Advertisement

ಬಮೂಲ್ ನಿರ್ದೇಶಕರ ಪದಚ್ಯುತಿ

12:23 PM May 23, 2019 | Team Udayavani |

ಮಾಗಡಿ: ಆಗಲಕೋಟೆ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಹಾಗೂ ಬೆಂಗಳೂರು ಹಾಲು ಒಕ್ಕೂಟಕ್ಕೆ ಚುನಾಯಿತರಾಗಿದ್ದ ನರಸಿಂಹಮೂರ್ತಿ ಸ್ಥಾನವನ್ನು ಅನರ್ಹಗೊಳಿಸಿ 3ವರ್ಷಗಳ ಕಾಲ ಚುನಾಯಿತರಾಗದಿರುವಂತೆ ರಾಮನಗರ ಉಪವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕ ರಾಜು ಮಂಗಳವಾರ ಆದೇಶ ಹೊರಡಿಸಿದ್ದಾರೆ.

Advertisement

ಮಾಗಡಿ ತಾಲೂಕು ಆಗಲಕೋಟೆ ಹಾಲು ಉತ್ಪಾದಕರ ಸಹಕಾರ ಸಂಘದ ಮುಖ್ಯಕಾರ್ಯನಿರ್ವಾಹಕ ಹುದ್ದೆಯನ್ನು ನೇಮಕಾತಿ ಮಾಡುವ ವೇಳೆ ನಿಯಮ 17(3) ರ ರೀತ್ಯ ಸಹಕಾರ ಸಂಘದ ನಿಬಂಧಕರ ಪ್ರತಿನಿಧಿಯನ್ನು ಒಳಗೊಂಡ ಉಪಸಮಿತಿಯನ್ನು ರಚಿಸಿ ಸಿಬ್ಬಂದಿ ನೇಮಕಾತಿ ಮಾಡಬೇಕಾಗಿತ್ತು. ಆದರೆ ನರಸಿಂಹಮೂರ್ತಿ ನಿಯಮ ಉಲ್ಲಂಘಿಸಿರುವ ಹಿನ್ನೆಲೆಯಲ್ಲಿ ಕರ್ನಾಟಕ ಸಹಕಾರ ಸಂಘದ ಅದಿನಿಯಮ 1959 ರ ಪ್ರಕರಣ 29-ಸಿ (8)ಸಿ ಅನ್ವಯ ಸಂಘದ ಅಧ್ಯಕ್ಷ ಮತ್ತು ನಿರ್ದೇಶಕ ಸ್ಥಾನವನ್ನು ಅನರ್ಹಗೊಳಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ವಿಚಾರಣೆ: ಆಗಲಕೋಟೆ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ 2016 ರಲ್ಲಿ ನಿಯಮ ಬಾಹಿರವಾಗಿ ಮುಖ್ಯಕಾರ್ಯನಿರ್ವಾಹಕ ಹುದ್ದೆ ನೇಮಕ ಮಾಡಿಕೊಂಡಿರುವ ಪ್ರಕರಣದಡಿ ಆಡಳಿತ ಮಂಡಲಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಡೇರಿ ಸದಸ್ಯ ಎಂ.ಸಿ.ಗಂಗಣ್ಣ ಏ. 15 ರಂದು ಪ್ರಕರಣ ದಾಖಲಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಏ. 24 ರಂದು ದಿನಾಂಕ ನಿಗಧಿಪಡಿಸಿ ತುರ್ತು ನೋಟಿಸ್‌ ಜಾರಿ ಮಾಡಲಾಗಿತ್ತು. ಕಾಲಾವಕಾಶ ಮೇರೆಗೆ ಮೇ.13 ವಿಚಾರಣೆ ನಿಗದಿಪಡಿಸಲಾಗಿತ್ತಾದರೂ ಪ್ರತಿವಾದಿಗಳು ವಿಚಾರಣೆಗೆ ಗೈರಾಗಿದ್ದ ಕಾರಣ ಮತ್ತೆ ಪ್ರಕರಣವನ್ನು ಮೇ.27ಕ್ಕೆ ನಿಗದಿಪಡಿಸಲಾಗಿತ್ತು.

