Advertisement

ಮಕ್ಕಳು ಅಸೌಖ್ಯವಾದಾಗ ಶಾಲೆಗೆ ಸಿಹಿತಿಂಡಿ ಹಂಚುವ ಹರಕೆ

12:07 PM Nov 08, 2019 | Sriram |

19ನೆಯ ಶತಮಾನದ ಉತ್ತರಾರ್ಧದಲ್ಲಿ ಬ್ರಿಟಿಷ್‌ ಆಡಳಿತದಡಿ, ಊರ ಹಿರಿಯರ ಮುತುವರ್ಜಿಯಲ್ಲಿ ಸ್ಥಾಪನೆಗೊಂಡು ಈಗಲೂ ವಿದ್ಯೆಯ ಬೆಳಕನ್ನು ಪಸರಿಸುತ್ತಿರುವ ಹಲವು ಸರಕಾರಿ ಶಾಲೆಗಳು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿವೆ. ಈಗಿನ ಆಂಗ್ಲ ಮಾಧ್ಯಮ ಶಿಕ್ಷಣದ ಆಕರ್ಷಣೆಯ ನಡುವೆ ಈ ಶಾಲೆಗಳು ಸುತ್ತಮುತ್ತಲಿನ ಊರುಗಳಿಗೆ ಅಕ್ಷರಶಃ ಜ್ಞಾನ ದೇಗುಲಗಳೇ ಆಗಿವೆ. ಇಂತಹ ಶತಮಾನದ ಹಿರಿಮೆಯ ಕನ್ನಡ ಮಾಧ್ಯಮ ಸರಕಾರಿ ಶಾಲೆಗಳನ್ನು ಗುರುತಿಸಿ ಪರಿಚಯಿಸುವ ಪ್ರಯತ್ನ ನಮ್ಮದು.

Advertisement

ಮಲ್ಪೆ: ಇತ್ತೀಚಿನ ದಿನಗಳಲ್ಲಿ ಕೆಲವು ಸರಕಾರಿ ಶಾಲೆಗಳು ಮುಚ್ಚುವ ಸ್ಥಿತಿಯಲ್ಲಿದ್ದರೂ,ಅಂಜದೇ ಮುನ್ನುಗ್ಗು ತ್ತಿರುವ ಶಾಲೆಗಳಲ್ಲಿ 146ವರ್ಷಗಳ ಇತಿಹಾಸ ಇರುವ ಕೊಡವೂರು ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯೂ ಒಂದು.

1873ರಲ್ಲಿ ಆರಂಭವಾದ ಈ ಶಾಲೆಯಲ್ಲಿ ಮೊದಲು 5ನೇ ತರಗತಿಯವರೆಗೆ ಮಾತ್ರ ಇತ್ತು. ಕ್ರಮೇಣ ವಿದ್ಯಾರ್ಥಿಗಳ ಹೆಚ್ಚಾದಂತೆ ಪದವೀಧರ ಶಿಕ್ಷಕರನ್ನು ನೇಮಕ ಮಾಡುವುದರ ಮುಖೇನ ಮಾದರಿ ಶಾಲೆಯಾಗಿ ಕರೆಯಲ್ಪಟ್ಟಿತು. ಹಿಂದೆ ಮೂರು ಬೇರೆ ಬೇರೆ ಕಟ್ಟಡಗಳ ಕೊಠಡಿಗಳಲ್ಲಿ ತರಗತಿಗಳನ್ನು ನಡೆಸಲಾಯಿತು. ಇದೀಗ ಒಂದೇ ಕಟ್ಟಡದ ಕೊಠಡಿಗಳಲ್ಲಿ ತರಗತಿಗಳು ನಡೆಯುತ್ತಿದೆ. 1974ರಲ್ಲಿ ಅಂದಿನ ಶಾಸಕ ಮಲ್ಪೆ ಮಧ್ವರಾಜ್‌ ಅವರ ನೇತೃತ್ವದಲ್ಲಿ ಶತಮಾನೋತ್ಸವ ಆಚರಿಸಲಾಗಿತ್ತು.

ಸಿಹಿತಿಂಡಿ ಹರಕೆ
ಇಲ್ಲಿನ ಜನರು ಶಾಲೆಯೆಂದರೆ ಕೇವಲ ವಿದ್ಯಾಮಂದಿರ ಮಾತ್ರ ಎನ್ನದೆ ಅದಕ್ಕೆ ಪವಿತ್ರ ಸ್ಥಾನವನ್ನು ನೀಡುತ್ತಿದ್ದರು. ಮನೆಯಲ್ಲಿ ಯಾವುದೇ ಮಕ್ಕಳಿಗೆ ಅಸೌಖ್ಯವಾದಾಗ ಶಾಲೆಯ ಮಕ್ಕಳಿಗೆ ಸಿಹಿತಿಂಡಿ ಹಂಚುವ ಹರಕೆ ಹೊರುತ್ತಿದ್ದರು.

