Advertisement

ಒಡಿಶಾ ಕುಟುಂಬಗಳ ಯಾತನೆ ಬದುಕು

09:15 AM Apr 23, 2019 | Lakshmi GovindaRaju |

ಬೆಂಗಳೂರು: ಮಾನವ ಕಳ್ಳಸಾಗಣೆ ಮೂಲಕ ಒಡಿಶಾದಿಂದ ಕೊಪ್ಪಳಕ್ಕೆ ಬಂದು ಜೀತದಾಳುಗಳಾಗಿ ದುಡಿಯುತ್ತಿದ್ದ 38 ಕುಟುಂಬಗಳಿಗೆ ಬಿಡುಗಡೆ ಭಾಗ್ಯ ದೊರೆತಿದೆ.

Advertisement

ಗಾರ್ಮೆಂಟ್ಸ್‌ಗಳಲ್ಲಿ ಕೈ ತುಂಬ ಸಂಬಳ ಕೊಡಿಸುವುದಾಗಿ ನಂಬಿಸಿ ಕರೆತಂದಿದ್ದ ಈ ಕುಟುಂಬಗಳ ಸದಸ್ಯರು ಐದು ತಿಂಗಳ ಕಾಲ ಕೇವಲ 43 ರೂ. ದಿನಗೂಲಿಗೆ ಕೆಲಸ ಮಾಡುತ್ತಾ ಹೊರ ಜಗತ್ತಿನ ಸಂಪರ್ಕವೇ ಇಲ್ಲದಂತೆ ಜೀತಕ್ಕಿದ್ದರು ಎಂಬ ವಿಚಾರವೂ ಬಹಿರಂಗಗೊಂಡಿದೆ. ಈ ಕುಟುಂಬಗಳ ಮಹಿಳೆಯರು ಅನುಭವಿಸಿದ ಯಾತನೆ ಹೇಳತೀರದು.

ಜಿಲ್ಲಾಡಳಿತದ ನೆರವಿನೊಂದಿಗೆ ಸರ್ಕಾರತೇರ ಸಂಸ್ಥೆಯಾದ ಇಂಟರ್‌ನ್ಯಾಷನಲ್‌ ಜಸ್ಟಿಸ್‌ ಮಿಷನ್‌ (ಐಜೆಎಂ) ಜೀತಕ್ಕಿದ್ದ ಕುಟುಂಬಗಳನ್ನು ರಕ್ಷಿಸಿ ತವರಿಗೆ ಕಳುಹಿಸಿಕೊಟ್ಟಿದೆ. ಜತೆಗೆ ಒಡಿಶಾ ಸರ್ಕಾರದ ಜತೆ ಸಂಪರ್ಕ ಸಾಧಿಸಿ ಅವರ ಮುಂದಿನ ಜೀವನಕ್ಕೂ ನೆರವಾಗುತ್ತಿದೆ.

ಕೊಪ್ಪಳದ ಗಿನಿಗಿರ ಎಂಬಲ್ಲಿದ್ದ ಇಟ್ಟಿಗೆ ಗೂಡಿನಲ್ಲಿ ಜೀತದಾಳುಗಳಾಗಿ ದುಡಿಯುತ್ತಿದ್ದ ರವಿ (ಹೆಸರು ಬದಲಾಯಿಸಲಾಗಿದೆ) ಆ 5 ತಿಂಗಳು ಅಲ್ಲಿ ಅನುಭವಿಸಿದ ನರಯಾತನೆಯನ್ನು ತೆರೆದಿಟ್ಟಿದು ಹೀಗೆ.
ಅನಕ್ಷರತೆ, ಬಡತನ ನಮ್ಮನ್ನು ಜೀತದಾಳುಗಳಾಗುವ ಪರಿಸ್ಥಿತಿಗೆ ನೂಕಿತು. ಮನೆಯಲ್ಲಿ ವಯಸ್ಸಾದ ತಂದೆ-ತಾಯಿ, ಹೆಂಡತಿ ಮತ್ತು ಮಕ್ಕಳಿಬ್ಬರು.