ಅರ್ಜಿದಾರರ ಪರ ವಕೀಲ ಜಯಪ್ರಕಾಶ್‌ ರೆಡ್ಡಿ 2019 ರ ಮೇ 20 ರಂದು ಸಿಪಿಸಿ ಪ್ರಕರಣದಡಿ ಸಹಾಯಕ ಉಪ ನಿಬಂಧಕರಿಗೆ ವಿಚಾರಣೆಯನ್ನು ಮುಂಗಡವಾಗಿ ಕೈಗೊಳ್ಳಬೇಕೆಂದು ಮನವಿ ಮಾಡಿದ್ದು, ಈ ಸಂಬಂಧ ತುರ್ತು ನೋಟಿಸ್‌ ಸಹ ಜಾರಿ ಮಾಡಿದ್ದಾರೆ ಎಂದು ಪ್ರಮಾಣ ಪತ್ರ ಸಲ್ಲಿಸಿದ್ದಾರೆ. ಇದರ ಅನ್ವಯ ಮೇ.21 ರಂದು ಪ್ರಕರಣವನ್ನು ಕೈಗೆತ್ತಿಕೊಂಡ ಉಪನಿಬಂಧಕರು ವಿಚಾರಣೆ ನಡೆಸಿದ್ದಾರೆ.

ಪೂರ್ವಾನ್ವಯ ನೇಮಕ: ಡೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಬಸವರಾಜ ವಯೋನಿವೃತ್ತಿ ಹೊಂದಿದ್ದರಿಂದ 2016 ರ ಜೂನ್‌ 22 ರಂದು ಸಂಘದ ಆಡಳಿತ ಮಂಡಲಿ ತಾತ್ಕಾಲಿಕವಾಗಿ ಹಾಲು ಪರೀಕ್ಷಕ ಹಾಗೂ ಶುಚಿಗಾರ ಹಾಗೂ ಸಹಾಯಕರನ್ನು ನೇಮಕ ಮಾಡಿಕೊಂಡಿತ್ತು. ನಿಯಮದಲ್ಲಿ ಅವಕಾಶವಿಲ್ಲದಿದ್ದರೂ ಸಹ ಸಂಘಕ್ಕೆ ಸಹಾಯಕರಾಗಿ ಬಿ.ಚೇತನ್‌ ಅವರನ್ನು 2016 ಜ. 2 ರಂದೇ ಪೂರ್ವಾನ್ವಯ ಆಡಳಿತ ಮಂಡಲಿ ನೇಮಕ ಮಾಡಿಕೊಂಡಿದೆ.

