Advertisement
ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಕಸಾಪ ಆಯೋಜಿಸಿರುವ ಎರಡು ದಿನಗಳ ರಾಜ್ಯ ಮಟ್ಟದ ಪ್ರಥಮ ದಲಿತ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಸ್ಥಾನದಿಂದ ಮಾತನಾಡಿದ ಅವರು, ವೈದಿಕ ದೌರ್ಜನ್ಯದ ವಿರುದ್ಧ ಸಿಡಿದೆದ್ದ ಮೊದಲ ಚಿಂತಕ ಮಹಾ ಮಾನವ ಬುದ್ಧ ಎಂದು ಹೇಳಿದರು. ಆದರೆ, ಬೌದ್ಧ ಧರ್ಮ ನಮ್ಮ ನೆಲದಿಂದ ಕಾಣೆಯಾಗಿ ನೆರೆಯ ದೇಶಗಳಲ್ಲಿ ವಿರಾಜಮಾನವಾಗಿದ್ದು, ನಾವು ಮತ್ತದೇ ಅಸಮಾನತೆಯ ಕಾಲಾಳುಗಳಾಗಿದ್ದೇವೆ ಎಂದು ಎಚ್ಚರಿಸಿದರು.
Related Articles
Advertisement
ಪ್ರತಿ ಕ್ಷಣ ಸಂವಿಧಾನ ಉಲ್ಲಂಘನೆ: ಕನ್ನಡ ದಲಿತ ಸಾಹಿತ್ಯ ದಲಿತ ಚಳವಳಿಯ ಉಪ ಉತ್ಪನ್ನವಿದ್ದಂತೆ ಮೂಡಿ ಬಂದಿದೆ. ಸ್ವಾತಂತ್ರ್ಯ ಬರುವವರೆಗೂ ಭಾರತೀಯ ಸಾಮಾಜಿಕ ವ್ಯವಸ್ಥೆಯಲ್ಲಿ ಸಮಾನತೆಯ ಕಲ್ಪನೆ ಕೂಡ ಚಿಗುರೊಡೆಯಲು ಸಾಧ್ಯವಾಗಿರಲಿಲ್ಲ, ಆದ್ದರಿಂದಲೇ ಅಕ್ಷರ ನಮ್ಮನ್ನು ಬಿಡುಗಡೆಗೊಳಿಸಿದ ದೇವರೆಂದು ಭಾವಿಸುತ್ತೇನೆ ಎಂದರು.
ಭಾರತದ ಸಂವಿಧಾನ ಅತಿ ದೊಡ್ಡ ಸಂವಿಧಾನ ಎನಿಸಿಕೊಂಡಿದ್ದರೂ, ಇದು ಉಲ್ಲಂಘನೆಯಾಗಿರುವಷ್ಟು ಪಾಲನೆಯಾಗಿಲ್ಲವೆಂದು ವಿಷಾದಿಸಿದ ಅವರು, ಭಾರತೀಯ ಸಮಾಜದಲ್ಲಿ ಪ್ರತಿ ಕ್ಷಣವೂ ಸಂವಿಧಾನದ ಉಲ್ಲಂಘನೆ ನಡೆಯುತ್ತಲೇ ಇದೆ. ನಮ್ಮ ಕಾನೂನುಗಳನ್ನು ನಾವುಗಳೇ ಉಲ್ಲಂಘಿಸುತ್ತಿರುವುದರಿಂದ ದೇಶದ ಪ್ರಗತಿ ಅಧೋಗತಿ ಉಂಟಾಗಿದೆ ಎಂದರು.
