Advertisement

ಸಿದ್ದರಾಮಯ್ಯ ಮುಂದೆ ತಲೆಬಾಗಿ ನಿಂತ ಶಿಷ್ಯರು

10:23 PM Dec 14, 2019 | Lakshmi GovindaRaj |

ಬೆಂಗಳೂರು: ಹೃದಯ ಸಂಬಂಧಿ ಖಾಯಿಲೆಯಿಂದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಅವರ ವಿರುದ್ಧವೇ ಬಂಡಾಯ ಸಾರಿ ಪಕ್ಷ ತೊರೆದಿದ್ದ “ಎಸ್‌ಬಿಎಂ’ ಎಂದೇ ಕರೆಯಲ್ಪಡುವ ಬಿಜೆಪಿಯ ಆಪ್ತ ಶಾಸಕರು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದಾರೆ.

Advertisement

ಸಿದ್ದರಾಮಯ್ಯನವರ ಮುಂದೆ ಮೂವರೂ ಕೈ ಕಟ್ಟಿಕೊಂಡು, ತಲೆಬಾಗಿಸಿ ನಿಂತು ಅಳುಕಿನಿಂದಲೇ ಆರೋಗ್ಯ ವಿಚಾರಿಸಿದ್ದಾರೆ. ಸಿದ್ದರಾಮಯ್ಯ ಕುಳಿತುಕೊಳ್ಳುವಂತೆ ಸೂಚಿಸಿದರೂ ಕೈ ಮುಗಿದು ನಿಂತುಕೊಂಡೇ ಮಾತನಾಡಿದ್ದಾರೆಂದು ತಿಳಿದು ಬಂದಿದೆ.

ಮೂವರೂ ಶಿಷ್ಯರು ತಾವು ಅಡ್ಮಿಟ್‌ ಆಗಿರುವ ವಾರ್ಡ್‌ಗೆ ಆಗಮಿಸುತ್ತಿದ್ದಂತೆ “ಏನ್ನಯ್ಯಾ ಎಲ್ಲರೂ ಬಂದಿದ್ದೀರಿ’ ಎಂದು ಹಳೆಯ ಶಿಷ್ಯರ ಮೇಲಿನ ಮುನಿಸು ಮರೆತು ಆತ್ಮೀಯತೆಯಿಂದಲೇ ಪ್ರಶ್ನಿಸಿದರು. ಯಶವಂತಪುರ ಶಾಸಕ ಎಸ್‌.ಟಿ. ಸೋಮಶೇಖರ್‌ ಹಾಗೂ ಕೆ.ಆರ್‌.ಪುರ ಶಾಸಕ ಬೈರತಿ ಬಸವರಾಜ್‌ ಅವರು ಸಿದ್ದು ಪ್ರಶ್ನೆಗೆ ಮರು ಮಾತನಾಡದೇ ಕೈ ಕಟ್ಟಿಕೊಂಡು ಮೌನವಾಗಿ ನಿಂತಿದ್ದರು ಎನ್ನಲಾಗಿದೆ.

ಆದರೆ, ಶಾಸಕ ಮುನಿರತ್ನ “ನೀವು ನಮ್ಮ ನಾಯಕರು, ನಿಮ್ಮ ಆರೋಗ್ಯ ವಿಚಾರಿಸೋಕೆ ಬಂದ್ವಿ, ಆರಾಮ್‌ ಅಲ್ವಾ ಸರ್‌’ ಎಂದು ಕೈ ಮುಗಿದಿದ್ದು, “ನಾನು ಆರಾಮ್‌ ಇದೀನಿ, ನಾಯಕರು ಅಂತ ಹೇಳ್ತಾನೇ ಕೈ ಕೊಟ್ಟು ಹೋದ್ರಲ್ಲಪ್ಪಾ?’ ಎಂದು ಪ್ರತಿಕ್ರಿಯಿಸಿದ್ದಾರೆ. ಅದಕ್ಕೆ ಮುನಿರತ್ನ ಅವರು ತಾವು ಪಕ್ಷ ತೊರೆಯಲು ಕಾರಣವಾದ ಅಂಶಗಳನ್ನು ಸಿದ್ದರಾಮಯ್ಯಗೆ ಮನವರಿಕೆ ಮಾಡುವ ಪ್ರಯತ್ನ ಮಾಡಲು ಮುಂದಾಗಿದ್ದರು ಎನ್ನಲಾಗಿದ್ದು,

