Advertisement

ಪುರಸಭೆ ವ್ಯಾಪ್ತಿಯಲ್ಲಿ ಪ್ರಾಚೀನ ಶಾಸನ ಪತ್ತೆ

11:54 PM Jan 02, 2020 | Sriram |

ಕುಂದಾಪುರ: ತಾಲೂಕಿನ ಬಸ್ರೂರು ಮೊದಲಾದೆಡೆ ಆಗಾಗ ಶಾಸನಗಳು ದೊರೆಯುತ್ತಿವೆ. ಆದರೆ ಪುರಸಭೆ ವ್ಯಾಪ್ತಿಯಲ್ಲಿ ಶಾಸನಗಳು ಸಿಕ್ಕಿದ ಉದಾಹರಣೆ ಕಡಿಮೆ. ಪುರಸಭೆ ವ್ಯಾಪ್ತಿಯ ವಡೇರಹೋಬಳಿ ಎಂಬಲ್ಲಿ ಶಿಲಾಶಾಸನ ವೊಂದು ಪತ್ತೆಯಾಗಿದ್ದು ಉದಯವಾಣಿ ಓದುಗರು ಮಾಹಿತಿ ನೀಡಿದಂತೆ ಪರಿಶೀಲಿಸಲಾಗಿದೆ.

Advertisement

ಬಯಲಿನಲ್ಲಿ ಶಾಸನ
ಬಸ್ರೂರು ಮೂರುಕೈಯಿಂದ ಬಸ್ರೂರು ಕಡೆಗೆ ಹೋಗುವ ಹೆದ್ದಾರಿಯಲ್ಲಿ ವಡೇರಹೋಬಳಿ ಸಾಗಿ ಅನಂತರ ಎಡಕ್ಕೆ ಸುಮಾರು 1.5 ಕಿ.ಮೀ. ಸಾಗಿದಾಗ ಹುಣ್ಸಿಕಟ್ಟೆ ಸಮೀಪದ ಆಗರ ಪ್ರದೇಶದಲ್ಲಿ (ಬೆಟ್ಟಾಗರ) ಹಿನ್ನೀರಿನಿಂದ ಆವೃತವಾದ ಪ್ರದೇಶದಲ್ಲಿ ಶಿಲಾಶಾಸನವಿದೆ. ಇದನ್ನು ತಲುಪಲು ಹುಲ್ಲಿನಿಂದ ತುಂಬಿದ ಈ ಪ್ರದೇಶದಲ್ಲಿ ಕಸಕಡ್ಡಿಗಳು, ತ್ಯಾಜ್ಯ, ಕೆಸರು ತುಂಬಿದ ಪ್ರದೇಶದಲ್ಲಿ ಸಾಗಬೇಕು. ಹೈಟೆನನ್‌ ವಿದ್ಯುತ್‌ ಲೈನ್‌ನ ಸಮೀಪ ಇಡೀ ಬಯಲಿನಲ್ಲಿ ಏಕೈಕ ಶಿಲಾಶಾಸನ ನೆಟ್ಟಂತಿದೆ.

ಒಂದೇ ಕಲ್ಲು
ಮೇಲ್ನೋಟಕ್ಕೆ ಕಾಣುವಂತೆ ಮೂರು ಅಡಿ ಎತ್ತರ, ಎರಡೂವರೆ ಅಡಿ ಅಗಲದ ಈ ಕಲ್ಲಿನ ಆಳ ಎಷ್ಟಿದೆ ಎಂಬ ಅರಿವಿಲ್ಲ. ಹುಲ್ಲು ತುಂಬಿದ ಬಯಲಿನಲ್ಲಿ ಇರುವ ಏಕೈಕ ಶಿಲೆಯಲ್ಲಿ ಮೇಲ್ಭಾಗದಲ್ಲಿ ಕ್ರಮವಾಗಿ ಸೂರ್ಯ ಅಥವಾ ಚಂದ್ರನ ಹಾಗೆ ಇರುವ ಕೆತ್ತನೆ, ಅನಂತರ ಕಾಲು ದೀಪದ ಕೆತ್ತನೆ, ಮಧ್ಯ ಶಿವಲಿಂಗದ ಆಕಾರದ ದುಂಡು ರಚನೆ, ಕೊನೆಯಲ್ಲಿ ಕತ್ತೆಯಂತಹ ಪ್ರಾಣಿಯ ಚಿತ್ರದ ಕೆತ್ತನೆಗಳಿರುವುದನ್ನು ಶಿಲಾಶಾಸನದಲ್ಲಿ ಸೂಕ್ಷ್ಮವಾಗಿ ಗಮನಿಸ ಬಹುದು. ಬಳಿಕ ಅಕ್ಷರಗಳಲ್ಲಿ ಏನೋ ಸು#ಟವಾಗಿ ಬರೆದಿದ್ದು ಏನೆಂದು ಸ್ಪಷ್ಟವಾಗಿ ಕಾಣಿಸುತ್ತಿಲ್ಲ.