ಬಂಡಾಯ ಸಾಹಿತ್ಯ: ಕನ್ನಡ ಸಾಹಿತ್ಯ ಪರಿಷತ್ 1979ರಲ್ಲಿ ದಲಿತ ಗೋಷ್ಠಿಯೊಂದನ್ನು ಅಯೋಜನೆ ಮಾಡಬೇಕೆಂದು ಕೇಳಿ ಕೊಂಡಾಗ ದಲಿತ, ಬಲಿತ, ಕಲಿತ ಎಂಬುದೇ ಸಾಹಿತ್ಯದಲ್ಲಿಲ್ಲ ಇಲ್ಲವೆಂದು ಹೇಳಿದ್ದ ಅಂದಿನ ಕಸಾಪ ಅಧ್ಯಕ್ಷ ನುಡಿಗಳೇ ಬಂಡಾಯ ಸಾಹಿತ್ಯ ಸಂಘಟನೆಯ ಹುಟ್ಟಿಗೆ ಕಾರಣವಾಗಿದ್ದು, ಈಗ ಇತಿ ಹಾಸವಾಗಿದೆ. ನಾಲ್ಕು ದಶಕಗಳ ದಲಿತ ಮತ್ತು ಬಂಡಾಯ ಸಾಹಿತ್ಯ ಪರಸ್ಪರ ಆಲಿಂಗನಗೊಂಡು ಸೃಷ್ಟಿಕ್ರಿಯೆಯಲ್ಲಿ ತೊಡಗಿದವು. ಮೊದಲ ತಲೆಮಾರಿನ ದಲಿತ ಸಾಹಿತ್ಯ ತನ್ನ ನೋವಿಗೆ ತೀವ್ರ ಆಕ್ರೋಶವನ್ನು ಒಡ್ಡಿದ್ದು ನಿಜವಾದರೂ, ಕೇವಲ ಆಕ್ರೋಶ ಸಾಹಿತ್ಯವಾಗುವುದಿಲ್ಲ ಎಂಬ ಅರಿವು ಬೇಗ ದಲಿತ ಲೇಖಕರಿಗೆ ಬಂದಿತು. ದಲಿತ ಸಾಹಿತ್ಯದ ಸೃಜನ ಶೀಲತೆಗೆ ಇದು ನಾಂದಿ ಯಾಯಿತೆಂದರು.
ಕನ್ನಡ ಸಾಹಿತ್ಯ ಹೊಸ ಶೋಧವನ್ನು ನಡೆಸುತ್ತಲೇ ಇತ್ತು, ಅದು ಮುಪ್ಪರಿಗೊಂಡದ್ದು ಹೊಸ ಶೋಧದ ತಾತ್ವಿಕತೆಗೆ ಅಭಿವ್ಯಕ್ತಿಯಾದದ್ದು ದಲಿತ ಸಾಹಿತ್ಯದ ಆರಂಭವಾಯಿತೆಂದರು.
ದಲಿತ ಚಳವಳಿ: ಕರ್ನಾಟಕದ ದಲಿತ ಚಳವಳಿ ಇತಿಹಾಸದ ಮಟ್ಟಿಗೆ ಬಹು ಮಹತ್ವದ ಚಳವಳಿಯಾಗಿತ್ತು. ದನಿಯಿಲ್ಲದ ಸಮಾಜದ ಕಟ್ಟಕಡೆಯ ಮನುಷ್ಯ ಮೊದಲ ಬಾರಿಗೆ ದನಿಯೆತ್ತಿ ಪ್ರತಿಭಟಿಸಲಾರಂಭಿಸಿದ ಚಳವಳಿ ಇದಾಗಿತ್ತು. ಆದರೆ, ನಾಯಕರ ಸ್ವಾರ್ಥ, ಜಾತಿ ಪ್ರೇಮ ಸಂಘಟನೆಯನ್ನು ದೀರ್ಘಕಾಲಕ್ಕೆ ಮುನ್ನಡೆಸಲು ಸಾಧ್ಯವಾಗಲಿಲ್ಲ. ಈಗಲಾದರೂ ತಪ್ಪುಗಳನ್ನು ತಿದ್ದಿಕೊಂಡು ನಾವೆಲ್ಲ ಒಂದು ಎನ್ನುವ ಘೋಷಣೆಯೊಂದಿಗೆ ಅಂಬೇಡ್ಕರ್ ಗಾಂಧಿ ಲೋಹಿಯಾ ಕಾರ್ಲ್ ಮಾರ್ಕ್ಸ್ ಚಿಂತನೆಗಳನ್ನು ಒಗ್ಗೂಡಿಸಿ ವಿಶಾಲ ತಳಹದಿಯ ಮೇಲೆ ಸಂಘಟನೆಯನ್ನು ಕಟ್ಟಬೇಕಾಗಿದೆ. ಅದು ಮಾತ್ರ ದಲಿತರನ್ನು ಉಳಿಸುವ ಬೆಳೆಸುವ ಚಾಲಕ ಶಕ್ತಿಯಾಗಲಿದೆ. ಈ ದಿಕ್ಕಿನಲ್ಲಿ ಹೊಸ ತಲೆಮಾರು ಯೋಚಿಸುವುದು ಒಳಿತು. ಅದಕ್ಕೆ ಈ ಸಮ್ಮೇಳನ ನಾಂದಿಯಾಗಲಿ ಎಂದು ಆಶಿಸಿದರು.
ಸುಮಾರು 16 ಪುಟಗಳ ಮುದ್ರಿತ ಭಾಷಣವನ್ನು ಡಾ.ಎಲ್.ಹನುಮಂತಯ್ಯ ಓದಿದಷ್ಟು ಹೊತ್ತು ಸಭಿಕರು ಆಸಕ್ತಿಯಿಂದ ಕೇಳಿದ್ದು ವಿಶೇಷವಾಗಿತ್ತು.
