Advertisement

ಕೃಷಿ ಸಂಶೋಧನ ಪ್ರಯತ್ನಗಳಿಗೆ ಶಕ್ತಿ ತುಂಬಿದ “ಅನ್ವೇಷಣೆ ‘

11:49 PM Nov 30, 2019 | Sriram |

ಪುತ್ತೂರು: ವಿವೇಕಾನಂದ ವಿದ್ಯಾವರ್ಧಕ ಸಂಘದ ಆಶ್ರಯದಲ್ಲಿ ತೆಂಕಿಲದ ವಿವೇಕಾನಂದ ಆಂ.ಮಾ. ಶಾಲೆಯಲ್ಲಿ ಶನಿವಾರದಿಂದ ಆಯೋಜನೆಗೊಂಡ ಅನ್ವೇಷಣ – 2019 ಕೃಷಿ ಟಿಂಕರಿಂಗ್‌ ಫೆಸ್ಟ್‌ ಆಧುನಿಕ ಕೃಷಿ ವ್ಯವಸ್ಥೆಗೆ ಪೂರಕವಾದ ನೂರಾರು ಸಂಶೋಧನ ಪ್ರಯತ್ನಗಳಿಗೆ ಸಾಕ್ಷಿಯಾಯಿತು.

Advertisement

ರಾಜ್ಯದಲ್ಲಿಯೇ ಮೊದಲ ಬಾರಿಗೆ ನಡೆದ ಈ ಕೃಷಿ ಪರಿಕರಗಳ ಮಾದರಿ ಪ್ರದರ್ಶನ ಮೇಳದಲ್ಲಿ ರಾಜ್ಯದ 600 ಮಂದಿ 350 ಮಾದರಿಗಳನ್ನು ಪ್ರದರ್ಶಿಸಿದರು. ಇದರಲ್ಲಿ ವಿದ್ಯಾರ್ಥಿ ಸಂಶೋಧಕರಿಂದ ಹಿಡಿದು ಪ್ರಗತಿಪರ ಕೃಷಿಕರು, ಹಿರಿಯರು ಪಾಲ್ಗೊಂಡು ಭವಿಷ್ಯದ ಕೃಷಿ ಕ್ಷೇತ್ರಗಳಲ್ಲಿನ ಸಾಧ್ಯತೆಗಳನ್ನು ತೆರೆದಿಟ್ಟರು.

ಕೃಷಿಯಲ್ಲಿ ಆವಿಷ್ಕಾರ, ಹೊಸ ಬಗೆಯ ಕೃಷಿ ಯಂತ್ರೋಪಕರಣಗಳು, ಮಣ್ಣು ಮತ್ತು ನೀರಿನ ನಿರ್ವಹಣೆ, ಪಶು ಸಂಗೋಪನೆ, ನವೀನ ಕೃಷಿ ಉತ್ಪನ್ನಗಳು ಎಂಬ ಐದು ವಿಭಾಗಗಳಲ್ಲಿ ಈ ಪ್ರದರ್ಶನ ಏರ್ಪಾಡಾಗಿತ್ತು. 8ನೇ ತರಗತಿಯ ಕೆಳಗಿನವರು, 9ರಿಂದ ಪಿಯುಸಿ, ಐಟಿಐ ಹಾಗೂ ವೃತ್ತಿಪರ ಕಾಲೇಜಿನವರು ಹಾಗೂ ಸಾರ್ವಜನಿಕರು/ಕೃಷಿಕರು ಎಂಬ ಐದು ವರ್ಗದಲ್ಲಿ ಅನ್ವೇಷಣ – 2019 ಪ್ರತ್ಯೇಕವಾಗಿ ಸಿದ್ಧಗೊಂಡಿತ್ತು.

