Advertisement

250 ವರ್ಷ ಹಳೆಯ ಯಕ್ಷಗಾನ ಪ್ರಸಂಗದ ತಾಳೆಗರಿ ಪತ್ತೆ

02:20 AM Sep 27, 2021 | Team Udayavani |

ಕುಂದಾಪುರ: ಹ‌ದಿನೆಂಟನೆಯ ಶತ‌ಮಾನದ ಮೂಲಿಕೆ ವೆಂಕಣ್ಣ ಕವಿ ವಿರ‌ಚಿತ‌ ಮಾನಸಚರಿತ್ರೆ ಎಂಬ ಅಪೂರ್ವ ಯಕ್ಷಗಾನ ಪ್ರಸಂಗ‌ದ ತಾಳೆಗರಿ ಇದೀಗ ಲಭ್ಯವಾಗಿದೆ. ಬೈಂದೂರು ತಾಲೂಕಿನ ದಿ| ಶಿರೂರು ಫ‌ಣಿಯಪ್ಪಯ್ಯ ಭಾಗವತರ ಸಂಗ್ರಹದಲ್ಲಿದ್ದ ಈ ತಾಳೆಗರಿ ಮತ್ತು ಸ್ವಹ‌ಸ್ತಪ್ರತಿ ಭಾಗವತರ ಪುತ್ರ ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿರುವ ಬಿಎಸ್ಸೆನ್ನೆಲ್‌ ನಿವೃತ್ತ ಅಧಿಕಾರಿ ಉಮೇಶ‌ ಶಿರೂರು ಅವರಿಗೆ ದೊರೆತಿದೆ.

Advertisement

ಈ ತಾಳೆಗರಿಯನ್ನು ಓದಿ ಗ್ರಂಥವನ್ನು ಸಂಪಾದಿಸುತ್ತಿರುವ ಯಕ್ಷಗಾನ ವಿದ್ವಾಂಸ, ಅಷ್ಟಾವಧಾನಿ ಡಾ| ಕಬ್ಬಿನಾಲೆ ವಸಂತ ಭಾರಧ್ವಾಜ್‌ ಅವರು ಸದ್ಯವೇ ಇದು ಗ್ರಂಥರೂಪದಲ್ಲಿ ಪ್ರಕಟವಾಗ‌ಲಿದ್ದು ಕಲಾಸಕ್ತರಿಗೆ ಲಭ್ಯವಾಗ‌ಲಿದೆ ಎಂದು ಉದಯವಾಣಿಗೆ ತಿಳಿಸಿದ್ದಾರೆ.

1750-1830ರ ಕಾಲಮಾನದ ಮೂಲಿಕೆ ವೆಂಕಣ್ಣ ಕವಿ ಮೂಲತಃ ಕಾಗಿನೆಲೆ ಸಮೀಪದ ಬಂಕಾಪುರದವರಾಗಿದ್ದು ನಂತರದ ದಿನಗಳಲ್ಲಿ ಹರಿದಾಸ ಪಂಥದ ಜಗನ್ನಾಥದಾಸರ ಶಿಷ್ಯರಾಗಿ ದ.ಕ. ಜಿಲ್ಲೆಯ ಮೂಲ್ಕಿಯ ವೆಂಕಟ್ರಮಣ ದೇವಸ್ಥಾನ ಬಳಿ ವಾಸವಿದ್ದರು. ಅವರು ಅನೇಕ ಕೃತಿಗಳನ್ನು ರಚಿಸಿದ್ದು ಮಾನಸ ಚರಿತ್ರೆಯಲ್ಲಿ 361 ಪದ್ಯಗಳಿವೆ.

ಮನಸ್ಸು ಹಾಗೂ ಮನಸ್ಸಿಗೆ ಪ್ರವೃತ್ತಿ ಮತ್ತು ನಿವೃತ್ತಿ ಎಂಬ ಹೆಸರಿನ ಇಬ್ಬರು ರಾಣಿಯರು, ಅವರ ಮಕ್ಕಳು, ಅದರ ಸ್ವಭಾವ ಹೀಗೆ ಮನುಷ್ಯನ ಮನಸ್ಸಿಗೆ ಸಂಬಂಧಿಸಿದ ನಡವಳಿಕೆಗಳೇ ಇಲ್ಲಿ ಪಾತ್ರರೂಪಗಳಾಗಿ ಕತೆಯಾಗಿದೆ. ಇಡೀ ರಾತ್ರಿಯ ಆಟ ಮತ್ತು ತಾಳಮದ್ದಳೆಗ‌ಳೆರ‌ಡಕ್ಕೂ ಹೊಂದಿಕೆಯಾಗುವ ವಿಶಿಷ್ಟ ಆಧ್ಯಾತ್ಮಿಕ ಯಕ್ಷಗಾನ ಕೃತಿಯಾಗಿದೆ. ಇದು 250 ವರ್ಷ ಹಳೆಯ ಕವಿಕಾಲದ ಕೃತಿಯಾಗಿದೆ.

ಇದನ್ನೂ ಓದಿ:ಧಾರವಾಡ  ರೈಲ್ವೆ ನಿಲ್ದಾಣಕ್ಕೆ ಹೈಟೆಕ್‌ ಸ್ಪರ್ಶ

Advertisement

ಇಂತಹದ್ದೇ ಪ್ರಸಂಗವೊಂದನನ್ನು ಕಿಬ್ಬಚ್ಚಲು ಮಂಜಮ್ಮ ಅವರು ಮನೋಬುದ್ಧಿ ಸಂವಾದ ಎಂದು ಬರೆದಿದ್ದರೂ ಈ ರೀತಿಯಲ್ಲಿ ವಿಶಿಷ್ಟವಾಗಿ ಪ್ರಸಂಗ ರಚನೆಯಾದುದು ಬೇರೆ ಇಲ್ಲ. ಡಾ| ಶಿವರಾಮ ಕಾರಂತರು, ಪು. ಶ್ರೀನಿವಾಸ ಭಟ್‌ ಮೊದಲಾದ ವಿದ್ವಾಂಸರು ಈ ಕೃತಿಯ ಬಗ್ಗೆ ವಿವಿಧ ಸಂದರ್ಭಗಳಲ್ಲಿ ಉಲ್ಲೇಖೀಸಿದ್ದರೂ ಕೃತಿ ಲಭ್ಯವಾಗಿರಲಿಲ್ಲ.

ಈಗ ತಾಡೋಲೆ ದೊರೆತಿದ್ದು ಅಧ್ಯಯನ ನಡೆಯುತ್ತಿದೆ. ಮೋಡಿ ಅಕ್ಷರಗಳ ಪ್ರಸಂಗ ಪ್ರತಿ ಓದುವಿಕೆಯಲ್ಲಿ ತೊಡಗಿದ್ದು ಕೃತಿ ರೂಪದಲ್ಲಿ ದೊರೆಯಲಿದೆ ಎಂದು ಭಾರಧ್ವಾಜ್‌ ತಿಳಿಸಿದ್ದಾರೆ. ಭಾರಧ್ವಾಜ್‌ ಅವರು ಈಗಾಗಲೇ ಯಕ್ಷಗಾನ ಪ್ರಸಂಗ ಕೃತಿ ಕವಿ ಕಾವ್ಯ ಪರಿಚಯದ ಗ್ರಂಥವನ್ನು ಸಂಪಾದಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next