ಇದರೊಂದಿಗೆ ಕಿತ್ತು ತಿನ್ನುವ ಬಡತನ, ಜೀವನ ನಿರ್ವಹಣೆಗಾಗಿ ಕೆಲಸ ಕೊಡಿಸುವುದಾಗಿ ಮಧ್ಯವರ್ತಿ ಹೇಳಿದ ಮಾತನ್ನು ನಾನು ಆ ಕ್ಷಣಕ್ಕೆ ನಂಬಲೇಬೇಕಿತ್ತು. ಗಾರ್ಮೆಂಟ್ಸ್‌ನಲ್ಲಿ ಉದ್ಯೋಗ, ಉಚಿತ ವಸತಿ ಮತ್ತು ಕೈ ತುಂಬಾ ಸಂಬಳ ಕೊಡಿಸುವುದಾಗಿ ನಂಬಿಸಿ ಒಡಿಶಾದಿಂದ ನಮ್ಮ ಪರಿವಾರನ್ನು ಕೊಪ್ಪಳಕ್ಕೆ ಕರೆ ತಂದರು.

Advertisement

ಮುಂಜಾನೆ 3 ಗಂಟೆಗೆ ಎದ್ದು ಇಟ್ಟಿಗೆ ಗೂಡಿನಲ್ಲಿ ನಮ್ಮ ಕೆಲಸ ಎಂಬುದು ತಿಳಿಯಲು ಹೆಚ್ಚು ಸಮಯ ಬೇಕಾಗಿರಲಿಲ್ಲ. ಮುಂಜಾನೆ ಶುರುವಾದ ಕಾಯಕ ಕೆಲವೊಮ್ಮೆ ಮಧ್ಯರಾತ್ರಿ 1 ಗಂಟೆವರೆಗೂ ನಡೆಯುತ್ತಲಿತ್ತು. ಭಾನುವಾರ ಸಹ ಅರ್ಧ ದಿನ ಕೆಲಸ ಮಾಡಬೇಕಿತ್ತು. ಪ್ರತಿದಿನ 12 ಗಂಟೆಗಳ ಕಾಲ ಕೆಲಸ ಮಾಡಿದರೂ ನಮಗೆ ದಿನಕ್ಕೆ ಸಿಗುತ್ತಿದ್ದ ಕೂಲಿ 43 ರೂ. ಮಾತ್ರ.

ಉಚಿತ ವಸತಿ ಶ್ವಾಸನೆ ಸುಳ್ಳಾಗಿತ್ತು. ಕಾರ್ಖಾನೆಯ ಸಮೀಪವೇ ಇಟ್ಟಿಗೆ ಜೋಡಿಸಿ ಖುದ್ದು ಮನೆ ನಿರ್ಮಿಸಿಕೊಳ್ಳುವಂತೆ ಮೇಲ್ವಿಚಾರಕ ಸೂಚಿಸಿದ್ದ. ಅವನ ಅಣತಿಯಂತೆ ನಾವು ನಡೆಯಬೇಕಿತ್ತು. ಇಲ್ಲದಿದ್ದರೆ ಅವಾಚ್ಯ ಶಬ್ದಗಳಿಂದ ನಮ್ಮನ್ನು ನಿಂದಿಸುವ ಜತೆಗೆ ಹೊಡೆಯುತ್ತಿದ್ದ ಎಂದು ಕಣ್ಣಿರು ಹಾಕಿದರು.

ಕುಟುಂಬ ಸಮೇತರಾಗಿ ಹೊರ ಹೋಗಲು ಅವಕಾಶವಿರಲಿಲ್ಲ. ಕೇವಲ ವಯಸ್ಕ ಪುರುಷರು ಮಾತ್ರ ಹೊರಗೆ ಹೋಗಿ ವಾರಕ್ಕೆ ಅಗತ್ಯವಿರುವ ದಿನಸಿ ಪದಾರ್ಥ ತರಬೇಕಿತ್ತು. ನಮ್ಮ ಮೊಬೈಲ್‌ಗ‌ಳನ್ನು ಮೇಲ್ವಿಚಾರಕರು ವಶಪಡಿಸಿಕೊಂಡಿದ್ದರು.

