ಮುಂಬಯಿ, ಜು. 23: ದಕ್ಷಿಣ ಮುಂಬಯಿಯ ರಾಜ್ ಭವನದ ಎದುರಿನ ಹುಲ್ಲುಹಾಸುಗಳಲ್ಲಿರುವ 22 ಟನ್ ತೂಕದ ಒಂದೇ ರೀತಿಯ ಎರಡು ಬ್ರಿಟಿಷ್ ಯುಗದ ಫಿರಂಗಿಗಳನ್ನು ರವಿವಾರ ಜಲ್ ವಿಹಾರ್ ಬಾಂಕ್ವೆಟ್ ಹಾಲ್ ಹೊರಗಿನ ವಿಶೇಷವಾಗಿ ರಚಿಸಲಾದ ವೇದಿಕೆಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಈ ಸ್ಥಳಾಂತರಣ ಕೆಲಸಕ್ಕೆ ಐದು ಗಂಟೆಗಳು ತಗುಲಿದ್ದು ಫಿರಂಗಿಗಳ ಈ ಕಾರ್ಯತಾಂತ್ರಿಕ ನಿಯೋಜನೆಯಿಂದ ಗಣ್ಯರಿಗೆ ಅಳಿದು ಹೋಗಿರುವ ಯುಗದ ಮದ್ದುಗುಂಡುಗಳನ್ನು ನೋಡಲು ಸಾಧ್ಯವಾಗಲಿದೆ. ರಾಜ್ ಭವನದ ಭೇಟಿಗಳು ಅಕ್ಟೋಬರ್‌ನಲ್ಲಿ ಪುನರಾರಂಭವಾದ ಅನಂತರ ಜನರು ಈ ಫಿರಂಗಿಗಳನ್ನು ವೀಕ್ಷಿಸಬಹುದಾಗಿದೆ ಎಂದು ತಿಳಿಸಿದೆ.
ರಾಜ್ ಭವನದ ತಪ್ಪಲಿನಲ್ಲಿ ನಿರ್ಲಕ್ಷಿತ ಸ್ಥಿತಿಯಲ್ಲಿ ಕಂಡುಬಂದ ಈ ಫಿರಂಗಿಗಳನ್ನು ಕಳೆದ ವರ್ಷ ನ.3ರಂದು ತಾತ್ಕಾಲಿಕವಾಗಿ ರಾಜ್ ಭವನ ಸಂಕೀರ್ಣದ ಮುಂದಿನ ಹುಲ್ಲುಹಾಸಿನ ಮೇಲೆ ಇರಿಸಲಾಗಿತ್ತು. ರಾಜ್ಯಪಾಲ ಸಿ. ವಿದ್ಯಾಸಾಗರ್‌ರಾವ್ ಅವರ ಸಲಹೆಯ ಮೇರೆಗೆ ಅವುಗಳನ್ನು ಪುನಃಸ್ಥಾಪಿಸಲಾಯಿತು ಮತ್ತು ತುಕ್ಕು ಹಿಡಿಯುವುದನ್ನು ತಡೆಗಟ್ಟಲು ಅವುಗಳಿಗೆ ಆ್ಯಂಟಿ-ಆಕ್ಸಿಡೈಸಿಂಗ್ ಚಿಕಿತ್ಸೆಯನ್ನು ನೀಡಲಾಯಿತು ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಈ ಫಿರಂಗಿಗಳು ತಲಾ 22 ಟನ್‌ಗಳಷ್ಟು ತೂಕವನ್ನು ಹೊಂದಿದ್ದು, 4.7 ಮೀಟರ್ ಉದ್ದ ಮತ್ತು 1.15 ಮೀಟರ್ ವ್ಯಾಸವನ್ನು ಹೊಂದಿವೆ. ಇದಕ್ಕೂ ಮೊದಲು 2016ರಲ್ಲಿ ರಾಜ್ ಭವನದ ಆವರಣದಲ್ಲಿ ಬ್ರಿಟಿಷರ ಕಾಲದ 13 ಕೊಠಡಿಗಳ ಭೂಮಿಗತ ಬಂಕರ್ ಒಂದನ್ನು ಪತ್ತೆಮಾಡಲಾಗಿತ್ತು. 15,000 ಚದರ ಅಡಿ ವಿಸ್ತೀರ್ಣದ ಈ ಬಂಕರ್ ಇದೀಗ ಪುನಃಸ್ಥಾಪಿಸಲಾಗಿದೆ. ಬ್ರಿಟಿಷರ ಕಾಲದಲ್ಲಿ ರಾಜ್‌ಭವನವನ್ನು ಗವನ್ರ್ಮೆಂಟ್ ಹೌಸ್ ಎಂದು ಕರೆಯಲಾಗುತ್ತಿತ್ತು. 1885ರಿಂದ ಇಲ್ಲಿ ಬ್ರಿಟಿಷ್ ಗವರ್ನರ್‌ಗಳು ವಾಸವಾಗಿದ್ದರು. ಲಾರ್ಡ್ ರೇಯ್ ಅವರು ಇದನ್ನು ಬ್ರಿಟಿಷ್ ಗವರ್ವರ್‌ನ ಶಾಶ್ವತ ನಿವಾಸವನ್ನಾಗಿ ಮಾಡಿದ್ದರು. 1885ಕ್ಕಿಂತ ಮೊದಲು ಪರೇಲ್ನಲ್ಲಿರುವ ಗವನ್ರ್ಮೆಂಟ್ ಹೌಸ್ ಗವರ್ನರ್‌ಗಳ ನಿವಾಸವಾಗಿತ್ತು.