Advertisement

ನಿಯಮ ಉಲ್ಲಂಘನೆ: ಮುಖ್ಯಕಾರ್ಯ ನಿರ್ವಾಹಕ ಗೈರು ಹಾಜರಿಯಲ್ಲಿ ಆಡಳಿತ ಮಂಡಲಿ ಠರಾವು ಹೊರಡಿಸಿ ನಿಯಮ ಉಲ್ಲಂಘಿಸಿದೆ. 2016 ರ ನ. 28 ರಲ್ಲಿ ಆಡಳಿತ ಮಂಡಲಿ ತಾತ್ಕಾಲಿಕ ನೇಮಕಾತಿಯನ್ನು ನಿಯಮ ಉಲ್ಲಂಘಿಸಿ ಖಾಯಂ ಸಹಗೊಳಿಸಿತ್ತು. ಮುಂದುವರಿದು 2017 ರ ಫೆ.10 ರಂದು ಆಡಳಿತ ಮಂಡಲಿ ಬಿ. ಚೇತನ್‌ ಅವರನ್ನು ಮುಖ್ಯಕಾರ್ಯನಿರ್ವಾಹಕ ಹುದ್ದೆ ಮುಂಬಡ್ತಿ ಸಹ ನೀಡಿ ಮತ್ತೆ ನಿಯಮ ಉಲ್ಲಂಘಿಸಿದೆ. 2017 ರ ಜು. 2 ರಂದು ಖಾಯಂ ಗೊಳಿಸಿದೆ. ಇದಕ್ಕೆ ಸಂಬಂಧಿಸಿದಂತೆ 2018 ರ ಅ. 30ರಂದು ರೈತರಿಂದ ದೂರುಗಳ ಬಂದ ನಂತರ ನಿಯಮಾನುಸಾರ ನೇಮಕಾತಿ ಮಾಡಿಕೊಳ್ಳುವಂತೆ ಸೂಚನೆ ನೀಡಿದರೂ ಸಹ ಮತ್ತೆ 2018 ರ ನ. 29ರಂದು ಆಡಳಿತ ಮಂಡಲಿ ಮತ್ತೆ ತಾತ್ಕಾಲಿಕವಾಗಿ ಮುಖ್ಯಕಾರ್ಯನಿರ್ವಾಹಕ ಹುದ್ದೆಯನ್ನು ಮುಂದುವರಿಸಲು ತೀರ್ಮಾನ ಕೈಗೊಂಡಿತ್ತು. ಇದಕ್ಕೆ ಸಂಬಂಧಿಸಿದಂತೆ ಮತ್ತೆ ದೂರುಗಳು ಬಂದ ಹಿನ್ನೆಲೆಯಲ್ಲಿ ಪ್ರಕರಣವನ್ನು ಕೈಗೆತ್ತಿಕೊಂಡ ರಾಮನಗರ ಉಪವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕರು ಮೇಲ್ಕಂಡ ನೇಮಕಾತಿ ವಿಚಾರವಾಗಿ ಸಹಕಾರ ಸಂಘಗಳ ನಿಯಮಾವಳಿ ಪಾಲಿಸದೆ ಇರುವುದು ಸಾಭೀತಾದ ಹಿನ್ನೆಲೆಯಲ್ಲಿ ಮೇ.21 ರಂದು ಆಗಲಕೋಟೆ ಹಾಲು ಉತ್ಪಾದಕರ ಸಹಕಾರ ಸಂಘದ ಆಡಳಿತ ಮಂಡಲಿಯ ಅಧ್ಯಕ್ಷ ಸ್ಥಾನ ಮತ್ತು ಮೇ 12 ರಂದು ಬಮೂಲ್ಗೆ ಆಯ್ಕೆಯಾಗಿದ್ದ ನರಸಿಂಹಮೂರ್ತಿಯ ನಿರ್ದೇಶಕ ಸ್ಥಾನವನ್ನು ಅನರ್ಹಗೊಳಿಸಿದ್ದಾಗಿ ಆದೇಶ ಹೊರಡಿಸಿದ್ದಾರೆ.

