿ ಮಾಡಬೇಕಾಗುತ್ತದೆ ಎಂದು ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಅವರು ಬಳಕೆದಾರರ ವೇದಿಕೆಯಲ್ಲಿ ಜರಗಿದ ಮುಖಾಮುಖೀ ಕಾರ್ಯ ಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಹಸಿರುಪೀಠದಿಂದ ಹಸಿರು ನಿಶಾನೆ ಸಿಕ್ಕಿದ್ದರೂ ಜಿಲ್ಲಾಡಳಿತ ಇನ್ನೂ ಮೀನಮೇಷವನ್ನು ಮಾಡುತ್ತಿದೆ. ಇದರಿಂದ ಅಸಂಖ್ಯಾತ ಕೂಲಿಕಾರ್ಮಿಕರು ಬೀದಿಗೆ ಬಂದಿದ್ದಾರೆ. ಕಟ್ಟಡ ಗುತ್ತಿಗೆದಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ತನ್ಮಧ್ಯೆ ಮರಳುಸಾಗಿಸಿದ ಬಾಬ್ತು 3.73 ಲಕ್ಷ ರಾಜಧನ ಉಡುಪಿಗೆ ನೀಡಲು ಬಾಕಿ ಇದೆ ಎಂದು ಮಾಹಿತಿ ನೀಡಿದರು.
ಸ್ವರ್ಣಾನದಿಯಿಂದ ಹೂಳೆತ್ತಲು ಇಚ್ಛಾಶಕ್ತಿಯ ಕೊರತೆ ಇದೆ. ಸುಮಾರು 1 ಲಕ್ಷ ಟನ್‌ನಷ್ಟು ಮರಳು ಇದ್ದರೂ ಅದನ್ನು ವಿಲೇವಾರಿ ಮಾಡುವಲ್ಲಿ ಜಿಲ್ಲಾಡಳಿತ ವಿಫಲವಾಗಿದೆ ಎಂದು ಅವರು ಹೇಳಿದರು.
94 ಸಿಯಲ್ಲಿ ಉಡುಪಿ ಜಿಲ್ಲೆಯಲ್ಲಿ ಸುಮಾರು 27,500 ಅರ್ಜಿಗಳು ಬಂದಿದ್ದು 8625 ಅರ್ಜಿಗಳನ್ನು ವಿಲೇವಾರಿ ಮಾಡಿ ಕೇವಲ 711 ಸಂತ್ರಸ್ತರಿಗೆ ಮಾತ್ರ ಹಕ್ಕು ಪತ್ರ ನೀಡಲಾಗಿದೆ. 94ಸಿಸಿಯಲ್ಲಿ ರಾಜ್ಯಕ್ಕೆ 1.76 ಅರ್ಜಿಗಳು ಬಂದಿವೆ. 58 ಸಾವಿರ ವಿಲೇವಾರಿಯಾಗಿವೆ. 1.22 ಲ. ಅರ್ಜಿಗಳು ಬಾಕಿ ಇವೆ ಎಂದು ಮಾಹಿತಿ ನೀಡಿದರು. ಉಡುಪಿ ಜಿಲ್ಲೆಯಲ್ಲಿ 34 ಸಾವಿರ ಹೆಕ್ಟರ್ ಡೀಮ್ಡ್ ಅರಣ್ಯವಲ್ಲದ ಜಾಗವಿದೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಶೀಘ್ರವಾಗಿ ನಿರ್ಧಾರತೆಗೆದುಕೊಂಡರೆ ಜಿಲ್ಲೆಯಲ್ಲಿ ಸುಮಾರು 23 ಸಾವಿರ ಸಂತ್ರಸ್ಥರಿಗೆ ಹಕ್ಕುಪತ್ರ ಲಭಿಸುತ್ತದೆ ಎಂದು ಅವರು ಹೇಳಿದರು. ಶಿಕ್ಷಣ ಹಕ್ಕು ಅಡಿಯಲ್ಲಿ ಉಡುಪಿಯಲ್ಲಿ 1040 ಸೀಟುಗಳ ಪೈಕಿ 998 ಹಂಚಿಕೆಯಾಗಿದೆ 132 ಉಳಿಕೆಯಾಗಿದೆ ಎಂದು ತಿಳಿಸಿದ ಅವರು ರಾಜ್ಯದ ಎಲ್ಲ ಶಾಲೆಗಳನ್ನು ಸರಕಾರಿಯನ್ನಾಗಿ ಮಾಡಿಬಿಟ್ಟರೆ ಈ ಸಮಸ್ಯೆಯಿಂದ ಮುಕ್ತಿಹೊಂದಲು ಸಾಧ್ಯವೆಂದು ಅಭಿಪ್ರಾಯಪಟ್ಟರು.
ಉಡುಪಿ ಜಿಲ್ಲೆಗೆ 30 ನರ್ಮ್ ಬಸ್‌ಗಳು ಮಂಜೂರಾಗಿವೆ. ಈ ಪೈಕಿ 12 ಬಸ್‌ಗಳು ರಹದಾರಿಯನ್ನು ಹೊಂದಿವೆ. 18 ಬಸ್‌ಗಳಿಗೆ ತಡೆಯಾಜ್ಞೆಯಾಗಿದೆ. ಕೇಂದ್ರ ಸರಕಾರವು ಈ ಯೋಜನೆಗೆ ಶೇ. 70 ರಷ್ಟು ಹಣವನ್ನು ಬಿಡುಗಡೆ ಮಾಡಿದೆ ಎಂದು ಅವರು ಮಾಹಿತಿ ನೀಡಿದರು.
ವೇದಿಕೆಯ ಸಂಚಲಾಕ ಕೆ. ದಾಮೋದರ ಐತಾಳ್ ಸ್ವಾಗತಿಸಿ, ವಿಶ್ವಸ್ಥರಾದ ವಾದಿರಾಜ ಆಚಾರ್ಯ ವಂದಿಸಿದರು. ಎಚ್. ಶಾಂತರಾಜ ಐತಾಳ್ ಪ್ರಾಸ್ತಾವಿಸಿದರು. ಟಿ. ಚಂದ್ರಶೇಖರ್ ಕಾರ್ಯಕ್ರಮ ನಿರೂಪಿಸಿದರು.