Advertisement

ಅನುದಾನ ಬಳಕೆಯಲ್ಲಿ ರಾಜ್ಯ ಸಂಸದರ ನಿರುತ್ಸಾಹ

12:07 AM Dec 17, 2019 | Sriram |

ಉಡುಪಿ: ಲೋಕಸಭಾ ಕ್ಷೇತ್ರವಾರು ಅಭಿವೃದ್ಧಿಗಾಗಿ ಕೇಂದ್ರ ಸರಕಾರದಿಂದ ಬಿಡುಗಡೆಯಾಗುವ ಸಂಸದರ ಪ್ರದೇಶಾಭಿವೃದ್ಧಿ ಅನುದಾನವನ್ನು ಬಳಸಿಕೊಳ್ಳಲು ರಾಜ್ಯದ ಸಂಸದರು ವಿಫ‌ಲರಾಗುತ್ತಿದ್ದಾರೆ. ಇದಕ್ಕೆ ಪೂರಕ ಎಂಬಂತೆ 2014ರಿಂದ 2019ರ ಅವಧಿಯಲ್ಲಿ 700 ಕೋ.ರೂ. ಪೈಕಿ ಕೇಂದ್ರದಿಂದ 452.50 ಕೋ.ರೂ. ಮಾತ್ರ ಬಿಡುಗಡೆಯಾಗಿದೆ.

Advertisement

ಈ ಪೈಕಿ 24 ಕ್ಷೇತ್ರಗಳ ಸಂಸದರಿಗೆ ಕೆಲವು ತಿಂಗಳುಗಳ ಹಿಂದೆಯಷ್ಟೇ 2.5 ಕೋ.ರೂ.ನಂತೆ ಒಟ್ಟು 60 ಕೋ.ರೂ.ಗಳನ್ನು ಬಿಡುಗಡೆ ಮಾಡಲಾಗಿದೆ.

ಓರ್ವ ಸಂಸದರಿಗೆ ವಾರ್ಷಿಕ 5 ಕೋ.ರೂ.ನಂತೆ ಒಟ್ಟು 25 ಕೋ.ರೂ. ಅನುದಾನ ಮೀಸಲಿರಿಸಲಾಗುತ್ತದೆ. ರಾಜ್ಯದಲ್ಲಿ ಅತೀ ಹೆಚ್ಚು ಅನುದಾನ ಬಳಕೆ ಮಾಡಿರುವ ಕ್ಷೇತ್ರ ಚಾಮರಾಜನಗರ. ಈ ಕ್ಷೇತ್ರದ ಸಂಸದರು 22.50 ಕೋ.ರೂ. ಸದ್ಬಳಕೆ ಮಾಡಿ ಪ್ರಥಮ ಸ್ಥಾನದಲ್ಲಿದ್ದಾರೆ. ಉಳಿದಂತೆ ಬೆಂಗಳೂರು ಉತ್ತರ, ಚಿಕ್ಕೋಡಿ, ದಾವಣಗೆರೆ ಕ್ಷೇತ್ರದಸಂಸದರು ತಲಾ 20 ಕೋಟಿ ರೂ.ಗಳನ್ನು ಪ್ರದೇಶಾಭಿವೃದ್ಧಿಗಾಗಿ ಬಳಸಿಕೊಂಡಿದ್ದಾರೆ.

28 ಸಂಸದರ ಪೈಕಿ 8 ಸಂಸದರು ಬಳಸಿಕೊಂಡದ್ದು ತಲಾ 12.50 ಕೋ.ರೂ. ಮಾತ್ರ. ಬೆಂಗಳೂರುದ., ಬೀದರ್‌, ಬಿಜಾಪುರ, ಹಾಸನ, ಉ.ಕ., ಮಂಡ್ಯ, ರಾಯಚೂರು, ಬೆಂಗಳೂರು ಸೆಂಟ್ರಲ್‌ ಕ್ಷೇತ್ರದ ಸಂಸದರು ಹಿಂದೆ ಇದ್ದಾರೆ.