ಕೃಷ್ಣಮೂರ್ತಿ ಕುತಂತ್ರಕ್ಕೆ ಅಧ್ಯಕ್ಷ ಸ್ಥಾನ ಕೈತಪ್ಪಿದೆ: ನರಸಿಂಹಮೂರ್ತಿ

ಮಾಗಡಿ ಕ್ಷೇತ್ರದ ಮಾಜಿ ಶಾಸಕ ಎಚ್.ಸಿ.ಬಾಲಕೃಷ್ಣ ಅವರನ್ನು ರಾಜಕೀಯವಾಗಿ ತುಳಿಯಲು ಎಚ್.ಡಿ.ದೇವೇಗೌಡ, ಎಚ್.ಡಿ. ಕುಮಾರಸ್ವಾಮಿ ನಿರಂತರ ಪ್ರಯತ್ನ ಪಡುತ್ತಿರುವುದು ಬಹಿ ರಂಗ ಸತ್ಯ. ಇದೀಗ ಬಮೂಲ್ ಅಧ್ಯಕ್ಷ ಸ್ಥಾನದ ಚುನಾವಣೆಗೆ ಸ್ವಯಂ ಎಚ್.ಡಿ.ದೇವೇಗೌಡರು ಮತ್ತು ಎಚ್.ಡಿ.ರೇವಣ್ಣ ಬಾಲಕೃಷ್ಣರ ಬೆಂಬಲಿಗ ಬಮೂಲ್ ನಿರ್ದೇಶಕ ನರಸಿಂಹಮೂರ್ತಿ ಅವರ ವಿಚಾರದಲ್ಲೂ ಕತ್ತಿ ಮಸೆದಿದ್ದಾರೆ ಎಂದು ಕಾಂಗ್ರೆಸ್‌ ಮೂಲಗಳು ಹರಿಹಾಯ್ದಿವೆ. ಮೈತ್ರಿ ಧರ್ಮಪಾಲಿಸಬೇಕಾದ ಜೆಡಿಎಸ್‌ ನಾಯಕರು ಬೇರು ಮಟ್ಟದಲ್ಲಿ ಕಾಂಗ್ರೆಸ್‌ಗೆ ನಿರಂತರ ಪೆಟ್ಟು ನೀಡುತ್ತಿದ್ದಾರೆ ಎಂದು ಕಾಂಗ್ರೆಸ್‌ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್‌ ಬೆಂಬಲಿತ ಮಾಗಡಿ ಕ್ಷೇತ್ರದಿಂದ ಬಮೂಲ್ ಆಡಳಿತ ಮಂಡಳಿಗೆ ಆಯ್ಕೆಯಾಗಿರುವ ನರಸಿಂಹಮೂರ್ತಿ ಅವರನ್ನು ಬಮೂಲ್ ಅಧ್ಯಕ್ಷರನ್ನಾಗಿ ಮಾಡುವ ವಿಚಾರದಲ್ಲಿ ಡಿಸಿಎಂ ಪರಮೇಶ್ವರ್‌, ಕಾಂಗ್ರೆಸ್‌ ಪ್ರಮುಖರಾದ ಡಿ.ಕೆ.ಸುರೇಶ್‌, ವೀರಪ್ಪಮೊಯ್ಲಿ, ಎಂ.ಬಿ.ಟಿ. ನಾಗರಾಜು ಹೀಗೆ ಘಟಾನುಘಟಿ ಮುಖಂಡರುಗಳು ಸಿಎಂ ಕುಮಾರಸ್ವಾಮಿ ಅವರೊಂದಿಗೆ ಈ ಚರ್ಚಿಸಿ ಒಮ್ಮತದ ನಿರ್ಧಾರಕ್ಕೆ ಬರಲಾಗಿತ್ತು ಬಾಲಕೃಷ್ಣ ಬೆಂಬಲಿಗ ಎಂಬುದೊಂದೆ ಕಾರಣ: ಬಮೂಲ್ ಅಧ್ಯಕ್ಷ ಸ್ಥಾನಕ್ಕೆ ಬುಧವಾರ ಚುನಾವಣೆಯೂ ನಿಗಧಿಯಾಗಿತ್ತು. ನರಸಿಂಹ ಮೂರ್ತಿ ಅಧ್ಯಕ್ಷರಾಗಬೇಕಿತ್ತು. ಅವರು ಮಾಜಿ ಶಾಸಕ ಎಚ್.ಸಿ.ಬಾಲಕೃಷ್ಣ ಅವರ ಬೆಂಬಲಿಗ ಎಂಬ ಒಂದೇ ಕಾರಣಕ್ಕೆ ಖುದ್ದು ಎಚ್.ಡಿ.ದೇವೇಗೌಡರು ಮತ್ತು ಎಚ್.ಡಿ.ರೇವಣ್ಣ ಅವರು ಕುತಂತ್ರ ರಾಜಕರಣ ಮಾಡಿ ನರಸಿಂಹಮೂರ್ತಿ ಅವರ ವಿರುದ್ಧ ಸಹಕಾರಿ ಕೇಸೊಂದರಲ್ಲಿ ಸಿಲುಕಿಸಿ ಅಧ್ಯಕ್ಷರಾಗುವುದನ್ನು ತಪ್ಪಿಸಿದ್ದಾರೆ. ಜೆಡಿಎಸ್‌ ನಾಯಕರು ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಪ್ರಯೋಗಿಸಿದ್ದಾರೆ ಎಂದು ಕಾಂಗ್ರೆಸ್‌ ಪಾಳಯ ಆರೋಪಿಸಿದೆ. ಈ ವಿಚಾರದಲ್ಲಿ ಮಾಗಡಿ ಶಾಸಕ ಎ.ಮಂಜು ಮತ್ತು ಸ್ಥಳೀಯ ಜೆಡಿಎಸ್‌ ನಾಯಕ ಕೃಷ್ಣಮೂರ್ತಿ ಅವರ ಪಾತ್ರವಿದೆ ಎಂದು ದೂರಿದ್ದಾರೆ.
ಇದು ದ್ವೇಷದ ರಾಜಕಾರಣ: ಎಚ್.ಸಿ.ಬಾಲಕೃಷ್ಣ