ಕಾರ್ಮಿಕರು ಸರಿಯಾಗಿ ಕೆಲಸ ಮಾಡುತ್ತಿಲ್ಲವೆಂದು ಮೇಲ್ವಿಚಾರಕನಿಗೆ ಅನಿಸಿದರೆ ನರಕ ದರ್ಶನ ಮಾಡಿಸುತ್ತಿದ್ದ. ಮೇಲಿcಚಾರಕ ಮದ್ಯಪಾನ ಮಾಡಿ ನಮ್ಮನ್ನು ಕೀಳು ಜಾತಿಯವರೆಂದು ನಿಂದಿಸುತ್ತಿದ್ದ. ಮಹಿಳೆಯರಿಗೆ ಲೈಂಗಿಕ ಕಿರುಕುಳ ಕೂಡ ನೀಡುತ್ತಿದ್ದ.

ಕಾರ್ಮಿಕರು ಒಡಿಶಾಗೆ ಹೋಗಬೇಕೆಂದು ಮನವಿ ಮಾಡಿದರೆ ನಿಮಗೆ ನೀಡಿರುವ ಅಡ್ವಾನ್ಸ್‌ ಹಣ ವಾಪಸ್‌ ಕೊಟ್ಟು ಹೋಗಿ ಎಂದು ಮತ್ತಷ್ಟು ಬೈಗುಳದ ಮಳೆ ಸುರಿಸುತ್ತಿದ್ದ. ಆಗ ನಾವು ಮಾನವ ಸಾಗಣೆ ಬಲೆಯಲ್ಲಿ ಸಿಲುಕಿರಬಹುದು ಎಂಬ ಅನುಮಾನ ಮೂಡಿತು.

ಒಮ್ಮೆ ನಮ್ಮ ಜತೆಗಿದ್ದವರಲ್ಲಿ ಒಬ್ಬ ಹೇಗೋ ತಪ್ಪಿಸಿಕೊಂಡು ಹೋಗಿ, ವಕೀಲನಾಗಿದ್ದ ಅವನ ಗೆಳೆಯನಿಗೆ ಕರೆ ಮಾಡಿ ವಿಷಯ ತಿಳಿಸಿದ. ಆತ ಇಟ್ಟಿಗೆ ಗೂಡಿನ ಇತರೆ ಕಾರ್ಮಿಕರ ಸಂಕಷ್ಟಗಳನ್ನು ಅಧಿಕಾರಿಗಳೊಂದಿಗೆ ಹಂಚಿಕೊಂಡ ಐಜೆಎಂ ಸಂಸ್ಥೆ ನೆರವು ಪಡೆದು ನಮ್ಮನ್ನು ಆ ನರಕದ ಕೂಪದಿಂದ ಪಾರು ಮಾಡಿದರು ಎಂದು ಸ್ಮರಿಸಿಸುತ್ತಾನೆ.

ಇಟ್ಟಿಗೆ ಗೂಡಿನಲ್ಲಿದ್ದ ಜೀತದಾಳುಗಳನ್ನು ಬಿಡಿಸಿ ಅವರಿಗೆ ಬಿಡುಗಡೆ ಪ್ರಮಾಣ ಪತ್ರ, ತಲಾ 20 ಸಾವಿರ ರೂ. ಚೆಕ್‌ ಕೂಡ ನೀಡಲಾಗಿದೆ. ಒಡಿಶಾಕ್ಕೆ ಹೋಗಿರುವ ಇವರು, ಜೀತದಾಳು ಬಿಡುಗಡೆಯ ಪ್ರಮಾಣ ಪತ್ರವನ್ನು ಬ್ಯಾಂಕ್‌ನಲ್ಲಿ ತೋರಿಸಿ 20 ಸಾವಿರ ರೂ.ಗಳನ್ನು ಪಡೆದುಕೊಳ್ಳಬಹುದು.
-ಪಿ.ಸುನೀಲ್‌ಕುಮಾರ್‌, ಕೊಪ್ಪಳ ಜಿಲ್ಲಾಧಿಕಾರಿ

* ಶ್ರುತಿ ಮಲೆನಾಡತಿ

Advertisement

Udayavani is now on Telegram. Click here to join our channel and stay updated with the latest news.

Next