Advertisement

ಸಮಾಜದ ಮನಸ್ಥಿತಿ ಬದಲಾಗದೆ ಈ ರೋಗ ನಿಲ್ಲದು, ರಕ್ಕಸರಿಗೆ ಗಲ್ಲೇ ಸರಿ

09:34 AM Jul 11, 2018 | Harsha Rao |

ದೇಶವನ್ನೇ ನಡುಗಿಸಿದ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿ ಮಾಡಿದ, ಮಾನವೀಯತೆ ಇಲ್ಲದಂತೆ ಮಹಿಳೆಯೊಬ್ಬಳ ಮೇಲೆರಗಿ ಕೊಂದ ಕ್ರೂರಿಗಳಿಗೆ ಮರಣದಂಡನೆ ಶಿಕ್ಷೆಯೇ ಸರಿಯಾಗಿದೆ. ನಾಲ್ಕು ಹಂತಗಳಲ್ಲಿ ವಿಚಾರಣೆ ನಡೆಸಿದ ದೇಶದ ನ್ಯಾಯವ್ಯವಸ್ಥೆ ನಿರ್ಭಯಾ ಪ್ರಕರಣದ ಹಂತಕರಿಗೆ ಗಲ್ಲು ಶಿಕ್ಷೆಯನ್ನು ಪುನರುಚ್ಚರಿಸಿದೆ. ಇದು ಜಾರಿಗೊಳ್ಳುವುದಷ್ಟೇ ಈಗ ಬಾಕಿಯಿದೆ. ಈ ಪ್ರಕರಣದಲ್ಲಿ ಒಟ್ಟು ಆರು ಮಂದಿ ಅಪರಾಧಿಗಳಿದ್ದರು. ಅವರಲ್ಲಿ ಒಬ್ಬ ವಿಚಾರಣೆಯ ಆರಂಭಿಕ ಹಂತದಲ್ಲೇ ಜೈಲಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದ. ಇನ್ನೊಬ್ಬ ಬಾಲಾಪರಾಧಿಯಾದ ಕಾರಣಕ್ಕೆ ನೇಣಿನ ಕುಣಿಕೆಯಿಂದ ತಪ್ಪಿಸಿಕೊಂಡಿದ್ದಾನೆ. ಪ್ರಕರಣದ ವಿಚಾರಣೆ ನಡೆಸಿ ದೆಹಲಿ ಹೈಕೋರ್ಟ್‌ನ ತ್ವರಿತಗತಿಯ ವಿಚಾರಣಾ ಪೀಠ, ದೆಹಲಿ ಹೈಕೋರ್ಟ್‌ ಹಾಗೂ ಸುಪ್ರೀಂ ಕೋರ್ಟ್‌ ಉಳಿದ ನಾಲ್ಕು ಮಂದಿಯ ಕೃತ್ಯವನ್ನು ಕ್ರೂರ, ಬರ್ಬರ, ಪೈಶಾಚಿಕ ಎಂದು ಹೇಳಿವೆ. ಬಳಿಕ ಮೂರು ಮಂದಿ ಅಪರಾಧಿಗಳು ಸಲ್ಲಿಸಿದ ಮೇಲ್ಮನವಿಯನ್ನು ಅಂಗೀಕರಿಸಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌, ತೀರ್ಪಿನ ಮರುಪರಿಶೀಲನೆಗೆ ಇನ್ನೇನೂ ಉಳಿದಿಲ್ಲ ಎಂದು ಹಳೇ ಶಿಕ್ಷೆಯನ್ನೇ ಪುನರುಚ್ಚರಿಸಿದೆ. ನಮ್ಮ ದೇಶದ ನ್ಯಾಯವ್ಯವಸ್ಥೆಯಲ್ಲಿ ಈ ಹಂತಕರಿಗೆ ನ್ಯಾಯ ಕೋರಿಕೆಯ ಬಾಗಿಲು ಮುಗಿದಿಲ್ಲ. 