ನನ್ನ ಶಿಷ್ಯ ಎಂಬ ಒಂದೇ ಕಾರಣಕ್ಕೆ ನರಸಿಂಹಮೂರ್ತಿ ವಿರುದ್ಧ ಇಲ್ಲದಿರುವ ಕೇಸನ್ನು ಸೃಷ್ಟಿ ಮಾಡಿ ಅವರನ್ನು ಅನರ್ಹಗೊಳಿಸಿದ್ದಾರೆ. ಎಚ್.ಡಿ.ದೇವೇಗೌಡರು ಮತ್ತು ಎಚ್.ಡಿ.ರೇವಣ್ಣ ಅವರಿಗೆ ಇದಕ್ಕಿಂತ ಉತ್ತಮ ಕಾರ್ಯ ಇರಲಿಲ್ಲವೇನೋ. ಹೀಗಾಗಿ ನನ್ನ ಶಿಷ್ಯನ ವಿರುದ್ಧ ದ್ವೇಷದ ರಾಜಕರಣ ಮಾಡಿದ್ದಾರೆ. ಹಿಂದೆಯೂ ನನ್ನ ಸಹೋದರ ಅಶೋಕ್‌ರನ್ನು ಸಹ ಅನರ್ಹಗೊಳಿಸಿದ್ದಾರೆ. ಇದು ಸಮ್ಮಿಶ್ರ ಸರ್ಕಾರದಲ್ಲಿ ಒಳ್ಳೆಯ ಬೆಳವಣಿಗೆಯಲ್ಲ. ನರಸಿಂಹಮೂರ್ತಿ ಅವರನ್ನು ಬಮೂಲ್ ಅಧ್ಯಕ್ಷ ಸ್ಥಾನದಿಂದ ತಪ್ಪಿಸಿರುವ ಎಚ್.ಡಿ.ಕುಮಾರಸ್ವಾಮಿ, ಎ.ಮಂಜು, ಕೃಷ್ಣಮೂರ್ತಿ ಅವರಿಗೆ ಅಭಿನಂದನೆ.
ಮಾಗಡಿ; ಮಾಗಡಿ ಕ್ಷೇತ್ರದ ಬಮೂಲ್ ನಿರ್ದೇಶಕ ಸ್ಥಾನದ ಪರಾಜಿತ ಅಭ್ಯರ್ಥಿ ಕೆ.ಕೃಷ್ಣಮೂರ್ತಿ ಕುತಂತ್ರಕ್ಕೆ ನನಗೆ ಅಧ್ಯಕ್ಷ ಸ್ಥಾನ ತಪ್ಪಿದೆ ಎಂದು ಬಮೂಲ್ನ ನಿರ್ದೇಶಕ ನರಸಿಂಹಮೂರ್ತಿ ಆರೋಪಿಸಿದ್ದಾರೆ. ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೇ.21 ರ ಮಧ್ಯ ರಾತ್ರಿವರೆವಿಗೆ ನನಗೆ ಅಧ್ಯಕ್ಷ ಸ್ಥಾನ ನೀಡುವುದಾಗಿ ಎಲ್ಲರೂ ಒಮ್ಮತದಿಂದ ತೀರ್ಮಾನವಾಗಿತ್ತು. ಆದರೆ ಬಮೂಲ್ ನಿರ್ದೇಶಕ ಸ್ಥಾನದ ಪರಾಜಿತ ಅಭ್ಯರ್ಥಿ ಕೆ. ಕೃಷ್ಣಮೂರ್ತಿ ಅವರು ತನಗೆ ಅಧ್ಯಕ್ಷ ಸ್ಥಾನ ಸಿಗದಂತೆ ಜೆಡಿಎಸ್‌ ವರಿಷ್ಠರೊಂದಿಗೆ ಚರ್ಚಿಸಿ ಒತ್ತಡ ಏರಿ ಅಧ್ಯಕ್ಷ ತಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ. ಜೆಡಿಎಸ್‌ ನ ವರಿಷ್ಠ ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿರುವುದರಿಂದ ನನಗೆ ಮುಖಭಂಗ ಮಾಡಬೇಕೆಂದು ಸಹೋದರ ಕೆ. ಕೃಷ್ಣಮೂರ್ತಿ ನಡೆಸಿದ ಕುತಂತ್ರಕ್ಕೆ ಅಧ್ಯಕ್ಷ ಸ್ಥಾನ ವಂಚಿತನಾಗಿ ಬಲಿಯಾಗಬೇಕಾಯಿತು ಜೊತೆಗೆ ಬಮೂಲ್ ನಿರ್ದೇಶಕ ಸ್ಥಾನವನ್ನು ಸಹ ಪ್ರಕರಣ ದಾಖಲಿಸಿ ಸಹಾಯಕ ನಿಬಂಧಕರ ನ್ಯಾಯಾಲಯದ ಮೂಲಕ ಅನರ್ಹಗೊಳಿಸುವಲ್ಲಿಯೂ ಯಶಸ್ವಿಯಾಗಿದ್ದಾರೆ ಎಂದು ಆರೋಪಿಸಿದರು.
ಕೆ. ಕೃಷ್ಣಮೂರ್ತಿ ಅವರನ್ನೇ ಬಮೂಲ್ ನಿರ್ದೇಶಕರನ್ನಾಗಿ ಮಾಡಬಹುದು. ಕೆ.ಕೃಷ್ಣಮೂರ್ತಿ ಬಿಡಿಸಿಸಿ ಬ್ಯಾಂಕ್‌ ಮತ್ತು ಒಕ್ಕಲಿಗರ ಸಂಘದಲ್ಲಿ ಕೋಟ್ಯಂತರ ರೂ. ಅವ್ಯವಹಾರ ನೆಡೆಸಿ ಮುಳುಗಿಸಿದ್ದಾಗಿದೆ. ಪಟ್ಟಣ ಯೋಜನಾ ಪ್ರಾಧಿಕಾರದಲ್ಲಿ ಹಣವಿಲ್ಲವಂತೆ, ಈಗೇನಿದ್ದರೂ ಬಮೂಲ್ ಮುಳುಗಿಸಲು ಕೆ.ಕೃಷ್ಣಮೂರ್ತಿ ಹೊರಟಿದ್ದಾರೆ ಎಂದು ನರಸಿಂಹಮೂರ್ತಿ ತಿಳಿಸಿದರು. ಸಹೋದರರ ಸವಾಲು: ಕೆ.ಕೃಷ್ಣಮೂರ್ತಿ ಮತ್ತು ನರಸಿಂಹಮೂರ್ತಿ ಸಹೋದರರ ಸವಾಲಿನಲ್ಲಿ ಬಮೂಲ್ ನಿರ್ದೇಶಕನಾಗಿ ಅಣ್ಣ ನರಸಿಂಹಮೂರ್ತಿ ಆಯ್ಕೆಯಾದರೂ ಡೇರಿ ಅಕ್ರಮ ನೇಮಕಾತಿ ಪ್ರಕರಣ ದಾಖಲಿಸುವ ಮೂಲಕ ಕೆ.ಕೃಷ್ಣಮೂರ್ತಿ ನನ್ನನ್ನು ಅನರ್ಹಗೊಳಿಸಿದ್ದಾರೆ.
Advertisement

Udayavani is now on Telegram. Click here to join our channel and stay updated with the latest news.

Next