ಆದರೆ, ಸಿದ್ದರಾಮಯ್ಯ “ಅದೆಲ್ಲವನ್ನು ಈಗೇಕೆ ಮಾತನಾಡುತ್ತೀರಿ, ಈಗ ಅದನ್ನೆಲ್ಲಾ ನಾನು ಕೇಳಿದ್ನಾ. ಈಗ ನೀವೆಲ್ಲ ಲೀಡರ್‌ಗಳಾಗಿದ್ದೀರಿ. ಶಾಸಕರಾಗಿ ಆಯ್ಕೆಯಾಗಿದ್ದೀರಿ. ನಿಮಗೆಲ್ಲ ಒಳ್ಳೆಯದಾಗ್ಲಿ, ಹೋಗಿ ಬನ್ನಿ’ ಎಂದು ತಮ್ಮ ಮಾಜಿ ಶಿಷ್ಯಂದರಿಗೆ ಆತ್ಮೀಯತೆಯಿಂದಲೇ ಕಳುಹಿಸಿದ್ದಾರೆ ಎಂದು ತಿಳಿದು ಬಂದಿದೆ.

Advertisement

ಸಿದ್ದರಾಮಯ್ಯ ಭೇಟಿ ನಂತರ ಮಾತನಾಡಿದ ಯಶವಂತಪುರ ಶಾಸಕ ಎಸ್‌.ಟಿ.ಸೋಮಶೇಖರ್‌, “ನಾವು ಮೂರು ಜನ ಸೇರಿ ಸಿದ್ದರಾಮಯ್ಯ ಅವರ ಬಳಿ ಮಾತನಾಡಬೇಕೆಂದು ಕೊಂಡಿದ್ದೇವು. ಈಗ ಆಸ್ಪತ್ರೆಯಲ್ಲಿದ್ದಾರೆ ಎಂದು ತಿಳಿದು ಯೋಗಕ್ಷೇಮ ವಿಚಾರಿಸಲು ಬಂದಿದ್ವಿ. ನಮ್ಮ ನಾಯಕರಿಗೆ ಭಗವಂತ ಆರೋಗ್ಯ, ಆಯಸ್ಸು ಕೊಟ್ಟು ಕಾಪಾಡಲಿ.

ಅವರು ಮೊದಲಿನಂತೆ ದಿನದ ಇಪ್ಪತ್ನಾಲ್ಕು ಗಂಟೆಯೂ ಕೆಲಸ ಮಾಡುವಂತೆ ಆಗಲಿ ಎಂದು ದೇವರಲ್ಲಿ ಪ್ರಾರ್ಥಿಸಿದ್ದೇವೆ’ ಎಂದು ಹೇಳಿದರು. “ನಾವು ಕಾಂಗ್ರೆಸ್‌ ಬಿಟ್ಟ ನಂತರ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಲು ಆಗಿರಲಿಲ್ಲ. ಈಗ ಅವರು ಆಸ್ಪತ್ರೆಯಲ್ಲಿದ್ದಾರೆ. ಮಾನವೀಯ ದೃಷ್ಟಿಯಿಂದ ಅವರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದೇವೆ. ನಾವು ಯಾವುದೇ ರಾಜಕೀಯ ಚರ್ಚೆ ಮಾಡಲಿಲ್ಲ. ಅವರೂ ಆ ಬಗ್ಗೆ ಮಾತನಾಡಿಲ್ಲ’ ಎಂದರು.

“ನಮ್ಮನ್ನು ಇದುವರೆಗೂ ಎಲ್ಲರೂ ಅನರ್ಹರು ಎಂದು ಕರೆಯುತ್ತಿದ್ದರು. ಈಗ ಅರ್ಹರಾಗಿದ್ದೇವೆ. ಅದೇ ನಮಗೆ ಖುಷಿ ತಂದಿದೆ. ನಮ್ಮನ್ನು ಮಂತ್ರಿ ಮಾಡುವುದು, ಬಿಡುವುದು ಮುಖ್ಯಮಂತ್ರಿಗೆ ಬಿಟ್ಟದ್ದು. ಸಂಪುಟ ವಿಸ್ತರಣೆ ಮುಖ್ಯಮಂತ್ರಿಗಳ ವಿವೇಚನೆಗೆ ಬಿಟ್ಟ ವಿಚಾರ’ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next