Advertisement

ಇನ್ನೂ ಎರಡು ಅವಕಾಶಗಳಿವೆ. ಮತ್ತೆ ಸುಪ್ರೀಂ ಕೋರ್ಟ್‌ಗೇ ಕ್ಯುರೇಟಿವ್‌ ಅರ್ಜಿ ಸಲ್ಲಿಸಬಹುದಾಗಿದೆ. ಅಲ್ಲೂ ತಿರಸ್ಕಾರಗೊಂಡರೆ ರಾಷ್ಟ್ರಪತಿಗಳಿಗೆ ದಯಾಮರಣ ಅರ್ಜಿ ಸಲ್ಲಿಸುವ ಅವಕಾಶವೂ ಇದೆ.

ಈ ಎರಡೂ ಹಂತಗಳಿಂದಾಗಿ ಈ ರಾಕ್ಷಸರನ್ನು ನೇಣಿಗೇರಿಸುವ ದಿನ ತುಸು ಮುಂದಕ್ಕೆ ಹೋಗಬಹುದೇ ಹೊರತು ಗಲ್ಲು ಶಿಕ್ಷೆ ಜೀವಾವಧಿಗಳಿಯುವ ಸಾಧ್ಯತೆ ತೀರಾ ಕಡಿಮೆಯಿದೆ. 2012ರ ಡಿಸೆಂಬರ್‌ 16ರಂದು ದೆಹಲಿಯಲ್ಲಿ ಈ ಪಾತಕಿಗಳಿದ್ದ ಬಸ್‌ ಹತ್ತಿದ್ದ ನಿರ್ಭಯಾ ಹಾಗೂ ಆಕೆಯ ಸ್ನೇಹಿತನಿಗೆ ತಾವು ಮೃಗಗಳ ಬೋನಿನೊಳಕ್ಕೆ ಹೊಕ್ಕಿರುವುದರ ಅರಿವೂ ಇರಲಿಲ್ಲ. ಬಸ್‌ ಚಲಿಸುತ್ತಿದ್ದಂತೆ ನಿರ್ಭಯಾಳ ಮೇಲೆರಗಿದ ಆರು ಮಂದಿ ಕ್ರೂರ ಮೃಗಗಳಂತೆ ವರ್ತಿಸಿದ್ದರು. ಕಬ್ಬಿಣದ ಸರಳುಗಳಿಂದ ತಿವಿದು ಅತ್ಯಾಚಾರಗೈದಿದ್ದರು. ಬಳಿಕ ಅವರಿಬ್ಬರನ್ನೂ ರಸ್ತೆಗೆ ಎಸೆದು ಹೋಗಿದ್ದರು. ಇಡೀ ದೇಶ ಒಂದಾಗಿ ಕಂಬನಿ ಮಿಡಿದಿತ್ತು. ಅತ್ಯಾಚಾರಿಗಳಿಗೆ ಮರಣದಂಡನೆ ವಿಧಿಸಲು ಕಾನೂನು ತಿದ್ದುಪಡಿಯಾಗಬೇಕೆಂಬ ಆಗ್ರಹದೊಂದಿಗೆ ಜನಾಂದೋಲನ ನಡೆಯಿತು. ಜನಾಗ್ರಹಕ್ಕೆ ಮಣಿದ ಕೇಂದ್ರ ಸರ್ಕಾರ ಕೊನೆಗೂ ಕಾನೂನು ತಿದ್ದುಪಡಿ ತಂದು  ಮಹಿಳೆಯ ಮೇಲಿನ ಕ್ರೌರ್ಯಕ್ಕೆ ಗಲ್ಲು ಶಿಕ್ಷೆಯನ್ನೂ ವಿಧಿಸುವ ಅವಕಾಶವನ್ನು ಸೇರ್ಪಡೆಗೊಳಿಸಿತು. ಮಹಿಳೆಯ ಮೇಲಿನ ಕ್ರೌರ್ಯದ ವಿರುದ್ಧ ಜನರ ಸಾಕ್ಷಿಪ್ರಜ್ಞೆಯನ್ನು ಬಡಿದೆಬ್ಬಿಸಿದ ಪ್ರಕರಣವಿದು. ಮರಣದಂಡನೆ ಶಿಕ್ಷೆಯನ್ನು ಸುಪ್ರೀಂ ಕೋರ್ಟ್‌ ಮತ್ತೂಮ್ಮೆ ಎತ್ತಿಹಿಡಿದಾಗ ನಿರ್ಭಯಾಳ ತಾಯಿ ನೀಡಿದ ಪ್ರತಿಕ್ರಿಯೆಯೂ ಇದೇ ಧ್ವನಿಯಲ್ಲಿತ್ತು. ಇದು ಎಲ್ಲಾ ಜನರಿಗೆ ದೊರೆತ ನ್ಯಾಯ ಎಂದು ಅವರು ಪ್ರತಿಕ್ರಿಯಿಸಿದರು.