ಗಮನ ಸೆಳೆಯಿತು
ಪಾಪಸ್‌ ಕಳ್ಳಿ, ಗೇರುಬೀಜದಂತಹ ವಸ್ತುಗಳಿಂದ ತಯಾರಿಸಿದ ಸಾವಯವ ಕೀಟನಾಶಕ, ನೀರಿನ ಮರುಬಳಕೆಯ ಮಾದರಿ, ಉಳುವಿಕೆ ಮತ್ತು ಬಿತ್ತನೆ ಮಾಡುವುದಕ್ಕೆ ರೂಪಿಸಿದ ನವೀನ ಯಂತ್ರದ ಮಾದರಿ, ಹೈಡ್ರೋಫಾರ್ಮಿಂಗ್‌ ಮಾದರಿ, ಲಂಭ ಮಾದರಿಯ ಗಾರ್ಡನ್‌, ಒಣ ಅಡಿಕೆಯನ್ನು ಅಂಗಳದಿಂದ ನೇರವಾಗಿ ಗೋಣಿ ಚೀಲಕ್ಕೆ ತುಂಬಿಸುವ ಸಾಧನ, ನಿಟಿಲೆ ಮಹಾಬಲೇಶ್ವರ ಭಟ್ಟರ ನಿರ್ಗುಣ ಮಾದರಿ, ತೆಂಕಿಲದ ವಿವೇಕಾನಂದ ಆ.ಮಾ. ಶಾಲೆಯ ವಿದ್ಯಾರ್ಥಿ ಲಕ್ಷ್ಮೀಶ್‌ ಮತ್ತು ಮನ್ವಿತ್‌ ರೂಪಿಸಿದ ಗಿಡಗಳಿಗೆ ಔಷಧ ಸಿಂಪಡಣ ಮಾದರಿ ವಿಶೇಷವಾಗಿ ಗಮನ ಸೆಳೆದವು.

ಮಾದರಿ ಸಂಶೋಧನೆಗಳು
ವಿಟಲ್‌ ರಿಸೋರ್ಸ್‌ ಸೇವರ್‌ ಎಂಬ ಹೆಸರಿನಲ್ಲಿ ರಾಮಕುಂಜ ಕ.ಮಾ. ಪ್ರೌಢಶಾಲೆಯ ಪ್ರಜ್ವಲ್‌ ರೂಪಿಸಿದ ನೀರಿನ ಉಳಿತಾಯ ಮಾದರಿ ಗಮನ ಸೆಳೆಯಿತು. ದಿನನಿತ್ಯ ಮನೆ, ಕಚೇರಿಗಳಲ್ಲಿ ನಳ್ಳಿಗಳಲ್ಲಿ ಲೀಟರ್‌ಗಟ್ಟಲೆ ನೀರು ವ್ಯರ್ಥವಾಗುವುದನ್ನು ತಡೆಯುವ ಯೋಜನೆಯೇ ಈ ಮಾದರಿ. ಇದರಲ್ಲಿ ಪ್ರತಿಯೊಂದು ನಳ್ಳಿಗೂ ಒಂದು ಮೀಟರ್‌ ಅಳವಡಿಸಲಾಗುತ್ತದೆ. ಎಷ್ಟು ಸೆಕೆಂಡ್‌ ನೀರು ಬರಬೇಕೆನ್ನುವುದನ್ನು ಮೊದಲೇ ನಿರ್ಧರಿಸಿಡಲಾಗುತ್ತದೆ. ನಳ್ಳಿ ತಿರುಗಿಸಿದಾಗ ನಿಗದಿತ ಹೊತ್ತು ಮಾತ್ರ ನೀರು ಬರುತ್ತದೆ.

Advertisement

ಬಾಳೆ ಬೆಳೆಯ ರಕ್ಷಣೆ
ಕೃಷಿಕರಿಗೆ ವಿಪರೀತವಾಗುತ್ತಿರುವ ಮಂಗನ ಕಾಟವನ್ನು ಬಾಳೆ ಕೃಷಿಗೆ ಸಂಬಂಧಪಟ್ಟಂತೆ ತಪ್ಪಿಸಲು ವೃತ್ತಾಕಾರದ ಕಬ್ಬಣದ ಸರಿಗೆಗಳಿಂದ ರೂಪಿಸಿದ ಪೆಟ್ಟಿಗೆ. ಈ ಪೆಟ್ಟಿಗೆಯನ್ನು ಬಾಳೆಕಾಯಿಯನ್ನು ಸುತ್ತುವರಿದು ಕಟ್ಟಿಡಲು ಸಾಧ್ಯ. ಬಾಳೆಗೊನೆ ಎಳವೆಯಲ್ಲಿರುವಾಗಲೇ ಕಟ್ಟಿಟ್ಟರೆ, ಅದು ಬೆಳೆದ ಅನಂತರವಷ್ಟೇ ಈ ಪೆಟ್ಟಿಗೆ ತೆರೆದರಾಯಿತು. ಈ ಮಾದರಿ ರೂಪಿಸಿದವರು ಕಲ್ಲಡ್ಕದ ಶ್ರೀರಾಮ ವಿದ್ಯಾಕೇಂದ್ರದ ಮಾತಾಜಿ ಗಾಯತ್ರಿ.

ಹಲವು ಉಪಯುಕ್ತ ಮಾದರಿಗಳು ಪ್ರದರ್ಶಿನಿಯಲ್ಲಿ ಮೂಡಿಬಂದು ಜನರನ್ನು ಸೆಳೆಯುತ್ತಿವೆ. ರವಿವಾರವೂ ಈ ಪ್ರದರ್ಶನ ತೆರೆದಿದ್ದು, ಆಸಕ್ತರು ವೀಕ್ಷಿಸಲು ಅವಕಾಶ ಕಲ್ಪಿಸಲಾಗಿದೆ.

