ಬಳ್ಳಾರಿ : ಕಾಂಗ್ರೆಸ್- ಜೆಡಿಎಸ್ ಮೈತ್ರಿ ಸರ್ಕಾರ ರಚನೆಯಾದಾಗಿನಿಂದಲೂ ಉಭಯ ಪಕ್ಷಗಳಲ್ಲೂ ಭಿನ್ನಮತ ಇತ್ತು. ಬಿಜೆಪಿಗೆ ಅಧಿಕಾರ ನೀಡಬಾರದು ಎಂಬ ಕಾರಣಕ್ಕೆ ಮೈತ್ರಿ ಮಾಡಿಕೊಳ್ಳಲಾಗಿತ್ತು. ಆ ಒಡಕು ಈಗ ಬಹಿರಂಗವಾಗುತ್ತಿದೆ ಎಂದು ಸಚಿವ ಬಿ.ಶ್ರೀರಾಮುಲು ಹೇಳಿದರು.
ನಗರದ ಡಿಸಿ ಕಚೇರಿ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಹಿಂದಿನ ದೋಸ್ತಿ ಸರ್ಕಾರ ಕೆಡವಲು ಮಾಜಿ ಸಿಎಂ ಸಿದ್ದರಾಮಯ್ಯ ಕಾರಣ ಎಂದು ಮಾಜಿ ಪ್ರಧಾನಿ ದೇವೇಗೌಡ ಆರೋಪಿಸಿದ್ದಾರೆ. ದೋಸ್ತಿ ಸರ್ಕಾರದಲ್ಲೂ ಎಲ್ಲವೂ ಸರಿಯಿರಲಿಲ್ಲ. ಮಾಜಿ ಸಿಎಂ ಸಿದ್ದರಾಮಯ್ಯ ನಾನೇ ಸಿಎಂ ಎಂದು ಹೇಳಿಕೊಳ್ಳುತ್ತಿದ್ದರು. ಇತ್ತ ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದರೂ ಏನೂ ಮಾಡಲಾಗದ ಪರಿಸ್ಥಿತಿ ಇತ್ತು. ಹಾಗಾಗಿ ದೋಸ್ತಿ ಸರ್ಕಾರದ ಬಹುತೇಕರಿಗೆ ಸರ್ಕಾರ ಇರೋದು ಇಷ್ಟವಿರಲಿಲ್ಲ. ದೋಸ್ತಿ ಸರ್ಕಾರ ತಾನಾಗಿ ಬಿದ್ದು, ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿದೆ ಎಂದು ತಿಳಿಸಿದರು.
ರಾಜ್ಯದಲ್ಲಿ ಹೊಸದಾಗಿ ರಚನೆಯಾಗಿರುವ ಬಿಜೆಪಿ ಸರ್ಕಾರ ಮೂರು ವರ್ಷ ಸುಭದ್ರವಾಗಿರಲಿದ್ದು ಉತ್ತಮ ಆಡಳಿತ ನೀಡಲಿದೆ. ನಮ್ಮಲ್ಲಿ ಯಾವುದೇ ಭಿನ್ನಮತ ಇಲ್ಲ. ಸಚಿವ ಖಾತೆ ಹಂಚಿಕೆಯಲ್ಲೂ ಹೈಕಮಾಂಡ್ ಸೂಕ್ತ ನಿರ್ಣಯ ಕೈಗೊಳ್ಳಲಿದೆ. ಯಾರಿಗೂ ಅತೃಪ್ತಿಯಿಲ್ಲ. ಅನರ್ಹ ಶಾಸಕರ ಬಗ್ಗೆ ಹೈಕಮಾಂಡ್ ಸೂಕ್ತ ನಿರ್ಣಯ ಕೈಗೊಳ್ಳಲಿದೆ. ಅನರ್ಹರು ಇಂತಹದ್ದೇ ಖಾತೆ ಬೇಕು ಎಂದು ಯಾವುದೇ ಬೇಡಿಕೆ ಇಟ್ಟಿಲ್ಲ ಎಂದರು.
ಹುಕ್ಕೇರಿ ಶಾಸಕ ಉಮೇಶ್ ಕತ್ತಿಯವರು ಅವರ ಹೇಳಿಕೆಯನ್ನು ಮಾಧ್ಯಮಗಳು ತಪ್ಪಾಗಿ ಅರ್ಥೈಸಿಕೊಂಡಿರಬಹುದು. ಅವರು ನಮ್ಮೊಂದಿಗೆ ಇದ್ದಾರೆ ಎಂದು ಇದೆ ವೇಳೆ ಸ್ಪಷ್ಟಪಡಿಸಿದರು.
ಇತ್ತೀಚಿಗಷ್ಟೇ ಉತ್ತರ ಕರ್ನಾಟಕದಲ್ಲಿ ಭೀಕರ ಬರಗಾಲ, ಪ್ರವಾಹ ಉಂಟಾಗಿದ್ದರಿಂದ ಮುಖ್ಯಮಂತ್ರಿ ಯಡಿಯೂರಪ್ಪನವರು, ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಸ್ಥಿತಿ ವೀಕ್ಷಿಸಿ ಸರ್ಕಾರಕ್ಕೆ ವರದಿ ನೀಡುವಂತೆ ಸೂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳ ಆದೇಶಾನುಸಾರ ಇದೀಗ ಅಧಿಕಾರಿಗಳ ಸಭೆ ಕರೆಯಲಾಗಿದೆ ಎಂದರು.
ಸಚಿವ ಪ್ರಭು ಚೌವ್ಹಾಣ್ ಮಾತನಾಡಿ, ನಾನು ಸಚಿವ ಸ್ಥಾನವನ್ನೇ ಕೇಳಿರಲಿಲ್ಲ. ಸಂಪುಟ ದರ್ಜೆಯ ಸಚಿವ ಸ್ಥಾನ ಸಿಕ್ಕಿದೆ. ಇಂಥಹದ್ದೇ ಖಾತೆ ಬೇಕು ಎಂದು ಬೇಡಿಕೆ ಇಟ್ಟಿಲ್ಲ. ಸಾಮಾನ್ಯ ಕಾರ್ಯಕರ್ತನಾಗಿದ್ದು, ಯಾವುದೇ ಖಾತೆ ಕೊಟ್ಟರೂ ನಿಭಾಯಿಸುವೆ. ಅನರ್ಹ ಶಾಸಕರಿಗೆ ಸಂಬಂಧಿಸಿದಂತೆ ಹೈಕಮಾಂಡ್ ಸೂಕ್ತ ನಿರ್ಣಯ ಕೈಗೊಳ್ಳಲಿದೆ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.