ಬಿಸಿಯೂಟ ಅಂದೇ ಇತ್ತು
ಬಿಸಿಯೂಟ ಪದ್ಧತಿ ಸರಕಾರದ ಯೋಜನೆಗೂ ಮುನ್ನ ಇಲ್ಲಿ ಆರಂಭಗೊಂಡಿತ್ತು. 1987ರಲ್ಲಿ ಕೊಡವೂರಿನ ಶಂಕರನಾರಾಯಣ ದೇವಳದ ವತಿಯಿಂದ ಮಧ್ಯಾಹ್ನ ವಿದ್ಯಾರ್ಥಿಗಳಿಗೆ ಬಿಸಿಯೂಟವನ್ನು ನೀಡಲಾಗುತ್ತಿತ್ತು. ಮತ್ತು ಇಲ್ಲಿನ ವಿದ್ಯಾರ್ಥಿಗಳಿಗೆ ಕೆಲವು ವರುಷಗಳ ಕಾಲ ವಾರದಲ್ಲಿ ಒಂದು ದಿನ ಕರಕುಶಲ, ತರಗತಿಯಲ್ಲಿ ಮಕ್ಕಳಿಗೆ ಕೈಮಗ್ಗ ನೇಯ್ಗೆಯ ಬಗ್ಗೆ ತರಬೇತಿ ನೀಡಲಾಗುತ್ತಿತ್ತು.

Advertisement

ಹೆಸರು ಮಾಡಿದ ಪ್ರಮುಖ ಹಳೆವಿದ್ಯಾರ್ಥಿಗಳು
ಈ ಶಾಲೆಯಲ್ಲಿ ಹೆಸರು ಮಾಡಿ ಹಳೆವಿದ್ಯಾರ್ಥಿಗಳಲ್ಲಿ ಮೂಗುರು ಶೈಲಿಯ ಭರತನಾಟ್ಯ ಖ್ಯಾತನಾಮರಾದ, ಪ್ರತಿಷ್ಠಿತ ನಾಟ್ಯರಾಣಿ ಶಾಂತಲ ಪ್ರಶಸ್ತಿ ಪುರಸ್ಕೃತ ಕೆ. ಬಿ. ಮಾಧವರಾವ್‌, ಸಾಹಿತಿ ವ್ಯಾಸರಾಯ ನಿಂಜೂರು, ಆಂಧ್ರ ಬ್ಯಾಂಕಿನ ನಿವೃತ್ತ ಚಯರ್‌ವೆುನ್‌ ಟಿ. ಜೆ. ಎ. ಗಾಣಿಗ, ದೆಹಲಿ ಕನ್ನಡಿಗ ಮತ್ತು ತುಳುವೆರ್‌ ಪತ್ರಿಕೆಯ ಸಂಪಾದಕ ಬಾ. ಸಾಮಗ, ನೃತ್ಯ ಕಲಾವಿದರಾದ ಲಕ್ಷ್ಮೀ ಗುರುರಾಜ್‌, ಸುಧೀರ್‌ರಾವ್‌ ಪ್ರಮುಖರು. ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿದ ನರಸಿಂಹ ಹಂದೆ, ಚಂದ್ರಶೇಖರ ಕೆದ್ಲಾಯ, ಅಂತೋಣಿ ಮಸ್ಕರೇನಿಯಸ್‌, ಎಸ್‌.ಎಸ್‌. ತೋನ್ಸೆ, ಜೆಸ್ಸಿ ಮೆನೆಜಸ್‌, ಶಿವರಾಮ ಶೆಟ್ಟಿ, ಶಕುಂತಲಾ ರಾವ್‌, ಸುನಂದಾ ಬಾಯಿ, ಸುಂದರ ಎ., ಮೊದಲಾದವರ ಗರಡಿಯಲ್ಲಿ ಪಳಗಿದ ಅನೇಕರು ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಅತ್ಯುನ್ನತ ಸಾಧನೆ ಮಾಡಿದ್ದಾರೆ.