ಸಮೃದ್ಧ ಕರ್ನಾಟಕಎಲ್ಲಾ ಮಕ್ಕಳಿಗೂ ಜಿಲ್ಲಾಧಿಕಾರಿಯ ಮಗಳು, ಸಫಾಯಿ ಕರ್ಮಚಾರಿಯ ಮಗನೂ ಒಂದೇ ಶಾಲೆಯಲ್ಲಿ ಓದುವಂತಾಗಬೇಕು, ಶೈಕ್ಷಣಿಕ ಅಸಮಾನತೆಯನ್ನು ಸರಿಪಡಿಸದಿದ್ದರೆ ಮುಂದಿನ ಸಮ ಸಮಾಜವನ್ನು ನಿರ್ಮಿಸುವುದು ಹೇಗೆ ಎಂದು ಅವರು ಪ್ರಶ್ನಿಸಿದರು. ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯಾಗಬೇಕು, ಕನಿಷ್ಠ ಪ್ರಾಥಮಿಕ ಶಿಕ್ಷಣವಾದರೂ ರಾಷ್ಟ್ರೀಕರಣವಾಗ ಬೇಕು. ರಾಜ್ಯ ಭಾಷೆಗಳಲ್ಲಿ ಶಿಕ್ಷಣವನ್ನು ಸರ್ವ ಸಮಾನತೆಯಿಂದ ಕೂಡಿದ ಪಠ್ಯಕ್ರಮದಲ್ಲಿ ನೀಡುವಂತಾಗಬೇಕು, ಆಗ ಬಡವ ಬಲ್ಲಿದ ನಡುವಿನ ಅಂತರ ಕಡಿಮೆಯಾಗುತ್ತದೆ, ಸಮಾನತೆಯ ಗರಿಕೆ ಚಿಗುರುತ್ತದೆ ಎಂದು ಆಶಾಭಾವನೆ ವ್ಯಕ್ತಪಡಿಸಿದರು. ಮತಾಂತರ ವಿಮೋಚನೆಯ ಅಸ್ತ್ರವೇ?
ದಲಿತರು 12ನೇ ಶತಮಾನದಲ್ಲಿ ಬಸವಣ್ಣ ರೂಪಿಸಿದ ಲಿಂಗಾಯಿತ ಧರ್ಮಕ್ಕೆ ಮತಾಂತರವಾಗಿದ್ದರು. ಬುದ್ಧ ಆರಂಭಿಸಿದ ಬೌದ್ಧ ಧರ್ಮ ನಮ್ಮ ಧರ್ಮವೆಂದು ದಲಿತರು ಭಾವಿಸಿದ್ದರು. ಅಂಬೇಡ್ಕರ್ ನೇತೃತ್ವದಲ್ಲಿ ಲಕ್ಷಾಂತರ ಮಂದಿ ಮತಾಂತರವಾದರು. ಕೆಲವರು ಮತಾಂತರಗೊಂಡ ಧರ್ಮದಲ್ಲಿ ವಿಲೀನವಾಗಿದ್ದಾರೆ. ಅಸ್ಪೃಶ್ಯತಾ ಛಾಯೆಯನ್ನು ಕಳೆದುಕೊಂಡಿದ್ದಾರೆ. ಆದರೆ, ಮತ್ತಷ್ಟು ಮತಾಂತರಗೊಂಡ ದಲಿತರು ತ್ರಿಶಂಕುಗಳಾಗಿದ್ದಾರೆ. ದಲಿತ ಬೌದ್ಧ, ದಲಿತ ಕ್ರೈಸ್ತರು, ದಲಿತ ಮುಸ್ಲಿಮರು, ದಲಿತ ಸಿಖ್ಖರು ಅತಂತ್ರ ಸ್ಥಿತಿಯಲ್ಲಿರುವ ದಲಿತ ಆತ್ಮಗಳಾಗಿವೆ. ಮತಾಂತರ ವಿಮೋಚನೆಯ ಅಸ್ತ್ರವೇ ಎಂಬುದರ ಬಗ್ಗೆ ಸಾಂಸ್ಕೃತಿಕ ಚಿಂತನೆ ನಡೆಸಿ ತೀರ್ಮಾನಕ್ಕೆ ಬರಬೇಕಾದ ಸಂದರ್ಭ ಇದಾಗಿದೆಯೆಂದು ಹೇಳಿದರು. -ಕೆ.ಎಸ್.ಗಣೇಶ್