ಕರಾವಳಿ ಸಂಸದರು ಮುಂದು
ಕರಾವಳಿಯ ದ.ಕ. ಮತ್ತು ಉಡುಪಿ ಚಿಕ್ಕಮಗಳೂರು ಕ್ಷೇತ್ರದ ಸಂಸದರು ತಲಾ 25 ಕೋ.ರೂ. ಅನುದಾನದಲ್ಲಿ 20 ಕೋ.ರೂ.ಗಳಷ್ಟು ಬಳಕೆ ಮಾಡಿದ್ದಾರೆ. ತಲಾ 5 ಕೋ.ರೂ.ಗಳಷ್ಟು ಅನುದಾನ ಕೇಂದ್ರದಿಂದ ಬರಲು ಬಾಕಿಯಿದ್ದು, ಆಡಿಟ್‌ ವರದಿ ಆಕ್ಷೇಪ ಹಿನ್ನೆಲೆಯಲ್ಲಿ ತುಸು ವಿಳಂಬವಾಗಿದೆ. ಈ ಎಲ್ಲದರ ನಡುವೆ 2019-20ನೇ ಸಾಲಿನ ಅನುದಾನಕ್ಕಾಗಿ 2019ರಿಂದ 2024ನೇ ನಿಧಿ ಖಾತೆ ತೆರೆಯುವ ಪ್ರಕ್ರಿಯೆ ನಡೆಯುತ್ತಿದೆ.

Advertisement

ಗುತ್ತಿಗೆದಾರರಿಗೆ ಸಂಕಷ್ಟ
ಸಂಸದರ ಪ್ರದೇಶಾಭಿವೃದ್ಧಿ ನಿಧಿಯಡಿ ಕಾಮಗಾರಿ ನಿರ್ವಹಿಸಿದ ಗುತ್ತಿಗೆದಾರರು ಬಿಲ್‌ ಸಲ್ಲಿಸಿ ಹಲವಾರು ವರ್ಷಗಳು ಕಳೆದರೂ ಹಣ ಬಾರದೆ ಕಾಲ ಕಳೆಯುವಂತಾಗಿದೆ. ಇದರಿಂದ ಹೊಸ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಅವರು ಹಿಂದೇಟು ಹಾಕುತ್ತಿದ್ದಾರೆ. ಬಾಕಿ ಹಣ ಬಾರದಿರುವುದು ಕಳಪೆ, ವಿಳಂಬ ಕಾಮಗಾರಿಗೂ ಕಾರಣವಾಗುತ್ತಿದೆ.

ಹೊಸ ಅನುದಾನ
ಸಂಸದರ ನಿಧಿ ಬಳಕೆಗೆ ಸಂಬಂಧಿಸಿ ಜಿಲ್ಲಾಡಳಿತ ಸಲ್ಲಿಸಿದ ಆಡಿಟ್‌ ವರದಿ ಆಕ್ಷೇಪ ಹಿನ್ನೆಲೆಯಲ್ಲಿ ಪರಿಷ್ಕರಿಸಿ ಸಲ್ಲಿಸಲಾಗಿದೆ. ಕಾಮಗಾರಿ ಪ್ರಸ್ತಾವನೆಗಳಿಗೆ ಜಿಲ್ಲಾಡಳಿತದಿಂದ ಆಡಳಿತಾತ್ಮಕ ಅನುಮೋದನೆ ನೀಡಲಾಗುತ್ತಿದೆ. 2019ರಿಂದ 2024ನೇ ಸಾಲಿನ ಸಂಸದರ ಪ್ರತ್ಯೇಕ ಖಾತೆ ತೆರೆದಿದ್ದು, ಶೀಘ್ರವೇ ಹಳೆ ಬಾಕಿ ಸಹಿತ ಹೊಸ ಅನುದಾನ ಬಿಡುಗಡೆಯಾಗಲಿದೆ.
– ಬಿ. ಸದಾಶಿವ ಪ್ರಭು
ಅಪರ ಜಿಲ್ಲಾಧಿಕಾರಿ, ಉಡುಪಿ

-ಪುನೀತ್‌ ಸಾಲ್ಯಾನ್‌

Advertisement

Udayavani is now on Telegram. Click here to join our channel and stay updated with the latest news.

Next