ಪ್ರಸ್ತುತ 210 ವಿದ್ಯಾರ್ಥಿಗಳ ವ್ಯಾಸಂಗ
ಕೆಲ ವರ್ಷದ ಹಿಂದೆ ಶಿಕ್ಷಕರು 6, 7 ತರಗತಿಗಳಲ್ಲಿ ಆಂಗ್ಲ ಮಾಧ್ಯಮ ಶಿಕ್ಷಣ ಕಲಿಸಲು ಪ್ರಾರಂಭಿಸಿದರು. 2016-17ರ ಲ್ಲಿ ಇಲ್ಲಿನ ಹಳೆವಿದ್ಯಾರ್ಥಿಗಳು, ವಿವಿಧ ಸಂಘಟನೆಗಳು ಒಟ್ಟಾಗಿ ಎಸ್‌ಡಿಎಂಸಿ ಸಹಕಾರ ಪಡೆದು ಎಲ್‌ಕೆಜಿ ಮತ್ತು ಯುಕೆಜಿಯನ್ನು ಆರಂಭಿಸಿದೆ. ಆ ಬಳಿಕ ಶ್ರೀ ಶಂಕರನಾರಾಯಣ ಶಿಕ್ಷಣ ಪ್ರತಿಷ್ಠಾನ ಹುಟ್ಟುಹಾಕಿ ಅದರ ಸಹಯೋಗದಲ್ಲಿ ಶಾಲಾ ವಾಹನದ ವ್ಯವಸ್ಥೆಯನ್ನು ಮಾಡಿದೆ. ಇದೀಗ ಸುಮಾರು 210ಕ್ಕೂ ಅಧಿಕ ವಿದ್ಯಾರ್ಥಿಗಳು ಇದ್ದಾರೆ. ಶಾಲೆಯಲ್ಲಿ ಕರಾಟೆ ತರಗತಿಗಳು, ಸೇವಾದಳ, ಮಕ್ಕಳ ಸಾಂಸ್ಕೃತಿಕ ಸಂಘ, ಮಕ್ಕಳ ಸಂಸತ್ತು, ಮಕ್ಕಳ ಹಕ್ಕುಗಳ ಕ್ಲಬ್‌, ಕಂಪ್ಯೂಟರ್‌ ಶಿಕ್ಷಣ, ಯೋಗ, ವಾಚನಾಲಯ, ಪ್ರಯೋಗಾಲಯ, ಭೋಜನಾ ಶಾಲೆಯ ವ್ಯವಸ್ಥೆ ಇದೆ.

ನನ್ನದು 8ನೇ ತರಗತಿಯವರೆಗೆ ಕೊಡವೂರು ಶಾಲೆ. ಗಂಜಿ ಊಟ, ಸಜ್ಜಿಗೆ ತಿಂದ ನೆನಪಿದೆ. ಆವಾಗ ಶಿಕ್ಷಣದಲ್ಲಿ ಶಿಕ್ಷೆ ಇತ್ತು. ಮೇಸ್ಟ್ರೆಗಳನ್ನು ಕಂಡರೆ ಭಯಭಕ್ತಿ ಇತ್ತು. ಯಕ್ಷಗಾನ ಸೇರಿದಂತೆ ಪಠ್ಯೇತರ ಚಟುವಟಿಕೆಗಳಿಗೆ ಪ್ರೋತ್ಸಾಹ ಇತ್ತು.
– ಎಂ.ಎಲ್‌. ಸಾಮಗ, (ಯಕ್ಷಗಾನ ಬಯಲಾಟ ಅಕಾಡೆಮಿಯ ಮಾಜಿ ಅಧ್ಯಕ್ಷರು )

ಎಲ್ಲರ ಸಹಕಾರ ದೊಂದಿಗೆ ಈ ಶಾಲೆಯು ಸರ್ವತೋಮುಖ ಅಭಿವೃದ್ದಿಗೆ ಟೊಂಕ ಕಟ್ಟಿ ನಿಂತಿದೆ. ಕೇವಲ 27ಸೆಂಟ್ಸ್‌ ಜಾಗ ಇರುವುದರಿಂದ ಸ್ಥಳಾವಕಾಶದ ಕೊರತೆ ಇದೆ. ಈಗ ಅದೇ ಜಾಗದಲ್ಲೇ ಕಟ್ಟಡ ಕಟ್ಟಿ ಮೇಲಂತಸ್ತಿನಲ್ಲಿ ಕೊಠಡಿಗಳನ್ನು ಮಾಡುವ ಯೋಜನೆ ಇದೆ.
– ಪುಷ್ಪಾವತಿ ಕೆ.,
ಮುಖ್ಯೋಪಾಧ್ಯಾಯಿನಿ

-ನಟರಾಜ್‌ ಮಲ್ಪೆ

Advertisement

Udayavani is now on Telegram. Click here to join our channel and stay updated with the latest news.

Next