ಮಹಿಳಾ ಸುರಕ್ಷೆಗೆ ಸರ್ಕಾರಗಳು ಆದ್ಯತೆ ನೀಡಬೇಕಾದ ಅಗತ್ಯತೆಯನ್ನು ಈ ಪ್ರಕರಣ ಸಾರಿಹೇಳಿದೆ. ಕಳೆದ 6 ವರ್ಷಗಳಿಂದ ಮಹಿಳೆಯರ ಮೇಲಿನ ದೌರ್ಜನ್ಯ, ಅಪರಾಧ ತಡೆಗೆ ಸರ್ಕಾರಗಳು ಹಲವು ಕ್ರಮಗಳನ್ನು ಕೈಗೊಳ್ಳಲು ಆರಂಭಿಸಿವೆ. ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಕ್ಕೆ ಬಾರದಿದ್ದರೂ ಆ ನಿಟ್ಟಿನಲ್ಲಿ ಜಾಗೃತಿ ಮೂಡಿದೆ. ಮಹಿಳೆಯರ ಮೇಲಿನ ಕ್ರೌರ್ಯ ನಿಲ್ಲಲು ಕೇವಲ ಕಾನೂನುಗಳಷ್ಟೇ ಸಾಕಾಗುವುದಿಲ್ಲ. ಅತ್ಯಾಚಾರಕ್ಕೆ ಗಲ್ಲು ಶಿಕ್ಷೆಯ ಕಾನೂನು ಬಂದಿದ್ದರೂ, ದಿನಬೆಳಗಾದರೆ ಅತ್ಯಾಚಾರದ ಸುದ್ದಿ ಕೇಳುತ್ತಲೇ ಇದ್ದೇವೆ. 

ಈ ರೋಗ ಅಂತ್ಯವಾಗಬೇಕಾದರೆ, ಸಮಾಜದ ಮನಸ್ಥಿತಿ ಬದಲಾಗ ಬೇಕಾಗಿದೆ. ಎಳೆವಯಸ್ಸಿನಿಂದಲೇ ಮಕ್ಕಳಿಗೆ ಉತ್ತಮ ಶಿಕ್ಷಣ ಹಾಗೂ ಸಂಸ್ಕಾರ ಹಾಗೂ ವಾತಾವರಣ ದೊರೆಯಬೇಕಿದೆ. ಸ್ತ್ರೀಯನ್ನು ಗೌರವಿಸುವ ಅಂತಃಕರಣ ಪುರುಷರಲ್ಲಿ ಮೂಡದ ಹೊರತು ಸಮಾಜದ ಮಧ್ಯೆ ಬೇರೂರಿರುವ ರಕ್ಕಸರ ನಿರ್ನಾಮ ಅಸಾಧ್ಯ. ಈ ನಿಟ್ಟಿನಲ್ಲಿ ಎಲ್ಲರೂ ಚಿಂತಿಸಬೇಕಾದ ಅಗತ್ಯವಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next