ಪ್ಲಾಸ್ಟಿಕ್‌ನಿಂದ ಪೆಟ್ರೋಲ್‌!
ವಿವೇಕಾನಂದ ಪ.ಪೂ. ಕಾಲೇಜಿನ ವಿದ್ಯಾರ್ಥಿನಿಯರಾದ ಹೇಮಸ್ವಾತಿ ಮತ್ತು ಖುಷಿ ರೂಪಿಸಿದ ಪ್ಲಾಸ್ಟಿಕ್‌ ತ್ಯಾಜ್ಯದಿಂದ ಗ್ಯಾಸ್‌ ತಯಾರಿಕ ಸಂಶೋಧನೆ ಗಮನ ಸೆಳೆಯಿತು. ಪ್ಲಾಸ್ಟಿಕ್‌ ಅನ್ನು ನಿಗದಿತ ಶಾಖದಲ್ಲಿ ದ್ರವರೂಪಕ್ಕಿಳಿಸಿ ಅದರಿಂದ ಗ್ಯಾಸ್‌, ಪೆಟ್ರೋಲ್‌ ಪಡೆಯಬಹುದಾದ ಮುಂದಿನ ದಿನಗಳಲ್ಲಿ ಜನಪ್ರಿಯವಾದರೆ ಅಚ್ಚರಿ ಇಲ್ಲ.

 ಸರಕಾರದ ಮಟ್ಟದಲ್ಲಿ ಚರ್ಚಿಸುವೆ
ಕೃಷಿ ಕ್ಷೇತ್ರದಿಂದ ವಿಮುಖರಾಗುತ್ತಿರುವ ಸಂದರ್ಭದಲ್ಲಿ ಆಧುನಿಕ ವ್ಯವಸ್ಥೆಗಳನ್ನು ಬಳಸಿಕೊಂಡು ಸಾಂಪ್ರದಾಯಿಕ ಕೃಷಿಯನ್ನು ಲಾಭದಾಯಕವಾಗಿ ಪರಿವರ್ತಿಸುವ ನಿಟ್ಟಿನಲ್ಲಿ ಹಮ್ಮಿಕೊಂಡಿರುವ ಕೃಷಿ ಟಿಂಕರಿಂಗ್‌ ಫೆಸ್ಟ್‌ ರಾಜ್ಯದಲ್ಲಿಯೇ ಹೊಸ ಪ್ರಯೋಗ. ಇದನ್ನು ಸರಕಾರದ ಮಟ್ಟದಲ್ಲಿ ಸಂಯೋಜಿಸುವ ನಿಟ್ಟಿನಲ್ಲಿ ಸಂಬಂಧಪಟ್ಟ ಇಲಾಖೆಗಳ ಸಭೆ ಕರೆದು ಚರ್ಚಿಸಲಾಗುವುದು.
– ಕೋಟ ಶ್ರೀನಿವಾಸ ಪೂಜಾರಿ
ಜಿಲ್ಲಾ ಉಸ್ತುವಾರಿ ಸಚಿವರು

 ಪೇಟೆಂಟ್‌ಗೆ ಕ್ರಮ
ಉತ್ತಮ ಯೋಜನೆಗಳನ್ನು ಗುರುತಿಸಿ ಅವುಗಳನ್ನು ಒಂದು ವರ್ಷದ ಒಳಗಾಗಿ ವಾಣಿಜ್ಯ ಉತ್ಪನ್ನಗಳಾಗಿ ಮಾರುಕಟ್ಟೆಗೆ ಬಿಡುಗಡೆ ಮಾಡಲು ಕ್ರಮ ಕೈಗೊಳ್ಳಲಾಗುವುದು. ಅದೇ ರೀತಿ ಉತ್ತಮ ಮಾದರಿಗಳಿಗೆ ಬೌದ್ಧಿಕ ಆಸ್ತಿಹಕ್ಕು (ಪೇಟೆಂಟ್‌) ಪಡೆದುಕೊಳ್ಳಲು ಕ್ರಮ ಕೈಗೊಳ್ಳಲಾಗುವುದು.
– ಡಾ| ಕೆ.ಎಂ. ಕೃಷ್ಣ ಭಟ್‌
ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ

-ರಾಜೇಶ್‌ ಪಟ್ಟೆ

Advertisement

Udayavani is now on Telegram. Click here to join our channel and stay updated with the latest news.

Next