ಕತ್ತಿ ಮಸೆಯಲು ಬಳಕೆ!
ದುರಂತ ಎಂದರೆ ಈ ಸ್ಮಾರಕದ ಸಂರಕ್ಷಣೆ ಕಾರ್ಯ ನಡೆಯದ ಕಾರಣ ಬಹಳ ಹಿಂದೆ ಈ ದಾರಿಯಾಗಿ ಸಾಗುವ ರೈತರು ದ್ವಾರಿ ಕಳಿ ಕೊಯ್ಯಲು ಕತ್ತಿಯನ್ನು ಶಾಸನದ ಕಲ್ಲಿಗೆ ಮಸೆದಿರುವುದನ್ನು ಕಾಣಬಹುದು. ಆದ್ದರಿಂದ ಶಿಲಾಶಾಸನದ ಮೇಲ್ಭಾಗದಲ್ಲಿ ಒಂದು ಚೂರು ಕೆತ್ತಿದಂತೆ ಕತ್ತಿ ಮಸೆದು ಸವೆದು ಹೋಗಿದೆ.

ಆಗರ ಪ್ರದೇಶ
ಇಲ್ಲಿನ ಹೊಳೆಯನ್ನು (ಆಗರ) ಹೋತಾಳೆ ಎಂದು ನಾಮಕರಣ ಮಾಡಿದ್ದು, ಹೋತಾಳೆ ಎನ್ನಲು ಕಾರಣ ಇಲ್ಲಿಯ ಹೊಳೆಯ ದಂಡೆಯಲ್ಲಿ ಅನೇಕ ತಾಳೆಯ ಮರಗಳಿರುವುದರಿಂದ ಈ ಹೆಸರನ್ನು ಬಳಸಬೇಕಾಯಿತು. ಇದು ದೊಡ್ಡ ಹೊಳೆಯಲ್ಲ, ಅಲ್ಲಲ್ಲಿ ಸೀಳಿಕೊಂಡಿರುವ ಆಗರ ಪ್ರದೇಶ. ಇಲ್ಲಿ ಸಾಕಷ್ಟು ಹಕ್ಕಿಗಳು ವಲಸೆ ಬರುತ್ತವೆ. ಸುಂದರವಾದ ಆಗರ ಪ್ರದೇಶ ಎನ್ನಬಹುದು. ಸಾಕಷ್ಟು ಕಾಂಡ್ಲ ಗಿಡಗಳೂ ಇವೆ. ಚೋಕಡ್‌ ಸಾಲ್‌ ಕಾಲುವೆ ಮೂಲಕ ಹರಿದ ನೀರು ಹುಣ್ಸಿಕಟ್ಟೆಯಲ್ಲಿ ಆಗರದ ಮೂಲಕ ಪಂಚಗಂಗಾವಳಿಯ ಅಳಿವೆಯಲ್ಲಿ ಸಮುದ್ರ ಸೇರುತ್ತದೆ.

Advertisement

ದ್ವಾರಿಕಳಿ
ಈ ಪ್ರದೇಶದಲ್ಲಿ ಹಸುಗಳಿಗೆ ಹಾಕುವ ಹುಲ್ಲು ಬೆಳೆಯುತ್ತಿತ್ತು. ಆದ್ದರಿಂದ ಇಲ್ಲಿ ಜನಸಂಚಾರ ಇತ್ತು. ಆದರೆ ಯಾರೂ ಶಾಸನದ ಅಧ್ಯಯನ ಕುರಿತು ಅಥವಾ ಇತಿಹಾಸ ಅರಿತವರಿಗೆ ಇದರ ಮಾಹಿತಿ ಕೊಡುವ ಮನ ಮಾಡಿಲ್ಲ. ಬದಲಾಗಿ ಕಲ್ಲಿನಲ್ಲಿ ಕತ್ತಿ ಮಸೆದು ಹುಲ್ಲು ಕೊಯ್ಯುತ್ತಿದ್ದರು. ಆದ್ದರಿಂದ ಇದಿನ್ನೂ ತೆರೆಮರೆಯಲ್ಲೇ ಇದ್ದಂತಿದೆ. ಇನ್ನಾದರೂ ಈ ಕುರಿತು ಬೆಳಕು ಚೆಲ್ಲಬೇಕಿದೆ.

15 ವರ್ಷಗಳ ಹಿಂದೆ ಇಲ್ಲಿ ಶಿಲಾ ಶಾಸನ ಇರುವುದನ್ನು ಗಮನಿಸಿದ್ದೆವು. ಅದನ್ನು ಈಗ ಗುರುತಿಸಿ ಅಧ್ಯಯನ ಮಾಡಿದರೆ ಕುಂದಾಪುರದ ಐತಿಹಾಸಿಕ ವಿವರ ದೊರಕಿದಂತಾಗುತ್ತದೆ ಎನ್ನುವ ಆಶಯ ನನ್ನದು.
-ರೋಶನ್‌ ಡಿ’ಸೋಜಾ, ಹಂಗಳೂರು

-ಲಕ್ಷ್ಮೀ ಮಚ್ಚಿನ

Advertisement

Udayavani is now on Telegram. Click here to join our channel and stay updated with the latest news.

Next